ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯನ್ನು ರಾಹುಲ್‌ ಗಾಂಧಿ ಪಾಕಿಸ್ತಾನದಲ್ಲಿ ಆರಂಭಿಸಬೇಕು. ಹಾಗೂ ದೇಶ ಒಗ್ಗಟ್ಟಾಗಿರುವಾಗ ಈ ಯಾತ್ರೆ ಆರಂಭಿಸುತ್ತಿರುವುದು ಶತಮಾನದ ದೊಡ್ಡ ಜೋಕ್‌ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್‌ ಶರ್ಮಾ ಹೇಳಿದ್ದಾರೆ. 

ಕಾಂಗ್ರೆಸ್‌ನ (Indian National Congress) ಮಹತ್ವಾಕಾಂಕ್ಷೆಯ ಭಾರತ್‌ ಜೋಡೋ ಯಾತ್ರೆ (Bharat Jodo Yatra) ಆರಂಭವಾಗಿದೆ. ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಿದ್ದು, ಸೆಪ್ಟೆಂಬರ್ 7, ಬುಧವಾರ ಇದು ಶುರುವಾಗಿದೆ. ಆದರೆ, ಭಾರತ್ ಜೋಡೋ ಯಾತ್ರೆಗೆ ಟೀಕೆ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇದನ್ನು ‘ಶತಮಾನದ ದೊಡ್ಡ ಜೋಕ್‌’ (Comedy of the Century) ಎಂದಿದ್ದಾರೆ. ಅಲ್ಲದೆ, ರಾಹುಲ್‌ ಗಾಂಧಿ ತನ್ನ ಯಾತ್ರೆಯನ್ನು ಭಾರತದಲ್ಲಿ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿ ಆರಂಭಿಸಬೇಕಿತ್ತು ಎಂದೂ ಟೀಕೆ ಮಾಡಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಸದ್ಯ ಅಸ್ಸಾಂ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದು, ಈ ಮೊದಲು ಅವರು ಕಾಂಗ್ರೆಸ್‌ನಲ್ಲೇ ಇದ್ದರು. 
ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಬಗ್ಗೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಪ್ರತಿಕ್ರಿಯೆ ನೀಡಿದ ಅಸ್ಸಾಂ ಸಿಎಂ, ‘’ಇದು ಕಾಮಿಡಿಯಲ್ಲವೇ. ನೀವು (ಕಾಂಗ್ರೆಸ್‌) 1947 ರಲ್ಲಿ ದೇಶವನ್ನು ವಿಭಜನೆ (Divided) ಮಾಡಿದ್ರಿ. ಹಾಗೂ, ಈಗ ಭಾರತ್‌ ಜೋಡೋ (United) ಆಗಲು ನೀವು ಬಯಸುತ್ತೀರಿ. ಹಾಗೂ, ದೇಶ ಏಕತೆಯಿಂದ ಇರುವ ಕಡೆ ನೀವು ಇದನ್ನು ಮಾಡಲು ಪ್ರಯತ್ನ ಪಡುತ್ತಿದ್ದೀರಿ. ಈ ಹಿನ್ನೆಲೆ ಏಕೀಕರಣ (Unification) ಬೇಕೆಂದರೆ ರಾಹುಲ್‌ ಗಾಂಧಿ ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಆರಂಭಿಸಬೇಕು’’ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಲ್ಲದೆ, ‘’ಭಾರತ್‌ ಜೋಡೋ ಯಾತ್ರೆ ಶತಮಾನದ ಕಾಮಿಡಿಯಾಗಿದೆ. ನಾವು ಇಂದು ವಾಸಿಸುತ್ತಿರುವ ಭಾರತ ಚೇತರಿಸಿಕೊಂಡಿದೆ, ದೃಢವಾಗಿದೆ ಮತ್ತು ಐಕ್ಯತೆಯಿಂದ ಕೂಡಿದೆ. ಭಾರತ ವಿಭಜನೆಯಾಗಿದ್ದು ಒಂದೇ ಬಾರಿ, ಅದು 1947 ರಲ್ಲಿ ಮಾತ್ರ. ಕಾಂಗ್ರೆಸ್‌ ಒಪ್ಪಿಕೊಂಡಿದ್ದಕ್ಕೆ ಆ ವಿಭಜನೆಯಾಗಿದೆ. ಈ ಹಿನ್ನೆಲೆ ದೇಶವನ್ನು ಜೋಡಿಸಬೇಕಾದರೆ ರಾಹುಲ್‌ ಗಾಂಧಿ ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಮಾಡಬೇಕು’’ ಎಂದು ಅಸ್ಸಾಂ ಮುಖ್ಯಮಂತ್ರಿ ಟ್ವೀಟ್‌ ಮಾಡಿದ್ದಾರೆ. 

Bharat Jodo Yatra: ಇಂದಿನಿಂದ ರಾಹುಲ್‌ ಗಾಂಧಿ ಪಾದಯಾತ್ರೆ

ಜೈರಾಮ್‌ ರಮೇಶ್‌ ಯಾರು ಎಂದು ಕೇಳಿದ ಹಿಮಂತ ಬಿಸ್ವಾ ಶರ್ಮಾ
ಇನ್ನು, ಭಾರತ್‌ ಜೋಡೋ ಯಾತ್ರೆಯ ವಿರುದ್ಧ ಅಸ್ಸಾಂ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌, ‘’ನಾನು ಅಸ್ಸಾಂ ಮುಖ್ಯಮಂತ್ರಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು 20 - 25 ವರ್ಷಗಳ ಕಾಲ ಕಾಂಗ್ರೆಸ್‌ನ ಭಾಗವಾಗಿದ್ದ ಕಾರಣ ಈಗ ಬಿಜೆಪಿಯಲ್ಲಿ ಪ್ರತಿದಿನ ತಮ್ಮ ನಿಷ್ಠೆ ತೋರಬೇಕಾಗುತ್ತದೆ. ಅವರು ಬಿಜೆಪಿಗೆ ಇತ್ತೀಚೆಗೆ ವಲಸೆ ಹೋಗಿದ್ದಾರೆ. ಈ ಹಿನ್ನೆಲೆ ಪ್ರತಿದಿನ ಅತಿರೇಕದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ;; ಎಂದು ಹೇಳಿದ್ದರು. ಅಲ್ಲದೆ, ‘’ಅಸ್ಸಾಂ ಮುಖ್ಯಮಂತ್ರಿ ಹುಡುಗಾಟಿಕೆ ಹಾಗೂ ಅಪಕ್ವ ಎಂದು ನನಗನ್ನಿಸುತ್ತದೆ’’ ಎಂದೂ ಕಾಂಗ್ರೆಸ್‌ನ 3,570 ಕಿ.ಮೀಗಳ ಭಾರತ್‌ ಜೋಡೋ ಯಾತ್ರೆಯ ಆರಂಭಕ್ಕೂ ಮುನ್ನ ಬುಧವಾರ ಹೇಳಿಕೆ ನೀಡಿದ್ದರು. 

ದೇಶದಲ್ಲಿ ಶಾಂತಿ ನೆಲಸಲು ಭಾರತ್‌ ಜೋಡೋ ಯಾತ್ರೆ: ಸಿದ್ದರಾಮಯ್ಯ

ಈ ಹಿನ್ನೆಲೆ, ತನ್ನದು ಬಾಲಿಶ ಹೇಳಿಕೆ ಎಂದ ಜೈರಾಮ್‌ ರಮೇಶ್‌ ಹೇಳಿಕೆಗೆ ಅಸ್ಸಾಂ ಸಿಎಂ ಟೀಕೆ ಮಾಡಿದ್ದಾರೆ. ಮೊದಲು ನನಗೆ ಜೈರಾಮ್‌ ರಮೇಶ್‌ ಯಾರೆಂದು ಹೇಳಲಿ..? ಅವರು ಅಸ್ಸಾಂನಲ್ಲಿ ವಾಸಿಸುತ್ತಿದ್ದಾರೆಯೇ..? ಅವರು ಯಾರು..? ನನಗೆ ಐಡಿಯಾ ಇಲ್ಲ. ಕಾಂಗ್ರೆಸ್‌ ನಾಯಕರ ಹೆಸರುಗಳನ್ನೆಲ್ಲ ಯಾರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ..? ನಾನು ಕಾಂಗ್ರೆಸ್‌ನಲ್ಲಿದ್ದಾಗ ಅಂತಹ ಹೆಸರುಳ್ಳ ಯಾವ ವ್ಯಕ್ತಿಯ ಜತೆಗೂ ನಾನು ಹತ್ತಿರವಾಗಿರಲಿಲ್ಲ. ಅವರು ಯಾರೆಂದು ಸಹ ನನಗೆ ಗೊತ್ತಿಲ್ಲ’’ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಲ್ಲದೆ, ನನಗೆ ಗೊತ್ತಿಲ್ಲದವರ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ ಎಂದೂ ಮಾಧ್ಯಮದವರಿಗೆ ಅಸ್ಸಾಂ ಮುಖ್ಯಮಂತ್ರಿ ಕೇಳಿಕೊಂಡಿದ್ದಾರೆ.