ಸಿದ್ದ'ರಾಮ'ಯ್ಯ ಹೆಸರಲ್ಲಿ ರಾಮನಿದ್ದಾನೆ, ನನ್ನಲ್ಲಿ 'ಶಿವ'ನಿದ್ದಾನೆ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ ಗರಂ
ಶ್ರೀರಾಮಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ? ಅಯೋಧ್ಯೆ ರಾಮಮಂದಿರ ಕೇವಲ ಬಿಜೆಪಿಯವರಿಗೆ ಸಂಬಂಧಿಸಿದ್ದು ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜ.23): ಶ್ರೀರಾಮಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ? ಅಯೋಧ್ಯೆ ರಾಮಮಂದಿರ ಕೇವಲ ಬಿಜೆಪಿಯವರಿಗೆ ಸಂಬಂಧಿಸಿದ್ದು ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಮ ಬಿಜೆಪಿಯವರಿಗೆ ಮಾತ್ರ ಸೀಮಿತವಲ್ಲ, ಸಿದ್ದ'ರಾಮ'ನಯ್ಯವರಲ್ಲೂ ರಾಮನಿದ್ದಾನೆ, ನನ್ನ ಹೆಸರಿನಲ್ಲಿ ಶಿವನಿದ್ದಾನೆ ಅಷ್ಟೇ ಅಲ್ಲ ಶಿವನ ಮಗ ಕುಮಾರನೂ ಇದ್ದಾನೆ. ನಾವೆಲ್ಲ ಹಿಂದುಗಳಲ್ವ? ರಾಮಭಕ್ತರು ಅಲ್ವಾ ಎಂದು ಪ್ರಶ್ನಿಸಿದರು.
ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಮರಾಜ್ಯದ ಕನಸು ನನಸಾಗಿದೆ: ಡಿಕೆ ಶಿವಕುಮಾರ
ಬಿಜೆಪಿಯವರಿಗೆ ಹೊಟ್ಟೆ ಉರಿಯಾಗಿದೆ. ಹೇಗಾದ್ರೂ ಮಾಡಿ ಜನರ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ, ಮುಖಂಡರನ್ನು ಹಿಂದು ವಿರೋಧಿಗಳನ್ನಾಗಿ ಮಾಡಬೇಕು ಆ ಮೂಲಕ ಚುನಾವಣೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಯೋಧ್ಯೆ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ರಾಜ್ಯಾದ್ಯಂತ ಮುಜುರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆ ನಡೆಸುವಂತೆ ನಾವು ಆದೇಶ ನೀಡಿದ್ದೆವು. ಈ ಬಗ್ಗೆ ಸಭೆ ನಡೆಸಿ ಪೂಜೆ ಮಾಡಲು ನಮ್ಮ ಸರ್ಕಾರವೇ ಆದೇಶ ಮಾಡಿತ್ತು. ನಾವು ಹಿಂದೂ ವಿರೋಧಿಗಳಲ್ಲ, ರಾಮನನ್ನೂ ಪೂಜಿಸುತ್ತೇವೆ. ಸೀತೆಯನ್ನೂ ಪೂಜಿಸುತ್ತೇವೆ ಎಂದು ತಿರುಗೇಟು ನೀಡಿದರು. ಅಯೋಧ್ಯೆ ಉದ್ಘಾಟನೆ ದಿನ ಪೂಜೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಆರೋಪಿಸಿದ್ದರು.