ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಸವಾಲ್: ಸೋಮಶೇಖರ್‌ರೆಡ್ಡಿ ವಿರುದ್ಧ ಜನಾರ್ಧನರೆಡ್ಡಿ ಪತ್ನಿ ಸ್ಪರ್ಧೆ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಸಹೋದರನ ವಿರುದ್ಧ ಪತ್ನಿ ಅರುಣಾಲಕ್ಷ್ಮೀ ಅವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದಿಂದ ಕಣಕ್ಕಿಳಿಸುವುದಾಗಿ ಕೆಆರ್‌ಪಿಪಿ ಸಂಸ್ಥಾಪಕ ಜನಾರ್ಧನ ರೆಡ್ಡಿ ಘೋಷಣೆ ಮಾಡಿದ್ದಾರೆ.
ಕೊಪ್ಪಳ (ಜ.31): ರಾಜ್ಯ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಜನಾರ್ಧನ ರೆಡ್ಡಿ ಅವರು ಬಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಸಹೋದರನ ವಿರುದ್ಧ ಪತ್ನಿ ಅರುಣಾಲಕ್ಷ್ಮೀ ಅವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದಿಂದ ಕಣಕ್ಕಿಳಿಸುವುದಾಗಿ ಕೆಆರ್‌ಪಿಪಿ ಸಂಸ್ಥಾಪಕ ಜನಾರ್ಧನ ರೆಡ್ಡಿ ಘೋಷಣೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಆನೆಗೊಂದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಗರ ಕ್ಷೇತ್ರದಿಂದ ಕೆಆರ್‌ಪಿಪಿ ಅಭ್ಯರ್ಥಿ ಅರುಣಾಲಕ್ಷ್ಮೀ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ, ಜನಾರ್ಧನರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ದ ಅರುಣಾಲಕ್ಷ್ಮೀ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಹೋದರನ ವಿರುದ್ದ ಪತ್ನಿಯನ್ನ ಜನಾರ್ಧನರೆಡ್ಡಿ ಕಣಕ್ಕಿಳಿಸಿದ್ದು, ಬಳ್ಳಾರಿಯಲ್ಲಿ ರೆಡ್ಡಿ ಸಹೋದರು ಪರಸ್ಪರ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ, ಜನರು ಯಾರ ಕೈ ಹಿಡಿದು ಗೆಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಅನ್ಸಾರಿಗೆ ಶಾಕ್ ಕೊಟ್ಟ ಜನಾರ್ದನ ರೆಡ್ಡಿ: ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರ ಛಿದ್ರ..!
ಆಸ್ತಿ ಮುಟ್ಟುಗೋಲಿನ ಬಗ್ಗೆ ಬೆದರಿಕೆ: ರಾಜ್ಯದಲ್ಲಿ ಸಾರ್ವಜನಿಕ ಜೀವನಕ್ಕೆ ಬಂದು ಹೊಸ ಪಕ್ಷವನ್ನು ಕಟ್ಟಿ ರಾಜಕಾರಣ ಆರಂಭಿಸಿದ ಬೆನ್ನಲ್ಲೇ ಕೆಲವರು ನನ್ನ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ, ನಾನ್ಯಾರಿಗೂ ಹೆದರುವದೂ ಇಲ್ಲ, ಯಾರಿಗೂ ಬಗ್ಗುವುದೂ ಇಲ್ಲ. ಗಂಡುಮೆಟ್ಡಿದ ನಾಡಲ್ಲಿ ಹುಟ್ಟಿದವನು ನಾನು. ಆದರೆ, ನಂಗೆ ಎಷ್ಟೆಲ್ಲಾ ಅವಮಾನ ಆಗಿದೆ. ಅವೆಲ್ಲ ಸಮನಾಗಿ ಸ್ವೀಕಸಿರಿಸಿದ್ದೇನೆ. ಯಾರು ಏನು ಬೇಕಾದರೂ ಹೇಳಲಿ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.
ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಯೋಜನೆ: ರಾಜ್ಯ ರಾಜಕಾರಣದಲ್ಲಿ ನಾನು ಧೃಡ ಸಂಕಲ್ಪ ಮಾಡಿದ್ದೇನೆ. ಪ್ರಾಣ ಹೋದರೂ ಕೊಟ್ಟ ಮಾತನ್ನು ತಪ್ಪೊನ್ನಲ್ಲ ಈ ರೆಡ್ಡಿ. ಶಥಸಿದ್ದವಾಗಿ ನನ್ನ ಗುರಿಯನ್ನ ಮುಟ್ಟಿಯೇ ಮುಟ್ಟುತ್ತೆನೆ. ಹನುಮ ಹುಟ್ಟಿದ ಅಂಜನಾದ್ರಿ ನಾಡಿದು. ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಬೃಹತ್ ಮೊತ್ತದ ಯೋಜನೆ ಸಿದ್ದಪಡಿಸಿದ್ದೇನೆ. ಇಡೀ ಜಗತ್ತೆ ನಮ್ಮ ಕಡೆ ನೋಡಬೇಕು ಹಾಗೇ ಮಾಡುತ್ತೀನಿ. ಗಂಗಾವತಿಯಲ್ಲಿ 200 ಹಾಸಿಗೆಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ಕೊಳೆಗೇರಿಗಳು (ಸ್ಲಂ) ಇಲ್ಲದ ರೀತಿಯಾಗಿ ಗಂಗಾವತಿಯನ್ನ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು.
15 ಜಿಲ್ಲೆಗಳ ಜನರು ಕೆಆರ್‌ಪಿಪಿಗೆ ಸೇರ್ಪಡೆ: ರಾಜ್ಯದ 10-15 ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ನಿಮ್ಮ ಶಕ್ತಿ ನಂಗೆ ಆನೆ ಬಲ ತರುತ್ತಿದೆ. ನೀವು ನಿಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಿಲ್ಲ. ನಂಗೆ ಅಧಿಕಾರ ಕೊಡಿ. ಮಂತ್ರಿಗಳು ಹಾಗೂ ಶಾಸಕರನ್ನ ನಿಮ್ಮ ಬೀದಿ ಬೀದಿಗೆ ಬರುವಂತೆ ಮಾಡುತ್ತೇನೆ. ಇಡೀ ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತರುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನೋಡಿದರೆ ನಾನು ಗೆದ್ದುಬಿಟ್ಟಿದ್ದೆನೆ ಎನ್ನೋ ನಂಬಿಕೆ ಬಂದಿದೆ. ನಿವೆಲ್ಲಾ ನನ್ನನ್ನ ಗೆಲ್ಲಿಸೋ ಜವಬ್ದಾರಿ ತಗೊಳ್ಳಿ. ನಾನು 30-40 ಶಾಸಕರನ್ನ ಗೆಲ್ಲಿಸಿಕೊಂಡು ಬರೋ ಜವಬ್ದಾರಿ ತೆಗೆದುಕೊಳ್ಳುತ್ತೇನೆ. ಅವಾಗಲೇ ನಮ್ಮ ಎಲ್ಲಾ ಕೆಲಸ ಆಗೋದು ಎಂದು ಹೇಳಿದರು.
Ballari: ತಂದೆಯ ಹುಟ್ಟುಹಬ್ಬದಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ ಮಗಳು
ಗೆಲ್ಲುವ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕ್ತೀನಿ: ರಾಜ್ಯದಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೋ ಅಂತಹ ಎಲ್ಲ ಕಡೆಗಳಲ್ಲಿ ನಮ್ಮ ಕ್ಯಾಂಡಿಡೇಟ್ ಹಾಕ್ತೀನಿ. ಆದರೆ, ಯಾರನ್ನೋ ಸೋಲಿಸೋಕೆ ಅಭ್ಯರ್ಥಿ ಹಾಕೋದಿಲ್ಲ. ಸಹೋದರ ಇರಲಿ ಯಾರೆ ಇರಲಿ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕುತ್ತೇನೆ. ರಾಜಕೀಯದಲ್ಲಿ ನಾನೆಂದು ಸಂಬಂಧಗಳನ್ನ ದುರುಪಯೋಗ ಮಾಡಿಕೊಂಡಿಲ್ಲ. ನಂಗೆ ವ್ಯಕ್ತಿ ಮುಖ್ಯ ಅಲ್ಲ. ನಮ್ಮ ನಿರ್ಧಾರ ಅಚಲ, ನಾನು ಈಗಾಗಲೇ ಹೇಳಿದ್ದಿನಿ. ನಾನು ಯಾವ ಪಕ್ಷದ ನಾಯಕರ ಬಗ್ಗೆಯೂ ಮಾತನಾಡುವದಿಲ್ಲ. 12 ವರ್ಷ ವನವಾಸ, ಹಿಂಸೆ ಅನುಭವಿಸಿ ಉದ್ಭವಾಗಿರೋ ಪಕ್ಷ ಇದು. ಯಾಕೆ ಬೇರೆಯವರ ಬಗ್ಗೆ ಮಾತನಾಡಬೇಕು. ಇನ್ನೊಂದು ವಾರದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆ ರೆಡಿಯಾಗುತ್ತದೆ. ಎಲ್ಲೆಲ್ಲಿ ಕ್ಯಾಂಡಿಡೇಟ್ ಹಾಕಬೇಕು ಎನ್ನೋದನ್ನ ಸಧ್ಯದಲ್ಲಿಯೇ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.