Asianet Suvarna News Asianet Suvarna News

ಪಂಚರಾಜ್ಯ ಚುನಾವಣಾ ಫಲಿತಾಂಶ ಎಫೆಕ್ಟ್; ಕೈಗೆ ಶಾಸಕರ ಸಂಭಾಳಿಸುವ ಸವಾಲ್‌!

ವಿಧಾನಸಭೆ ಚುನಾವಣೆಯಲ್ಲಿ ದೊರೆತ ಭಾರಿ ಜನ ಬೆಂಬಲ, ಗ್ಯಾರಂಟಿ ಯೋಜನೆಯ ಯಶಸ್ಸಿನಿಂದ ದೊರೆತ ಹುಮ್ಮಸ್ಸು ಮತ್ತು ಮೋದಿ ಅಲೆ ಕಮರುತ್ತಿದೆ ಎಂಬ ನಂಬಿಕೆಯೊಂದಿಗೆ ಲೋಕಸಭಾ ಚುನಾವಣೆಯತ್ತ ನಾಗಾಲೋಟದಲ್ಲಿದ್ದ ರಾಜ್ಯ ಕಾಂಗ್ರೆಸ್ಸಿಗರಿಗೆ ಭಾನುವಾರದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಎಚ್ಚರಿಕೆಯ ಸಂದೇಶ ರವಾನಿಸಿದೆ.

Assembly election results 2023 The challenge for the Congress party is to retain MLAs rav
Author
First Published Dec 4, 2023, 8:07 AM IST

ಬೆಂಗಳೂರು (ಡಿ.4): ವಿಧಾನಸಭೆ ಚುನಾವಣೆಯಲ್ಲಿ ದೊರೆತ ಭಾರಿ ಜನ ಬೆಂಬಲ, ಗ್ಯಾರಂಟಿ ಯೋಜನೆಯ ಯಶಸ್ಸಿನಿಂದ ದೊರೆತ ಹುಮ್ಮಸ್ಸು ಮತ್ತು ಮೋದಿ ಅಲೆ ಕಮರುತ್ತಿದೆ ಎಂಬ ನಂಬಿಕೆಯೊಂದಿಗೆ ಲೋಕಸಭಾ ಚುನಾವಣೆಯತ್ತ ನಾಗಾಲೋಟದಲ್ಲಿದ್ದ ರಾಜ್ಯ ಕಾಂಗ್ರೆಸ್ಸಿಗರಿಗೆ ಭಾನುವಾರದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆದ್ದು ಕಾಂಗ್ರೆಸ್‌ ಹೈಕಮಾಂಡ್‌ಗೆ ಕೊಡುಗೆ ನೀಡುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ಸಿಗರಿಗೆ ಈಗ ತಾವಿಡುತ್ತಿರುವ ಹೆಜ್ಜೆಗಳು ಸರಿಯಿವೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಫಲಿತಾಂಶ ಸೃಷ್ಟಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷ ಯಾರಿಂದಲೂ ಅಲುಗಾಡಿಸಲಾಗದ ಭದ್ರ ಸರ್ಕಾರ ತಮ್ಮದು ಎಂಬ ನಂಬಿಕೆಯಲ್ಲಿದ್ದ ಕಾಂಗ್ರೆಸ್‌ ನಾಯಕರು ಲೋಕಸಭಾ ಚುನಾವಣೆ ವೇಳೆಗೆ ಅನ್ಯಪಕ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ನಾಯಕರನ್ನು ಮತ್ತು ಶಾಸಕರನ್ನು ಸೆಳೆಯುವ ಸಿದ್ಧತೆ ನಡೆಸಿದ್ದರು. ಹಲವು ಮಾಜಿಗಳು ಈಗಾಗಲೇ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಶೀಘ್ರವೇ ಹಾಲಿ ಶಾಸಕರು ಬರುತ್ತಾರೆ ಎಂದು ಹೇಳಲಾಗುತ್ತಿತ್ತು.

ಆದರೆ, ಭಾನುವಾರದ ಫಲಿತಾಂಶದ ನಂತರ ಈ ಸಾಧ್ಯತೆ ಕಮರುವ ಎಲ್ಲ ಲಕ್ಷಣಗಳಿವೆ. ಅಷ್ಟೇ ಅಲ್ಲ, ಕಾಂಗ್ರೆಸ್‌ಗೆ ಈಗ ತನ್ನ ಶಾಸಕರು ಅಸಮಾಧಾನಗೊಳ್ಳದಂತೆ ಎಚ್ಚರಿಕೆಯಿಂದ ನಡೆದುಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಲಿದೆ.

ಭಾರಿ ಬಹುಮತ ಹೊಂದಿದ್ದರೂ ಕಾಂಗ್ರೆಸ್‌ ಸರ್ಕಾರದ ಆಯಸ್ಸು ಬಹಳ ದಿನ ಇರುವುದಿಲ್ಲ ಎಂದು ಬಿಜೆಪಿಯ ಹಲವು ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದರು. ಅಲ್ಲದೆ, ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಂಬಿಸಿದ್ದರು. ಇದನ್ನು ಖುದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹ ನಿಜವೆಂದು ಹೇಳಿದ್ದಲ್ಲದೆ, ಬಿಜೆಪಿಯವರು ಯಾರ್ಯಾರ ಜತೆ ಸಂಪರ್ಕದಲ್ಲಿದ್ದಾರೆ ಎಂಬುದು ತಮಗೆ ಗೊತ್ತು. ಆದರೆ, ಯಾರೂ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು.

ಆದರೆ, ಬಿಜೆಪಿಯ ರಾಷ್ಟ್ರೀಯ ನಾಯಕರು ಕಾಂಗ್ರೆಸ್‌ ಶಾಸಕರಿಗೆ ಪ್ರಲೋಭನೆಯೊಡ್ಡಬಹುದು ಎಂಬ ಸಂಶಯ ಕಾಂಗ್ರೆಸ್‌ನಲ್ಲಿ ಜಾಗೃತವಾಗಿಯೇ ಇದೆ. ಈ ಭೀತಿ ಈ ಪಂಚ ರಾಜ್ಯ ಚುನಾವಣೆ ಫಲಿತಾಂಶದ ನಂತರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ದೇಶಕ್ಕೆ ಮೋದಿಯೇ ಗ್ಯಾರಂಟಿ: ಸಂಸದ ಸಂಗಣ್ಣ ಕರಡಿ

ಗ್ಯಾರಂಟಿ ಯೋಜನೆಯ ಹೊರೆಯಿಂದ ಅನುದಾನ ಬಯಸಿದಂತೆ ದೊರೆಯುತ್ತಿಲ್ಲ ಎಂಬ ದೂರು ಕಾಂಗ್ರೆಸ್‌ ಶಾಸಕರ ವಲಯದಲ್ಲಿದೆ. ಅಲ್ಲದೆ, ನಿಗಮ-ಮಂಡಳಿಗಳ ನೇಮಕಾತಿ ವಿಳಂಬವಾಗುತ್ತಿರುವುದು, ಸಚಿವರು ಪಕ್ಷದ ಶಾಸಕರ ಅಹವಾಲುಗಳಿಗೆ ಕಿವಿಗೊಡದಿರುವುದು ಶಾಸಕರಲ್ಲಿ ಅಸಮಾಧಾನ ಉಂಟುಮಾಡಿದೆ. ಇದರ ಲಾಭ ಪಡೆಯಲು ಬಿಜೆಪಿಗೆ ಅವಕಾಶ ನೀಡಬಾರದು ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್‌ ನಾಯಕತ್ವಕ್ಕೆ ಈ ಫಲಿತಾಂಶ ಮೂಡಿಸಬಹುದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಗಮ- ಮಂಡಳಿ ಪಟ್ಟಿ ಪ್ರಕಟ ವಿಳಂಬ?

4 ರಾಜ್ಯಗಳ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್‌ ಸರ್ಕಾರದ ನಿಗಮ-ಮಂಡಳಿ ಪಟ್ಟಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ 39 ಶಾಸಕರ ಹೆಸರನ್ನು ಒಳಗೊಂಡ ಪಟ್ಟಿ ಸಜ್ಜಾಗಿದ್ದರೂ, 4 ರಾಜ್ಯ ಫಲಿತಾಂಶದ ಬಳಿಕ ಶಾಸಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬ ಚಿಂತನೆ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ಮುಂದೂಡಿಕೆ ಕಂಡಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋತೊಡನೆ ಶುರುವಾಗಿದೆ ಭಾರತ್ ತೋಡೊ!

ನಿಗಮ-ಮಂಡಳಿ ನೇಮಕ ಅಧಿವೇಶನ ನಂತರ?

ಪಂಚರಾಜ್ಯ ಚುನಾವಣಾ ಫಲಿತಾಂಶವು ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ಹಾಗೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನೇಮಕ ಪ್ರಕ್ರಿಯೆಯನ್ನು ತುಸು ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಮಂಡಲ ಅಧಿವೇಶನದ ವೇಳೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿತ್ತು. ಇದಕ್ಕಾಗಿ ರಾಜ್ಯ ನಾಯಕತ್ವ 39 ಹೆಸರು ಇದ್ದ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನೆ ಕೂಡ ಮಾಡಿತ್ತು. ಆದರೆ, ಚುನಾವಣೆ ಫಲಿತಾಂಶದ ನಂತರ ಪಕ್ಷದ ಶಾಸಕರಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಬೇಕು ಎಂಬ ಚಿಂತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಪಟ್ಟಿ ಪ್ರಕಟ ಮುಂದೂಡಿಕೆ ಕಂಡಿದೆ ಎನ್ನಲಾಗುತ್ತಿದೆ. ಈ ಮೂಲಗಳ ಪ್ರಕಾರ ನಿಗಮ- ಮಂಡಳಿ ನೇಮಕದಲ್ಲಿ ಕಾರ್ಯಕರ್ತರಿಗಿಂತ ಶಾಸಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ದಿಸೆಯಲ್ಲಿ ಚಿಂತನೆ ಆರಂಭವಾಗಿದೆ ಎನ್ನಲಾಗಿದೆ.

Follow Us:
Download App:
  • android
  • ios