ದಲಿತರು ಮತ್ತು ಹಿಂದುಳಿದವರನ್ನು ಕಂಡರೆ ಬಿಜೆಪಿಗೆ ಆಗುವುದಿಲ್ಲ, ಅದಕ್ಕಾಗಿಯೇ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಬಿ.ನಾಗೇಂದ್ರ ಆರೋಪಿಸಿದ್ದಾರೆ. ತಾವು ಏಟು ತಿಂದ ಹುಲಿಯಾಗಿದ್ದು, ರಾಜ್ಯ ಮೆಚ್ಚುವ ಕೆಲಸ ಮಾಡಿ ಬಿಜೆಪಿಯ ಆರೋಪಗಳಿಗೆ ಉತ್ತರ ನೀಡುವುದಾಗಿ ಹೇಳಿದ್ದಾರೆ.
ಕೊಪ್ಪಳ (ಆ.12): ದಲಿತರು ಮತ್ತು ಹಿಂದುಳಿದವರನ್ನು ಕಂಡರೇ ಬಿಜೆಪಿಯವರಿಗೆ ಆಗಲ್ಲ. ಅದಕ್ಕಾಗಿಯೇ ನನ್ನ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದಾರೆ. ಈಗ ನಾನು ಏಟು ತಿಂದ ಹುಲಿಯಾಗಿದ್ದು, ರಾಜ್ಯ ಮೆಚ್ಚುವಂತಹ ಕೆಲಸ ಮಾಡಿ ಬಿಜೆಪಿಯವರ ಆರೋಪಗಳಿಗೆ ಉತ್ತರ, ಸ್ಪಷ್ಟನೆ ನೀಡುತ್ತೇನೆ ಎಂದು ಸಚಿವ ಬಿ.ನಾಗೇಂದ್ರ ತಿರುಗೇಟು ನೀಡಿದ್ದಾರೆ.
ನಾಗೇಂದ್ರ ರಾಜಿನಾಮೆ ನೀಡದಿದ್ದರೆ ಸದನ ನಡೆಯಲು ಬಿಡಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ದಿಟ್ಟ ಉತ್ತರವನ್ನ ಕೊಡಲಿಕ್ಕೆ ನಾವು ಸದನದಲ್ಲಿ ತಯಾರಾಗಿದ್ದೇವೆ. ನಾನು ಅಪರಾಧಿಯಲ್ಲ, ಆರೋಪಿಯಷ್ಟೇ. ಆದರೂ ಕೂಡ ನನಗೆ ಸಚಿವ ಸ್ಥಾನ ನೀಡಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿರೋಧಪಕ್ಷದವರ ಕೆಲಸ. ಅವರು ಪ್ರಶ್ನೆಗಳಿಗೆ ಸಚಿವ ಸಂಪುಟದ ಎಲ್ಲರೂ ಅದಕ್ಕೆ ಉತ್ತರ ಕೊಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದೇವೆ
ಬಿಜೆಪಿಯವರು ಸದನದಲ್ಲಿ ಕೇಳಿದರೇ ನಾನು ಸ್ಪಷ್ಟನೆ ನೀಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಈ ಕುರಿತು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದೆಹಲಿ ಸೇರಿದಂತೆ ವಿವಿಧೆಡೆ ಪರವಾನಗಿ ಪಡೆದು ಹೋಗಿ ಬಂದಿದ್ದೇನೆ. ಬಿಜೆಪಿಯವರಿಗೆ ಮಾಹಿತಿ ಕೊರತೆ ಇದೆ. ದಲಿತರನ್ನ ಬೆಳೆಯಲು ಬಿಡಬಾರದೆಂದು ತುಳಿಯಲು ಹೋರಾಟ ಮಾಡುತ್ತಿದ್ದಾರೆ ಎಂದರು.
ಹಗರಣದ ಹಣ ವಾಪಸ್:
ವಾಲ್ಮೀಕಿ ನಿಗಮದ ಹಗರಣದಲ್ಲಿ ನಾನು ಮುಕ್ತನಾಗುತ್ತೇನೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹೋಗಿದ್ದ ಹಣವನ್ನು ವಾಪಸ್ ತರುತ್ತಿದ್ದೇವೆ. ಅದು ಯಾವ ರೀತಿ ಪೋಲಾಗಿದೆ ಅನ್ನೋದು ಪ್ರಪಂಚಕ್ಕೆ ಗೊತ್ತು. ಆ ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ಆ ಕೇಸ್‌ನಿಂದ ನಿರಪರಾಧಿಯಾಗಿ ಹೊರಗಡೆ ಬರುತ್ತೇನೆ. ಈ ವಿಷಯದಲ್ಲಿ ದೇವರ ಮೇಲೆ ನಂಬಿಕೆ ಇದೆ ಎಂದು ನಾಗೇಂದ್ರ ಹೇಳಿದರು.
- ಬಿಜೆಪಿಯವರಿಗೆ ದಲಿತರನ್ನು ಕಂಡರೇ ಆಗುವುದಿಲ್ಲ
- ವಾಲ್ಮೀಕಿ ಹಗರಣದಿಂದ ಮುಕ್ತನಾಗುವೆ: ಸಚಿವ


