ಈಶ್ವರಪ್ಪ ನಾಲಿಗೆಗೂ, ಮೆದುಳಿಗೂ ಲಿಂಕ್ ಇಲ್ಲ: ಆಯನೂರು ಮಂಜುನಾಥ್‌

ಕೆ.ಎಸ್.ಈಶ್ವರಪ್ಪ ಅವರ ನಾಲಿಗೆಗೂ, ಮೆದುಳಿಗೂ ಲಿಂಕ್ ಇಲ್ಲ ಎಂಬುವುದನ್ನು ಅವರು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಲೇವಡಿ ಮಾಡಿದರು. 

Ayanur Manjunath Slams On KS Eshwarappa At Shivamogga gvd

ಶಿವಮೊಗ್ಗ (ಜ.06): ಕೆ.ಎಸ್.ಈಶ್ವರಪ್ಪ ಅವರ ನಾಲಿಗೆಗೂ, ಮೆದುಳಿಗೂ ಲಿಂಕ್ ಇಲ್ಲ ಎಂಬುವುದನ್ನು ಅವರು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಅವರ ಮಗ ಯತೀಂದ್ರ ಮತಾಂತರಗೊಂಡು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಾರೆ. ಈಶ್ವರಪ್ಪ ಅವರ ನಾಲಿಗೆಗೂ, ಮೆದುಳಿಗೆ ಲಿಂಕ್ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಅದು ಮತ್ತೆ ಮತ್ತೆ ನಿಜವಾಗುತ್ತಿದೆ. ಅವರ ಜೊತೆ ಮಾತಿನ ಸ್ಪರ್ಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಬೇಕಾದಷ್ಟು ವಿಷಯಗಳಿವೆ: ಬಿಜೆಪಿ ನಾಯಕರು ನನ್ನನ್ನು ಬಂಧಿಸಿ ಎಂದು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ. ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಬಂಧಿಸಲು ಬೇರೆ ಬೇಕಾದಷ್ಟು ವಿಷಯಗಳಿವೆ. ಹಲವು ವಿಷಯದಲ್ಲಿ ನನ್ನ ಮೇಲೆ ಕೇಸು ಹಾಕಬೇಡಿ ಎಂದು ಪೊಲೀಸರಿಗೆ ವಿನಂತಿಸಿದ್ದಿದೆ. ಇಷ್ಟು ವರ್ಷದ ಅವರ ಹೋರಾಟದಲ್ಲಿ ಅವರ ವಿರುದ್ಧ ಒಂದಾದರೂ ಕೇಸು ಬಿದ್ದಿವೆಯೇ ಎಂದು ಲೇವಡಿ ಮಾಡಿದರು.

ರಾಮ ಮಂದಿರ ಉದ್ಘಾಟನೆ ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ನಾನೇ ಈಶ್ವರಪ್ಪ ಆಗಿದ್ದರೆ..: ಬಿ.ಎಸ್. ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಯಾರು ಎಂದು ಗೊತ್ತಿದೆ. ಅವರು ಜೈಲಿನಲ್ಲಿದ್ದಾಗ ಸೌಜನ್ಯಕ್ಕಾಗಿಯಾದರೂ ಇದೇ ಬಿಜೆಪಿ ನಾಯಕರು ಯಾರೂ ಹೋಗಲಿಲ್ಲ. ನಾನು, ರೇಣುಕಾಚಾರ್ಯ ಹೋಗಿ ಬಂದಿದ್ದೆವು. ಅವರು ಜೈಲಿನಲ್ಲಿದ್ದದ್ದು, ಈಗಿರುವ ಅನೇಕ ಬಿಜೆಪಿಗರಿಗೆ ಸಂತಸ ತಂದಿತ್ತು. ಇದೇ ಈಶ್ವರಪ್ಪನವರು ನಾನಾಗಿದ್ದರೆ ಪ್ರಾಣ ಕಳೆದುಕೊಳ್ಳುತ್ತಿದ್ದೆ ಎಂದಿದ್ದರು. ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸಿದ್ದರಾಮಯ್ಯನವರ ತಲೆಕಡಿಯಬೇಕು ಎಂದಿದ್ದರು. ಈಗ ಸದನದ ಒಳಗೆಯೇ ಇದ್ದಾರೆ. ಅವರ ಹತ್ತಿರವೇ ಸಿದ್ದರಾಮಯ್ಯ ಇರುತ್ತಾರೆ, ಕಡಿಯಲಿ. ಅವರದೇ ಪಕ್ಷದ ಬಸವನಗೌಡ ಪಾಟೀಲ್ ಮಾಡಿರುವ ₹40 ಸಾವಿರ ಕೋಟಿ ಕೋವಿಡ್ ಹಗರಣದ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಲಿ ಎಂದು ಆಯನೂರು ಮಂಜುನಾಥ್‌ ಕುಟುಕಿದರು.

ಎನ್‌ಪಿಎಸ್‌ ರದ್ದಿಗೆ ಧ್ವನಿಯೆತ್ತಿ: ಸರ್ಕಾರಿ ನೌಕರರ ಹೊಸ ನಿವೃತ್ತಿ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೇ ನಿವೃತ್ತಿ ಪಿಂಚಣಿ ಯೋಜನೆ (ಒಪಿಎಸ್)ನ್ನು ಜಾರಿಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು. ಎನ್‌ಪಿಎಸ್‌ ರದ್ದು ಮಾಡಲೇ ಬೇಕು. ಸಿಎಂ ಸಿದ್ದರಾಮಯ್ಯ ಇದೇ ತಿಂಗಳ 6ರಂದು ಎನ್‌ಪಿಎಸ್‌ ಕುರಿತು ಸಭೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರದ ಬಳಿಯಿರುವ ಸಂಸ್ಥೆಯಿಂದ ಹಣ ಹಿಂದಿರುಗಿಸಲು ಕಾಯ್ದೆ ತಿದ್ದುಪಡಿ ಮಾಡಬೇಕು. ರಾಜ್ಯದ ಬಿಜೆಪಿಯ 25 ಸಂಸದರು ಕೇಂದ್ರ ಸರ್ಕಾರದಲ್ಲಿ ಎನ್‌ಪಿಎಸ್‌ ನೌಕರರ ಪರವಾಗಿ ಮಾತನಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರು, ಈಗ ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿ ಎಸ್‌ನ್ನು ರದ್ದುಪಡಿಸಿ ಓಪಿಎಸ್‌ನ್ನು ನೀಡುವ ಬಗ್ಗೆ ಭರವಸೆ ಕೊಟ್ಟಿತ್ತು. ಆದರೆ, ಓಪಿಎಸ್‌ನ್ನು ಜಾರಿ ಮಾಡಲು ಅನೇಕ ಕಾನೂನು ತೊಡಕುಗಳಿವೆ ಎಂದರು. ಎನ್‌ಪಿಎಸ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 2003ರಲ್ಲಿ ಪ್ರಸ್ತಾಪವಾಗಿ 2004ರಲ್ಲಿ ಜಾರಿಯಾಯಿತು. ನೌಕರರ ವೇತನದಲ್ಲಿ ಶೇ.10ರಷ್ಟನ್ನು ಕಡಿತಗೊಳಿಸಿ ಮತ್ತು ಅದಕ್ಕೆ ಸರ್ಕಾರ ಶೇ.10ರಷ್ಟನ್ನು ನೀಡಿ, ಒಟ್ಟು ಶೇ.20ರಷ್ಟು ಹಣವನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಸೆಕ್ಯೂರಿಟಿ ಡಿಪಾಸಿಟ್‌ಗೆ ಜಮಾ ಮಾಡಬೇಕಾಗುತ್ತಿದೆ. 

ಕಾಂಗ್ರೆಸ್‌ ಸರ್ಕಾರಕ್ಕೆ 5ನೇ ಗ್ಯಾರಂಟಿಯೇ ಪ್ರಮುಖ ಅಸ್ತ್ರ: ಸಚಿವ ಮಧು ಬಂಗಾರಪ್ಪ

ಹೀಗೆ ಕಡಿತಗೊಂಡ ಹಣ ಕೇಂದ್ರ ಸರ್ಕಾರದ ಸೆಂಟ್ರಲ್ ಏಜೆನ್ಸಿಗೆ ಹೋಗುತ್ತಿದೆ. ಆ ಏಜೆನ್ಸಿಯವರು ಇದನ್ನು ಶೇರು ಮಾರುಕಟ್ಟೆಗೆ ತೊಡಗಿಸಿ ಅದರಲ್ಲಿ ಬಂದ ಲಾಭಾಂಶವನ್ನು ಪಿಂಚಣಿ ರೂಪದಲ್ಲಿ ಕೊಡುವ ಯೋಜನೆ ಇದಾಗಿದೆ. ಇದೊಂದು ಅನಿಶ್ಚಿತ ಮರುಪಾವತಿ ಯೋಜನೆಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್, ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಐಡಿಯಲ್ ಗೋಪಿ, ಶಿ.ಜು.ಪಾಶ, ಕೃಷ್ಣ, ಜಗದೀಶ್ ಗೌಡ, ಎಸ್.ವಿ. ಪಾಟೀಲ್, ಹಿರಣ್ಣಯ್ಯ, ಸಂತೋಷ್ ಆಯನೂರು ಇದ್ದರು.

Latest Videos
Follow Us:
Download App:
  • android
  • ios