Asianet Suvarna News Asianet Suvarna News

ಶೆಟ್ಟರ್‌ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ..!

ಜಗದೀಶ ಶೆಟ್ಟರ್‌ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಈ ಸಲ ಭಾರೀ ಪೈಪೋಟಿ ನಡೆದಿದೆ. ಬರೋಬ್ಬರಿ 8 ಅಭ್ಯರ್ಥಿಗಳು ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. 

Competition in Congress to Contest Against Jagadish Shettar in Hubballi Dharwad Central grg
Author
First Published Nov 24, 2022, 9:30 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ನ.24): ಕಳೆದ ಆರು ಅವಧಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಈ ಸಲ ಭಾರೀ ಪೈಪೋಟಿ ನಡೆದಿದೆ. ಬರೋಬ್ಬರಿ 8 ಅಭ್ಯರ್ಥಿಗಳು ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಎಐಎಂಐಎಂ ಕೂಡ ಇಲ್ಲಿ ಸ್ಪರ್ಧಿಸಲು ಸಣ್ಣದಾಗಿ ತಯಾರಿ ನಡೆಸಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ ಮೊದಲು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 2008ರಿಂದ ಸೆಂಟ್ರಲ್‌ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಅತ್ಯಂತ ಘಟಾನುಘಟಿಗಳು ಈ ಕ್ಷೇತ್ರದಿಂದ ಆಯ್ಕೆಯಾಗಿರುವುದುಂಟು. ಎಸ್‌.ಆರ್‌. ಬೊಮ್ಮಾಯಿ, ಜಗದೀಶ ಶೆಟ್ಟರ್‌ ಈ ಕ್ಷೇತ್ರದಿಂದಲೇ ಆಯ್ಕೆಯಾಗಿ ಮುಖ್ಯಮಂತ್ರಿ ಹುದ್ದೆಗೇರಿದವರು. ಜಗದೀಶ ಶೆಟ್ಟರ್‌ ತಮ್ಮ ರಾಜಕೀಯ ಜೀವನ ಶುರು ಮಾಡಿದ್ದು ಇದೇ ಕ್ಷೇತ್ರದಿಂದ. 1994ರಿಂದಲೂ ಸತತವಾಗಿ ಆರು ಬಾರಿ ಗೆದ್ದು ಬೀಗಿರುವವರು ಶೆಟ್ಟರ್‌. ಹೀಗಾಗಿ ಈ ಕ್ಷೇತ್ರ ಅಕ್ಷರಶಃ ಬಿಜೆಪಿ ಭದ್ರಕೋಟೆಯಂತಾಗಿದೆ.

ಕೇಂದ್ರ ರೈತರ ಸಾಲ ಮನ್ನಾ ಏಕೆ ಮಾಡಿಲ್ಲ: ಸಂತೋಷ ಲಾಡ್‌

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಅಳಿಯ ರಜತ್‌ ಉಳ್ಳಾಗಡ್ಡಿಮಠ, ಮಾಜಿ ಮೇಯರ್‌ ಅನಿಲಕುಮಾರ ಪಾಟೀಲ ಸೇರಿ 8 ಮಂದಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾರಿಗೇ ಟಿಕೆಟ್‌ ಸಿಕ್ಕರೂ ಸೆಂಟ್ರಲ್‌ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ನಿಂದ ಈ ಸಲವಾದರೂ ಸಾಧ್ಯವಾಗುತ್ತಾ ಎಂಬುದನ್ನು ನೋಡಬೇಕು.

ಇನ್ನು ಈ ಕ್ಷೇತ್ರದಿಂದ ಶೆಟ್ಟರ್‌ ವಿರುದ್ಧ ಸೋತಿರುವ ಬಹುತೇಕರು ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ. ಬಸವರಾಜ ಬೊಮ್ಮಾಯಿ, ಶಂಕರಣ್ಣ ಮುನವಳ್ಳಿ, ಮಹೇಶ ನಾಲ್ವಾಡ, ರಾಜಣ್ಣ ಕೊರವಿ ಹೀಗೆ ಜನತಾ ಪಾರ್ಟಿ, ಕಾಂಗ್ರೆಸ್‌, ಜೆಡಿಎಸ್‌ನಿಂದ ಶೆಟ್ಟರ್‌ ವಿರುದ್ಧ ಸ್ಪರ್ಧಿಸಿದವರೆಲ್ಲರೂ ಇದೀಗ ಬಿಜೆಪಿಯಲ್ಲಿದ್ದಾರೆ. ಕಳೆದ ಆರು ಅವಧಿಯಿಂದ ಕಾಂಗ್ರೆಸ್‌- ಜೆಡಿಎಸ್‌ ಎಷ್ಟೇ ಹರಸಾಹಸ ಪಟ್ಟರೂ ಶೆಟ್ಟರ್‌ ಅವರನ್ನು ಅಲ್ಲಾಡಿಸಲು ಸಾಧ್ಯವಾಗಿಲ್ಲ. ಈಗಂತೂ ಜೆಡಿಎಸ್‌ನ ಎಲ್ಲರೂ ಬಿಜೆಪಿಗೆ ಸೇರಿರುವುದರಿಂದ ಆ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದಂತಾಗಿದೆ. ನಿರಂತರ ಗೆಲುವಿನ ಓಟದಲ್ಲಿರುವ ಶೆಟ್ಟರ್‌ ಅವರನ್ನು ಕಾಂಗ್ರೆಸ್‌ ಹೇಗಾದರೂ ಮಾಡಿ ಬ್ರೇಕ್‌ ಹಾಕಬೇಕೆಂಬ ಹಂಬಲ ಹೊಂದಿದೆ. ಇದಕ್ಕಾಗಿ ಪಕ್ಷದ ಆಕಾಂಕ್ಷಿಗಳು ಕ್ಷೇತ್ರದಲ್ಲಿ ತಯಾರಿಯನ್ನೂ ಶುರು ಮಾಡಿದ್ದಾರೆ.

ಕೊಟ್ಟ ಭರವಸೆಗಳನ್ನು ಈಡೆರಸದೆ ಹೋದ್ರೆ 2028 ಕ್ಕೆ ನಾವು ನಿಮ್ಮಲ್ಲಿ ಮತ ಕೇಳಲ್ಲ: ಸಿ.ಎಂ.ಇಬ್ರಾಹಿಂ

ರೇಸ್‌ನಲ್ಲಿ ಯಾರಾರ‍ಯರು?:

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಅಳಿಯ ರಜತ್‌ ಉಳ್ಳಾಗಡ್ಡಿಮಠ, ಮಾಜಿ ಮೇಯರ್‌ ಅನಿಲಕುಮಾರ ಪಾಟೀಲ, ಸತೀಶ ಮೆಹರವಾಡೆ, ಫಾರುಖ ಅಬುನವರ, ಮೆಹಬೂಬ ಪಾಶಾ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಉಮೇದುದಾರರಾಗಲು ಸಿದ್ಧ ಎಂದು ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ತಮಗೆ ಟಿಕೆಟ್‌ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ಕ್ಷೇತ್ರದಲ್ಲಿ ಪ್ರಚಾರವನ್ನು ಶುರು ಹಚ್ಚಿಕೊಂಡಿದ್ದಾರೆ. ಜತೆಗೆ ಹೇಗಾದರೂ ಮಾಡಿ ಟಿಕೆಟ್‌ ಪಡೆದುಕೊಳ್ಳಬೇಕೆಂದು ಹೈಕಮಾಂಡ್‌ಗೆ ಹಿರಿಯರ ಮೂಲಕ ಒತ್ತಡ ಹೇರುತ್ತಿರುವುದರ ಜತೆಗೆ, ತಮ್ಮ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ವಿರುದ್ಧ ತಂತ್ರ-ಪ್ರತಿತಂತ್ರ ಮಾಡಲು ಶುರು ಮಾಡಿದ್ದಾರೆ. ಈಗ ಅರ್ಜಿ ಸಲ್ಲಿಸಿರುವವರ ಪೈಕಿ ಕೆಲವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬೆಂಬಲಿಗರಾದರೆ, ಕೆಲವರು ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ಆಕಾಂಕ್ಷಿಗಳೊಂದಿಗೆ ನ. 25ರಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಭೆಯನ್ನೂ ನಡೆಸಲಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಇದೇ ಮೊದಲ ಬಾರಿಗೆ ಓವೈಸಿಯ ಎಐಎಂಐಎಂ ಪಕ್ಷದ ಮುನ್ನಾ ಕಿತ್ತೂರ ಕೂಡ ಈ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿಯಲು ತಯಾರಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್‌ ಸಿಕ್ಕರೂ ಸೆಂಟ್ರಲ್‌ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ನಿಂದ ಈ ಸಲವಾದರೂ ಸಾಧ್ಯವಾಗುತ್ತಾ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
 

Follow Us:
Download App:
  • android
  • ios