ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂಬ ಅಭಿಯಾನವನ್ನು ತಾಲೂಕು ಜೆಡಿಎಸ್‌ ವತಿಯಿಂದ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತುರುವೇಕೆರೆ (ಮೇ.19): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂಬ ಅಭಿಯಾನವನ್ನು ತಾಲೂಕು ಜೆಡಿಎಸ್‌ ವತಿಯಿಂದ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಎಚ್‌.ಡಿ.ದೇವೇಗೌಡರ 91 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿರುವ ದೇವೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. ದೇವೇಗೌಡರು ಓರ್ವ ಪ್ರಾಮಾಣಿಕ ರಾಜಕಾರಣಿ, ಒಂದಿಷ್ಟೂ ಕಪ್ಪುಚುಕ್ಕೆ ಇಲ್ಲದಂತೆ ತಮ್ಮ ರಾಜಕೀಯ ಜೀವನವನ್ನು ಇನ್ನೊಬ್ಬರಿಗೆ ಮಾದರಿಯಾಗುವಂತೆ ಬಾಳಿದ್ದಾರೆ. 

ದೇಶ ಹಾಗೂ ರಾಜ್ಯದ ರೈತಾಪಿಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ದೇವೇಗೌಡರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಕೃಷ್ಣಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ದೇವೇಗೌಡರು ಭಾರತರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಹಾಗಾಗಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸುವ ಅಭಿಯಾನವನ್ನು ತುರುವೇಕೆರೆ ತಾಲೂಕಿನಿಂದಲೇ ಪಕ್ಷಾತೀತವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಯುವ ಜೆಡಿಎಸ್‌ ಮುಖಂಡ ಸೊಪ್ಪಿನಹಳ್ಳಿ ಮಧು ಹೇಳಿದರು. ಈ ಅಭಿಯಾನಕ್ಕೆ ಎಲ್ಲಾ ಸಮುದಾಯವರು ಕೈ ಜೋಡಿಸಬೇಕು. 

ಔರಾದ್‌ ಅಭಿ​ವೃ​ದ್ಧಿಗೆ ಕೇಂದ್ರ ಸಚಿವ ಭಗ​ವಂತ ಖೂಬಾ ಅಡ್ಡ​ಗಾ​ಲು: ಪ್ರಭು ಚವ್ಹಾಣ್‌

ದೇವೇಗೌಡರು ಕನ್ನಡ ನಾಡು ಕಂಡ ಅಪ್ರತಿಮ ರಾಜಕಾರಣಿ. ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಮಹಾನ್‌ ನಾಯಕರು. ರೈತಾಪಿಗಳ ಜೀವನವನ್ನು ಹಸನುಗೊಳಿಸಲು ಹೋರಾಡಿದ ಧೀಮಂತರು ಎಂದು ದೇವೇಗೌಡರ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ತಾಲೂಕು ತಹಸೀಲ್ದಾರರ ಮೂಲಕ ಮನವಿ ಪತ್ರ ಸಹ ಸಲ್ಲಿಸಲಾಯಿತು. ತಾಲೂಕು ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ಮುಖಂಡರಾದ ಶಂಕರೇಗೌಡ, ಎಚ್‌.ಆರ್‌.ರಾಮೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಬಿ.ಜಗದೀಶ್‌, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಬೂವನಹಳ್ಳಿ ದೇವರಾಜು, ಲೀಲಾವತಿ ಗಿಡ್ಡಯ್ಯ, ಕಲ್ಲಬೋರನಹಳ್ಳಿ ಜಯರಾಮ್‌, ಹೆಡಿಗೇಹಳ್ಳಿ ವಿಶ್ವನಾಥ್‌, ಕಣತೂರು ಪ್ರಸನ್ನ, ಮಂಗೀಕುಪ್ಪೆ ಬಸವರಾಜು, ಪಟ್ಟಣಪಂಚಾಯ್ತಿ ಸದಸ್ಯ ಎನ್‌.ಆರ್‌.ಸುರೇಶ್‌, ಮಧು, ಸ್ವಪ್ನಾ ನಟೇಶ್‌, ವಿಜಯೇಂದ್ರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಕಳಂಕ ತರುವವರ ಮೇಲೆ ಹದ್ದಿನ ಕಣ್ಣು: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ

ಬ್ರೆಡ್‌ ವಿತರಣೆ: ತಾಲೂಕು ಎಚ್‌.ಡಿ.ದೇವೇಗೌಡರ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಹತ್ತಾರು ರೋಗಿಗಳಿಗೆ ಬ್ರೆಡ್‌, ಹಣ್ಣುಗಳನ್ನು ವಿತರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಎಂ.ಎನ್‌.ಚಂದ್ರೇಗೌಡರ ನೇತೃತ್ವದಲ್ಲಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಣ್ಣ, ಸಂಗಲಾಪುರ ಶಂಕರಪ್ಪ, ದೊಡ್ಡಾಘಟ್ಟ ಶ್ರೀನಿವಾಸ್‌, ಆನೇಮೆಳೆ ನಂಜುಂಡಪ್ಪ, ಮಾದಿಹಳ್ಳಿ ಕಾಂತರಾಜ್‌, ಮಂಗೀಕುಪ್ಪೆ ಬಸವರಾಜು ಸೇರಿದಂತೆ ಹಲವಾರು ಮುಖಂಡರು ಇದ್ದರು.