ವಿಧಾನಸಭೆ ಚುನಾವಣೆ ಹಿನ್ನೆಲೆ; ಸಂಘಟನೆಯತ್ತ ಜೆಡಿಎಸ್ ಚಿತ್ತ
- ಸಂಘಟನೆಯತ್ತ ಧಾವಿಸುತ್ತಿದೆ ಜೆಡಿಎಸ್
- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜೆಡಿಎಸ್
ಬಸವರಾಜ ಹಿರೇಮಠ
ಧಾರವಾರ (ನ.9): ಬಸವರಾಜ ಹೊರಟ್ಟಿಹಾಗೂ ಎನ್.ಎಚ್. ಕೋನರಡ್ಡಿ ‘ಹೊರೆ ಇಳಿಸಿದ’ ಬಳಿಕ ಮಂಕು ಕವಿದಿದ್ದ ಜೆಡಿಎಸ್ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಭಿಸಿದೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಳಮಟ್ಟದಿಂದ ಸಂಘಟನೆಗೆ ಮುಂದಾಗಿದ್ದಾರೆ.
ತುಮಕೂರು ಜೆಡಿಎಸ್‌ನಿಂದ ಒಂದು ವಿಕೆಟ್ ಪತನ : ಕಾಂಗ್ರೆಸ್‌ಗೆ ಸೇರ್ಪಡೆ
ಹೌದು. ಹೊರಟ್ಟಿಹಾಗೂ ಕೋನರಡ್ಡಿ ಉತ್ತರ ಕರ್ನಾಟಕದ ಪ್ರಮುಖ ಜೆಡಿಎಸ್ ನಾಯಕರಾಗಿದ್ದರು. ರಾಜಕೀಯ ಮೇಲಾಟದಲ್ಲಿ ಹೊರಟ್ಟಿಬಿಜೆಪಿಗೆ ಹಾಗೂ ಕೋನರಡ್ಡಿ ಕಾಂಗ್ರೆಸ್ಸಿಗೆ ಸೇರಿದರು. ಇದರಿಂದ ಜೆಡಿಎಸ್ ಶಕ್ತಿಯೇ ಕುಸಿಯಿತು ಎನ್ನುವಾಗಲೇ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.
ಇಬ್ರಾಹಿಂ ಬೂಸ್ಟರ್:
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾಗಿದೆ. ಇದರ ಅಂಗವಾಗಿ ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸರಣಿ ಸಭೆ ನಡೆಸಿದ್ದಾರೆ. ಅಲ್ಲದೆ ಪಕ್ಷದ ಕಚೇರಿ ಉದ್ಘಾಟಿಸಿ ಕಾರ್ಯಕರ್ತರಿಗೆ, ಮುಖಂಡರಿಗೆ ಪಕ್ಷ ಸಂಘಟಿಸಲು ಯಾವ ರೀತಿ ತಂತ್ರಗಳನ್ನು ಹೆಣೆಯಬೇಕು ಎಂಬುದನ್ನು ಪಾಠ ಮಾಡಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ‘ಜನಸಂಕಲ್ಪ ಯಾತ್ರೆ’, ‘ಭಾರತ ಜೋಡೋ ಯಾತ್ರೆ’, ಮೂಲಕ ಚುನಾವಣೆ ಕಹಳೆ ಊದಿವೆ. ಇದೀಗ ಜೆಡಿಎಸ್ ‘ಪಂಚರತ್ನ’ದ ಮೂಲಕ ಜನರ ಬಳಿ ತೆರಳುತ್ತಿದೆ. ಮೊದಲ ಭಾಗವಾಗಿ ಧಾರವಾಡದಲ್ಲಿ ಜೆಡಿಎಸ್ ಕಚೇರಿ ಸಹ ಆರಂಭಿಸುವ ಅಧಿಕೃತವಾಗಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಎರಡು ರಾಜಕೀಯ ಪಕ್ಷಗಳನ್ನು ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಎದುರಿಸಬೇಕು ಎಂಬ ಯೋಜನೆ ರೂಪಿಸಲಾಗುತ್ತಿದೆ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಜೆಡಿಎಸ್‌ನಲ್ಲಿ ನಾಯಕರಿಗೆ ಕೊರತೆ ಇಲ್ಲ. ಬಸವರಾಜ ಹೊರಟ್ಟಿ, ಎನ್.ಎಚ್. ಕೋನರಡ್ಡಿ ತಮ್ಮ ಕ್ಷೇತ್ರದಲ್ಲಿ ಮಾತ್ರ ನಾಯಕರಾಗಿದ್ದರೆ ಹೊರತು ಹತ್ತು ಕ್ಷೇತ್ರ ಗೆಲ್ಲಿಸುವಷ್ಟುಪ್ರಬಲರಾಗಿರಲಿಲ್ಲ. ಹೀಗಾಗಿ ಅವರು ಪಕ್ಷ ತ್ಯಜಿಸಿದ್ದರಿಂದ ಪಕ್ಷಕ್ಕೆ ನಷ್ಟವಾಗಿಲ್ಲ. ಪಕ್ಷದಲ್ಲಿ ಪ್ರಾಮಾಣಿಕ ಮುಖಂಡರು, ಕಾರ್ಯಕರ್ತರಿದ್ದಾರೆ. ಜತೆಗೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನರು ಬೇಸತ್ತಿದ್ದು ಈ ಬಾರಿ ಜೆಡಿಎಸ್‌ಗೆ ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಜನ ಬೆಂಬಲ, ಜಾತಿ ಲೆಕ್ಕಾಚಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯೂ ನಡೆಯುತ್ತಿದೆ. ಕುಂದಗೋಳ, ಕಲಘಟಗಿ, ಧಾರವಾಡ ಪಶ್ಚಿಮ ಕ್ಷೇತ್ರ, ಹು-ಧಾ ಪೂರ್ವ ಸೇರಿ ಎಲ್ಲ ಕ್ಷೇತ್ರಗಳಿಂದ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳಿದ್ದಾರೆ. ಅವರನ್ನು ಬಳಸಿಕೊಂಡು ಪಕ್ಷ ಸಂಘಟಿಸಲಾಗುತ್ತಿದೆ. ರಾಜ್ಯಾಧ್ಯಕ್ಷರು ಜಿಲ್ಲೆಗೆ ಬಂದು ಹೋಗಿದ್ದರಿಂದ ಕಾರ್ಯಕರ್ತರ ಹುಮ್ಮಸು ಹಿಮ್ಮಡಿಯಾಗಿದೆ. ಒಟ್ಟಿನಲ್ಲಿ ಈ ಬಾರಿ 123 ಕ್ಷೇತ್ರದಲ್ಲಿ ಗೆಲುವು ಸಾಧಿಸಲು ತಂತ್ರಗಳನ್ನು ರೂಪಿಸಲಾಗಿದೆ ಎಂದು ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ಬಿ. ಕುಂದಗೋಳಮಠ ಹೇಳುತ್ತಾರೆ.
\ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ: ನಿಖಿಲ್ ಕುಮಾರಸ್ವಾಮಿ
ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬಿಟ್ಟು ಹೋದವರು ಮಾಸ್ ಹಿರೋಗಳಲ್ಲ. ಅವರಿಗೆ ವಯಸ್ಸಾಗಿದೆ. ಈಗ ನಾವು ಯುವ ಕಾರ್ಯಕರ್ತರ, ಮುಖಂಡ ಪಡೆ ಕಟ್ಟುತ್ತಿದ್ದು ಬಿಜೆಪಿ, ಕಾಂಗ್ರೆಸ್ಸಿನಿಂದ ಬೇಸತ್ತು ಜೆಡಿಎಸ್‌ಗೆ ಬೆಂಬಲ ಸೂಚಿಸುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ಧಾರವಾಡ ಜಿಲ್ಲೆಗೂ ಬಂದಿದ್ದು ಉತ್ತಮ ವಾತಾವರಣ ಸೃಷ್ಟಿಯಾಗಿದೆ. ನೂತನ ಕಚೇರಿ ಸಹ ಉದ್ಘಾಟಿಸಿದ್ದೇನೆ. ಎಚ್.ಡಿ. ಕುಮಾರಸ್ವಾಮಿ, ನಾನು ಮಾತ್ರವಲ್ಲದೇ ದೇವೇಗೌಡರು ಸಹ ಸಂಘಟನೆಯಲ್ಲಿ ತೊಡಗಿದ್ದು ಈ ಬಾರಿ 123 ಸ್ಥಾನ ನಿಶ್ಚಿತ.
ಸಿ.ಎಂ. ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷರು