ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬಂದಿದ್ದು, ಅಲ್ಪಸಂಖ್ಯಾತರ ಓಲೈಕೆಗೆ ಬಿಜೆಪಿ ಮುಂದಾಗಿದೆ. ಇದು ಚುನಾವಣೆ ಗಿಮಿಕ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ (ಜ.20): ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬಂದಿದ್ದು, ಅಲ್ಪಸಂಖ್ಯಾತರ ಓಲೈಕೆಗೆ ಬಿಜೆಪಿ ಮುಂದಾಗಿದೆ. ಇದು ಚುನಾವಣೆ ಗಿಮಿಕ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯದ್ದು ಕೇವಲ ಭರವಸೆ, ಬಿ-ರಿಪೋರ್ಟ್‌ ಸರ್ಕಾರ. ರಾಜ್ಯದಲ್ಲಿ ನಡೆದಿರುವ ಸಾಕಷ್ಟು ಭ್ರಷ್ಟಾಚಾರ ಹಾಗೂ ಹಗರಣಗಳ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. 

ಪಿಎಸ್‌ಐ ನೇಮಕಾತಿ, ಲೋಕೋಪಯೋಗಿ ಸೇರಿ ಎಲ್ಲ ಇಲಾಖೆಯ ಪ್ರತಿಯೊಂದು ಕಾಮಗಾರಿಯಲ್ಲಿ ಕಮಿಷನ್‌ ವ್ಯವಹಾರ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಬೇಕು ಎಂದು ಸವಾಲು ಹಾಕಿದ ಅವರು, ಪ್ರಧಾನಿ ಮೋದಿ ಮೇಲಿಂದ ಮೇಲೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಪಸಂಖ್ಯಾತರ ಮೇಲೆ ಏಕಾಏಕಿ ಪ್ರೀತಿ ಬಂದಿದೆ ಎಂದು ಹರಿಹಾಯ್ದರು.

ಬಸವಣ್ಣ, ಕುವೆಂಪು ಮೇಲಾಣೆ ಫ್ರೀ ವಿದ್ಯುತ್‌ ಕೊಡ್ತೀವಿ: ಡಿ.ಕೆ.ಶಿವಕುಮಾರ್‌

ಬಿಜೆಪಿಯಿಂದ ಖಾಸಗೀಕರಣ: ಕಾಂಗ್ರೆಸ್‌ ಯಾವೆಲ್ಲ ಸಂಸ್ಥೆ ಮಾಡಿದ್ದಾರೆ, ಅದನ್ನು ಬಿಜೆಪಿ ಖಾಸಗಿಕರಣ ಮಾಡಿದೆ. ಆಪರೇಷನ್‌ ಕಮಲದಿಂದ ಈ ಸರ್ಕಾರ ರಚನೆಯಾಗಿದೆ. ಬಿಜೆಪಿ ಪಾಪದ ಪುರಾಣದ ಪಟ್ಟಿಬಿಡುಗಡೆ ಮಾಡಿದ್ದೇವೆ. ಇದಕ್ಕೆ ಯಾವೊಬ್ಬ ಬಿಜೆಪಿ ನಾಯಕರು ಉತ್ತರ ಕೊಡ್ತಿಲ್ಲ. ಯುವಕರಿಗೆ ಉದ್ಯೋಗ ಕೊಟ್ಟಿಲ್ಲ ಎಂದು ದೂರಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೇ, ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ಕೊಡ್ತೇವೆ. ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ಕೊಡುತ್ತೇವೆ.ಪ್ರಿಯಾಂಕಾ ಗಾಂಧಿ ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿ ಘೋಷಣೆ ಮಾಡಿದ್ದಾರೆ. ಈಗ ಸಿಎಂ ಬಸವರಾಜ ಬೊಮ್ಮಾಯಿ ಸಂಕ್ರಾಂತಿ ಮುಗಿದ ಮೇಲೆಯೂ ಶುಭಾಶಯಗಳ ಜಾಹಿರಾತು ಕೊಟ್ಟಿದ್ದಾರೆ ಎಂದರು.

ಪ್ರಧಾನಿ ಮೋದಿಗೆ ಕೇಳಿ: ಸಚಿವ ಆರ್‌.ಅಶೋಕ್‌ ಡಿಕೆಶಿ ಪವರ್‌ ಮಿನಿಷ್ಟರ್‌ ಇದ್ದಾಗ ಏನು ಮಾಡಿದ್ರು ಅಂತಾ ಕೇಳುತ್ತಿದ್ದಾರೆ. ನಾನು ಮಿನಿಷ್ಟರ್‌ ಇದ್ದಾಗ ಏನೂ ಮಾಡಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಲಿ. ಅವರೇ ಕರೆದು ಪ್ರಶಸ್ತಿ ನೀಡಿದ್ದಾರೆ. ಎಷ್ಟುದಿನ ಬದುಕಿರುತ್ತೇನೋ, ಸಾಯ್ತಿನೋ ಗೊತ್ತಿಲ್ಲ. ಆದ್ರೇ ಒಳ್ಳೆಯದು ಮಾಡ್ತೇನೆ ಎಂದರು. ರೈತರ ಜಮೀನು ಪಡೆಯದೇ ಪಾವಗಡದ ಬಳಿ ಸೋಲಾರ್‌ ಪಾರ್ಕ್ ನಿರ್ಮಾಣ ಮಾಡಿರುವೆ. 24 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಿರುವೆ. ಇದೊಂದು ದಾಖಲೆಯಾಗಿದೆ. ವಿದ್ಯುತ್‌ ಸಮಸ್ಯೆಯಾಗದೇ ಕ್ರಮ ವಹಿಸಿರುವೆ ಎಂದರು.

ಪ್ರತಿ ಕುಟುಂಬಕ್ಕೆ ಉಚಿತ ವಿದ್ಯುತ್‌ ನೀಡೋದು ಹೇಗೆ ಎಂದು ಬಿಜೆಪಿಯವರು ವ್ಯಂಗ್ಯ ಮಾಡುತ್ತಿದ್ದಾರೆ. ಅವರು ಬಹಿರಂಗ ಚರ್ಚೆಗೆ ಬರಲಿ. ಇಲ್ಲವೇ ಯಾವುದಾದರೂ ಟಿವಿ ಚಾನೆಲ್‌ಗೆ ಕರೆಯಲಿ. ನಾನು ತಕ್ಕ ಉತ್ತರ ನೀಡುವೆ ಎಂದರು. ಉಚಿತ ಘೋಷಣೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬಹುದು, ನಾವು ಮಾಡೋಕೆ ಅಗಲ್ಲಾ? ನಮ್ಮದು ಲೆಕ್ಕಾಚಾರ ಇರಲ್ವಾ?. ನಿಮಗಿಂತ ನಾವು ಬುದ್ಧಿವಂತರು ಇದ್ದೇವೆ ಎಂದರು.

ಬಿಜೆಪಿ ಆಡಳಿತದಲ್ಲಿ ಶಾಸಕರು ಬ್ರೋಕರ್‌ಗಳಾಗಿದ್ದಾರೆ: ಡಿ.ಕೆ.ಶಿವಕುಮಾರ್‌

ವೋಟ್‌ ಕದಿಯುವವರು ಇದ್ದಾರೆ: ಹಣ ಕದಿಯುವವರು ನೋಡಬಹುದು, ಆದರೆ, ಈಗ ಈ ಸರ್ಕಾರದಲ್ಲಿ ವೋಟು ಕದಿಯುವವರು ಇದ್ದಾರೆ. ವಿ.ಎಸ್‌. ಉಗ್ರಪ್ಪನವರು ದೂರು ನೀಡಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್‌ ಮಾಡಲಾಗುತ್ತಿದೆ. ಎಚ್ಚರಿಕೆ ವಹಿಸಿ ನಿಮ್ಮ ಮತಗಳನ್ನು ಭದ್ರ ಮಾಡಿಕೊಳ್ಳಿ,ವಿಧಾನಸಭೆ ಚುನಾವಣೆಯಲ್ಲಿ ಈ ಭ್ರಷ್ಟಬಿಜೆಪಿ ಸರ್ಕಾರ ತೊಲಗಿಸಿ ಎಂದರು.