ಬಳ್ಳಾರಿ, (ಜೂನ್, 15): ಹೂವಿನಹಡಗಲಿ ಶಾಸಕ‌ ಪಿ.ಟಿ.ಪರಮೇಶ್ವರ ನಾಯ್ಕ ಅವರ ಪುತ್ರನ ಮದುವೆಯಲ್ಲಿ ಕೋವಿಡ್ ಎಸ್ಒಪಿ ನಿಯಮಗಳ ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಜಿ ಸಚಿವ ಪರಮೇಶ್ವರ ನಾಯ್ಕ್ ಮತ್ತು ಅವರ ಪುತ್ರನ ವಿರುದ್ಧ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. 

ಪುತ್ರ ಭರತ್ ಮೊದಲನೇ ಆರೋಪಿ, ತಂದೆ ಪರಮೇಶ್ವರ್ ನಾಯ್ಕ್ ಎರಡನೇ ಆರೋಪಿಯಾಗಿದ್ದಾರೆ. ಹರಪನಹಳ್ಳಿ ತಹಶೀಲ್ದಾರ್ ನಾಗವೇಣಿ ಅವರ ದೂರಿನ ಮೇರೆಗೆ ಕೇಸ್ ದಾಖಲಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೋನಾ: ಮನೆಯಿಂದ ಹೊರ ಬರಲು ಜನರ ಹಿಂದೇಟು

ಲಕ್ಷ್ಮಿಪುರದಲ್ಲಿ ಪರಮೇಶ್ವರ್ ನಾಯ್ಕ್ ಅವರ ಪುತ್ರನ ಮದುವೆ ಸಮಾರಂಭ ನೆರವೇರಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ನಾಯಕರು, ಸಾವಿರಾರು ಮಂದಿ ಭಾಗಿಯಾಗಿದ್ದರು.

ಮದುವೆಯಲ್ಲಿ 50 ಕ್ಕಿಂತ ಹೆಚ್ಚು ಮಂದಿ ಸೇರಬಾರದೆಂಬ ನಿಯಮವಿದ್ದರೂ, ಸಾವಿರಾರು ಮಂದಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್ ನಾಯ್ಕ್, ಕಡಿಮೆ ಸಂಖ್ಯೆಯಲ್ಲಿ ಜನ ಬರುವಂತೆ ಮನವಿ ಮಾಡಿದ್ದರೂ ಭಾರೀ ಸಂಖ್ಯೆಯಲ್ಲಿ ಬಂದಿದ್ದರಿಂದ ಸಣ್ಣ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.