ಬೆಂಗಳೂರು - ಮೈಸೂರು ದಶಪಥ ಕ್ರೆಡಿಟ್ ವಾರ್: ಜೆಡಿಎಸ್ ಆಯ್ತು, ಈಗ ಕಾಂಗ್ರೆಸ್ ಸರದಿ!
ಊರಲ್ಲಿರುವ ಮಕ್ಕಳೆಲ್ಲವು ನನ್ನವು ಅಂತೇಳುದ್ರೆ ಊರಿನವರು ಕಾಲಲ್ಲಿ ಇರೋದನ್ನ ಕೈಗೆ ಹಿಡ್ಕೋತ್ತಾರೆ. ಸುಳ್ಳು ಮತ್ತು ಸಿದ್ದರಾಮಯ್ಯ ಒಂದು ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ಮಾ.06): ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಂಗ್ರೆಸ್ ಸರ್ಕಾರದ ಸಾಧನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಊರಲ್ಲಿರುವ ಮಕ್ಕಳೆಲ್ಲವು ನನ್ನವು ಅಂತೇಳುದ್ರೆ ಊರಿನವರು ಕಾಲಲ್ಲಿ ಇರೋದನ್ನ ಕೈಗೆ ಹಿಡ್ಕೋತ್ತಾರೆ. ಸುಳ್ಳು ಮತ್ತು ಸಿದ್ದರಾಮಯ್ಯ ಒಂದು ನಾಣ್ಯದ ಎರಡು ಮುಖಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಒಂದೇ ಒಂದು ರೂಪಾಯಿ ಗ್ರ್ಯಾಂಟ್ ಕೊಟ್ಟಿದ್ರೆ ಕಾಂಗ್ರೆಸ್ ಕೊಡುಗೆ ಆಗುತ್ತದೆ. ಅವರ ಕಾಲದಲ್ಲಿ ಒಂದು ರೂಪಾಯಿ ಗ್ರ್ಯಾಂಟ್ ಕೊಟ್ಟಿದ್ರೆ ಹೇಳಲಿ. ದಶಪಥ ಹೆದ್ದಾರಿಗೆ ಮೋದಿ ಕೊಟ್ಟಿರುವ ಹಣ. ಸಿದ್ದರಾಮಯ್ಯ ತಮ್ಮ ಹೆಸರು ಹಾಕಿಕೊಳ್ಳಲು ಹೋದರೆ ಯಾವ ಡಿಎನ್ಎ ಟೆಸ್ಟ್ ನಲ್ಲಿಯು ಮ್ಯಾಚ್ ಆಗಲ್ಲ. 2004 ರಿಂದ 2014 ರ ವರೆಗು ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಆ ವೇಳೆ ಅವರಿಗೆ ಕಿಸಿಯೋಕೆ ಆಗಿಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಏನು ನಡೆಯಲಿಲ್ಲ. ಎಲ್ಲ ನಡೆದಿದ್ದು ಮೋದಿ ಸರ್ಕಾರದಲ್ಲಿ ಅಂತಾ ಕಥೆ ಹೇಳ್ತಿದ್ದಾರೆ. ಬುರುಡೆ ಬಿಡೋದಕ್ಕೆ ಇದಕ್ಕಿಂತ ಇನ್ನೇನ್ ಬೇಕು. ಸಣ್ಣ ಮಕ್ಕಳಿಗು ಇದು ಬುರುಡೆ ಅಂತಾ ಗೊತ್ತಾಗುತ್ತೆ ಎಂದು ಹೇಳಿದರು.
ಮೈಸೂರು ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್ ಕಾಂಗ್ರೆಸ್‌ಗೆ ಸಲ್ಲಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್‌ಗೆ ವಾರ್ ಆರಂಭ: ಮೈಸೂರು ಬೆಂಗಳೂರು ದಶಪಥ ರಸ್ತೆ ಉದ್ಘಾಟನೆಗೆ ಇನ್ನು ಕೆಲವು ದಿನಗಳು ಮಾತ್ರ ಬಾಕಿಯಿದ್ದು, ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಆರಂಭವಾಗಿದೆ. ಈ ರಸ್ತೆಯ ಕ್ರೆಡಿಟ್ ತಮ್ಮದೆಂದು ಹೇಳಿಕೊಳ್ಳುವ ಮೂಲಕ ಮತಭೇಟೆಗೆ ಮುಂದಾಗಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಮಾರ್ಚ್ 9 ರಂದು ಬೆಂಗಳೂರು ಮೈಸೂರು ಹೈವೆ ಪರಿಶೀಲನೆ ನಡೆಸುತ್ತೇನೆ. ಆ ರಸ್ತೆಯ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಪ್ರತಾಪ ಸಿಂಹನದಾಗಲಿ ಬಿಜೆಪಿ ಸರ್ಕಾರದಾಗಲಿ ಯಾವ ಪಾತ್ರವೂ ಇಲ್ಲ. ಈ ರಸ್ತೆಯಲ್ಲಿ ಪ್ರತಾಪ ಸಿಂಹ ಲೋಕಸಭಾ ವ್ಯಾಪ್ತಿಗೆ ಕೆಲವು ಕಿ.ಮೀ ಮಾತ್ರ ಸೇರುತ್ತದೆ. ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮಹದೇವಪ್ಪನಿಗೆ ಈ ರಸ್ತೆಯ ಎಲ್ಲಾ ಮಾಹಿತಿಯೂ ಗೊತ್ತಿದೆ. ಮಹದೇವಪ್ಪ ಮುಂದೆ ನಿಂತು ಈ ರಸ್ತೆ ಮಾಡಿಸಿದ ಎಂದು ಹೇಳಿದ್ದಾರೆ.
2014ರಲ್ಲಿ ಹೆದ್ದಾರಿ ಮೇಲ್ದರ್ಜೆಗೆ ಕಾಂಗ್ರೆಸ್ ಅನುಮೋದನೆ: ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮಾತನಾಡಿ, ಮೈಸೂರು-ಬೆಂಗಳೂರು ದಶಪಥ ಹೈವೇ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿ 2 ಸಾವಿರ ಕಿ ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು 2014 ರಲ್ಲಿ ಅನುಮೋದನೆ ನೀಡಲಾಯಿತು. ರಾಜ್ಯದಲ್ಲಿಯೂ ಆಗ ಕಾಂಗ್ರೆಸ್ ಪಕ್ಷದ ಸರ್ಕಾರವಿತ್ತು. ನಾನು ಸಹ ಲೋಕೋಪಯೋಗಿ ಸಚಿವನಾಗಿದ್ದುಕೊಂಡು ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ. ಆ ಬಳಿಕ ಬಂದ ಬಿಜೆಪಿ ಸರ್ಕಾರ ಇದನ್ನು ಕಾರ್ಯಗತಗಳಿಸಿದೆಯಷ್ಟೇ. ಹಾಗಾಗಿ ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೇ ಸಲ್ಲಬೇಕು ಎಂದು ಹೇಳಿದ್ದಾರೆ.
ಬೆಂಗಳೂರು - ಮೈಸೂರು ದಶಪಥ ಟೋಲ್ ಸಂಗ್ರಹಕ್ಕೆ ತಡೆ: ಸಂಸದ ಪ್ರತಾಪ್ ಸಿಂಹ ಮಾಹಿತಿ
ಯಾರೋ ಹುಟ್ಟಿಸಿದ ಮಗುವಿಗೆ ಸಿದ್ದರಾಮಯ್ಯ ಅಪ್ಪ: ಬೆಂ-ಮೈ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಂಗ್ರೆಸ್‌ಗೆ ಕ್ರೆಡಿಟ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾರೋ ಹುಟ್ಟಿಸಿದ ಮಗುವಿಗೆ ಸಿದ್ದರಾಮಯ್ಯ ಅಪ್ಪ ಆಗಬೇಕು ಅಷ್ಟೇ ಎಂದು ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ಸಿದ್ದರಾಮಣ್ಣನ ಕ್ರೆಡಿಟ್ ಒಂದೇ ಅದು ಅರ್ಕಾವತಿ. ಅವರು ಇನ್ನೂ ಜೀವನ ಪೂರ್ತಿ ರಸ್ತೆಗಳನ್ನು ಪರಿಶೀಲನೆ ಮಾಡಬೇಕು. ಈ ಚುನಾವಣೆ ಅವರ ಕೊನೆಯ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಅವರು ನಿರುದ್ಯೋಗಿ ಆಗುತ್ತಾರೆ. ಈ ರಸ್ತೆಯ ಪೂರ್ಣ ಕ್ರೆಡಿಟ್ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು. ಸಿದ್ದರಾಮಣ್ಣ ಅಧಿಕಾರದಲ್ಲಿ ಇದ್ದಗ ಗುಂಡಿ ಬಿದ್ದ ರಸ್ತೆ ಸರಿಪಡಿಸಲು ಅನುದಾನ ಇರಲಿಲ್ಲ. ಅವರು ಏನು ಮಾಡೋಕೆ ಆಗಲ್ಲ ಕೇವಲ ಪರಿಶೀಲನೆ ಮಾಡಬೇಕು. ಯಾರೋ ಹುಟ್ಟಿಸಿದ ಮಗುವಿಗೆ ಸಿದ್ದರಾಮಯ್ಯ ಅಪ್ಪ ಆಗಬೇಕು ಅಷ್ಟೇ ಎಂದು ಹೇಳಿದರು.