Asianet Suvarna News Asianet Suvarna News

ಸಿದ್ದರಾಮಯ್ಯ ಲೈಮ್ ಲೈಟ್ ನಲ್ಲಿ ಇದ್ದಷ್ಟೂ, ಬಿಜೆಪಿಗೆ ಲಾಭ!?

'ನಾನು ಹಿಂದೂ ಅಲ್ವಾ? ನನ್ನ ಹೆಸರೇನು ಹೇಳಿ?' 'ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದಾ?' ಎಂಬಂಥ ಉಡಾಫೆ ಹೇಳಿಕೆ ನೀಡುವ ಮಾಜಿ ಸಿಎಂ ಸಿದ್ದರಾಮಯ್ಯ, ಜೊತೆಗೆ ಸುಖಾ ಸುಮ್ಮನೆ RSS ಅನ್ನೂ ಎಳೆದು ತರುತ್ತಾರೆ. ತಮ್ಮ ಪಕ್ಷದ ಮುಖಂಡನ ಹೇಳಿಕೆಯನ್ನು ಸಮರ್ಥಿಸುವ ಬದಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಪರೋಕ್ಷವಾಗಿ ವಿರೋಧಿಸುತ್ತಾರೆ. ಸಿಕ್ಕಿದ್ದೇ ಸೀರುಂಡೆ ಅಂತ ಬಿಜೆಪಿ ನಾಯಕರು ಒಬ್ಬರಾದ ನಂತರ, ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಹೇಳಿಕೆಗೆ ಪ್ರತಿಕ್ರಿಯೆ ತೋರಿಸಿ, ತಮ್ಮ ಹಿಂದೂ ಮತಗಳನ್ನು ಗಟ್ಟಿಗೊಳಿಸುತ್ತಾರೆ. 

Anti hindu statements of congress leader Siddaramaiah help BJP to make its base strong
Author
First Published Aug 25, 2022, 10:26 AM IST

ರವಿ ಶಿವರಾಮ್, ಸುವರ್ಣ ನ್ಯೂಸ್ ರಾಜಕೀಯ ವರದಿಗಾರ

ಸಿದ್ದರಾಮಯ್ಯ 'ನಾನೂ ಹಿಂದು ಅಲ್ಲವೇ?' ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಲೇ, ಹಿಂದುತ್ವದ ಬಗ್ಗೆ ಪ್ರಖರವಾಗಿ ವಿಮರ್ಶೆಗೆ ಇಳಿಯುತ್ತಾರೆ. ಆ ಸಂದರ್ಭದಲ್ಲಿ RSS ಹೆಸರನ್ನು ಅನಗತ್ಯವಾಗಿಯಾದರೂ ಉಲ್ಲೇಖಿಸಿ ಕಟು ಪದಗಳಲ್ಲಿ ಸಂಘದ ಮೇಲೆ ಅವರ ನಿಲುವುಗಳ ಮೇಲೆ ವಾಗ್ದಾಳಿ ನಡೆಸುತ್ತಾರೆ. ಹಾಗೆ ನೋಡಿದ್ರೆ ಸಿದ್ದರಾಮಯ್ಯ  ಎಷ್ಟು ಆ್ಯಕ್ಟಿವ್ ಹಿಂದುತ್ವ ಪ್ರಶ್ನೆ ಮಾಡ್ತಾರೋ ಆಗೆಲ್ಲಾ ಬಿಜೆಪಿ ಖುಷಿ ಪಡುತ್ತದೆ. ಸಿದ್ದರಾಮಯ್ಯ ನೀಡುವ ಒಂದು ಹೇಳಿಕೆಗೆ ಬಿಜೆಪಿ ಘಟಾನುಗಟಿ ನಾಯಕರು ಮುಗಿಬಿದ್ದು ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್ ಅಟ್ಯಾಕ್ ಮಾಡ್ತಾರೆ. ಕಾರಣ ಸಿದ್ದರಾಮಯ್ಯ ಎಷ್ಟು ಬಾರಿ ಹಿಂದು ವಿಚಾರಧಾರೆ, ಹಿಂದುತ್ವ‌ದ ಬಗ್ಗೆ ನೆಗೆಟಿವ್ ಕಮೆಂಟ್ ಮಾಡ್ತಾರೊ ಆಗೆಲ್ಲಾ ಹಿಂದು ವೋಟ್ ಬ್ಯಾಂಕ್  ಬೇರು ಗಟ್ಟಿ ಆಗುತ್ತದೆ ಎಂದು ಬಿಜೆಪಿ ನಾಯಕರು ಬಲವಾಗಿ ನಂಬುವ ವಾತಾವರಣ ಸೃಷ್ಟಿಯಾಗಿದೆ. ತಾವಾಗಿಯೆ ಮಾತಾಡುತ್ತಾ ಹೋಗುವ ಬದಲು, ಸಿದ್ದರಾಮಯ್ಯರೇ ಮಾತು ಆರಂಭಿಸಲಿ ಎಂದು ಹೊಂಚು ಹಾಕುತ್ತಾ ಕೂರುವ ಬಿಜೆಪಿಗರು, ಸಿದ್ದರಾಮಯ್ಯ ನೀಡುವ ಇಂತ ಪ್ರತಿ ಹೇಳಿಕೆಯನ್ನೂ ವಿವರವಾಗಿ ಜನರ ಮುಂದಿಡುತ್ತಿದೆ. ಅಲ್ಲಿಗೆ ಬಿಜೆಪಿ ಬಯಸುವ ಆಹಾರವನ್ನು ಸಿದ್ದರಾಮಯ್ಯನವರೇ ಬಿಜೆಪಿ ತಟ್ಟೆಗೆ ತಂದು ಬಡಿಸುತ್ತಿದ್ದಾರೆ..

ಸಾವರ್ಕರ್ ಫೋಟೊ ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕಬೇಕು ಎಂದ ಸಿದ್ದರಾಮಯ್ಯ!
ಸಾವರ್ಕರ್ ಈ ನೆಲದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎನ್ನೋದನ್ನು 14 ವರ್ಷ ಅವರು ಅನುಭವಿಸಿದ  ಕರಿನೀರಿನ ಶಿಕ್ಷೆಯೆ ಹೇಳುತ್ತದೆ. ಜೈಲಿನಿಂದ ಬಿಡುಗಡೆ ಆದ ಬಳಿಕವೂ ಸಾವರ್ಕರ್ ಅವರನ್ನು ಗೃಹ ಬಂಧನದಲ್ಲಿ ಯಾಕೆ ಇರಿಸಲಾಯಿತು, ಎನ್ನೋದನ್ನ ಪ್ರಶ್ನೆ ಮಾಡಿಕೊಂಡ್ರೆ, ಸಾವರ್ಕರ್ ಬ್ರಿಟಿಷರಿಗೆ ಯಾವ ಮಟ್ಟಿಗೆ ಸಿಂಹಸ್ವಪ್ನರಾಗಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಅಂತಹ ಸಾವರ್ಕರ್ ಅಂಚೆ ಚೀಟಿ ಹೊರಡಿಸಿದ ಇಂದಿರಾ ಗಾಂಧಿಯೆ ಸಾವರ್ಕರ್ ಅವರನ್ನು ಒಪ್ಪಿರುವಾಗ, ಸಿದ್ದರಾಮಯ್ಯ ಏಕಮುಖವಾಗಿ ಹಿಂದು, ಮುಂದು ನೋಡದೆ, ಮುಸ್ಲಿಂ ಏರಿಯಾಗಳಲ್ಲಿ ಯಾಕೆ ಸಾವರ್ಕರ್ ಫೋಟೊ ಹಾಕಬೇಕಿತ್ತು ಎನ್ನುವ ಮೂಲಕ ಸ್ವಾತಂತ್ರ್ಯ ಹೋರಾಟಗಾರನ ಬದುಕನ್ನೇ ತೀರಾ ಕೆಳಮಟ್ಟಕ್ಕೆ ಇಳಿಸಿಬಿಟ್ಟಿರು.! 

ಸಿದ್ದರಾಮಯ್ಯ ಅಷ್ಟು ಹೇಳಿದ್ರೆ ಕೇಳಬೇಕೆ, ಬಿಜೆಪಿಗರು ಸಿದ್ದರಾಮಯ್ಯ ಮೇಲೆ ತಿರುಗಿ ಬಿದ್ರು. ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೇಳ ಬೇಕಿರುವುದನ್ನ ಭಾರತದಲ್ಲಿ ಹೇಳಿದ್ದಾರೆ ಎಂದು ಕೆಲವು ಬಿಜೆಪಿ ಸಚಿವರು ಉಗ್ರ ಪ್ರತಿಕ್ರಿಯೆ ನೀಡಿದ್ರೆ, ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದೋ,  ಬಿಡುವುದೊ ಎನ್ನುವ ಗೊಂದಲಕ್ಕೆ ಬಿದ್ದ ಡಿಕೆ ಶಿವಕುಮಾರ್ ನೋ, ಕಮೆಂಟ್ ಅಂದು ಬಿಟ್ಟರು. ಅಲ್ಲಿಗೆ ಸಾವರ್ಕರ್ ವಿಚಾರದಲ್ಲಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪಕ್ಷದೊಳಗೆ ಸಹಮತ ವ್ಯಕ್ತವಾಗಲಿಲ್ಲ.

ರಾಜ್ಯಾಧ್ಯಕ್ಷರನ್ನು ಬದಲಾಯಿಸುವುದೇ ಆಗಿದ್ದರೆ ಕಟೀಲರನ್ನು ಜೊತೆಯಲ್ಲೇ ಕರೆದುಕೊಂಡು ಬರ್ತಿದ್ರಾ ಶಾ?

ಸಿದ್ದರಾಮಯ್ಯ ಈ ಮಾತನ್ನು ಅವರ ಬೆಂಬಲಿಗರೇ ಒಪ್ಪುತ್ತಾರೆಯೇ?
ಸಿದ್ದರಾಮಯ್ಯ ಬಿಜೆಪಿಯ ಒಲವು- ನಿಲುವುಗಳನ್ನು ಪ್ರಶ್ನೆ ಮಾಡಿದರೆ ಸರಿ. ಆದರೆ ಚೌಕಾಸಿ ಮಾಡಿ ಮಾತನಾಡುವ ರಾಜಕೀಯ ಗುಣವನ್ನೇ ಇತ್ತೀಚೆಗೆ ಮರೆತಂತಿರುವ ಸಿದ್ದರಾಮಯ್ಯ,  ನೇರವಾಗಿ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಆಡಿದ ಮಾತು, ನುಡಿದ ನುಡಿ ಕಾಂಗ್ರೆಸ್ ಪಕ್ಷಕ್ಕೆ ತುಟ್ಟಿ ಆಗುತ್ತಿದೆ.  ಸ್ವಾತಂತ್ರ್ಯ ವೀರಯೋಧರ ಅಭಿಮಾನಿಗಳನ್ನು ಹೃದಯದಲ್ಲಿಟ್ಟು ಪೂಜಿಸುವವರು, ಪ್ರೇಮಿಸುವವರು ಗೌರವಿಸುವವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಅಂತವರಿಗೆ ಸಿದ್ದರಾಮಯ್ಯ, ಸಾವರ್ಕರ್ ಬಗ್ಗೆ ನೀಡಿದ ಹೇಳಿಕೆ ಎಷ್ಟು ಜನ‌ ಸಹಿಸಿಕೊಂಡಾರು? ಹೇಳಿ ಕೇಳಿ ಸಿದ್ದರಾಮಯ್ಯನ ಎಲ್ಲಾ ಬೆಂಬಲಿಗರು ಅವರ ಈ ಮಾತನ್ನು ಒಪ್ಪುವ ಸಾಧ್ಯತೆ ತೀರಾ ಕಡಿಮೆ. ವೀರ ಸಂಗೊಳ್ಳಿ ರಾಯಣ್ಣನನ್ನು ತಮ್ಮ ಆತ್ಮದ ಬಲ‌ ಎಂದೇ ನಂಬಿರುವ ದೇಶಪ್ರೇಮಿಗಳು ಇರುವ ಜಾಗದಲ್ಲಿ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡಿದರೆ ಸಿದ್ದರಾಮಯ್ಯ ಬೆಂಬಲಿಗರು ಒಪ್ಪುತ್ತಾರೋ? 

ಸಿದ್ದರಾಮಯ್ಯ ತುಷ್ಟಿಕರಣ ನೀತಿ ಬಿಜೆಪಿಗೆ ಲಾಭ
ನನ್ನ ಹೆಸರು ಸಿದ್ದರಾಮಯ್ಯ. ನಾನು ಹಿಂದು ತಾನೆ? ಎಂದು ತಮ್ಮ ಭಾಷಣದಲ್ಲಿ ಏಷ್ಟೇ ಜೋರಾಗಿ ಹೇಳಿದರೂ, ಪ್ರತಿನಿತ್ಯ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದರೂ, ಆಗಾಗ ಅವರು ನಡೆದುಕೊಳ್ಳುವ ಅಥವಾ ಅವರ ಅಂತರಂಗದಲ್ಲಿ ಹೆಪ್ಪುಗಟ್ಟಿರುವ ನಿಲುವುಗಳು ಮಾತಿನ ರೂಪದಲ್ಲಿ ಹೊರಬರುತ್ತದೆ. ನನಗೆ ನಾಮ ಇಟ್ಟುಕೊಂಡವರ ಕಂಡರೆ ಭಯ ಎನ್ನುವ ಮಾತಿರಬಹುದು, ದೇವಸ್ಥಾನಕ್ಕೆ ಮಾಂಸ ತಿಂದು ಹೋದರೆ ತಪ್ಪೇನು ಎಂಬ ಹೇಳಿಕೆ ಇರಬಹುದು, ರಾಜ್ಯದಲ್ಲಿ ಹಿಜಾಬ್ ಗದ್ದಲ ಜೋರಾಗಿದ್ದಾಗಿನ ಸಮಯದಲ್ಲಿ ನಮಗೆ ಬೆಂಬಲ ನೀಡುವವರ (ಅಲ್ಪಸಂಖ್ಯಾತ) ಜೊತಗೆ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದು ಕೆಪಿಸಿಸಿ ಕಚೇರಿಯಲ್ಲಿ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಾಡಿದ ಭಾಷಣ ಇರಬಹುದು,  ಚಿಕ್ಕಮಗಳೂರು ದತ್ತಪೀಠದ ಗಲಾಟೆ ಸಮಯದಲ್ಲಿ ಪೂಜೆಗೆ ಹಿಂದು ಅರ್ಚಕರ ನೇಮಿಸಲು ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ, ಎನ್ನುವ ಆರೋಪವನ್ನು ಸಿಟಿ ರವಿಯಂತಹ ಬಿಜೆಪಿ ಹಿರಿಯ ನಾಯಕರು ಇಂದಿಗೂ ಜೀವಂತವಾಗಿ ಇಟ್ಟಿದ್ದಾರೆ ಎಂದರೆ ಅದಕ್ಕೆ ಕಾರಣ ಸಿದ್ದರಾಮಯ್ಯರ ನಡೆ, ನುಡಿ ಮತ್ತು ಅತಿ ಓಲೈಕೆಯೆ ರಾಜಕಾರಣವೇ ಕಾರಣ ಎಂಬುದು ಎದ್ದು ಕಾಣುತ್ತದೆ. ‌

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಣೆಗೆ ತಂದರು. ಇದಕ್ಕೆ ಬಿಜೆಪಿಗರ ವಿರೋಧ ಅಷ್ಟೇ ಇರಲಿಲ್ಲ, ಸ್ವತಃ ಕೊಡಗಿನ ಭಾಗದ ಕಾಂಗ್ರೆಸ್ ನ‌ ವೀಣಾ ಅಚ್ಚಯ್ಯ, ಅಂದು ಏಐಸಿಸಿ ವಕ್ತಾರರಾಗಿದ್ದ ಬ್ರಿಜೇಶ್ ಕಾಳಪ್ಪ ಸೇರಿ ಕೊಡಗು, ಮಂಗಳೂರು ಭಾಗದ ಬಹುತೇಕ ಜನರು ಒಕ್ಕೊರಲಿನಿಂದ ಸಿದ್ದರಾಮಯ್ಯ ತೀರ್ಮಾನವನ್ನು ವಿರೋಧಿಸಿದ್ದರು. ಆದರೂ ಹಠ ಬಿಡದ ಸಿದ್ದರಾಮಯ್ಯ ಜಯಂತಿ ಆಚರಣೆ ಮಾಡುವ ಮೂಲಕ ರಾಜ್ಯದಲ್ಲಿ ಅಶಾಂತಿ ವಾತವರಣ ಸೃಷ್ಟಿ ಆಗುವಂತ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ ಸಿದ್ದರಾಮಯ್ಯ ನಿಲುವು ತುಷ್ಟೀಕರಣದ ಭಾಗ ಎನ್ನೋದನ್ನು ಬಿಜೆಪಿಗರು ಇನ್ನೂ ಜೀವಂತವಾಗಿ ಇಟ್ಟಿದ್ದಾರೆ.

ಧರ್ಮ ಒಡೆವ ಪ್ರಯತ್ನದ ಬಗ್ಗೆ ಪಶ್ಚಾತ್ತಾಪ ಇಲ್ಲ
ಮೊನ್ನೆ ಸಿದ್ದರಾಮಯ್ಯನವರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮಿಜಿಗಳನ್ನು ಮೊದಲ ಬಾರಿ ಮಠಕ್ಕೆ ಹೋಗಿ ಭೇಟಿ ಮಾಡಿದ್ದರು. ಸ್ವಾಮಿಜಿಗಳ ಭೇಟಿಗೆ ಹೋಗಿದ್ದೇ ಒಂದು ದೊಡ್ಡ ಸುದ್ದಿ ಆದ್ರೆ, ಸ್ವಾಮಿಜಿ ಭೇಟಿ ಮಾಡಿ ಹೊರ ಬರುವ ಹೊತ್ತಿಗೆ ಇನ್ನೂ ದೊಡ್ಡ ಸುದ್ದಿಯೊಂದು ಹೊರಬಿದ್ದಿತ್ತು. ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದರ ತನ್ನ ಸರ್ಕಾರದ ನಿಲುವಿನ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಪ ತೋಡಿಕೊಂಡರು ಎಂದು ಸುದ್ದಿ ಸ್ಪೋಟಿಸಿದ್ರು ರಂಭಾಪುರಿ ಶ್ರೀ.

ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳಿಗೆ ಬಿಜೆಪಿ ನಾಯಕರು ತಮ್ಮದೇ ಶೈಲಿಯಲ್ಲಿ ಸ್ವಾಗತ ಮಾಡಿದ್ರು. ಕೆಲವರು ಕುಟುಕುವ ಮೂಲಕ ಸ್ವಾಗತ ಮಾಡಿದ್ರೆ,  ಯಡಿಯೂರಪ್ಪನಂತ ನಾಯಕರು ಒಂದೇ ವಾಕ್ಯದಲ್ಲಿ ಸ್ವಾಗತ ಎಂದಷ್ಟೇ ಹೇಳಿ ಸುಮ್ಮನಾದರು. ಆದ್ರೆ ಸಿಎಂ‌ ಬೊಮ್ಮಾಯಿ‌ ಮಾತ್ರ ಸಿದ್ದರಾಮಯ್ಯ ಪಶ್ಚಾತ್ತಾಪದ ಬಗ್ಗೆ ಕಮೆಂಟ್ ಮಾಡಲಿಲ್ಲ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಗೊತ್ತಿಲ್ಲ, ಆದ್ರೆ ಆ ಸಮಯದಲ್ಲಿ ಏನ್ ಏನ್ ಆಯ್ತು ಎನ್ನೋದನ್ನ ಕರ್ನಾಟಕ ನೋಡಿದೆ ಎಂದಷ್ಟೇ ಹೇಳಿ ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು. ಮುಂದುವರಿದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಸಿದ್ದರಾಮಯ್ಯರ ಈ ಪಶ್ಚಾತ್ತಾಪ ಮಾತುಗಳನ್ನ ಮಾತ್ರ ಬಾಯಿ ತುಂಬಾ ಹೊಗಳಿ ಸ್ವಾಗತ ಮಾಡಿಕೊಂಡರು. ನಾನು ಅಂದೇ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ವಿರೋಧ ಮಾಡಿದ್ದೆ, ಆದ್ರೆ ನನಗೆ ಫಲ ಸಿಕ್ಕಿರಲಿಲ್ಲ, ಎಂದು ಒಂದು ಹೆಜ್ಜೆ ಮುಂದಕ್ಕೆ ಹೋಗಿ ತನ್ನ ಹೇಳಿಕೆಯಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತ್ಯೇಕ ಧರ್ಮ ನಿಲುವು ಸಿದ್ದರಾಮಯ್ಯ ಅವರದ್ದಾಗಿತ್ತು ಎನ್ನೋದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ರು. ತಪ್ಪನ್ನು ಒಪ್ಪಿಕೊಳ್ಳೋದ್ರದಲ್ಲಿ ತಪ್ಪಿಲ್ಲ ಎಂದರು ಡಿಕೆ ಶಿವಕುಮಾರ್. 

ಆದ್ರೆ ಮರುದಿನ ಸಿದ್ದರಾಮಯ್ಯ ಯೂಟರ್ನ್ ಹೊಡೆದೇ ಬಿಟ್ರು. ನಾನು ಶ್ರೀಗಳ ಮುಂದೆ ಪಶ್ಚಾತ್ತಾಪ ಪಟ್ಟಿಲ್ಲ. ಅಂದು ನಡೆದ ಘಟನೆ ವಿವರಿಸಿದೆ ಎಂದು ಹೇಳುವ ಮೂಲಕ ಪ್ರತ್ಯೇಕ ಧರ್ಮ ರಾದ್ಧಾಂತವನ್ನು ಜೀವಂತವಾಗಿಟ್ಟು, ಬಿಜೆಪಿಗೆ ಅನುಕೂಲವಾಗುವಂತೆ ಮಾಡಿದ್ದಷ್ಟೇ ಅಲ್ಲ, ಧರ್ಮ (Religion) ಒಡೆಯಲು ಸಂಚು ರೂಪಿಸಿದವ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡೆ ಓಡಾಡಲು ಸಿದ್ದರಾಮಯ್ಯ ಯಾಕೊ ಇಷ್ಟ ಪಟ್ಟಂತೆ ಕಾಣುತ್ತಿದೆ. 

ಕರ್ನಾಟಕದಲ್ಲಿ ಸಿದ್ದು ಅಶ್ವಮೇಧದ ಕುದುರೆ ಕಟ್ಟೋರು ಯಾರು?

ಡಿಕೆ ಶಿವಕುಮಾರ್ ಅಂದು ಕ್ಷಮೆ ಕೇಳಿದ್ದರು
ಬಳ್ಳಾರಿ ಲೋಕಸಭಾ ಉಪಚುನಾವಣೆ ಸಮಯದಲ್ಲಿ ಉಗ್ರಪ್ಪ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿಯನ್ನು ಡಿಕೆ ಶಿವಕುಮಾರ್ ಹೊತ್ತಿದ್ದರು. ಅದರಲ್ಲಿ ಯಶಸ್ವಿ ಕೂಡ ಆದ್ರು. ಚುನಾವಣೆ ಪ್ರಚಾರದ ವೇಳೆ ಒಂದು ಸಭೆಯ‌ ಭಾಷಣದಲ್ಲಿ ಡಿಕೆ ಶಿವಕುಮಾರ್, ನಾವು ಧರ್ಮ ವಿಭಜನೆಗೆ ಕೈ ಹಾಕಿದ್ದು ತಪ್ಪು. ಅದರ ಬಗ್ಗೆ ಬೇಸರ‌ ಇದೆ ಎನ್ನುವ ಮಾತನ್ನು ಸಾರ್ವಜನಿಕವಾಗಿ ಹೇಳುವ ಮೂಲಕ, ಸುಮಾರು 2 ಲಕ್ಷ ಲಿಂಗಾಯತ ಮತದಾರರು ಇರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಆ ಸಮುದಾಯದ   ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಆ ಒಂದು ಹೇಳಿಕೆ ಉಗ್ರಪ್ಪ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಲ್ಲದೆ ಇದ್ದರೂ, ಗೆಲುವಿಗೆ ಅದೂ ಒಂದು ಕಾರಣವಾಗಿತ್ತು. ಆದ್ರೆ ಈಗ ರಂಭಾಪುರಿ ಶ್ರೀಗಳು ಏನೆ ಹೇಳಿದ್ರು, ನಾನು ಪಶ್ಚಾತ್ತಾಪ ಪಟ್ಟಿಲ್ಲ ಎಂದಿರುವ ಸಿದ್ದರಾಮಯ್ಯ ಬಿಜೆಪಿಗೆ ಮತ್ತೆ ಪ್ಲೇಟ್ ತುಂಬಾ ಅನ್ನ ಬಡಿಸಿದ್ದಾರೆ.

ಸಿದ್ದರಾಮಯ್ಯರ ಹೇಳಿಕೆ ಸರ್ಕಾರದ ಹುಳುಕು ಮುಚ್ಚಲು ಅನುಕೂಲ?
ಪ್ರತಿ ಚುನಾವಣೆಗೆ ಎಲ್ಲಾ ಪಕ್ಷಗಳು ಒಂದು ಟ್ರೆಂಡ್ ಸೆಟ್ ಮಾಡುತ್ತದೆ. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವ ಟ್ರೆಂಡ್ ಮೇಲೆ ಚುನಾವಣೆ ಎದುರಿಸಬೇಕು ಎನ್ನುವ ಗೊಂದಲ ಇದ್ದಂತೆ ಕಾಣ್ತಿದೆ. 2018 ರಲ್ಲಿ "ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ" ಎಂದು ದಿವಗಂತ ಅನಂತ್ ಕುಮಾರ್ ಅಂದು ರಾಜ್ಯ ಬಿಜೆಪಿಗೆ ಘೋಷ ವಾಕ್ಯ ರೆಡಿ ಮಾಡಿಕೊಟ್ಟಿದ್ದರು. ಅದು ಮನೆ ಮಾತಾಯಿತು. ಪ್ರಧಾನಿ ಮೋದಿ ಸಾಹೇಬರು ಚುನಾವಣೆ ಪ್ರಚಾರಕ್ಕೆ ಬಂದು 10% ಸರ್ಕಾರ ಎಂದು ಬಿರುದು ನೀಡಿದರು. ಬೆಂಗಳೂರು ಸುತ್ತ ಮುತ್ತ , ಬಿಬಿಎಂಪಿ ಜಾರ್ಜ್‌ಗೆ ಎಟಿಎಂ, ಸಿದ್ದರಾಮಯ್ಯಗೆ ಜಾರ್ಜ್ ಎಟಿಎಂ, ಹೈಕಮಾಂಡ್‌ಗೆ ಸಿದ್ದರಾಮಯ್ಯ ಎಟಿಎಂ ಎಂದು ಆರ್ ಅಶೋಕ್ ಪ್ರಾಸ ಬದ್ಧ ಘೋಷಣೆ ಮೊಳಗಿಸಿದ್ರು. ಉತ್ತರ ಕರ್ನಾಟಕ ಭಾಗಕ್ಕೆ ಹೋದ್ರೆ ಧರ್ಮ ಒಡೆಯುವ ಸಿದ್ದರಾಮಯ್ಯ ಸಾಲು ಫೇಮಸ್ ಆಯ್ತು. ಕರಾವಳಿ ಭಾಗಕ್ಕೆ ಬಂದಾಗ ಹಿಂದು ಕಾರ್ಯಕರ್ತರ ಹತ್ಯೆ ಮಾರ್ಧನಿಸಿತು. ಇದೆಲ್ಲಾ ವಿಚಾರವನ್ನು ಬಿಜೆಪಿ ಬಹಳ ವ್ಯವಸ್ಥಿತವಾಗಿ ಜನರ ಮುಂದೆ ಒಂದಕ್ಷರವೂ ತಪ್ಪಿಲ್ಲದಂತೆ ಹೇಳಿದ ಪರಿಣಾಮ ಸಿದ್ದರಾಮಯ್ಯ ಸರ್ಕಾರದ ವಿರುದ್ಧ  ಜನವಿರೋಧಿ, ಹಿಂದು ವಿರೋಧಿ, ಧರ್ಮ ವಿರೋಧಿ, ಭ್ರಷ್ಟಾಚಾರದ ಜನಕ ಇತ್ಯಾದಿ ನಾಮ ಫಲಕ ಹಚ್ಚಿ ಒಂದು ಟ್ರೆಂಡ್ ಸೆಟ್ ಆಯ್ತು. ಪರಿಣಾಮ ಕಾಂಗ್ರೆಸ್ ಸೋಲನ್ನು ಕಂಡಿತು. 

ಟ್ರೆಂಡ್ ಸೆಟ್ ಮಾಡಲು ಹೆಣಗಾಡುತ್ತಿದೆ ಕಾಂಗ್ರೆಸ್
ಇಂದು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಒಂದು ಟ್ರೆಂಡ್ ಸೆಟ್ ಮಾಡಲು ಹೆಣಗಾಡುತ್ತಿದೆ. ಕಾರಣ ಡಿಕೆ ಶಿವಕುಮಾರ್ ಒಂದು ಹೇಳಿದ್ರೆ, ಮರುದಿನ ಸಿದ್ದರಾಮಯ್ಯ ಇನ್ನೇನೊ ಹೇಳಿರ್ತಾರೆ. ರಾಜ್ಯ ಸರ್ಕಾರದ ಮೇಲೆ 40% ಕಮಿಷನ್ (40 percent commission) ಲೇಬಲ್ ಗಟ್ಟಿ ಮಾಡೋದ್ರೊಳಗೆ, ಲೇಬಲ್‌ಗೆ ಅಂಟಿಸಿದ ಗಮ್ ಜಾರಿ ಕೊಳ್ತಿದೆ. ಕಾರಣ ಬಿಜೆಪಿ ಯಾವ ವಿಚಾರಗಳು ತಮಗೆ ಬೇಕು ಎಂದು ಬಯಸುತ್ತಾ- ಕಾಯುತ್ತಾ ಕೂತಿರುತ್ತದೊ ಅದೇ ಹಾರ್ಡ್ ಕೋರ್ ವಿಷಯಗಳನ್ನು ಸಿದ್ದರಾಮಯ್ಯ ಪ್ರಸ್ತಾಪ ಮಾಡ್ತಾರೆ. ಸಾವರ್ಕರ್ ನಿಂದ ಹಿಡಿದು, ಹಿಜಾಬ್ ಗದ್ದಲದ ತನಕ, ಹಿಂದು ಕಾರ್ಯಕರ್ತ ಕೊಲೆಯಿಂದ ಹಿಡಿದು, ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆವರೆಗೆ ಬಿಜೆಪಿ ಕಾಂಗ್ರೆಸ್ ನಾಯಕರಿಂದ ಅಥವಾ ಸ್ಪೆಷಲಿ ಸಿದ್ದರಾಮಯ್ಯ ಅವರಿಂದ ಏನನ್ನು ಬಯಸುತ್ತದೋ ಸಿದ್ದರಾಮಯ್ಯ ಅದೇ ದಾಟಿಯಲ್ಲಿ ಮಾತನಾಡಿ, ಬಿಜೆಪಿಗೆ ಅನುಕೂಲ ಆಗುವ ರೀತಿ ನಡೆದು ಕೊಳ್ಳುತ್ತಿದ್ದಾರೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ವಂಶವಾಹಿಗಳ ಪಕ್ಷ ಎಂದು  ಜರಿಯಲು ಸೋನಿಯಾ ಅಥವಾ ರಾಹುಲ್ ಸದಾ ಅಧ್ಯಕ್ಷರಾಗಿರಲಿ ಎಂದು ಬಿಜೆಪಿ ಕೇಂದ್ರ ನಾಯಕತ್ವ ಅಂತರಂಗದಲ್ಲಿ ಹೇಗೆ ನಿರೀಕ್ಷಿಸುತ್ತದೊ, ಅದೇ ರೀತಿ ರಾಜ್ಯದಲ್ಲಿ ಸಿದ್ದರಾಮಯ್ಯ ಹೀಗೆ ತುಷ್ಟೀಕರಣದ ರಾಜಕೀಯ ಓಲೈಕೆಯಲ್ಲೇ ಸದಾ ಮುಳುಗಿರಲಿ ಎಂದು ರಾಜ್ಯ ಬಿಜೆಪಿ ಬಯಸುತ್ತದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಲೈಮ್ ಲೈಟ್‌ನಲ್ಲಿ ಇದ್ದರೆ ಬಿಜೆಪಿಗೆ ನಷ್ಟಕ್ಕಿಂತ ಲಾಭವೆ ಹೆಚ್ಚು!

ಸಿದ್ದು, ಡಿಕೆಶಿ ಆಲಿಂಗನ ನೋಡಿ ಖುಷಿ: ಇಬ್ಬರ ಒಗ್ಗಟ್ಟಿನಿಂದ ಮುಂದೆ ಪಕ್ಷ ಅಧಿಕಾರಕ್ಕೆ, ರಾಹುಲ್‌ ಗಾಂಧಿ

Follow Us:
Download App:
  • android
  • ios