ಅರವಿಂದ ಲಿಂಬಾವಳಿ ಸೇರಿ ಹಲವರಿಗೆ ಟಿಕೆಟ್ ನಿರಾಕರಣೆ, ರೊಚ್ಚಿಗೆದ್ದ ಭೋವಿ ಸಮಾಜ!
ಭೋವಿ ಸಮುದಾಯದ ಕೆಲ ಶಾಸಕರಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಭೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಕಿಡಿಕಾರಿದ್ದಾರೆ. ಮಾತ್ರವಲ್ಲ ಇಡೀ ಸಮುದಾಯ ಬಿಜೆಪಿಯಿಂದ ದೂರ ಹೋಗಲಿರುವ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ (ಏ.14): ಭೋವಿ ಸಮುದಾಯದ ಕೆಲ ಶಾಸಕರಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಭೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಕಿಡಿಕಾರಿದ್ದಾರೆ. ಬಿಜೆಪಿಯಿಂದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಕಡೆಗಣನೆ ಮಾಡಲಾಗಿದೆ ಎಂದು ಭೋವಿ ಸಮಾಜದ ಸ್ವಾಮೀಜಿ ರೊಚ್ಚಿಗೆದ್ದಿದ್ದಾರೆ. ಲಿಂಬಾವಳಿಗೆ ಟಿಕೆಟ್ ಕೊಡದಿದ್ದರೆ ಇಡೀ ಸಮುದಾಯ ಬಿಜೆಪಿಯಿಂದ ದೂರ ಹೋಗಲಿದೆ ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆ. ಅರವಿಂದ ಲಿಂಬಾವಳಿ ಬೋವಿ ಸಮಾಜದ ಪ್ರಭಾವಿ ನಾಯಕರು. ಬಿಜೆಪಿಯ ತತ್ವ, ನಿಷ್ಠೆಗೆ ಬದ್ದರಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ಬಿಜೆಪಿ ಜೊತೆಗೆ ಇಂದು ಬೋವಿ ಸಮಾಜವಿದೆ ಎಂದರೆ ಇದಕ್ಕೆ ಲಿಂಬಾವಳಿ ಪ್ರಮುಖ ಕಾರಣಕರ್ತರು. ಮೊದಲು ಮತ್ತು 2ನೇ ಪಟ್ಟಿಯಲ್ಲಿ ಬಿಜೆಪಿ ಏಕೆ ಟಿಕೆಟ್ ಕೊಟ್ಟಿಲ್ಲ? ಒಂದು ವೇಳೆ ಅವರಿಗೆ ಟಿಕೆಟ್ ನಿರಾಕರಿಸಿದರೆ ಇಡೀ ಬೋವಿ ಸಮಾಜ ಬಿಜೆಪಿ ವಿರುದ್ಧ ತಿರುಗಿ ಬೀಳಲಿದೆ. 3ನೇ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಗೆ ಟಿಕೆಟ್ ಘೋಷಣೆ ಮಾಡದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಖಂಡ ಶ್ರೀನಿವಾಸ್ ಕಡೆಗಣನೆ ಮಾಡಲಾಗಿದೆ. ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದರು. ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆವು. ಈ ಹಿಂದೆ 8-10 ಜನ ಬೋವಿ ಸಮುದಾಯದವರಿಗೆ ಟಿಕೆಟ್ ನೀಡುತ್ತಿದ್ದರು. ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಗೆ ಬಿಜೆಪಿ ಟಿಕೆಟ್ ನೀಡಬೇಕು. ಅಖಂಡ ಶ್ರೀನಿವಾಸ್ ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಭೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ಸಮುದಾಯ ಕೈಬಿಡಲಿದೆ. ಭೋವಿ ಸಮಾಜದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಭೋಮಿ ಮೂಖಂಡರ ಸಭೆ:
ಶಿವಮೊಗ್ಗದಲ್ಲಿ ಭೋವಿ ಸಮಾಜದ ಮುಖಂಡರಿಂದ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ಪಕ್ಷಗಳಿಂದ ಭೋವಿ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಭೋವಿ ಸಮಾಜವಿದೆ. ಸಮುದಾಯದಿಂದ ಭೋವಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾರಕಿಹೊಳಿ ವಿರುದ್ಧ ರೆಬಲ್, ಕಾಂಗ್ರೆಸ್ ಸೇರಲು 3 ಶರತ್ತು ಇಟ್ಟ ಲಕ್ಷ್ಮಣ ಸವದಿ!
ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಭೋವಿ ಸಮಾಜದ ಮುಖಂಡರಾದ ಧೀರಾಜ್ ಹೊನ್ನವಿಲೆ ಮತ್ತು ವೀರಭದ್ರಪ್ಪ ಪೂಜಾರ್, ಬಿಜೆಪಿ ಸರ್ಕಾರ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಜೆ ಬರಲು ಭೋವಿ ಸಮಾಜದ ಕೊಡುಗೆ ಇದೆ. ಭೋವಿ ಸಮುದಾಯದಿಂದ ಬಂಡಾಯವಾಗಿ ಗ್ರಾಮಾಂತರ ಭಾಗರದಲ್ಲಿ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳು ಇವೆ. ಏ.20 ರೊಳಗೆ ಬಂಡಾಯ ಸ್ಪರ್ಧೆ ಖಚಿತ. ರಾಜ್ಯದಲ್ಲಿ 35-40 ಲಕ್ಷ ಭೋವಿ ಸಮಾಜವಿದೆ. ಸಂಖ್ಯೆಗೆ ಸಮರ್ಪಕವಾಗಿ ಭೋವಿ ಸಮಾಜಕ್ಕೆ ಎರಡು ರಾಷ್ಟ್ರೀಯ ಪಕ್ಷದಿಂದ ಸಮರ್ಪಕ ಟಿಕೆಟ್ ಹಂಚಿಕೆಯಾಗಿಲ್ಲ. ಅರವಿಂದ ಲಿಂಬಾವಳಿ, ಗೂಳಿ ಹಟ್ಟಿ ಶೇಖರ್ ಬಿಜೆಪಿ ಟಿಕೆಟ್ ವಂಚಿತರಾಗಿದ್ದಾರೆ.
ಇಂದು ಸಂಜೆ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆ, ಅಥಣಿಯಿಂದ ಟಿಕೆಟ್, ಕುಮಟಳ್ಳಿ ವಿರುದ್ಧ ಸ್ಪರ್ಧೆ!
ಈ ಹಿಂದೆ 13 ಜನ ಶಾಸಕರಿದ್ದರು ಈಗ ಮೂರೂ ಪಕ್ಷದಿಂದ ಅದರ ಸಂಖ್ಯೆ 9 ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ 1.25 ಲಕ್ಷ ಭೋವಿ ಸಮಾಜದವರಿದ್ದಾರೆ. ಪದೇ ಪದೇ ಅನ್ಯಾಯವಾಗಿದೆ. ಬಸವಣ್ಯಪ್ಪನವರ ನಂತರ ಯಾರಿಗೂ ಭೋವಿ ಸಮುದಾಯದ ಅಭ್ಯರ್ಥಿ ಬಂದಿಲ್ಲ. 35-40 ಸಾವಿರ ಜನ ಸಂಖ್ಯೆಯಲ್ಲಿದ್ದಾರೆ. ನಮ್ಮ ಜನವರಿಗೆ ಅನ್ಯಾಯವಾದರೆ ಸುಮ್ಮನೆ ಕೂರಲ್ಲ. ಈಗ ಬಿಜೆಪಿ ಪಕ್ಷದಲ್ಲಿ ಗ್ರಾಮಾಂತರ ಭಾಗದಲ್ಲಿ ಅವಕಾಶವಿದೆ. ಒಂದು ವೇಳೆ ಟಿಕೆಟ್ ನೀಡಿದರೆ ನಾವು ಬಿಜೆಪಿಯಲ್ಲಿರುತ್ತೇವೆ ಇಲ್ಲದಿದ್ದರೆ ಬಂಡಾಯ ಏಳುವ ಮುನ್ಸೂಚನೆ ನೀಡಿದ ನಾಯಕರು.