Gujarat Election 2022 Asianet Survey: ಮತ್ತೆ ಅರಳಲಿದೆ ಕಮಲ, ಕುಗ್ಗಿದೆ ಕೈ ಬಲ, ಆಪ್‌ಗಿಲ್ಲ ಬೆಂಬಲ
Asianet - C Fore Gujarat Election Pre Poll Survery 2022: ಗುಜರಾತ್ ವಿಧಾನಸಭೆ ಚುನಾವಣೆಯ ಕಾವು ಈಗಾಗಲೇ ಏರಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಏಷ್ಯಾನೆಟ್ ಮತ್ತು ಸಿ ಫೋರ್ ನಡೆಸಿರುವ ಸಮೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಬಹು ನಿರೀಕ್ಷಿತ ಗುಜರಾತ್ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಚುನಾವಣಾ ಕಣ ಈಗಾಗಲೇ ರಂಗೇರಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಮೋದಿ ನಡುವೆ ವಾಗ್ಯುದ್ಧವೂ ಈಗಾಗಲೇ ಆರಂಭವಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಲ್ಲಿದ್ದ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರಿದ್ದಾರೆ. ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಮಿತಿಯ ಸಮಸ್ಯೆ ಅವರನ್ನು ಕಾಡಿತ್ತು. ಆದರೆ ಈ ಬಾರಿ ಸ್ಪರ್ಧೆ ಖಚಿತವಾಗಿದೆ. ಪಟೇಲ್ ಬಿಜೆಪಿ ಸೇರ್ಪಡೆಯಿಂದ ಯುವ ಸಮೂಹದ ಮತಗಳು ಕಾಂಗ್ರೆಸ್‌ನಿಂದ ದೂರವಾಗುವ ಸಾಧ್ಯತೆಯಿದೆ. ಅಲ್ಪೇಶ್ ಠಾಕೂರ್ ಕೂಡ ಈ ಬಾರಿ ಕಾಂಗ್ರೆಸ್ ಜೊತೆಗಿಲ್ಲ. ಇವೆಲ್ಲವೂ ಕಾಂಗ್ರೆಸ್ ಮತ ಬ್ಯಾಂಕ್ ಕಡಿಮೆ ಮಾಡುವ ಸಾಧ್ಯತೆಯಿದೆ. ಹಾಗಾದರೆ ಗುಜರಾತ್ ಜನರು ಈ ಬಾರಿ ಯಾರನ್ನು ಗೆಲ್ಲಿಸಲಿದ್ದಾರೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಯನ್ನು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಮತ್ತು ಸಿ ಫೋರ್ ಮಾಡಿದಾಗ ಬಿಜೆಪಿ ಗೆಲ್ಲುವ ಫೇವರೇಟ್ ಎಂಬುದು ತಿಳಿದುಬಂದಿದೆ.
ಒಟ್ಟೂ 182 ಕ್ಷೇತ್ರಗಳಿರುವ ಗುಜರಾತಿನಲ್ಲಿ ಬಿಜೆಪಿ 133-143 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ 28-37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಇನ್ನೂ ಗುಜರಾತಿನಲ್ಲಿ ಖಾತೆ ತೆರೆಯಲು ಮುಂದಾಗಿರುವ ಆಮ್ ಆದ್ಮಿ ಪಕ್ಷ 5-14 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಮತ್ತು 1-3 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ.
ಇನ್ನು ಶೇಕಡಾವಾರು ಮತಗಳ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದ್ದು ಬಿಜೆಪಿ 48% ಮತ ಪಡೆದರೆ ಕಾಂಗ್ರೆಸ್ 31% ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಆಪ್‌ಗೆ 16% ಮತ ಸಿಗುವ ಸಾಧ್ಯತೆಯಿದೆ. ಜಾತಿವಾರು ಸಮೀಕ್ಷೆಯಲ್ಲೂ ಬಿಜೆಪಿಗೆ ಮೇಲುಗೈ ಸಿಕ್ಕಿದ್ದು ಚುನಾವಣಾ ಪೂರ್ವ ಸದ್ಯದ ಜನರ ಮನಸ್ಥಿತಿ ಬಿಜೆಪಿ ಜೊತೆಗಿದೆ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಾಗ ಜನ ಯಾವ ತೀರ್ಮಾನ ತಳೆಯುತ್ತಾರೆ ಎಂಬುದನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಆದರೆ ಎಲ್ಲ ರೀತಿಯ ಪ್ರಶ್ನೆಗಳಿಗೂ ಜನ ಬಿಜೆಪಿ ಪರವೇ ಹೆಚ್ಚು ಮನಸ್ಸು ಹೊಂದಿದ್ದಾರೆ ಎಂಬುದು 782 ಪುಟಗಳ ಸುದೀರ್ಘ ಸಮೀಕ್ಷೆಯ ಅವಲೋಕನವಾಗಿದೆ.
ಇದನ್ನೂ ಓದಿ: Uniform Civil Code: ಚುನಾವಣೆಗೂ ಮುನ್ನ ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ, ಸಮಿತಿ ರಚಿಸಿದ ಸರ್ಕಾರ!
ಪ್ರಧಾನಿ ಮೋದಿ ಆಡಳಿತ ಅತ್ಯುತ್ತಮ:
ಚುನಾವಣಾ ಭರವಸೆಗಳ ಕುರಿತೂ ಸಮೀಕ್ಷೆಯಲ್ಲಿ ಜನರನ್ನು ಪ್ರಶ್ನಿಸಲಾಗಿದೆ. ಕಾಂಗ್ರೆಸ್ ಮತ್ತು ಆಪ್ ಈಗಾಗಲೇ ಚುನಾವಣಾ ಭರವಸೆಗಳನ್ನು ನೀಡಿವೆ. ಬಿಜೆಪಿ ಇನ್ನೂ ಭರವಸೆಗಳನ್ನು ನೀಡಿಲ್ಲ. ಈ ಭರವಸೆಗಳನ್ನು ಕಾಂಗ್ರೆಸ್ ಅಥವಾ ಆಪ್ ಅಧಿಕಾರಕ್ಕೆ ಬಂದರೆ ಕಾರ್ಯರೂಪಕ್ಕೆ ಬರಲಿದೆಯಾ ಎಂಬ ಪ್ರಶ್ನೆಗೆ ಹೆಚ್ಚು ಜನ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿ ಅಧಿಕಾರ ಹೇಗೆ ನಡೆಸಿದೆ ಎಂಬ ಪ್ರಶ್ನೆಗೆ ಪಶಂಸನಾತ್ಮಕವಾಗಿ ಕಾರ್ಯನಿರ್ವಹಿಸಿದೆ ಎಂಬ ಉತ್ತರ ಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಹೇಗೆ ಮುನ್ನಡೆಸಿದ್ದಾರೆ ಎಂಬ ಪ್ರಶ್ನೆಗೂ ಉತ್ತಮವಾಗಿ ನಡೆಸಿದ್ದಾರೆ ಎಂದು ಗುಜರಾತ್‌ನ ಜನ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮತಕ್ಕೆ ಬಿಜೆಪಿ ‘ಅಲ್ಪಸಂಖ್ಯಾತ ಮಿತ್ರ’ ನೇಮಕ: Gujarat ಚುನಾವಣೆಯಲ್ಲಿ ಹೊಸ ತಂತ್ರ..!
ಒಟ್ಟಿನಲ್ಲಿ ಎಲ್ಲಾ ಆಯಾಮಗಳಿಂದಲೂ ಗುಜರಾತಿನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಜನರ ನಾಡಿಮಿಡಿತವನ್ನು ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ಅಳೆಯುವ ಕೆಲಸವನ್ನು ಏಷ್ಯಾನೆಟ್ ಮತ್ತು ಸಿ-ಫೋರ್ ಸಂಸ್ಥೆ ಮಾಡಿದ್ದು, ನಿಷ್ಪಕ್ಷಪಾತವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.