ಬೆಳಗಾವಿ (ಡಿ.06):  ಪಕ್ಷ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂಥ ಅಥವಾ ಮುಜುಗರ ಉಂಟುಮಾಡುವಂಥ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ಬೆಳಗಾವಿಯಲ್ಲಿ  ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಮುಖಂಡರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಾಯಕತ್ವ, ಸಂಪುಟ ವಿಸ್ತರಣೆ, ವಿವಾದ ಸೃಷ್ಟಿಸಬಹುದಾದ ಗೋಹತ್ಯೆ ನಿಷೇಧ ಹಾಗೂ ಲವ್‌ ಜಿಹಾದ್‌ ನಿಷೇಧ ವಿಧೇಯಕಗಳೂ ಸೇರಿದಂತೆ ಯಾವುದೇ ರೀತಿಯ ಬೆಳವಣಿಗೆಗಳ ಬಗ್ಗೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನೀಡಬೇಕು. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಳಸುವ ಪದಗಳ ಮೇಲೆ ನಿಗಾ ಇರಬೇಕು. ಎಲ್ಲರೂ ಎಲ್ಲ ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕು. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಚುನಾವಣೆ: `ಭಾಗ್ಯ'ನಗರಕ್ಕೆ ಬಂದವರು ಬೆಂಗಳೂರಿಗೂ ಬರ್ತಾರಾ..? .

ಈ ಸೂಚನೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಿಟ್ಟುಸಿರು ಬಿಟ್ಟಿದ್ದು, ಅವರಿಗೆ ಮತ್ತಷ್ಟುಬಲ ಬಂದಂತಾಗಿದೆ.

ಪದೇ ಪದೇ ಪಕ್ಷಕ್ಕೆ ವಿರುದ್ಧವಾಗಿ ಬಹಿರಂಗ ಹೇಳಿಕೆ ನೀಡುವುದು, ನಾಯಕತ್ವದ ಬದಲಾವಣೆ ಕುರಿತು ಬಹಿರಂಗ ಚರ್ಚೆ, ಜತೆಗೆ ಪಕ್ಷದ ನಾಯಕರನ್ನು ಮುಜುಗರಕ್ಕೆ ಸಿಲುಕಿಸುವಂತಹ ಹೇಳಿಕೆ ನೀಡುತ್ತಿರುವ ನಾಯಕರಿಗೆ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಸಭೆಯಲ್ಲಿ ಖಡಕ್‌ ಆಗಿಯೇ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಎದುರು ಹೇಳುವ ನಾಯಕರ ಬಾಯಿಗೆ ಬೀಗ ಹಾಕುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಹೀಗಾಗಿ ಯಡಿಯೂರಪ್ಪನವರ ಬಲ ಮತ್ತಷ್ಟುಹೆಚ್ಚಿದೆ. ಮಾತ್ರವಲ್ಲ, ಮುಖ್ಯಮಂತ್ರಿ ಕುರ್ಚಿಗೆ ಯಾವುದೇ ಅಪಾಯ ಇಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನೆಯಾದಂತಾಗಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರ, ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕುರಿತು ಅನಗತ್ಯವಾಗಿ ಯಾರೂ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ. ಒಂದು ವೇಳೆ ಪಕ್ಷಕ್ಕೆ ವಿರುದ್ಧವಾಗಿ ಬಹಿರಂಗ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಲ್ಲದೇ, ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ಬೆಳಗಾವಿಯಲ್ಲಿನ ಕೋರ್‌ ಕಮಿಟಿ ಸಭೆ ಮತ್ತು ಕಾರ್ಯಕಾರಿಣಿ ಸಭೆಯಲ್ಲಿನ ಬೆಳವಣಿಗೆಗಳು ಸಿಎಂ ಯಡಿಯೂರಪ್ಪ ಅವರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿವೆ. ಸಿಎಂ ಯಡಿಯೂರಪ್ಪ ಅವರು ಬೆಳಗ್ಗೆಯಿಂದಲೂ ಲವಲವಿಕೆಯಿಂದ ಓಡಾಡಿರುವುದು ಕಂಡುಬಂದಿತು.

ನಗರದ ಗಾಂಧಿ ಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಚಿವರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ, ಆರ್‌.ಅಶೋಕ್‌ ಮೊದಲಾದವರು ಉಪಸ್ಥಿತರಿದ್ದರು.