ನಮ್ ದೇಶಕ್ಕೊಬ್ಬರೇ ರೀ.. ಅಟಲ್ ಬಿಹಾರೀ..: 10 ಘಟನೆಗಳೊಂದಿಗೆ ಅಜಾತಶತ್ರು ಸ್ಮರಿಸುವ ಹೊತ್ತು!
1948ರಲ್ಲಿ ಗಾಂಧೀ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರುವವರೆಗೂ ಡಾ। ಹೆಡಗೇವಾರ್ ಅವರಿಗಾಗಲೀ ಅವರ ಉತ್ತರಾಧಿಕಾರಿ ಗುರೂಜಿ ಗೋಳವಳ್ಕರ್ ಅವರಿಗಾಗಲೀ ರಾಜಕೀಯ ಪಕ್ಷ ಬೇಕು ಎಂದು ಅನ್ನಿಸಿರಲಿಲ್ಲ.
ಪ್ರಶಾಂತ್ ನಾತು
ಭಾರತದ ರಾಜಕಾರಣದಲ್ಲಿ ಜನಪ್ರಿಯತೆಯ ತುತ್ತ ತುದಿಗೇರಿದ ರಾಜಕಾರಣಿಗಳು ನಾಲ್ವರು. ಪಂಡಿತ ನೆಹರು, ಇಂದಿರಾ ಗಾಂಧಿ, ನರೇಂದ್ರ ಮೋದಿ ಮತ್ತು ಅಟಲ್ ಬಿಹಾರಿ ವಾಜಪೇಯಿ. ನೆಹರು, ಇಂದಿರಾ, ಮೋದಿ ಬಗ್ಗೆ ಅತೀ ಪ್ರೀತಿ ಮತ್ತು ಅತೀ ದ್ವೇಷ ಎರಡನ್ನೂ ನೋಡಬಹುದು. ಆದರೆ ಅಟಲ್ ಬಿಹಾರಿ ಹೆಸರು ಹೇಳಿ ನೋಡಿ, ಕೇಳಿ ನೋಡಿ. ಒಂದು ಮುಗುಳು ನಗೆ, ಒಂದು ಪ್ರೀತಿ, ಮುಖದಲ್ಲಿ ಒಂದು ಆದರ ಕಣ್ಣಿನಲ್ಲಿ ಕಾಣುತ್ತದೆ. ಅದಕ್ಕೆ ಕಾರಣವೇ ಅಟಲ್ ಬಿಹಾರಿ ವಾಜಪೇಯಿ ಅವರ ಅಜಾತ ಶತ್ರು ರಾಜಕಾರಣ ಮತ್ತು ಬದುಕಿದ ರೀತಿ.
ಘಟನೆ 1: ಪತ್ರಕರ್ತ ರಾಜಕಾರಣಿಯಾದರು
1948ರಲ್ಲಿ ಗಾಂಧೀ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರುವವರೆಗೂ ಡಾ। ಹೆಡಗೇವಾರ್ ಅವರಿಗಾಗಲೀ ಅವರ ಉತ್ತರಾಧಿಕಾರಿ ಗುರೂಜಿ ಗೋಳವಳ್ಕರ್ ಅವರಿಗಾಗಲೀ ರಾಜಕೀಯ ಪಕ್ಷ ಬೇಕು ಎಂದು ಅನ್ನಿಸಿರಲಿಲ್ಲ. ಆದರೆ ಹಿಂದೂ ಮಹಾಸಭಾದಲ್ಲಿ ಸಾವರ್ಕರ್ ಜೊತೆ ಗುದ್ದಾಡಿ ಸುಸ್ತು ಆಗಿದ್ದ ಬಂಗಾಳಿ ಭದ್ರಲೋಕದ ಶ್ಯಾಮ ಪ್ರಸಾದ ಮುಖರ್ಜಿ ಅವರು ಗುರೂಜಿ ಅವರ ಮನವೊಲಿಸಿದಾಗ, ನಾನು 5 ಬಂಗಾರದ ಗಟ್ಟಿಗಳನ್ನು ನಿಮ್ಮ ಕೈಗೆ ಕೊಡುತ್ತೇನೆ ಎಂದು ಗುರೂಜಿ ಅವರು ದೀನ ದಯಾಳ ಉಪಾಧ್ಯಾಯ, ನಾನಾಜಿ ದೇಶಮುಖ್, ಬಲರಾಜ್ ಮುಧೋಕ್, ಬಾಪುಸಾಹೇಬ್ ಸೋಹನಿ ಮತ್ತು ಸುಂದರ ಸಿಂಗ್ ಭಂಡಾರಿ ಎಂಬ 5 ಆರ್‌ಎಸ್ಎಸ್ ಪ್ರಚಾರಕರನ್ನು ಜನಸಂಘಕ್ಕೆ ಎರವಲು ಕೊಡುತ್ತಾರೆ. ಆದರೆ 1952ರ ಮೊದಲ ಚುನಾವಣೆಯಲ್ಲೇ ಶ್ಯಾಮ ಪ್ರಸಾದ ಮುಖರ್ಜಿ ಅವರ ಬಂಗಾಳಿ ಹಿಂದಿಯನ್ನು ಜನ ಸ್ವೀಕರಿಸುತ್ತಿಲ್ಲ ಎನ್ನುವುದು ಪಂಡಿತ್ ದೀನ ದಯಾಳ ಉಪಾಧ್ಯಾಯರ ಗಮನಕ್ಕೆ ಬರುತ್ತದೆ. ಆಗ ಅವರ ಕಣ್ಣಿಗೆ ಬಿದ್ದವರೇ ಆರ್‌ಎಸ್ಎಸ್‌ನ ಪಾಂಚಜನ್ಯ ಮತ್ತು ರಾಷ್ಟ್ರ ಧರ್ಮ ಪತ್ರಿಕೆಯ ಉಪ ಸಂಪಾದಕರಾಗಿದ್ದ 27 ವರ್ಷದ ಅಟಲ್ ಬಿಹಾರಿ ವಾಜಪೇಯಿ. ಆಗಿನಿಂದಲೇ ವಾಜಪೇಯಿ ಅವರು ಶ್ಯಾಮ ಪ್ರಸಾದರ ಭಾಷಣದ ಹಿಂದಿ ಅನುವಾದಕರಾಗಿ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಜನಪ್ರಿಯರಾಗತೊಡಗುತ್ತಾರೆ.
ಪಂಚಮಸಾಲಿ ಮೀಸಲಾತಿ ಸಾಧ್ಯವೇ?: ಸಮುದಾಯವರು ಅಧ್ಯಯನ ನಡೆಸಿದರೆ ತಲೆ ಬಿಸಿ ಏರುತ್ತಾ?
ಘಟನೆ 2: ಅಟಲ್‌ಗೆ ಫಿದಾ ಆಗಿದ್ದ ಅಡ್ವಾಣಿ
1952ರ ಮೊದಲ ಚುನಾವಣೆಯಲ್ಲಿ ಶ್ಯಾಮ ಪ್ರಸಾದ ಮುಖರ್ಜಿ ಅವರೊಂದಿಗೆ ರೈಲಿನಲ್ಲಿ ದಿಲ್ಲಿಯಿಂದ ರಾಜಸ್ಥಾನದ ಕೋಟಾಕ್ಕೆ ಅಟಲ್ ಬಿಹಾರಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ನಿಲ್ದಾಣಕ್ಕೆ ಒಬ್ಬ ಒಳ್ಳೆ ಇಂಗ್ಲೀಷ್ ಮಾತನಾಡುವ ಸಿಂಧಿ ಯುವಕ ಬಂದಿರುತ್ತಾನೆ. ಅವರೇ ಆಗ ಅಲ್ಲಿ ನಗರ ಆರ್‌ಎಸ್ಎಸ್ ಪ್ರಚಾರಕರಾಗಿದ್ದ ಲಾಲಕೃಷ್ಣ ಅಡ್ವಾಣಿ. 60 ವರ್ಷಗಳ ನಂತರ ಸ್ವತಃ ಅಡ್ವಾಣಿ ಅವರೇ ‘ಮೊದಲ ಭಾಷಣ ಕೇಳಿಯೇ ನಾನು ಮಂತ್ರ ಮುಗ್ಧನಾಗಿ ಬಿಟ್ಟೆ. ಅದೇನು ಭಾಷೆ ನಡುವಿನ ಮೌನ ಕವಿತೆಗಳ ಬಳಕೆ. ನಾನು ಅವತ್ತು ಅವರನ್ನು ನಾಯಕ ಎಂದು ಒಪ್ಪಿಕೊಂಡವನು ಇವತ್ತೂ ಅವರನ್ನೇ ಅನುಸರಿಸುತ್ತೇನೆ. ಬರೀ ಇಂಗ್ಲೀಷ್ ಭಾಷಣ ಮಾಡುತ್ತಿದ್ದ ನಾನು ಅಟಲ್‌ರ ಭಾಷಣ ಕೇಳಿ ಕೇಳಿ ಮುಂದೆ ಕಷ್ಟ ಪಟ್ಟು ಹಿಂದಿಯಲ್ಲಿ ಭಾಷಣ ಮಾಡಲು ಕಲಿತೆ’ ಎಂದು ಬರೆದುಕೊಂಡಿದ್ದರು. ಆದರೆ ಅಟಲ್ ಬಿಹಾರಿ ಅವರಿಗೆ ಕೋಟಾಗೆ ಹೋಗಿದ್ದು ನೆನಪಿತ್ತಾದರೂ ಮೊದಲ ಬಾರಿ ಅಡ್ವಾಣಿ ಅವರ ಭೇಟಿ ನೆನಪಿರಲಿಲ್ಲವಂತೆ. ಆದರೆ ಒಂದಂತೂ ಸತ್ಯ. ಪಂಡಿತ ನೆಹರು-ಸರ್ದಾರ ವಲ್ಲಭ ಭಾಯಿ ಪಟೇಲ್ ನಂತರ ತುಂಬಾ ವೈರುಧ್ಯಗಳು, ಭಿನ್ನ ಅಭಿಪ್ರಾಯಗಳ ನಡುವೆಯೂ ಕೊನೆವರೆಗೆ ಜೊತೆಗೆ ಕೆಲಸ ಮಾಡಿದ ಜೋಡಿ ಅಟಲ್-ಅಡ್ವಾಣಿ ಅವರದು.
ಘಟನೆ 3: ಗುರುವನ್ನು ಎಂದೂ ಮರೆಯಲಿಲ್ಲ
1953ರ ಜೂನ್ 23ರಂದು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿದ್ದ 51 ವರ್ಷದ ಶ್ಯಾಮ ಪ್ರಸಾದ ಮುಖರ್ಜಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡರು. 1954ರಲ್ಲಿ ನೆಹರು ತಂಗಿ ವಿಜಯಲಕ್ಷ್ಮಿ ಪಂಡಿತ ಅವರ ನಿಧನದ ಕಾರಣದಿಂದ ಲಖನೌ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಆಗ ದೀನ ದಯಾಳ ಉಪಾಧ್ಯಾಯರು ಅಟಲ್‌ರಿಗೆ ಟಿಕೆಟ್ ಕೊಟ್ಟರು. ಆದರೆ ಹೀನಾಯವಾಗಿ ಸೋತ ವಾಜಪೇಯಿ ಮೂರನೇ ಸ್ಥಾನಕ್ಕೆ ಇಳಿದರು. ಆದರೆ ಅಟಲ್ ಹಿಂದಿ ಭಾಷಣದ ಬಗ್ಗೆ ಹಿಂದಿ ನಾಡಿನಲ್ಲಿ ಚರ್ಚೆ ಆಗಲು ಶುರು ಆಗಿತ್ತು. ಮೂರು ವರ್ಷದ ನಂತರ 1957ರಲ್ಲಿ ದೀನ್ ದಯಾಳರು ಉತ್ತರ ಪ್ರದೇಶದ ಮಥುರಾ, ಬಲರಾಮಪುರ ಮತ್ತು ಲಖನೌ ಹೀಗೆ ಮೂರು ಕ್ಷೇತ್ರಗಳಿಂದಲೂ ಅಟಲ್‌ಗೆ ಟಿಕೆಟ್ ಕೊಟ್ಟರು. ಎರಡು ಕಡೆ ಸೋತ 33 ವರ್ಷದ ಅಟಲ್, ಮುಸ್ಲಿಂ ಜಮೀನುದಾರರು ಮತ್ತು ಹಿಂದೂ ರೈತ ಕಾರ್ಮಿಕ ಬಾಹುಳ್ಯದ ಬಲರಾಮಪುರ ಕ್ಷೇತ್ರದಿಂದ ಮೊದಲ ಬಾರಿ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದರು. ತನ್ನ ರಾಜಕೀಯ ಜೀವನ ರೂಪಿಸಿದ ದೀನ ದಯಾಳ್ ಉಪಾಧ್ಯಾಯರ ಬಗ್ಗೆ ಅಟಲ್‌ರಿಗೆ ಎಷ್ಟು ಶ್ರದ್ಧೆ ಇತ್ತು ಎಂದರೆ, ಅವರ ಕೊನೆಗಾಲದವರೆಗೂ ಕೋಣೆ ಮತ್ತು ಮೇಜಿನ ಮೇಲೆ ಗುರುವಿನ ಫೋಟೋ ಕಾಣದಿದ್ದರೆ ಬೇಸರಗೊಳ್ಳುತ್ತಿದ್ದರಂತೆ.
ಘಟನೆ 4: ಅಟಲ್‌ಗೆ ವಿಶ್ವಾಸ ಇದ್ದಿದ್ದು ಇಬ್ಬರ ಮೇಲೆ
ಹೇಗೆ 1951ರಲ್ಲಿ ಶ್ಯಾಮ ಪ್ರಸಾದರಿಗೆ ಹಿಂದಿ ಅನುವಾದಕರಾಗಿ ಅಟಲ್‌ರನ್ನು ದೀನ ದಯಾಳರು ಪಾರ್ಟಿಗೆ ಕರೆದುಕೊಂಡು ಬಂದರೋ, ಅದೇ ರೀತಿ 1957ರಲ್ಲಿ ಅದೇ ದೀನ್ ದಯಾಳರು ಪಾರ್ಟಿಗೆ ಒಂದು ‘ಆಂಗ್ಲ’ ಮುಖ ಬೇಕೆಂದು ಅಡ್ವಾಣಿ ಅವರನ್ನು ಕರೆದುಕೊಂಡು ಬಂದು ಅಟಲ್‌ರ ಸಂಸದೀಯ ಸಹಾಯಕ್ಕೆ ನೇಮಿಸಿದರು. ಮೊದಲು ಕೆಲ ದಿನ ಅಟಲ್‌ರ ಅಧಿಕೃತ ನಿವಾಸ 30 ರಾಜೇಂದ್ರ ಪ್ರಸಾದ ರೋಡ್‌ನಲ್ಲಿದ್ದ ಅಡ್ವಾಣಿ, ನಂತರ ರಾಮಲೀಲಾ ಮೈದಾನದ ಹತ್ತಿರ ಒಂದು ಕೋಣೆ ಬಾಡಿಗೆಗೆ ಹಿಡಿದು ಇರಲು ಶುರು ಮಾಡಿದರು. 1958ರ ದಿಲ್ಲಿ ಮುನ್ಸಿಪಲ್ ಚುನಾವಣೆಯಲ್ಲಿ ಜನಸಂಘ ಮತ್ತು ಕಮ್ಯುನಿಸ್ಟ್ ನಡುವಿನ ಮೈತ್ರಿ ನಂತರವೂ ಪಾರ್ಟಿ ಹೀನಾಯವಾಗಿ ಸೋತಾಗ ಬೇಸರಗೊಂಡು ಅಟಲ್ ಮತ್ತು ಅಡ್ವಾಣಿ ಇಬ್ಬರೂ ಸೇರಿ ದಿಲ್ಲಿ ಕನಾಟ್ ಪ್ಲೇಸ್‌ನಲ್ಲಿರುವ ‘ರೀಗಲ್’ಗೆ ಹೋಗಿ ರಾಜ್ ಕಪೂರ್ ಮತ್ತು ಮಾಲಾ ಸಿನ್ಹಾರ ‘ಫಿರ್ ಸುಭಹ ಹೋಗಿ’ ಚಿತ್ರ ನೋಡುತ್ತಾ ಕುಳಿತಿದ್ದರಂತೆ. 1977ರಲ್ಲಿ ಜನಸಂಘವನ್ನು ಜನತಾ ಪಾರ್ಟಿಯಲ್ಲಿ ವಿಲೀನ ಮಾಡಬೇಕು ಅನ್ನುವ ಪ್ರಸಂಗ ಬಂದಾಗ ಅಟಲ್ ಜಿ ಹೇಳಿದ್ದರಂತೆ, ‘ಇದು ದೀನ್ ದಯಾಳರ ತಪಸ್ಸಿನ ಫಲದಿಂದ ಬೆಳೆದ ಪಾರ್ಟಿ. ಇದನ್ನು ವಿಲೀನಗೊಳಿಸಲು ನನಗೆ ಒಪ್ಪಿಗೆ ಇಲ್ಲ. ಆದರೆ ಅಡ್ವಾಣಿ ಅವರ ರಾಜಕೀಯ ದೂರದೃಷ್ಟಿ ಕೋನದ ಬಗ್ಗೆ ವಿಶ್ವಾಸ ಇರುವುದರಿಂದ ಮಾತ್ರ ನಾನು ಒಪ್ಪಿಗೆ ಸೂಚಿಸುತ್ತಿದ್ದೇನೆ’ ಎಂದು. ಅಟಲ್‌ರಿಗೆ ಅಪರಿಮಿತ ವಿಶ್ವಾಸ ಇದ್ದಿದ್ದು ಇಬ್ಬರ ಮೇಲೆ ಮಾತ್ರ. ಒಬ್ಬರು- ಗುರು ದೀನ ದಯಾಳರು. ಇನ್ನೊಬ್ಬರು ಶಿಷ್ಯ ಲಾಲಕೃಷ್ಣ ಅಡ್ವಾಣಿ.
ಘಟನೆ 5: ನೆಹರು ಹೇಳಿದ್ದ ಭವಿಷ್ಯ ನಿಜವಾಯ್ತು
1957ರಲ್ಲಿ 33 ವರ್ಷದ ಅಟಲ್ ಬಿಹಾರಿ ಲೋಕಸಭೆ ಪ್ರವೇಶ ಮಾಡಿದಾಗ 4 ಸಂಸದರನ್ನು ಮಾತ್ರ ಹೊಂದಿದ್ದ ಜನಸಂಘಕ್ಕೆ ಸ್ಪೀಕರ್ ಅವರು ಮಾತನಾಡಲು ಹೆಚ್ಚು ಸಮಯ ಕೊಟ್ಟಿರಲಿಲ್ಲವಂತೆ. ಆಗ ಬೇಸರಗೊಂಡು ‘ನಾನು ಸಮಯ ಕೊಡದೇ ಇರುವುದಕ್ಕೆ ಪ್ರತಿಭಟಿಸಿ ವಾಕ್ ಔಟ್ ಮಾಡುತ್ತೇನೆ’ ಎಂದು ಅಟಲ್ ಹೊರ ಹೋಗಿದ್ದರಂತೆ. ಆದರೆ 1958ರಲ್ಲಿ ಯಾವಾಗ ಅಟಲ್ ವಿದೇಶ ನೀತಿ ಬಗ್ಗೆ ಹಿಂದಿಯಲ್ಲಿ ಮಾತನಾಡಿದರೋ ಪಂಡಿತ್ ನೆಹರು ಕೂಡ ಅಟಲ್ ಬಗ್ಗೆ ಸದನದಲ್ಲೇ ಪ್ರಶಂಸೆ ವ್ಯಕ್ತಪಡಿಸಿದರಂತೆ. ಅದೇ ವರ್ಷ ಸೋವಿಯತ್ ಪ್ರಧಾನಿ ನಿಖಿತಾ ಕೃಶ್‌ಚೇವ್ ದಿಲ್ಲಿಗೆ ಬಂದಾಗ ನೆಹರು ಅವರು ವಾಜಪೇಯಿ ಅವರನ್ನು ಕೂಡ ಔತಣ ಕೂಟಕ್ಕೆ ಆಹ್ವಾನಿಸಿ ‘ಮುಂದೆ ಪ್ರಧಾನಿ ಆಗುವ ಸಾಮರ್ಥ್ಯ ಇರುವ ನಾಯಕ’ ಎಂದು ಪರಿಚಯಿಸಿದ್ದರಂತೆ. ಆಗ ನಿಖಿತಾ ನಗುತ್ತಾ ‘ಹಾಗಿದ್ದರೆ ಈತ ಇಲ್ಲೇನು ಮಾಡುತ್ತಿದ್ದಾನೆ. ನಮ್ಮಲ್ಲಿ ಆಗಿದ್ದರೆ ಗುರೆವ್ (ಅಂದರೆ ಜೈಲು)ಗೆ ಹಾಕುತ್ತಿದ್ದೆವು’ ಎಂದು ತಮಾಷೆ ಮಾಡಿದ್ದರಂತೆ. 1978 ರಲ್ಲಿ ಜನತಾ ಪಾರ್ಟಿ ಅಧಿಕಾರಕ್ಕೇರಿದ ಸಂದರ್ಭ ವಿದೇಶ ಸಚಿವರಾಗಿ ಅಟಲ್ ಜೀ ಅಧಿಕಾರ ಸ್ವೀಕರಿಸಲು ಸೌತ್ ಬ್ಲಾಕ್ ಕಚೇರಿಗೆ ಬಂದಾಗ ಯಾವಾಗಲೂ ಕಾಣುತ್ತಿದ್ದ ಪಂಡಿತ ನೆಹರು ಫೋಟೋ ಕಾಣಲಿಲ್ಲವಂತೆ. ಆಗ ಸಿಡಿಮಿಡಿಗೊಂಡ ಅಟಲ್ ಜಿ ‘ಮೊದಲು ನೆಹರು ಫೋಟೋ ಹಾಕಿ. ಆಮೇಲೆ ಅಧಿಕಾರ ಸ್ವೀಕಾರ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಂತೆ.
ಘಟನೆ 6: ಅಟಲ್ ಜೀವನದಲ್ಲೊಂದು ಲವ್ ಸ್ಟೋರಿ
ಅಟಲ್ ಜಿ ಅವರನ್ನು ಅನೇಕ ಬಾರಿ ಪತ್ರಕರ್ತರು ಕೇಳಿದಾಗ ಕೂಡ ‘ನಾನು ಅವಿವಾಹಿತ ಹೌದು, ಆದರೆ ಬ್ರಹ್ಮ ಚಾರಿಯಲ್ಲ’ ಅಂತ ಹೇಳಿಕೊಂಡಿದ್ದಾರೆ. 1945ರಲ್ಲಿ ಹಿಂದಿ ಹೆಚ್ಚು ಮಾತನಾಡುತ್ತಿದ್ದ ಬಡ ಹಿನ್ನೆಲೆಯಿಂದ ಬಂದಿದ್ದ ಅಟಲ್‌ಗೆ ಗ್ವಾಲಿಯರ್‌ನ ಕಾಲೇಜಿನಲ್ಲಿ ಓದುವಾಗ ಇಂಗ್ಲೀಷ್‌ನಲ್ಲಿ ಅರಳು ಹುರಿದಂತೆ ಮಾತನಾಡುತ್ತಿದ್ದ ಕಾಶ್ಮೀರಿ ಪಂಡಿತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ, ಇಂದಿರಾ ಗಾಂಧಿ ರಕ್ತ ಸಂಬಂಧಿ ಆಗಿದ್ದ ರಾಜಕುಮಾರಿ ಎಂಬ ಸುಂದರ ಯುವತಿಯ ಜೊತೆ ಗೆಳೆತನ ಇತ್ತು. ಆಕರ್ಷಣೆಯೂ ಇತ್ತು. ಆದರೆ ಎಂದೂ ಒಬ್ಬರಿಗೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿರಲಿಲ್ಲ. ಮುಂದೆ 1962ರ ಆಸುಪಾಸು ಸಂಸದರಾಗಿ ಅಟಲ್ ಬಿಹಾರಿ ವಾಜಪೇಯಿ ದಿಲ್ಲಿಯ ರಾಮಜಸ್ ಕಾಲೇಜಿಗೆ ಭಾಷಣಕ್ಕೆ ಹೋದಾಗ, ಪ್ರೊಫೆಸರ್ ಬೃಜ್‌ನಾಥ ಕೌಲ್ ಪರಿಚಯ ಆಗಿ ಅವರ ಮನೆಗೆ ಊಟಕ್ಕೆ ಹೋದಾಗ ಗೊತ್ತಾಗುತ್ತದೆ. ಅವರ ಶ್ರೀಮತಿ ಬೇರಾರೂ ಅಲ್ಲ ತನ್ನ ಸ್ನೇಹಿತೆ ರಾಜಕುಮಾರಿ ಎಂದು! ಆದರೆ ಕೆಲ ವರ್ಷಗಳಲ್ಲಿ ಪ್ರೊಫೆಸರ್ ತೀರಿಕೊಂಡಾಗ ಭಾವುಕ ಅಟಲ್ ಬಿಹಾರಿ ಅವರು ರಾಜಕುಮಾರಿ ಅವರ ಮಗಳು ನಮಿತಾರನ್ನು ದತ್ತು ತೆಗೆದುಕೊಂಡು ರಾಜಕುಮಾರಿ ಅವರನ್ನು ಕೂಡ ತಮ್ಮ ಮನೆಯಲ್ಲಿ ಇರಲು ಆಹ್ವಾನಿಸುತ್ತಾರೆ. ಬಲರಾಜ್ ಮುಧೋಕ್, ನಾನಾಜಿ ದೇಶಮುಖ ಸೇರಿದಂತೆ ಕೆಲವರು ಗುರೂಜಿವರೆಗೆ ದೂರು ತೆಗೆದುಕೊಂಡು ಹೋದರು ಕೂಡ ಅಟಲ್ ಜಿ ಅವರು ರಾಜಕುಮಾರಿ ಕುಟುಂಬವನ್ನು ನಡುನೀರಿನಲ್ಲಿ ಕೈ ಬಿಡಲು ಒಪ್ಪಲಿಲ್ಲ. ಅನೇಕರು ಹೇಳುವ ಪ್ರಕಾರ, ಹಿಂದುತ್ವವಾದಿಯಾಗಿ ರಾಜಕೀಯಕ್ಕೆ ಬಂದ ಅಟಲ್ ಜೀ ಉದಾರವಾದಿ ಚಿಂತಕರಾಗಿ ಹೊರಳಲು ರಾಜಕುಮಾರಿ ಕೌಲ್ ಅವರ ಪ್ರಭಾವ ಸಾಕಷ್ಟು ಇತ್ತು.
ಘಟನೆ 7: ಅಟಲ್ ಪಿಎಂ ಅಭ್ಯರ್ಥಿಯಾದ ಕತೆ
1980ರಲ್ಲಿ ಜನತಾ ಪಾರ್ಟಿ ವಿಘಟನೆ ಆಗಿ, ಭಾರತೀಯ ಜನತಾ ಪಾರ್ಟಿ ಆದಾಗ ಅದರ ಮೊದಲ ಅಧ್ಯಕ್ಷರಾಗಿದ್ದು ಅಟಲ್ ಬಿಹಾರಿ ವಾಜಪೇಯಿ. ಹಿಂದುತ್ವವಾದಿ ಪಾರ್ಟಿ ಗಾಂಧಿ ಪ್ರಣೀತ ಸಮಾಜವಾದವನ್ನು ಒಪ್ಪಿಕೊಂಡ ನಂತರ 1984ರಲ್ಲಿ ಇಂದಿರಾ ಹತ್ಯೆಯ ನಂತರ ಗೆದ್ದಿದ್ದು ಎರಡೇ ಎರಡು ಸ್ಥಾನ ಮಾತ್ರ. ಸಹಜವಾಗಿ ಅಟಲ್ ಅವರನ್ನು ತೆಗೆದು ಲಾಲಕೃಷ್ಣ ಅಡ್ವಾಣಿ ಅವರನ್ನು ಅಧ್ಯಕ್ಷ ಮಾಡಲಾಯಿತು. ರಾಮಮಂದಿರ ಆಂದೋಲನ ಶುರುವಾಗಿ ಅಡ್ವಾಣಿ ರಾತ್ರೋರಾತ್ರಿ ಹಿಂದೂ ಹೃದಯ ಸಾಮ್ರಾಟರಾದರೆ, ಅಟಲ್ ಬಿಹಾರಿ ಅವರು ಪಾರ್ಟಿಯಲ್ಲಿ ಏಕಾಂಗಿಯಾಗತೊಡಗಿದರು. ಎಲ್ಲಿಯವರೆಗೆ ಅಂದರೆ, ರಾಮರಥ ಯಾತ್ರೆಯಿಂದ ಅಟಲ್ ಜಿ ದೂರ ಉಳಿದರು. ಉತ್ತರ ಪ್ರದೇಶದಲ್ಲಿ ಕಲ್ಯಾಣ ಸಿಂಗ್‌ರಿಗೂ ಅಟಲ್ ಬಿಹಾರಿಗೂ ತಿಕ್ಕಾಟ ಶುರು ಆಯಿತು. ಗುಜರಾತ್‌ನಲ್ಲಿ ಅಟಲ್ ಆಪ್ತರಾಗಿದ್ದ ಶಂಕರ ಸಿಂಗ್ ವಘೇಲಾ ಅಡ್ವಾಣಿ ಆಪ್ತರಾಗಿದ್ದ ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ವಿರುದ್ಧ ಬಂಡೆದ್ದು ಪಾರ್ಟಿಯಿಂದ ಹೊರಗಡೆ ಹೋದರು. ಆದರೆ 1996ರ ಚುನಾವಣೆಗೆ ಮುಂಚೆ ಜೈನ್ ಹವಾಲಾ ಡೈರಿಯಲ್ಲಿ LKA ಎಂಬ ಮೂರು ಅಕ್ಷರಗಳು ಹಣ ಕೊಡಲಾಗಿದೆ ಎಂಬ ಪಟ್ಟಿಯಲ್ಲಿ ಸಿಕ್ಕವೋ, ಅಡ್ವಾಣಿ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದರು. ಆಗ 1995ರ ಮುಂಬೈ ಚೌಪಾಟಿ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಅನ್ನು, ಬಿಜೆಪಿ ಹಿರಿಯ ನಾಯಕರನ್ನು ಕೂಡ ಕೇಳದೆ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ವಿಪರ್ಯಾಸ ನೋಡಿ 1995ರಲ್ಲಿ ಅಯೋಧ್ಯೆ ಆಂದೋಲನದ ನಂತರ ತನಗಿದ್ದ ಹಿಂದುತ್ವದ ಅತಿಯಾದ ಲೇಪನದಿಂದಾಗಿ ಅಡ್ವಾಣಿ ತಾನು ಪ್ರಧಾನಿ ಆಗೋದು ಸಾಧ್ಯವಿಲ್ಲ, ಉದಾರಿ ವಾಜಪೇಯಿ ಇದ್ದರೆ ಮಿತ್ರ ಪಕ್ಷಗಳನ್ನು ಸೆಳೆಯುವುದು ಸೂಕ್ತ ಎಂದು ಭಾವಿಸಿ ಹಿಂದೆ ಸರಿದರೆ, 2014 ರಲ್ಲಿ ನರೇಂದ್ರ ಮೋದಿ uncompromised ಹಿಂದೂ ನಾಯಕ ಅನ್ನುವ ಕಾರಣದಿಂದಲೇ ದೇಶದ ಪ್ರಧಾನಿ ಆದರು.
ಘಟನೆ 8: ಭಲೇ ಭೋಜನ ಪ್ರಿಯ
ಅಟಲ್ ಎಷ್ಟು ಭಾವುಕ, ಮುತ್ಸದ್ದಿ ರಾಜಕಾರಣಿಯೋ ಅಷ್ಟೇ ಭೋಜನ ಪ್ರಿಯ ಕೂಡ ಹೌದು. ಒಮ್ಮೆ ಅಟಲ್ ಜಿ ಗ್ವಾಲಿಯರ್‌ನಲ್ಲಿ ಇಳಿದು ಕೊಂಡಾಗ ಬೆಳಿಗ್ಗೆ ತಿಂಡಿಗೆ ಪೋಹಾ ಇತ್ತಂತೆ. ಆಗ ಅಲ್ಲಿದ್ದ ಆಗಿನ ಜಿಲ್ಲಾ ಅಧ್ಯಕ್ಷ ನರೇಂದ್ರ ಸಿಂಗ್ ತೋಮರ್ ಅವರನ್ನು ಕರೆಸಿದ ಅಟಲ್ ಜಿ ‘ಕ್ಯಾ ತೋಮರ್, ಖುದ್ ರಾಜಪೂತ ಹೊ ಘಾಸ್ ಫುಸ್ ಖಿಲಾತೇ ಹೊ’ ಎಂದು ಹೇಳಿ ಪ್ರೀತಿಯಿಂದ ಗದರಿದ್ದರಂತೆ. ಒಮ್ಮೆ ಅಟಲ್ ಪ್ರಧಾನಿಯಾಗಿದ್ದಾಗ ಇಂದೋರ್ ಬಿಜೆಪಿ ಅಧಿವೇಶನದಲ್ಲಿ ವಕ್ತಾರೆ ಸುಷ್ಮಾ ಸ್ವರಾಜ್ ನಾಳೆ ಸಿಹಿ ಮೆನು ಮಾಲಾಪೋವಾ ಇದೆ ಎಂದಿದ್ದು ಪೇಪರ್ ಅಲ್ಲಿ ಬಂದಿತ್ತು ಅಂತೆ. ಮರುದಿನ ಅಟಲ್- ಅಡ್ವಾಣಿ ಊಟಕ್ಕೆ ಕುಳಿತುಕೊಂಡರೆ ಮಾಲಾಪೋವಾ ಇಲ್ಲ. ಕೂಡಲೇ ಪಕ್ಕದಲ್ಲಿದ್ದ ಶಿವರಾಜ್ ಸಿಂಗ್ ಚೌಹಾಣ್‌ಗೆ ‘ಮೇ ಆಯಾ ಹೂ ದಿಲ್ಲಿಸೇ ಮಾಲಪೋವಾ ಖಾನೇ ಕಹಾ ಹೈ’ ಅಂದಾಗ ಕೂಡಲೇ ಅಟಲ್ ಜೀಗೆ ಸಿಹಿ ತರಿಸಿ ಬಡಿಸಲಾಯಿತಂತೆ. ಒಮ್ಮೆ ಅಟಲ್ ಜಿ ಹುಬ್ಬಳ್ಳಿಗೆ ಬಂದಾಗ ಮೇ ತಿಂಗಳು ಒಳ್ಳೆ ಆಪೂಸ್ ಮಾವಿನ ಹಣ್ಣು ಇಲ್ಲವಾ ಎಂದು ಅನಂತ ಕುಮಾರ, ಪ್ರಹ್ಲಾದ ಜೋಶಿ ಅವರನ್ನು ಕೇಳಿ ತರಿಸಿ ಕೊಂಡಿದ್ದರಂತೆ. ಮಾಂಸದ ಊಟ ತುಂಬಾ ಇಷ್ಟಪಡುತ್ತಿದ್ದ ಅಟಲ್ ಜಿ, ಲಹರಿ ಇದ್ದಾಗ ತಾವೇ ಪ್ರಾನ್ಸ್ ಕರಿ ತಯಾರು ಮಾಡಿಕೊಡುತ್ತಿದ್ದರಂತೆ. ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರು ಜೈಲು ಸೇರಿದಾಗ ಅಟಲ್ ಬಿಹಾರಿ ವಾಜಪೇಯಿ ಅವರೇ ಅನೇಕ ಬಾರಿ ಊಟ ತಯಾರಿಸಿಕೊಟ್ಟಿದ್ದರು ಎಂದು ಅಡ್ವಾಣಿ ಅನೇಕ ಬಾರಿ ಹೇಳಿಕೊಂಡಿದ್ದರು.
ಘಟನೆ 9: ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಿದ್ದ ಅಟಲ್
ಹುಬ್ಬಳ್ಳಿಗೆ ನೈಋತ್ಯ ರೈಲ್ವೆ ಉದ್ಘಾಟನೆಗೆ ಹೋಗಿದ್ದ ಅಟಲ್ ಜಿ ಜೊತೆಗೆ ಇದ್ದ ಅಂದಿನ ರೈಲ್ವೆ ಸಚಿವ ನಿತೀಶ್ ಕುಮಾರ್ ‘ಏನು ಅಟಲ್ ಜಿ, ಇದು ಸರ್ಕಾರಿ ಕಾರ್ಯಕ್ರಮ. ಎಲ್ಲಾ ಕಡೆ ಬಿಜೆಪಿ ಧ್ವಜ ಹಚ್ಚಲಾಗಿದೆ’ ಎಂದು ಬೇಸರ ಹೊರ ಹಾಕಿದರಂತೆ. ಕೊನೆಗೆ ಭಾಷಣ ಮಾಡಿದ ಅಟಲ್ ಜಿ ‘ಟ್ರೇನು ಪ್ರವಾಸ ಮಾಡ್ತಾ ಮಾಡ್ತಾ ಅನೇಕ ನಿಲ್ದಾಣಗಳಲ್ಲಿ ನಿಲ್ಲುತ್ತಾ ನಿಲ್ಲುತ್ತಾ ಮುಂದೆ ಹೋಗುತ್ತಿರುತ್ತದೆ. ಯಾವುದಾದರೂ ನಿಲ್ದಾಣ ಟ್ರೇನು ನನ್ನದು ಎಂದು ಬೋರ್ಡು ಹಾಕಿಕೊಂಡರೆ ಟ್ರೇನು ನಿಲ್ದಾಣದ್ದು ಆಗುತ್ತದೆಯಾ’ ಎಂದು ಸ್ವ ಪಾರ್ಟಿಯ ಕಾರ್ಯಕರ್ತರನ್ನೇ ತರಾಟೆಗೆ ತೆಗೆದು ಕೊಂಡರಂತೆ.
ಘಟನೆ 10: ಅನಂತ್ ಎಡವಟ್ಟು ಅಟಲ್ ಬುದ್ಧಿಮಾತು
1998 ಅಟಲ್ ಬಿಹಾರಿ ಸರ್ಕಾರದಲ್ಲಿ 39 ವರ್ಷದ ಅನಂತ ಕುಮಾರ್‌ಗೆ ವಿಮಾನ ಯಾನ ಖಾತೆ ಜವಾಬ್ದಾರಿ. ಮೊದಲ ಸಂಪುಟ ಸಭೆ ಮುಗಿದ ಮೇಲೆ ಅನಂತ ಹಿಂಜರಿಕೆಯಿಂದ ಅಟಲ್ ಜಿ ಬಳಿ ಹೋದರಂತೆ. ನಾನು ಬರೀ ಸಂಘಟನೆ ಕೆಲಸ ಮಾಡಿದವನು. ಅಧಿಕಾರವನ್ನು ಎಂದೂ ನಡೆಸಿ ಗೊತ್ತಿಲ್ಲ. ವಿಮಾನಯಾನ ತುಂಬಾ ತಾಂತ್ರಿಕ ಇಲಾಖೆ... ಅನ್ನುತ್ತಿದ್ದಾಗಲೇ ಇವತ್ತು ಸಂಜೆ ಮೂರು ಅಧಿಕಾರಿಗಳು ಬರುತ್ತಾರೆ ಒಂದು ವಾರ ಬ್ರೀಫಿಂಗ್ ತಗೋ. 100 ದಿನಕ್ಕೆ ನೀನು ಹೊಸ ವಿಮಾನಯಾನ ಪಾಲಿಸಿ ತರಬೇಕು ಎಂದು ಟಾಸ್ಕ್ ಕೊಟ್ಟು ಕಳುಹಿಸಿದರಂತೆ. ಒಂದು ಬಾರಿ ಸ್ಪೀಕರ್ ಆಯ್ಕೆಗಾಗಿ ಅಟಲ್ ನಿವಾಸದಲ್ಲಿ ಅಡ್ವಾಣಿ, ವೆಂಕಯ್ಯ ನಾಯ್ಡು ಜೊತೆಗೆ ಅನಂತಕುಮಾರ್ ಕೂಡ ಇದ್ದರಂತೆ. ತೆಲಗು ದೇಶಂನಿಂದ ಜಿಎಂಸಿ ಬಾಲಯೋಗಿ ಅನ್ನುವ ಹೆಸರು ಫೈನಲ್ ಆಯಿತಂತೆ. ಯಾರು ಕೂಡ ನಾಳೆವರೆಗೆ ಮಾತನಾಡಕೂಡದು ಎಂದು ಅಡ್ವಾಣಿ ತಾಕೀಟು ಮಾಡಿ ಕಳುಹಿಸಿದರಂತೆ. ಹೊರಗೆ ಬಂದ ಅನಂತ ಕುಮಾರ್ ಕನ್ನಡದ ಪತ್ರಕರ್ತರೊಬ್ಬರ ಬಳಿ ‘ತೆಲಗು ಮೂಲದವರು ಒಬ್ಬರು ಆಗುತ್ತಾರೆ’ ಅಂದಾಗ ಮರುದಿನ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ‘ಬಾಲಯೋಗಿ ಮುಂದಿನ ಸ್ಪೀಕರ್’ ಎಂದು ಹೆಡ್‌ಲೈನ್ ಬಂತಂತೆ. ಬೆಳ್ಳಂಬೆಳಿಗ್ಗೆ ಫೋನ್ ಮಾಡಿದ ಅಟಲ್ ಜಿ, ಅನಂತರನ್ನು ಮನೆಗೆ ಕರೆಸಿಕೊಂಡು ‘ಕ್ಯಾ ಪಂಡಿತ್ ಜಿ ಕಮಾಲ್ ಕರ್ ದಿಯಾ ಅಚ್ಛೇ ಪತ್ರಕಾರ್ ನಿಕಲೆ ಆಪ್’ ಅಂದಾಗ ಅನಂತ ಕುಮಾರ ಅಳುತ್ತಾ ಅಟಲ್ ಜಿ ಕ್ಷಮೆ ಕೇಳಿದರಂತೆ.