Asianet Suvarna News Asianet Suvarna News

Assembly Election: ಹುಬ್ಬಳ್ಳಿ ಮೀಸಲು ಕ್ಷೇತ್ರ ವಶಕ್ಕೆ ಬಿಜೆಪಿ ಸ್ಕೇಚ್‌!

  • ಪೂರ್ವ ಕ್ಷೇತ್ರದಲ್ಲಿ ರಂಗೇರಿದ ಕಣ ಪ್ರಸಾದಗೆ ಪಕ್ಷದಲ್ಲೇ ಪೈಪೋಟಿ
  • ಎಐಎಂಐಎಂ ಅಭ್ಯರ್ಥಿಯನ್ನೂ ನಿರ್ಲಕ್ಷಿಸುವಂತಿಲ್ಲ
assembly election BJP sketch to win Hubli Reserve Constituency rav
Author
First Published Nov 25, 2022, 10:27 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ (ನ.25) : ಬಿಜೆಪಿ-ಕೆಜೆಪಿ ಜಗಳದಿಂದಾಗಿ ಅನಾಯಾಸವಾಗಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಇದೀಗ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರದೆ ಪಕ್ಷದಲ್ಲೇ ಪೈಪೋಟಿ ಎದುರಾಗಿರುವುದು ಮತ್ತು ಅವರ ಹಳೆಯ ಮಿತ್ರ ವಿಜಯ ಗುಂಟ್ರಾಳ ಎಐಎಂಐಎಂ ಅಭ್ಯರ್ಥಿಯಾಗಿ ಚುನಾವಣಾ ಅಖಾಡದಲ್ಲಿ ಎದುರಾಗುತ್ತಿರುವುದು ಅಡ್ಡಗಾಲು ಆಗುವಂತಿದೆ. ಇದರ ಲಾಭ ಪಡೆದು ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಭಾರೀ ಪ್ರಯತ್ನ ನಡೆಸಿದೆ.

ಮೊದಲು ಹುಬ್ಬಳ್ಳಿ ಶಹರ ಕ್ಷೇತ್ರವಾಗಿದ್ದ ಇದು 2008ರಲ್ಲಿ ಪೂರ್ವ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ಎಸ್‌.ಎಸ್‌. ಶೆಟ್ಟರ್‌, ಎಂ.ಜಿ. ಜರತಾರಘರ, ಎ.ಎಂ.ಹಿಂಡಸಗೇರಿ, ಜಬ್ಬಾರಖಾನ್‌ ಹೊನ್ನಳ್ಳಿ, ಅಶೋಕ ಕಾಟವೆ ರಂತಹ ಘಟನಾಘಟಿಗಳು ಆಯ್ಕೆಯಾದ ಕ್ಷೇತ್ರವಿದು. ಇಲ್ಲಿ ಕೆಲವೊಮ್ಮೆ ಕಾಂಗ್ರೆಸ್‌ ಆಯ್ಕೆಯಾದರೆ, ಕೆಲವೊಮ್ಮೆ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದುಂಟು. 2004ರಲ್ಲಿ ಜಬ್ಬಾರಖಾನ್‌ ಹೊನ್ನಳ್ಳಿ ಆಯ್ಕೆಯಾಗಿದ್ದರು. ಬಳಿಕ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಮೀಸಲು ಕ್ಷೇತ್ರವಾಯಿತು. ಹೀಗಾಗಿ 2008ರಲ್ಲಿ ಬಿಜೆಪಿಯ ವೀರಭದ್ರಪ್ಪ ಹಾಲಹರವಿ ಆಯ್ಕೆಯಾಗಿದ್ದರು. ಆದರೆ 2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಜಗಳದಿಂದಾಗಿ ಕಾಂಗ್ರೆಸ್‌ನಿಂದ ಪ್ರಸಾದ ಅಬ್ಬಯ್ಯ ಸಲೀಸಾಗಿ ಚುನಾಯಿತರಾಗಿದ್ದರು. 2018ರಲ್ಲೂ ಅಬ್ಬಯ್ಯ ಅವರೇ ಆಯ್ಕೆಯಾಗಿದ್ದಾರೆ. ಅವರಿಗೆ ಠಕ್ಕರ್‌ ಕೊಡುವಂತಹ ಅಭ್ಯರ್ಥಿಗೆ ಬಿಜೆಪಿ ಹುಡುಕಾಟದಲ್ಲಿ ತೊಡಗಿದೆ.

ನ. 28ರಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೆ ಪಾದಯಾತ್ರೆ..!

ರೇಸ್‌ನಲ್ಲಿ:

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಖ್ಯಾತ ನರತಜ್ಞ ಡಾ. ಕ್ರಾಂತಿಕಿರಣ, ಬಿ.ಎಸ್‌.ಯಡಿಯೂರಪ್ಪ ಆಪ್ತ ಶಂಕರಪ್ಪ ಬಿಜವಾಡ ಬಿಜೆಪಿ ಟಿಕೆಟ್‌ಗಾಗಿ ರೇಸ್‌ನಲ್ಲಿದ್ದಾರೆ. ಇವರನ್ನು ಹೊರತುಪಡಿಸಿ ಅಚ್ಚರಿಯ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆಯೂ ಇದೆ. ಎರಡು ಅವಧಿಯಿಂದ ಕೈ ತಪ್ಪಿ ಹೋಗಿರುವ ಕ್ಷೇತ್ರವನ್ನು ಮತ್ತೆ ಹೇಗಾದರೂ ಮಾಡಿ ಕಮಲದ ಮಡಿಲಿಗೆ ಹಾಕಿಕೊಳ್ಳಲು ಬಿಜೆಪಿ ಗೌಪ್ಯ ಸೂತ್ರ ಹೆಣೆದಿದೆ. ಅದಕ್ಕಾಗಿ ಎರಡು ವರ್ಷದಿಂದಲೇ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.

ಪಕ್ಷದಲ್ಲೇ ಪೈಪೋಟಿ:

ಹಾಲಿ ಶಾಸಕರಿದ್ದರೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸದ್ಯ ಫೈಟ್‌ ನಡೆದಿದೆ. ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ಹನುಮಂತ ಬಂಕಾಪುರ ಇಬ್ಬರು ಈ ಸಲ ಟಿಕೆಟ್‌ ಬೇಡಿ ಅರ್ಜಿ ಸಲ್ಲಿಸಿರುವುದುಂಟು. ಇದರಿಂದಾಗಿ ಕಾಂಗ್ರೆಸ್‌ ಪಕ್ಷದಲ್ಲೇ ಟಿಕೆಟ್‌ಗೆ ಫೈಟ್‌ ನಡೆಯುತ್ತಿರುವುದು ಗೋಚರವಾಗುತ್ತಿದೆ. ಆಮೇಲೆ ಆಕಾಂಕ್ಷಿಗಳನ್ನು ಪಕ್ಷ ಸಮಾಧಾನ ಪಡಿಸಬಹುದಾದರೂ ಸದ್ಯ ಮಾತ್ರ ಪಕ್ಷದಲ್ಲಿ ಭಿನ್ನಮತ ಬಯಲಿಗೆ ಬಂದಂತಾಗಿದೆ.

ಈ ನಡುವೆ ಈ ಮೊದಲು ಕಾಂಗ್ರೆಸ್‌ನಲ್ಲೇ ಇದ್ದ ವಿಜಯ ಗುಂಟ್ರಾಳ, ಇದೀಗ ಎಐಎಂಐಎಂ ಪಕ್ಷವನ್ನು ಸೇರಿಕೊಂಡು ಸಂಘಟನೆಯಲ್ಲಿ ತೊಡಗಿದ್ದಾರೆ. ಅವರು ಎಐಎಂಐಎಂ ಪಕ್ಷದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮುಸ್ಲಿಂ ಮತ್ತು ದಲಿತ ಮತಗಳೇ ಇಲ್ಲಿ ನಿರ್ಣಾಯಕ. ಗುಂಟ್ರಾಳ, ಕಾಂಗ್ರೆಸ್‌ ಮತಗಳನ್ನು ತಮ್ಮತ್ತ ಸೆಳೆಯುವುದು ಖಚಿತ. ಮೇಲಾಗಿ ಪೌರಕಾರ್ಮಿಕರ ದೊಡ್ಡ ಪಡೆಯನ್ನೇ ಗುಂಟ್ರಾಳ ಹೊಂದಿದ್ದಾರೆ. ಈ ಮೂಲಕ ಹೇಗಾದರೂ ಮಾಡಿ ಅಬ್ಬಯ್ಯ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಬೇಕೆಂಬ ಹಟಕ್ಕೆ ಬಿದ್ದಿರುವುದರಿಂದ ಕಾಂಗ್ರೆಸ್ಸಿನ ಪಾರಂಪರಿಕ ಮತಗಳಲ್ಲಿ ಭಾರೀ ಪ್ರಮಾಣದ ವಿಭಜನೆ ಆಗುವ ಸಾಧ್ಯತೆ ಇದೆ. ಇದು ಬಿಜೆಪಿಗೆ ಹೊಸ ಭರವಸೆ ಹುಟ್ಟಿಸಿದೆ. ಈಗಾಗಲೇ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಿರುವ ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿ ಗೆಲುವಿನ ದಡ ಸೇರಬಹುದು ಎಂಬ ವಿಶ್ವಾಸ ಹೊಂದಿದೆ.

ಶೆಟ್ಟರ್‌ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ..!

ಒಟ್ಟಿನಲ್ಲಿ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ಪೂರ್ವ ಕ್ಷೇತ್ರದಲ್ಲಿ ಆಕಾಂಕ್ಷಿಗಳು, ಅಭ್ಯರ್ಥಿಗಳು ತಮದೇ ಲೆಕ್ಕಾಚಾರ ಮಾಡುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಎಲ್ಲದರ ನಡುವೆ ಬಿಜೆಪಿ ಈ ಸಲವಾದರೂ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಠಕ್ಕರ್‌ ಕೊಡುವುದೇ? ಎಂಬುದನ್ನು ಕಾಯ್ದು ನೋಡಬೇಕಷ್ಟೇ!

Follow Us:
Download App:
  • android
  • ios