ಶಿವಮೊಗ್ಗ, (ಜ.03): ಮಾಜಿ ಸಚಿವ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‍ ಅವರು ಪಕ್ಷದ ಶಿಸ್ತು ಉಲ್ಲಂಘಿಸಿ ನಾಯಕತ್ವದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿರುವ ನಾಯಕರುಗಳಿಗೆ ಮುಜುಗರ ಉಂಟಾಗಿದೆ. ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು (ಭಾನುವಾರ) ಬಿಜೆಪಿ ವಿಶೇಷ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳು ಬಸನಗೌಡ ಪಾಟೀಲ್ ಯತ್ನಾಳ್‌ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರುಣ್ ಸಿಂಗ್, ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚಿಸಲು ಹೂ ಈಸ್ ಯತ್ನಾಳ್ ಎಂದು ಪ್ರಶ್ನಿಸಿದರು.

ಬಿಎಸ್‌ವೈ ವಿರುದ್ಧ ಮತ್ತೆ ಸಿಡಿದೆದ್ದ ಯತ್ನಾಳ್: ಹೈಕಮಾಂಡ್‌ಗೆ ದೂರು ನೀಡಲು ಸಿದ್ಧ

ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಆದರೂ, ಮಾಧ್ಯಮಗಳಲ್ಲಿ ಇದೇ ವಿಷಯ ಚರ್ಚೆಯಾಗುತ್ತಿದೆ. ಇಂತಹ ವಿಷಯಗಳ ಕುರಿತು ಬೀದಿಗಳಲ್ಲಿ ಮಾತನಾಡಲು ಯತ್ನಾಳ್ ಯಾರು? ಎಲ್ಲರೂ ಅವರ ಪರಿಮಿತಿಯಲ್ಲೇ ಕೆಲಸ ಮಾಡಬೇಕು. ಸಮಸ್ಯೆ, ಅಸಮಾಧಾನವಿದ್ದರೆ ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬೇಕು ಎಂದು ಖಡಕ್ ಆಗಿ ಹೇಳಿದರು.

ಕಳೆದ ಅಕ್ಟೋಬರ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಚ್ಚು ದಿನ ಅಕಾರದಲ್ಲಿ ಉಳಿಯುವುದಿಲ್ಲ, ಅವರಿಗೆ ಕೇಂದ್ರ ನಾಯಕರು ಗಡುವು ನೀಡಿದ್ದಾರೆ ಎಂದು ಯತ್ನಾಳ್ ಹೇಳಿಕೆ ನಿಡಿದ್ದರು. ಡಿಸೆಂಬರ್ ನಲ್ಲಿ ಮತ್ತೆ ಯತ್ನಾಳ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದರು.

ಜನವರಿ 14 ರಂದು ಬರುವ ಸಂಕ್ರಾಂತಿ ಹಬ್ಬಕ್ಕೂ ಮೊದಲು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೊಬ್ಬರನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ಇತ್ತೀಚಿನ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.