ಬಳ್ಳಾರಿ(ಜೂ.15): ಕೊರೋನಾ ವೈರಸ್‌ ಪ್ರಕರಣಗಳು ಏರಿಕೆಯಾಗುತ್ತಿರುವುದು ನಗರ ಸೇರಿದಂತೆ ಜಿಲ್ಲೆಯ ಜನರಲ್ಲಿ ಭೀತಿ ಹೆಚ್ಚಿಸಿದ್ದು ಸಾರ್ವಜನಿಕರು ಹೊರಗಡೆ ಬರಲು ಹಿಂದೇಟು ಹಾಕುವಂತಾಗಿದೆ.

ಜಿಂದಾಲ್‌ನಲ್ಲಿ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿರುವುದು ಜನರು ಆತಂಕಗೊಳ್ಳುವಂತೆ ಮಾಡಿದೆ. ವ್ಯಾಪಾರ-ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವ್ಯಾಪಾರ ವಲಯ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿರುವಾಗಲೇ ವೈರಸ್‌ ದಾಳಿಯ ಭೀತಿ ಜನರು ಹೊರಗಡೆ ಹೆಚ್ಚು ಓಡಾಡದಂತೆ ಮಾಡಿದ್ದು, ವಾರಾಂತ್ಯದಲ್ಲಿ ಹೆಚ್ಚು ಚುರುಕುಗೊಳ್ಳಬೇಕಿದ್ದ ವಿವಿಧ ವ್ಯಾಪಾರ, ಉದ್ಯಮಗಳ ವಹಿವಾಟಿಗೆ ಪೆಟ್ಟು ಬಿದ್ದಿದೆ.

ದೇವರ ದರ್ಶನಕ್ಕೆ ಜನರಿಲ್ಲ:

ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ವರೆಗೆ ದೇವಸ್ಥಾನಗಳಲ್ಲಿ ಭಕ್ತರು ನಿರೀಕ್ಷಿಸಿದಷ್ಟುಆಗಮಿಸಿಲ್ಲ. ಇದಕ್ಕೆ ಜನರಲ್ಲಿರುವ ಭೀತಿಯೇ ಕಾರಣ ಎನ್ನುತ್ತಾರೆ ಅರ್ಚಕರು. ದೇವಾಲಯಗಳಿಗೆ ಬರುವವರಿಗೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರಕ್ಕೆ ಮಾರ್ಕ್ಗಳನ್ನು ಹಾಕಲಾಗಿದೆ. ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ದೇವಸ್ಥಾನ ಪ್ರವೇಶ ಮುನ್ನ ಕೈಗೆ ಸ್ಯಾನಿಟೈಜರ್‌ ಸಿಂಪಡಿಸಲಾಗುತ್ತಿದೆ. ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇಷ್ಟಾಗಿಯೂ ಭಕ್ತರು ದೇವಾಲಯಗಳತ್ತ ಮುಖವೊಡ್ಡುತ್ತಿಲ್ಲ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬಳ್ಳಾರಿ: ಜಿಂದಾಲ್‌ ಕಾರ್ಖಾನೆಯಲ್ಲಿ 103ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ

ಬಿಕೋ ಎನ್ನುತ್ತಿವೆ ಹೋಟೆಲ್‌:

ವಾರಾಂತ್ಯದಲ್ಲಿ ಹೋಟೆಲ್‌ಗಳಿಗೆ ಸುಗ್ಗಿ. ಬಹುತೇಕರು ಶನಿವಾರ ಹಾಗೂ ಭಾನುವಾರ ಮನೆಯಿಂದ ಹೊರ ಬಿದ್ದು ಹೋಟೆಲ್‌ಗಳ ವಿವಿಧ ಬಗೆಯ ಖಾದ್ಯಗಳನ್ನು ಸವಿಯುತ್ತಾರೆ. ಕುಟುಂಬ ಸಮೇತರಾಗಿ ಆಗಮಿಸಿ ಸಂಭ್ರಮಿಸುತ್ತಾರೆ. ಅದರಲ್ಲೂ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಗ್ರಾಹಕರು ಹೋಟೆಲ್‌ಗಳು ಜಮಾಯಿಸುವುದು ರೂಢಿ. ಆದರೆ, ಕೊರೋನಾ ವೈರಸ್‌ ಭೀತಿಯಿಂದ ಹೋಟೆಲ್‌ಗಳಿಗೆ ಬರಲು ಸಹ ಗ್ರಾಹಕರು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಹೋಟೆಲ್‌ ಮಾಲೀಕರು ಗ್ರಾಹಕರ ಸುರಕ್ಷತೆಗಾಗಿ ಎಲ್ಲ ಬಗೆಯ ಸುರಕ್ಷತೆಯ ಕ್ರಮಗಳನ್ನು ಕೈಗೊಂಡಿದ್ದರೂ ಹೋಟೆಲ್‌ಗಳತ್ತ ಸುಳಿಯುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ನಗರದ ಪ್ರಮುಖ ಹೋಟೆಲ್‌ಗಳಾದ ಪೋಲಾ ಪ್ಯಾರಡೈಸ್‌, ಬಾಲಾ, ಮಯೂರ, ನಕ್ಷತ್ರ, ಹೊಯ್ಸಳ ಮತ್ತಿತರ ಕಡೆ ಗ್ರಾಹಕರ ಸಂಖ್ಯೆ ತೀರಾ ಇಳಿಕೆ ಕಂಡಿದೆ.

ಜನನಿಬಿಡ ರಸ್ತೆಗಳಲ್ಲಿಲ್ಲ ಜನ:

ನಗರದಲ್ಲಿ ಸದಾ ಗಿಜಿಗುಡುತ್ತಿದ್ದ ಪ್ರಮುಖ ರಸ್ತೆಗಳು ಬಣಗುಟ್ಟುತ್ತಿವೆ. ಬಳ್ಳಾರಿಯಲ್ಲಿ ಭಾನುವಾರ ಜನರ ಓಡಾಟ ಮೊದಲಿನಿಂದಲೂ ಕಡಿಮೆಯೇ ಇರುತ್ತದೆ. ಆದರೆ, ಶನಿವಾರ ಮಾತ್ರ ಹೆಚ್ಚಿನ ಜನರ ಓಡಾಟ ಇದ್ದೇ ಇರುತ್ತಿತ್ತು. ಭಾನುವಾರ ಹೋಟೆಲ್‌ಗಳು ಭರ್ತಿಯಾಗಿರುತ್ತಿದ್ದವು. ಆದರೆ, ಈ ವಾರಾಂತ್ಯದ ಎರಡು ದಿನಗಳೂ ಜನರಿಲ್ಲದೆ ರಸ್ತೆಗಳು ಬಣಗುಟ್ಟಿದವು. ಇಲ್ಲಿನ ಬೆಂಗಳೂರು ರಸ್ತೆ, ಬ್ರಾಹ್ಮಣರಸ್ತೆ, ಕಾಳಮ್ಮ ಬೀದಿ, ಗ್ರಹಂ ರಸ್ತೆ, ಟ್ಯಾಂಕ್‌ಬಂಡ್‌ ರೋಡ್‌, ಕೆಸಿ ರಸ್ತೆಗಳು ಜನರ ಓಡಾಟವಿಲ್ಲದೆ ಮೌನ ಹೊದ್ದಿದ್ದವು.

ಮಾಸ್ಕ್‌ ಜಾಗೃತಿ ಮೂಡಿದೆ:

ವೈರಸ್‌ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಇಲ್ಲದೆ ಓಡಾಡುವವರ ಸಂಖ್ಯೆ ವಿರಳ. ಪ್ರತಿಯೊಬ್ಬರು ಮಾಸ್ಕ್‌ ಧರಿಸಿಕೊಂಡೆ ಹೊರಗಡೆ ಬರುವ ಪದ್ಧತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಬ್ಯಾಂಕ್‌, ಎಟಿಎಂ, ಬೇಕರಿ ಇತರ ಅಂಗಡಿ ಮಳಿಗೆಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಮಾಸ್ಕ್‌ ಧರಿಸದವರಿಗೆ ಹೋಟೆಲ್‌, ಬೇಕರಿಗಳಿಗೆ ತಿಂಡಿ-ತಿನಿಸುಗಳನ್ನು ನೀಡಲು ನಿರಾಕರಿಸುತ್ತಿರುವುದು ಕಂಡು ಬರುತ್ತಿದೆ.

ಕೊರೋನಾ ಭೀತಿಯಿಂದಾಗಿ ಕುಟುಂಬ ಸದಸ್ಯರು, ಅದರಲ್ಲೂ ವೃದ್ಧರು ಹಾಗೂ ಮಕ್ಕಳನ್ನು ಕರೆದುಕೊಂಡು ಹೊರಗಡೆ ಬರುವವರು ತೀರಾ ಅಪರೂಪವಾಗುತ್ತಿದ್ದಾರೆ. ಸೋಂಕು ಹರಡುವ ಭೀತಿ ಜನರನ್ನು ಮನೆಯಿಂದ ಹೊರಗಡೆ ಬರದಂತೆ ಮಾಡಿದ್ದು, ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಬಸ್‌ಗಳು ಬಿಟ್ಟರೂ ಪ್ರಯಾಣಿಕರು ಇಲ್ಲ

ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ಓಡಾಟ ಶುರು ಮಾಡಿದ್ದರೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ನಿರೀಕ್ಷೆಯಷ್ಟುಜನರು ಬರುತ್ತಿಲ್ಲ ಎಂಬ ಗೊಣಗಾಟ ಶುರುವಾಗಿದೆ. ವೈರಸ್‌ ಭೀತಿಯಿಂದ ಶುಭ ಕಾರ್ಯಗಳಿಂದ ದೂರ ಉಳಿದಿರುವ ಜನರು ಮನೆಯಲ್ಲಿರುವುದೇ ಸುರಕ್ಷಿತ ಎಂದುಕೊಂಡಿದ್ದಾರೆ. ಇನ್ನು ಸುರಕ್ಷತೆ ದೃಷ್ಟಿಯಿಂದ ದ್ವಿಚಕ್ರ ವಾಹನಗಳಲ್ಲಿ ಓಡಾಟ ನಡೆಸಿದ್ದಾರೆ.

ಮತ್ತೆ 17 ಜನರಿಗೆ ಕೊರೋನಾ ಸೋಂಕು

ಜಿಲ್ಲೆಯಲ್ಲಿ ಭಾನುವಾರ 17 ಜನರಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. ಈ ಪೈಕಿ ಮೂವರು ಜಿಂದಾಲ್‌ ನೌಕರರಾಗಿದ್ದು, ಇದರಿಂದ ಜಿಂದಾಲ್‌ನ ಸೋಂಕಿತರ ಸಂಖ್ಯೆ 106ಕ್ಕೇರಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ 39 ವರ್ಷದ ಪುರುಷ, ಬಳ್ಳಾರಿ ನಗರದ 66 ವರ್ಷದ ಮಹಿಳೆ, 34 ವರ್ಷದ ಪುರುಷ, 5 ವರ್ಷದ ಬಾಲಕಿ, ಸಂಡೂರಿನ 55, 46, 43, 30, 28 ಹಾಗೂ 43 ವರ್ಷದ ಪುರುಷರಿಗೆ ಸೋಂಕು ತಗುಲಿದೆ. ಹೊಸಪೇಟೆಯ 32 ವರ್ಷದ ಪುರುಷ, 28 ವರ್ಷದ ಇಬ್ಬರು ಯುವತಿಯರು, 56 ವರ್ಷದ ವೃದ್ಧೆ, 16 ವರ್ಷದ ಬಾಲಕಿ ಹಾಗೂ 51 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಕೂಡ್ಲಿಗಿಯ ಓರ್ವ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

ಜಿಂದಾಲ್‌ನ ಮೂವರು ನೌಕರರಿಗೆ ಕಾಣಿಸಿಕೊಂಡಿರುವ ವೈರಸ್‌ ಮೊದಲ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರಾಗಿದ್ದಾರೆ. ಈ ಮೂವರು ಐಟಿಪಿಎಸ್‌, ಆರ್‌ಎಂಎಸ್‌ ಲಾಜಿಸ್ಟಿಕ್ಸ್‌, ಸಿಎನ್‌ಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೂಡ್ಲಿಗಿಯ ಪ್ರಕರಣ, ತಮಿಳುನಾಡಿನಿಂದ ಹಿಂತಿರುಗಿದ ಬಂದ ಬಳಿಕ ಕಾಣಿಸಿಕೊಂಡ ಸೋಂಕಿನ ಲಕ್ಷಣಗಳಿಂದ ತಪಾಸಣೆ ನಡೆಸಿ, ಗಂಟಲುದ್ರವ ಪರೀಕ್ಷೆ ಮಾಡಿದ ಬಳಿಕ ವೈರಾಣು ಇರುವುದು ಖಚಿತವಾಗಿದೆ. ಸೋಂಕಿತ 17 ಜನರಲ್ಲಿ ಐವರು ಮಾತ್ರ ಜಿಲ್ಲಾ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಜಿಂದಾಲ್‌ನ ಸಂಜೀವಿನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

196ಕ್ಕೇರಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕು ಇರುವವರ ಸಂಖ್ಯೆ 196ಕ್ಕೇರಿದೆ. ಈ ಪೈಕಿ 55 ಜನರು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಉಳಿದ 140 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ 269 ಜನರಿಗೆ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಇನ್ನು 286 ಜನರ ವೈದ್ಯಕೀಯ ವರದಿ ಬರಬೇಕಾಗಿದೆ. 761 ಜನ್ನರು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.