Asianet Suvarna News Asianet Suvarna News

ಮುಸ್ಲಿಂ ಮತಕ್ಕೆ ಬಿಜೆಪಿ ‘ಅಲ್ಪಸಂಖ್ಯಾತ ಮಿತ್ರ’ ನೇಮಕ: Gujarat ಚುನಾವಣೆಯಲ್ಲಿ ಹೊಸ ತಂತ್ರ..!

ಗುಜರಾತ್‌ ಚುನಾವಣೆಯಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯಲು ಬಿಜೆಪಿ ಹೊಸ ತಂತ್ರ ಮಾಡಲು ಮುಂದಾಗಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಕನಿಷ್ಠ 100 ‘ಅಲ್ಪಸಂಖ್ಯಾತ ಮಿತ್ರ’ರನ್ನು ನೇಮಕ ಮಾಡಲು ಉದ್ದೇಶಿಸಿದೆ.

 

eyeing muslim votes bjps minority cell to make alpasankhyak mitra in gujarat ash
Author
First Published Sep 12, 2022, 8:27 AM IST

ನವದೆಹಲಿ: ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ (Gujarat Election 2022) ಮುಸಲ್ಮಾನರ (Muslims) ಮತಗಳನ್ನು ಸೆಳೆಯಲು ಬಿಜೆಪಿ ಅಲ್ಪಸಂಖ್ಯಾತ ಘಟಕ ವಿಶಿಷ್ಟ ಕಾರ್ಯತಂತ್ರವೊಂದನ್ನು ರೂಪಿಸಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ವಿಧಾನಸಭೆ ಕ್ಷೇತ್ರಗಳಲ್ಲಿ (Legislative Assembly Seats) ಕನಿಷ್ಠ 100 ‘ಅಲ್ಪಸಂಖ್ಯಾತ ಮಿತ್ರ’ರನ್ನು ನೇಮಕ ಮಾಡಲು ಉದ್ದೇಶಿಸಿದೆ. ಈ ಎಲ್ಲರಿಗೂ ತಲಾ 50 ಮುಸ್ಲಿಂ ಮತ ತರುವ ಹೊಣೆಗಾರಿಕೆ ಹಂಚಲಾಗುತ್ತದೆ. ರಾಜಕೀಯೇತರ ಹಿನ್ನೆಲೆ ಹೊಂದಿದ ವ್ಯಕ್ತಿಗಳನ್ನು ಅಲ್ಪಸಂಖ್ಯಾತ ಮಿತ್ರರನ್ನಾಗಿ ನೇಮಕ ಮಾಡಲಾಗುತ್ತದೆ. ಈ ಸಂಬಂಧ ಬಿಜೆಪಿಯ ಅಲ್ಪಸಂಖ್ಯಾತ ಘಟಕ ಈ ಮಿತ್ರರನ್ನು ಸಂಪರ್ಕಿಸಲು ಕೆಲಸ ಆರಂಭಿಸಿದೆ. ಅಧ್ಯಾತ್ಮಿಕ ನಾಯಕರು, ವೃತ್ತಿಪರರು, ಉದ್ಯಮಿಗಳು ಹಾಗೂ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರು ಕೂಡ ಅಲ್ಪಸಂಖ್ಯಾತ ಮಿತ್ರರಾಗಬಹುದು ಎಂದು ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಜಮಾಲ್‌ ಸಿದ್ದಿಖಿ ತಿಳಿಸಿದ್ದಾರೆ. 

ಇದೇ ವೇಳೆ, 25 ಸಾವಿರದಿಂದ 1 ಲಕ್ಷದವರೆಗೆ ಮುಸ್ಲಿಂ ಮತಗಳನ್ನು ಹೊಂದಿರುವ 109 ವಿಧಾನಸಭೆ ಕ್ಷೇತ್ರಗಳು ಗುಜರಾತಿನಲ್ಲಿವೆ. ಅಲ್ಲಿನ ಬೂತ್‌ ಸಮಿತಿಗಳಿಗೆ ಅಲ್ಪಸಂಖ್ಯಾತ ಘಟಕಗಳ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಗುಜರಾತ್‌ ಚುನಾವಣೆಗೆ ಅಡ್ಡಿ ಮಾಡಲು ಐಸಿಸ್‌ನಿಂದ ಗಲಭೆ?

ಹಿಂದೂ ಹತ್ಯೆ, ದೊಂಬಿಗೆ ಐಸಿಸ್‌ ಸಂಚು..!
ಈ ಮಧ್ಯೆ, ವರ್ಷಾಂತ್ಯದೊಳಗೆ ನಡೆಯಬೇಕಿರುವ ಹಾಗೂ ದೇಶದ ಕುತೂಹಲ ಕೆರಳಿಸಿರುವ ಗುಜರಾತ್‌ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಐಸಿಸ್‌ (ISIS) ಭಯೋತ್ಪಾದಕರು (Terrorists) ಗಲಭೆ ಸೃಷ್ಟಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ, ಬಲಪಂಥೀಯ ಸಂಘಟನೆಗಳು, ಧಾರ್ಮಿಕ ನಾಯಕರು, ಭದ್ರತಾ ಪಡೆಗಳ ಮೇಲೆ ಮೂಲಭೂತವಾದಿ ಯುವಕರನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಐಸಿಸ್‌ ಭೌತಿಕ ದಾಳಿ ನಡೆಸುವ ಸಾಧ್ಯತೆ ಇದೆ. ಜತೆಗೆ ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಗೆಡವಲೂ ಯತ್ನಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಬಂದಿದೆ.

ಪ್ರವಾದಿ ಮೊಹಮ್ಮದರ ಅವಹೇಳನಕ್ಕೆ ಪ್ರತೀಕಾರವಾಗಿ ಭಾರತದ ದೊಡ್ಡ ನಾಯಕರನ್ನು ಹತ್ಯೆ ಮಾಡಲು ಬರುತ್ತಿದ್ದ ಐಸಿಸ್‌ ಆತ್ಮಾಹುತಿ ಬಾಂಬರ್‌ವೊಬ್ಬನನ್ನು ರಷ್ಯಾದಲ್ಲಿ ಕೆಲ ವಾರಗಳ ಹಿಂದಷ್ಟೇ ಬಂಧಿಸಲಾಗಿತ್ತು. ಅದರ ಬೆನ್ನಿಗೇ ಗುಜರಾತ್‌ ಚುನಾವಣೆ ಮುನ್ನ ಗಲಭೆಗೆ ಐಸಿಸ್‌ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಸಂಚು ಏನು?:
ಐಸಿಸ್‌ ಸಂಘಟನೆಯ ಮುಂಚೂಣಿ ಸಂಘಟನೆಯಾಗಿರುವ ಇಸ್ಲಾಮಿಕ್‌ ಸ್ಟೇಟ್‌ ಖೋರಸನ್‌ ಪ್ರಾವಿನ್ಸ್‌ (ಐಎಸ್‌ಕೆಪಿ) ಸಂಘಟನೆಯು, 2002ರ ಗುಜರಾತ್‌ ಗಲಭೆಯನ್ನು ಬಿಂಬಿಸಿ ಮೂಲಭೂತವಾದಿ ಯುವಕರನ್ನು ನೇಮಕ ಮಾಡಿಕೊಳ್ಳುವಂತೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ಪ್ರಸ್ತಾಪಿಸಿ ಕೋಮು ಸೌಹಾರ್ದ ಹಾಳು ಮಾಡುವಂತೆ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಪ್ರಮುಖ ರಾಜಕೀಯ ನಾಯಕನ ಹತ್ಯೆಗೆ ಸ್ಕೆಚ್‌: ರಷ್ಯಾದಲ್ಲಿ ಐಸಿಸ್‌ ಉಗ್ರ ವಶಕ್ಕೆ

ಪೊಲೀಸರಿಂದ ಮುಂಜಾಗ್ರತಾ ಕ್ರಮ:
ಇದರ ಬೆನ್ನಲ್ಲೇ, ಚುನಾವಣೆ ನಡೆಯುವ ಗುಜರಾತ್‌ನಲ್ಲಿ ಕೋಮು ಸೌಹಾರ್ದ ಕಾಪಾಡಲು ಅಗತ್ಯವಿರುವ ಎಲ್ಲ ಭದ್ರತಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತದೆ. ಇಂತಹ ಬೆದರಿಕೆಗಳನ್ನು ಮಣಿಸಲು ಸೂಕ್ತ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ. ಐಎಸ್‌ಕೆಪಿ ಸಂಘಟನೆಯ ಮುಖಂಡರು ಅಪಘಾನಿಸ್ತಾನ- ಪಾಕಿಸ್ತಾನದಲ್ಲಿದ್ದು, ಭಾರತದಲ್ಲಿರುವ ಬಂಟರ ಜತೆ ಸಮನ್ವಯ ಸಾಧಿಸಿ ದಾಳಿ ನಡೆಸಲು ಯೋಜನೆ ರೂಪಿಸುತ್ತಲೇ ಬಂದಿದ್ದಾರೆ. 2021ರ ಆ.15ರಂದು ಅಪಘಾನಿಸ್ತಾನವನ್ನು ತಾಲಿಬಾನ್‌ ಉಗ್ರರು ವಶಕ್ಕೆ ಪಡೆದ ನಂತರ ಆ ಸಂಘಟನೆಯ ಚಟುವಟಿಕೆ ತೀವ್ರವಾಗಿದೆ. ಹಿಜ್ಬುಲ್‌ ಮುಜಾಹಿದೀನ್‌ ಹಾಗೂ ಲಷ್ಕರ್‌ ಎ ತೊಯ್ಬಾ ಸಂಘಟನೆಗಳ ಸದಸ್ಯರನ್ನು ಬಳಸಿಕೊಂಡು ತನ್ನದೇ ಆದ ಪಡೆ ರಚಿಸಲು ಯತ್ನಿಸುತ್ತಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios