ರಾಜಕೀಯ ಒತ್ತಡದಿಂದ ಮಾಣಿಪ್ಪಾಡಿ ಯೂಟರ್ನ್: ಕಾಂಗ್ರೆಸ್ ನಾಯಕರ ಆರೋಪ
ಬಿಜೆಪಿಯವರು ವಕ್ಫ್ ಆಸ್ತಿ ಕಬಳಿಕೆ ಮರೆಮಾಚಲು ಆಯೋಗದ ಮಾಜಿ ಅಧ್ಯಕ್ಷರನ್ನು ಕರೆತಂದು ಹೀಗೆ ಮಾತನಾಡಿಸುತ್ತಿದ್ದಾರೆ. ಮರು ಹೇಳಿಕೆ ಕೊಡಿಸುತ್ತಿದ್ದಾರೆ. ಆಮಿಷದ ಘಟನೆ ನಡೆದಿರುವುದು ಸತ್ಯ. ಅವರು ಮಾತನಾಡಿರುವುದೂ ಸತ್ಯ. ಬೇಕಿದ್ದರೆ ಧ್ವನಿ ಪರೀಕ್ಷೆ ಮಾಡಿ ಎಂದು ಸವಾಲು ಹಾಕಿದ ಕಾಂಗ್ರೆಸ್ ನಾಯಕರು
ಸುವರ್ಣಸೌಧ(ಡಿ.17): ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ವರದಿ ಸಂಬಂಧ ಆಮಿಷದ ಹೇಳಿಕೆ ನೀಡಿದ್ದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಈಗ ರಾಜಕಿಯ ಒತ್ತಡ, ಬಿಜೆಪಿಗರ ಧಮ್ಕಿಯಿಂದ ಉಲ್ಟಾ ಹೇಳಿಕೆ ನೀಡುತ್ತಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗದಗದಲ್ಲಿ ಸಿಎಂ ವಕ್ಫ್ ಆಮಿಷದ ಬಗ್ಗೆ ಅವರ ಅಭಿಪ್ರಾಯ ತಿಳಿಸಿದ್ದಾರೆ. ಮಾಣಿಪ್ಪಾಡಿ ಅವರ ಬಾಯಿಯಲ್ಲಿ ಅನೇಕ ವಿಚಾರಗಳು ಬಂದಿವೆ. ಅದನ್ನೇ ಸಿಎಂ ಉಲ್ಲೇಖಿಸಿದ್ದಾರೆ. ಆಯೋಗದ ಮಾಜಿ ಅಧ್ಯಕ್ಷರೇ ಪ್ರಧಾನಿ ಮತ್ತು ಗೃಹ ಸಚವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ. ಆ ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ಹೀಗಾಗಿ ನಾವು ದಾಖಲೆ ಬಿಡುಗಡೆ ಮಾಡುವ ಮುನ್ನ ಅವರೇ ಬಿಡುಗಡೆ ಮಾಡಲಿ ಎಂದರು.
ವಿಜಯೇಂದ್ರ 150 ಕೋಟಿ ಆಫರ್ ಮಾಡಿಲ್ಲ: ಸಿಟ್ಟಿನಿಂದ ನಾನಂದು ಆ ರೀತಿ ಹೇಳಿಕೆ ಕೊಟ್ಟಿದ್ದೆ: ಮಾಣಿಪ್ಪಾಡಿ ಯೂಟರ್ನ್
ಆಮಿಷ ಸತ್ಯ:
ಬಿಜೆಪಿಯವರು ವಕ್ಫ್ ಆಸ್ತಿ ಕಬಳಿಕೆ ಮರೆಮಾಚಲು ಆಯೋಗದ ಮಾಜಿ ಅಧ್ಯಕ್ಷರನ್ನು ಕರೆತಂದು ಹೀಗೆ ಮಾತನಾಡಿಸುತ್ತಿದ್ದಾರೆ. ಮರು ಹೇಳಿಕೆ ಕೊಡಿಸುತ್ತಿದ್ದಾರೆ. ಆಮಿಷದ ಘಟನೆ ನಡೆದಿರುವುದು ಸತ್ಯ. ಅವರು ಮಾತನಾಡಿರುವುದೂ ಸತ್ಯ. ಬೇಕಿದ್ದರೆ ಧ್ವನಿ ಪರೀಕ್ಷೆ ಮಾಡಿ ಎಂದು ಸವಾಲು ಹಾಕಿದರು.
ಧಮ್ಕಿ ಹಾಕಿ ಉಲ್ಪಾ ಹೇಳಿಕೆ-ಪರಂ:
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಮಾಣಿಪ್ಪಾಡಿ ಅವರ 150 ಕೋಟಿ ರು. ಆಮಿಷದ ಹೇಳಿಕೆ ವಿಡಿಯೋ ಯಾರೋ ಸೃಷ್ಟಿಸಿದ್ದಲ್ಲ. ಮಾಣಿಪ್ಪಾಡಿ ಅವರೇ ಹೇಳಿದ್ದಾರೆ. ಈಗ ಬಿಜೆಪಿಗರು ಅವರ ಮೇಲೆ ಧಮ್ಕಿ ಹಾಕಿಸಿ ಉಲ್ಟಾ ಹೇಳಿಸುತ್ತಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಸಂಬಂಧ ಸಿಬಿಐ ತನಿಖೆಗೆ ಕೊಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಗ್ಗೆ ಚರ್ಚಿಸುತ್ತೇವೆ. ಸಿಬಿಐ ತನಿಖೆ ಅಗತ್ಯವಿದ್ದಲ್ಲಿ ಆ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
2-3 ನಿಲುವು-ಎಚ್‌ಕೆಪಿ:
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಅನ್ವರ್ ಮಾಣಿಪ್ಪಾಡಿ ಎರಡ್ಮೂರು ನಿಲುವು ತೆಗೆದುಕೊಂಡಿದ್ದಾರೆ. ಮೊದಲು ಬಿಜೆಪಿಗರ ಮೇಲೆ ಆರೋಪ ಮಾಡಿ ಈಗ ಬೇರೆ ರೀತಿ ಮಾತನಾಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅಥವಾ ಬೇಡವೂ ಎಂದು ಯೋಚಿಸುತ್ತಿದ್ದೇವೆ ಎಂದು ಹೇಳಿದರು.
ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಕಣ್ಣೆದುರೇ ಎಲ್ಲವೂ ಇರುವಾಗ ನಾವು ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಹೀಗಾಗಿ ಅವರು ಸಿಬಿಐ ಹೆಸರು ಹೇಳುತ್ತಿದ್ದಾರೆ. ಈ ಅಕ್ರಮದ ತನಿಖೆಯನ್ನು ತಾವೇ ನಡೆಸುವುದಾಗಿ ಸಿಬಿಐ ನಮಗೆ ಪತ್ರ ಬರೆಯಲಿ. ನಂತರ ನಾವು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸದನದ ಒಳಗೆ- ಹೊರಗೆ ಕಾಂಗ್ರೆಸ್- ಬಿಜೆಪಿ ವಾಗ್ಯುದ್ಧ: 150 ಕೋಟಿ ಜಟಾಪಟಿ
ಅನ್ವರ್ ಮಾಣಿಪ್ಪಾಡಿ ಅವರು ಸ್ಪೈ ಕ್ಯಾಮೆರಾ ಬಳಸಿಕೊಂಡು ಆಫರ್ ಮಾಡಲು ಬಂದಿದ್ದರು ಎಂದು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ, ಯಾರು ಆಫರ್ ಮಾಡಲು ಬಂದಿದ್ದರು ಎಂದು ಆಗಲೇ ಹೇಳಬೇಕಿತ್ತು. ಈಗ ಹೇಳಿದರೆ ಏನು ಸುಖ? ಅಧಿಕಾರದಲ್ಲಿ ಇಲ್ಲದಿರುವಾಗ ಏನು ಬೇಕಾದರೂ ಮಾತನಾಡಬಹುದು. ಅಧಿಕಾರದಲ್ಲಿದ್ದಾಗ ಏನು ಮಾತನಾಡುತ್ತೇವೆ ಎಂಬುದು ಮುಖ್ಯವಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.
ಈ ರೀತಿಯ ವಿಚಾರಗಳಲ್ಲಿ ಪರ-ವಿರೋಧದ ಟೀಕೆ-ಟಿಪ್ಪಣಿ ಸಾಮಾನ್ಯ. ಸರ್ಕಾರದ ಮಟ್ಟದಲ್ಲಿ ಯೋಚಿಸಿ ತೀರ್ಮಾನಿಸುತ್ತೇವೆ. ಸಿಬಿಐಗೆ ವಹಿಸಲು ಯಾವುದೇ ತಕರಾರು ಇಲ್ಲ. ಕಾಂಗ್ರೆಸಿಗರು ಸೇರಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗಬೇಕು ಎಂದು ಪ್ರಶ್ನೆಯೊಂದಕ್ಕೆ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.