ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 8.60 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ‘ಪ್ರಜಾ ಸೌಧ’ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೂಮಿ ಪೂಜೆ ನೆರವೇರಿಸಿದರು.
ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.08): ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 8.60 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ‘ಪ್ರಜಾ ಸೌಧ’ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಸರ್ಕಾರ 63 ಹೊಸ ತಾಲ್ಲೂಕುಗಳನ್ನು ಪ್ರಕಟಿಸಿತ್ತು.
ಅದರಲ್ಲಿ ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳಾಗಿ ಸೇರ್ಪಡೆಗೊಂಡಿದ್ದವು. ಆ ಸಂದರ್ಭದಲ್ಲಿ 14 ಹೊಸ ತಾಲ್ಲೂಕುಗಳಲ್ಲಿ ಮಾತ್ರ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 2 ವರ್ಷದಲ್ಲಿ 49 ಹೊಸ ತಾಲ್ಲೂಕುಗಳಲ್ಲಿ ಪ್ರಜಾಸೌಧ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿ ಆದೇಶಿಸಿದೆ ಎಂದರು.
ಹೊಸ ತಾಲ್ಲೂಕುಗಳಲ್ಲಿ ಪ್ರತೀ ಪ್ರಜಾಸೌಧ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಸರ್ಕಾರ ತಲಾ 8.60 ಕೋಟಿ ರೂ.ವನ್ನು ಬಿಡುಗಡೆ ಮಾಡಿದ್ದು, ಎಲ್ಲೆಡೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಿದೆ. ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ಹೇಳಿದರು. ಪೊನ್ನಂಪೇಟೆ ನೂತನ ತಾಲ್ಲೂಕು ರಚನೆಯಾಗಿ ಆರು ವರ್ಷ ಕಳೆದಿದೆ. ಬಹಳ ಹಿಂದೆಯೇ ತಾಲ್ಲೂಕು ಆಡಳಿತ ಕಚೇರಿ ನಿರ್ಮಾಣ ಆಗಬೇಕಿತ್ತು.
ಪ್ರಯತ್ನದಿಂದ ಅಭಿವೃದ್ಧಿ ಕೆಲಸ
ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದರು. ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ತಾಲ್ಲೂಕು ದಂಡಾಧಿಕಾರಿಯವರು ಕರ್ತವ್ಯ ನಿರ್ವಹಿಸುವ ಕಚೇರಿ ಸಾರ್ವಜನಿಕರ ಕಚೇರಿಯಾಗಿದ್ದು, ಅಂತಹ ಸರ್ಕಾರಿ ಕಚೇರಿಗೆ ಸಾರ್ವಜನಿಕರು ಹೋಗಬೇಕು ಎಂಬ ಭಾವನೆ ಜನರಲ್ಲಿ ಇರಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸುಸಜ್ಜಿತ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಮುಂದಾಗಿದೆ ಎಂದರು. ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ನಿರಂತರ ಒತ್ತಡ ಮತ್ತು ಪ್ರಯತ್ನದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
