ವಿಜಯಪುರ, (ಡಿ.31):  ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ವಿಭಾಗ ಮಟ್ಟದ ಶಾಸಕರ ಸಭೆ ಕರೆಯುವ ಬದಲು 117 ಶಾಸಕರ ಶಾಸಕಾಂಗ ಸಭೆ ಕರೆಯಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

ಗುರುವಾರ ನಗರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಷ್ಟ್ರಾಧ್ಯಕ್ಷರು ಮಾತ್ರವಲ್ಲ ಅನುಮತಿ ನೀಡಿದರೆ ಕೇಂದ್ರದ ವರಿಷ್ಠರಿಗೂ ಹೇಳಲು ಸಿದ್ಧನಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡಿದರು.

ನಾಯಕತ್ವದ ಬದಲಾವಣೆಗೆ ಸಿಎಂ ಮಹತ್ವದ ಪ್ರತಿಕ್ರಿಯೆ..!

ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಪಕ್ಷದ ಶಾಸಕರಿಗೆ ಪ್ರವೇಶವಿಲ್ಲ. ನಾವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲ ಅವರ ಸಿಬ್ಬಂದಿ ಸಾಹೇಬರು ವಿಶ್ರಾಂತಿಯಲ್ಲಿದ್ದಾರೆ ಎನ್ನುತ್ತಾರೆ. ಹೀಗಾಗಿ ಕಳೆದ ಆರು ತಿಂಗಳಿಂದ ಅವರ ಗೃಹ ಕಛೇರಿಯತ್ತ ಹೆಜ್ಜೆ ಹಾಕಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷದ ವಿಭಾಗೀಯ ಶಾಸಕರ ಸಭೆಯಲ್ಲಿ ಆರೇಳು ಶಾಸಕರಿರುವ ಕಾರಣ ಶಾಸಕರು ಮಾತನಾಡಲು ಹೆದರುತ್ತಾರೆ. ಪಕ್ಷದ ಪೂರ್ಣ ಪ್ರಮಾಣದ ಶಾಸಕರು ಪಾಲ್ಗೊಳ್ಳುವ ಶಾಸಕಾಂಗ ಸಭೆ ಕರೆದಲ್ಲಿ ಶಾಸಕರು ಮುಕ್ತವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡೆಸಲು ಸಾಧ್ಯವಾಗುತ್ತದೆ. ಎಲ್ಲ ಶಾಸಕರು ಧೈರ್ಯದಿಂದ ಮಾತನಾಡಲು ಸಾಧ್ಯ ಎಂದರು.

ಶಾಸಕಾಂಗ ಸಭೆ ಕರೆಯಲು ಆಗ್ರಹ
 ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಈಗಾಗಲೇ ಪತ್ರ ಬರೆದಿದ್ದೇನೆ. ವಿಭಾಗ ಮಟ್ಟದ ಸಭೆ ಕರೆದರೆ 7-8 ಶಾಸಕರು ಮಾತ್ರ ಇರುತ್ತಾರೆ. ಮಾತನಾಡಲು ಭಯ ಪಡುತ್ತಾರೆ. ಆದರೆ ಶಾಸಕಾಂಗ ಪಕ್ಷದ ಸಭೆ ಕರೆದರೆ 117 ಶಾಸಕರು ಇರುತ್ತಾರೆ. ಸಮಸ್ಯೆ ಹೇಳಿಕೊಳ್ಳಲು ಧೈರ್ಯ ಬರುತ್ತದೆ. ಹಾಗಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲಿ ಎಂದು ಆಗ್ರಹಿಸಿದರು.