ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿದ್ದಾರೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಒತ್ತಡ ಹೇರಿ, ತಮ್ಮ ಮುಂದೆಯೇ ರಾಜೀನಾಮೆ ಪತ್ರ ಟೈಪ್ ಮಾಡಿಸಿ ಸಹಿ ಹಾಕಿಸಿಕೊಂಡರು ಎಂದು ಅವರು ಬೇಸರ ವ್ಯಕ್ತಪಡಿಸಿದ್ರು.

  • ನನ್ನ ಮುಂದೆಯೇ ಪತ್ರ ಟೈಪ್‌ ಮಾಡಿಸಿ ಸಹಿ ಹಾಕ್ಸಿದ್ರು
  • ಆಸ್ಪತ್ರೆಯಲ್ಲಿದ್ದಾಗಲೂ ರಾಜೀನಾಮೆಗೆ ಒತ್ತಾಯಿಸಿದ್ದರು

ಹುಬ್ಬಳ್ಳಿ (ಆ.12): ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರೂ ಮುಖ್ಯಮಂತ್ರಿ ಅವರು ಒತ್ತಡ ಹೇರಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡುವಂತೆ ಮಾಡಿದರು. ರಾಜೀನಾಮೆ ಪತ್ರವನ್ನೂ ಟೈಪ್‌ ಮಾಡಿಸಿಕೊಂಡು ಬಂದು ಸಹಿ ಮಾಡುವಂತೆ ಒತ್ತಡ ಹಾಕಿದರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.

ಸಿಎಂ ಒತ್ತಡ ಹೇರಿದ್ರಿಂದ ಅನಿವಾರ್ಯವಾಗಿ ರಾಜೀನಾಮೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ಆ.14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಈ ಕುರಿತು ಒಪ್ಪಂದವೂ ಆಗಿತ್ತು. ಆ.7ರಂದೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಾಕಷ್ಟು ಒತ್ತಡ ಹೇರಿದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು ಎಂದರು. ನಾನು ಆಸ್ಪತ್ರೆಯಲ್ಲಿದ್ದಾಗಲೂ ದೂರವಾಣಿ ಮೂಲಕ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನನ್ನ ಮುಂದೆಯೇ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿಕೊಂಡು ಬಂದು ಅದಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದರು. ಪರಿಸ್ಥಿತಿಯ ಕಾರಣದಿಂದಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಮನಸಿಗೆ ನೋವಾಗಿದೆ

ರಾಜ್ಯ ಸರ್ಕಾರದ ನಡೆ ತಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇನ್ನು ಮುಂದೆ ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಭಾಗವಹಿಸುತ್ತೇನೆ ಎಂದರು.