India Gate: ಕರ್ನಾಟಕದಲ್ಲಿ ಸಿದ್ದು ಅಶ್ವಮೇಧದ ಕುದುರೆ ಕಟ್ಟೋರು ಯಾರು?
ದಾವಣಗೆರೆ ಸಮಾವೇಶದಲ್ಲಿ ಕೇವಲ ಹುಟ್ಟುಹಬ್ಬಕ್ಕಾಗಿ ಸೇರಿದ್ದ ಲಕ್ಷಾಂತರ ಜನಸ್ತೋಮ ನಿಸ್ಸಂದೇಹವಾಗಿ ಒಂದು ಕಡೆ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಸಿದ್ದು ಏಕಚಕ್ರಾಧಿಪತಿ, ಉಳಿದವರ ಸರದಿ ಏನಿದ್ದರೂ ತದನಂತರ ಅನ್ನುವುದನ್ನು ಸ್ಪಷ್ಟಪಡಿಸಿದೆ.
India Gate Column by Prashant Natuಹಬ್ಬಕ್ಕಾಗಿ ಸೇರಿದ್ದ ಲಕ್ಷಾಂತರ ಜನಸ್ತೋಮ ನಿಸ್ಸಂದೇಹವಾಗಿ ಒಂದು ಕಡೆ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಸಿದ್ದು ಏಕಚಕ್ರಾಧಿಪತಿ, ಉಳಿದವರ ಸರದಿ ಏನಿದ್ದರೂ ತದನಂತರ ಅನ್ನುವುದನ್ನು ಸ್ಪಷ್ಟಪಡಿಸಿದೆ. ಇನ್ನೊಂದು ಕಡೆ ರಾಜ್ಯದ ಇನ್ನಿಬ್ಬರು ಮಾಸ್ ಲೀಡರ್‌ಗಳಾದ ದೇವೇಗೌಡ ಮತ್ತು ಯಡಿಯೂರಪ್ಪ ವಯೋಸಹಜವಾಗಿ ನಿವೃತ್ತಿಯ ಅಂಚಿನಲ್ಲಿರುವಾಗ ಮರಳಿ ಶಕ್ತಿ ತುಂಬಿಕೊಳ್ಳುತ್ತಿರುವ ಸಿದ್ದು ಎದುರು ನಿಲ್ಲಬಲ್ಲ ಜನಪ್ರಿಯತೆ ಇರುವ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಸಿಗುತ್ತಿಲ್ಲ.
ದಿನದಿಂದ ದಿನಕ್ಕೆ ತನ್ನ ವೈಚಾರಿಕ ಸ್ಪಷ್ಟತೆ, ಜಾತಿ ವೋಟ್ ಬ್ಯಾಂಕ್ ಮತ್ತು ಮುನ್ನುಗ್ಗುವ ಸ್ವಭಾವದಿಂದ ಶಕ್ತಿ ವರ್ಧಿಸಿಕೊಳ್ಳುತ್ತಿರುವ ಸಿದ್ದು ಒಂದು ರೀತಿಯಲ್ಲಿ ದಾವಣಗೆರೆಯಲ್ಲಿ 2023ರ ಚುನಾವಣೆಗೆ ಅಶ್ವಮೇಧದ ಕುದುರೆಯನ್ನು ಬಿಟ್ಟಿದ್ದು, ಅದನ್ನು ಕಟ್ಟಿಹಾಕುವ ನಾಯಕತ್ವ ಬೇರೆ ಪಕ್ಷಗಳಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಸಹಜವಾಗಿ ಬಿಜೆಪಿ ತನ್ನ ಬಳಿ ಇರುವ ‘ಬ್ರಹ್ಮಾಸ್ತ್ರ’ ಮೋದಿ ಕೊನೆಗೆ ದಿಲ್ಲಿಯಿಂದ ಬಂದು ಇಳಿಯುತ್ತಾರೆ, ಸಿದ್ದರಾಮಯ್ಯರನ್ನು ಎದುರಿಸುತ್ತಾರೆ ಎಂದುಕೊಳ್ಳುತ್ತಿದೆ. ಆದರೆ ದಾವಣಗೆರೆ ಸಮಾವೇಶ ಒಂದು ವಿಷಯ ಸ್ಪಷ್ಟಪಡಿಸಿದೆ- 2023ರ ಚುನಾವಣೆಯು ಸಿದ್ದರಾಮಯ್ಯಗೆ ಇನ್ನೊಂದು ಅವಕಾಶ ಕೊಡಬೇಕಾ ಬೇಡವಾ ಎಂಬುದರ ಸುತ್ತ ಗಿರಕಿ ಹೊಡೆಯಲಿದೆ.
India Gate: ಡಿಕೆಶಿಗೇಕೆ ಈಗ ಒಕ್ಕಲಿಗರ ಮೇಲೆ ಕಣ್ಣು? ಏನೀ ಲೆಕ್ಕಾಚಾರ..?
ಗಾಂಧಿ ಕುಟುಂಬ ಹೇಗೆ ಬದಲಾಯ್ತು!
ಗಾಂಧಿ ಕುಟುಂಬದ ಅಧಿಕಾರದ ಉಚ್ಛ್ರಾಯ ಕಾಲದಲ್ಲಿ ಒಬ್ಬ ರಾಜ್ಯ ನಾಯಕನ ಹುಟ್ಟುಹಬ್ಬಕ್ಕೆ ದಿಲ್ಲಿಯಿಂದ ಗಾಂಧಿಗಳು ಬರುವುದು ಬಿಡಿ, ಒಂದು ಫೋನ್ ಮಾಡುವ ಸಂಪ್ರದಾಯ ಕೂಡ ಇರಲಿಲ್ಲ. ನಿಜಲಿಂಗಪ್ಪ, ದೇವರಾಜ್ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪಗೆ ಸಿದ್ದುಗಿಂತ ಹೆಚ್ಚು ಜನಪ್ರಿಯತೆ ಇದ್ದರೂ ಕೂಡ ಗಾಂಧಿಗಳು ಅಷ್ಟೇನೂ ಕ್ಯಾರೇ ಅನ್ನುತ್ತಿರಲಿಲ್ಲ. ಇಷ್ಟುದೊಡ್ಡ ನಾಯಕರು ಪಾಪ ಇಂದಿರಾ ಗಾಂಧಿಯ ಸ್ಟೆನೋಗ್ರಾಫರ್ ಆರ್.ಕೆ.ಧವನ್, ರಾಜೀವ್ ಗಾಂಧಿಯ ಪಿ.ಎ. ವಿನ್ಸೆಂಟ್ ಜಾಜ್‌ರ್ ಮಾತನಾಡಿಸಿದರೂ ಸಾಕು ಎಂದು ಪರದಾಡುವ ಸ್ಥಿತಿ ಇರುತ್ತಿತ್ತು.
ಗಾಂಧಿಗಳ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಅವರ ಆಪ್ತ ಕಾರ್ಯದರ್ಶಿಗಳು, ಸೆಕ್ಯೂರಿಟಿಯವರನ್ನು ‘ಚೆನ್ನಾಗಿ’ ನೋಡಿಕೊಳ್ಳಲಿಲ್ಲ ಎಂದು ಎಷ್ಟೋ ಬಲಿಷ್ಠ ಮುಖ್ಯಮಂತ್ರಿಗಳು ಕುರ್ಚಿ ಕಳೆದುಕೊಂಡ ಉದಾಹರಣೆಗಳಿವೆ. ಅಂಥ ಕುಟುಂಬದ ಕುಡಿ ರಾಹುಲ್ ಗಾಂಧಿ ಸಿದ್ದು ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಬಂದಿದ್ದು, ಜನ ಸಾಗರದಿಂದಾಗಿ ಸಮಾವೇಶದ ಸ್ಥಳಕ್ಕೆ ಬರಲು ಪರದಾಡಿದ್ದು, ರಾಷ್ಟ್ರೀಯ ನಾಯಕನಾದರೂ ಮೊದಲು ಮಾತನಾಡಲು ಒಪ್ಪಿ ಸಿದ್ದರಾಮಯ್ಯ ಅವರ ಭಾಷಣವನ್ನು ಕುಳಿತು ಕೇಳಿದ್ದು ಇವೆಲ್ಲ ಕಾಂಗ್ರೆಸ್ ಸಂಸ್ಕೃತಿಯಲ್ಲಿ ಹಿಂದೆ ನೋಡಲು ಸಿಗುತ್ತಿರಲಿಲ್ಲ. ರಾಜಕಾರಣದಲ್ಲಿ ವೋಟು ಹಾಕಿಸುವ ಸಾಮರ್ಥ್ಯಕ್ಕೆ ಕಿಮ್ಮತ್ತು ಜಾಸ್ತಿ ನೋಡಿ. ದಾವಣಗೆರೆಯಲ್ಲಿ ನೋಡಲು ಸಿಕ್ಕಿದ್ದು ಏನೆಂದರೆ ಇವತ್ತಿನ ಸ್ಥಿತಿಯಲ್ಲಿ ಆ ಸಾಮರ್ಥ್ಯ ಸಿದ್ದುಗೆ ಸ್ವಲ್ಪ ಜಾಸ್ತಿಯೇ ಇದೆ. ಹೀಗಾಗಿ ಗಾಂಧಿಗಳು ಸಿದ್ದು ಕೇಳಿದ್ದಕ್ಕೆಲ್ಲ ಒಪ್ಪಿಕೊಳ್ಳುತ್ತಿದ್ದಾರೆ.
ದುರ್ಬಲ ರಾಜ್ಯ, ಬಲಿಷ್ಠ ಕೇಂದ್ರ
ಕಾಂಗ್ರೆಸ್‌ನಲ್ಲಿ ಹೇಗೆ ಪ್ರಬಲ ರಾಜ್ಯ ನಾಯಕತ್ವ ಮತ್ತು ದುರ್ಬಲ ಕೇಂದ್ರ ನಾಯಕತ್ವ ಇದೆಯೋ ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಯಲ್ಲಿ ದುರ್ಬಲ ರಾಜ್ಯ ನಾಯಕತ್ವ ಮತ್ತು ಬಲಿಷ್ಠ ಕೇಂದ್ರ ನಾಯಕತ್ವ ಕೂಡ ಇರುವುದು ಕಣ್ಣಿಗೆ ಕಾಣುತ್ತಿದೆ. ಹೀಗಾಗಿ ಸಿದ್ದು ಮತ್ತು ಡಿಕೆಶಿಯ ಕಾಂಗ್ರೆಸ್ಸನ್ನು ಎದುರಿಸಲು ಸದ್ಯಕ್ಕಂತೂ ಬಿಜೆಪಿ ಬಳಿ ಮೋದಿ ಎಂಬ ಬ್ರಹ್ಮಾಸ್ತ್ರವನ್ನು ಬಿಟ್ಟರೆ ಬೇರೆ ದಾರಿ ಇದ್ದಂತೆ ಕಾಣುತ್ತಿಲ್ಲ. ಮೋದಿಯನ್ನು ಪುನರಪಿ ಪ್ರಧಾನಿ ಮಾಡಿದ 2019ರ ಚುನಾವಣೆಯಲ್ಲಿ ಕರ್ನಾಟಕದ ಇಬ್ಬರಲ್ಲಿ ಒಬ್ಬ ಅಂದರೆ ಶೇ.50ರಷ್ಟುಮತದಾರರು ಮೋದಿಗೆ ವೋಟು ಮಾಡಿದ್ದಾರೆ ಎಂಬುದು ನಿಜ. ಆದರೆ ವಿಧಾನಸಭಾ ಚುನಾವಣೆಯಲ್ಲೂ ಬರೀ ಮೋದಿ ಹೆಸರಿನ ಮೇಲೆ ಹೋದರೆ ನಡೆಯುತ್ತಾ ಎನ್ನುವ ಪ್ರಶ್ನೆ 2023ರ ಭವಿಷ್ಯ ನಿರ್ಧರಿಸಲಿದೆ.
ರಾಜ್ಯಸಭೆ ಚುನಾವಣೆ: ಸಿದ್ದು ಲೆಕ್ಕಾಚಾರದಲ್ಲಡಗಿದೆ 2023 ರ ತಂತ್ರ!
ಒಕ್ಕಲಿಗ, ಲಿಂಗಾಯತ ಫ್ಯಾಕ್ಟರ್
ಲಿಂಗಾಯತರು ಮತ್ತು ಒಕ್ಕಲಿಗ ಬಾಹುಳ್ಯದ ಜನತಾದಳದ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಆಗಿ ಹೊರಹೊಮ್ಮಿದ್ದು ದೇವೇಗೌಡರ ಸಖ್ಯ ತೊರೆದು ಬಂದು 2007ರಲ್ಲಿ ಕಾಂಗ್ರೆಸ್ ಸೇರಿದ ನಂತರ. ಸಹಜವಾಗಿ ಕಾಂಗ್ರೆಸ್‌ನ ಗಟ್ಟಿದಲಿತ ಬಲಗೈ ಮತ್ತು ಮುಸ್ಲಿಂ ವೋಟ್ ಬ್ಯಾಂಕ್ ಜೊತೆ 8 ಪ್ರತಿಶತ ಕುರುಬರು ಗಟ್ಟಿಯಾಗಿ ನಿಂತ ಕಾರಣದಿಂದ ಸಿದ್ದು ಮಹತ್ವ ಮತ್ತು ಪ್ರಭಾವ ಕಾಂಗ್ರೆಸ್‌ನಲ್ಲಿ ಮತ್ತು ರಾಜ್ಯ ರಾಜಕಾರಣದಲ್ಲಿ ಸಹಜವಾಗಿ ಬೆಳೆಯಿತು. ಆದರೆ ದೇವೇಗೌಡರ ಜೊತೆ ತಿಕ್ಕಾಟ, ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿಅಹಿಂದ ಅಹಿಂದ ಎಂದು ವೋಟ್ ಬ್ಯಾಂಕ್ ಕಟ್ಟಲು ಹೊರಟಿದ್ದರಿಂದ ದೇವರಾಜ್ ಅರಸರನ್ನು ವಿರೋಧಿಸಿದಂತೆ ಲಿಂಗಾಯತರು ಮತ್ತು ಒಕ್ಕಲಿಗರು ಸಿದ್ದರಾಮಯ್ಯರನ್ನು ಕೂಡ ವಿರೋಧಿಸುವ ಪಾಲಿಟಿಕ್ಸ್ ಮುಂದುವರೆಯಿತು.
ಸಿದ್ದು ಮುಖ್ಯಮಂತ್ರಿ ಆಗಿಯೇ ಚಾಮುಂಡೇಶ್ವರಿಯಲ್ಲಿ ಸೋಲುವ ಮತ್ತು ಬಾದಾಮಿಯಲ್ಲಿ ಅತ್ಯಂತ ಕಡಿಮೆ ಅಂದರೆ 1650 ಮತಗಳಿಂದ ಗೆಲ್ಲುವ ಸ್ಥಿತಿಗೆ ತಲುಪುವುದರ ಹಿಂದೆ ಒಕ್ಕಲಿಗರು ಮತ್ತು ಲಿಂಗಾಯತರ ಬೇಸರ ಸ್ಪಷ್ಟವಾಗಿತ್ತು. ಈಗ ಸಿದ್ದು ಸಮಾವೇಶದ ಅಭೂತಪೂರ್ವ ಯಶಸ್ಸಿನ ನಂತರ ಆ ಎರಡು ಪ್ರಬಲ ಸಮುದಾಯಗಳ ಮತ ಧ್ರುವೀಕರಣ ಹೇಗೆ ನಡೆಯುತ್ತದೆ ಎಂಬುದು ಮುಖ್ಯವಾಗುತ್ತದೆ. 1989ರಲ್ಲಿ ಅಹಿಂದದ ಜೊತೆ ಲಿಂಗಾಯತರು, 1999 ರಲ್ಲಿ ಅಹಿಂದದ ಜೊತೆ ಒಕ್ಕಲಿಗರು ಸೇರಿದಾಗ ಮತ್ತು 2013ರಲ್ಲಿ ಲಿಂಗಾಯತರ ವೋಟು ಎರಡು ಹೋಳಾದಾಗ ಕಾಂಗ್ರೆಸ್ ಗೆದ್ದಿದೆ ಎಂಬುದು ಗಮನಾರ್ಹ.
ಆದರೆ ಈ ಬಾರಿ ಒಕ್ಕಲಿಗರ ಮತ ಕ್ರೋಢೀಕರಣ ಮಾಡುವ ದೇವೇಗೌಡ ಮತ್ತು ಲಿಂಗಾಯತರ ಮತ ಕ್ರೋಢೀಕರಣ ಮಾಡುವ ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ದೂರ ಸರಿದಿರುವಾಗ ಏನಾಗಬಹುದು ಎಂಬುದು ಕುತೂಹಲದ ವಿಷಯ. ಒಂದು ಅಂದಾಜಿನ ಪ್ರಕಾರ ತಮ್ಮ ಸಮುದಾಯದ ಅಭ್ಯರ್ಥಿಗಳು ಇಲ್ಲದೇ ಇರುವ ಕ್ಷೇತ್ರಗಳಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಕಾಂಗ್ರೆಸ್ ಜೊತೆಗೆ ನಿಲ್ಲುವ ಸಾಧ್ಯತೆಗಳು ಕಡಿಮೆ. ಹಾಗಾದಾಗ ಕುರುಬರನ್ನು ಬಿಟ್ಟು ಉಳಿದ ಹಿಂದುಳಿದ ಸಮುದಾಯಗಳನ್ನು ಮೋದಿ ಹೆಚ್ಚು ಸೆಳೆಯುತ್ತಾರೋ ಅಥವಾ ಸಿದ್ದು ಹೆಚ್ಚು ಸೆಳೆಯುತ್ತಾರೋ ಅನ್ನುವುದು ತುರುಸಿನ ಪೈಪೋಟಿ ಇರುವ ಕ್ಷೇತ್ರಗಳ ಫಲಿತಾಂಶವನ್ನು ನಿರ್ಧರಿಸಲಿದೆ.
Maharashtra Politics: ಮಹಾರಾಷ್ಟ್ರಕ್ಕೆ ಫಡ್ನವೀಸ್ ಏಕೆ ಸಿಎಂ ಆಗಲಿಲ್ಲ?
ಅಮಿತ್ ಶಾ ವಿಮಾನದಲ್ಲಿ ಕಟೀಲ್
ಮೋದಿ ಮತ್ತು ಅಮಿತ್ ಶಾ ಅವರು ಹಾಗೆಲ್ಲ ಬಹು ಮುಖ್ಯ ವಿಷಯ ಇಲ್ಲದೇ ತಮ್ಮ ವಿಮಾನದಲ್ಲಿ ಬನ್ನಿ ಒಟ್ಟಿಗೆ ಹೋಗೋಣ ಎಂದು ಕರೆಯುವುದು ಅಪರೂಪ. ಆದರೆ ಬುಧವಾರ ಮಧ್ಯಾಹ್ನ ದಿಲ್ಲಿಯಲ್ಲಿ ನಳಿನ್ ಕುಮಾರ ಕಟೀಲ್‌ರನ್ನು ಮನೆಗೆ ಕರೆಸಿಕೊಂಡ ಅಮಿತ್ ಶಾ ಮಂಗಳೂರು ಘಟನೆ ಬಗ್ಗೆ ಪೂರ್ತಿ ಮಾಹಿತಿ ಕೇಳಿದ್ದಾರೆ. ಕೊನೆಗೆ ಇನ್ನೂ ಮಾತಾಡಬೇಕು, ಸಂಜೆ 7.30ಕ್ಕೆ ಮನೆಗೆ ಬನ್ನಿ, ಒಟ್ಟಿಗೆ ವಿಮಾನದಲ್ಲಿ ಬೆಂಗಳೂರಿಗೆ ಹೋಗೋಣ ಎಂದು ಹೇಳಿ ಕರೆಸಿಕೊಂಡಿದ್ದಾರೆ.
ಅಮಿತ್ ಶಾ ಏನು ಮಾತನಾಡಿದರು ಎಂದು ಸಹಜವಾಗಿ ಕಟೀಲ್ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಕಳೆದ ವಾರ ಪ್ರಧಾನಿ ಮೋದಿ ಕೂಡ ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್‌ರನ್ನು ಕರೆಸಿಕೊಂಡು ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಯಾಕೆ ಕೊಡುತ್ತಿದ್ದಾರೆ ಎಂದು ಮಾಹಿತಿ ಪಡೆದುಕೊಂಡಿದ್ದರು. ಮೋದಿ, ಅಮಿತ್ ಶಾ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನೇನೋ ಕೇಳುತ್ತಿದ್ದಾರೆ, ಆದರೆ ಮುಂದೇನು ಮಾಡುತ್ತಾರೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ.
ಶಾಕಾಹಾರಿ ರಾಷ್ಟ್ರಪತಿ ಭವನ
ದ್ರೌಪದಿ ಮುರ್ಮು ಜಾರ್ಖಂಡದ ರಾಜ್ಯಪಾಲರಾಗಿದ್ದಾಗ ಪೂರ್ತಿ ರಾಜಭವನದಲ್ಲಿ ಮಾಂಸಾಹಾರಿ ಊಟ ನಿಷಿದ್ಧವಾಗಿತ್ತು. ಅಷ್ಟೇ ಅಲ್ಲ ಮುರ್ಮು ಅವರಿಗೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಅಡುಗೆ ದಿನವೂ ತಯಾರಾಗುತ್ತಿತ್ತು. ಈಗ ದ್ರೌಪದಿ ಮುರ್ಮು ಮೊದಲ ಪ್ರಜೆಯಾಗಿ ರಾಷ್ಟ್ರಪತಿ ಭವನಕ್ಕೆ ವಾಸ್ತವ್ಯ ಬದಲಿಸಿದ ಮೇಲೆ ಪ್ರೆಸಿಡೆಂಟ್‌ರ ಖಾಸಗಿ ಅಡುಗೆ ಮನೆಯಂತೂ ಪೂರ್ತಿ ಶಾಕಾಹಾರಿ ಆಗಿದೆ. ಆದರೆ ವಿದೇಶಿ ಗಣ್ಯರು ಬಂದಾಗ ಬರೀ ಶಾಕಾಹಾರಿ ಭೋಜನ ಹೇಗೆ ಬಡಿಸುವುದು ಎಂಬುದು ಅಲ್ಲಿನ ಅಧಿಕಾರಿಗಳ ದ್ವಂದ್ವ. ದ್ರೌಪದಿ ಅವರಿಗೆ ಮೊದಲು ನಾನ್ ವೆಜ್ ಬಹಳ ಇಷ್ಟವಿತ್ತು. ಆದರೆ ಮಗ ತೀರಿಕೊಂಡ ಮೇಲೆ ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯಲ್ಲಿ ಸೇರಿದ ನಂತರ ಮಾಂಸಾಹಾರ ಪೂರ್ತಿ ಬಿಟ್ಟರಂತೆ.
ಮಹಾರಾಷ್ಟ್ರದಲ್ಲಿ ಸಂಪುಟ ಸಂಕಟ
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ 15 ದಿನದಲ್ಲಿ 4 ಬಾರಿ ದಿಲ್ಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿ ಆದರೂ ಕೂಡ ಇಲ್ಲಿಯವರೆಗೂ ಸಂಪುಟ ರಚನೆಗೆ ಅನುಮತಿ ಸಿಗುತ್ತಿಲ್ಲ. 16 ಶಾಸಕರ ಅನರ್ಹತೆಯ ಬಗ್ಗೆ ಕೋರ್ಚ್ ತೀರ್ಮಾನ ತೆಗೆದುಕೊಳ್ಳುವವರೆಗೂ ಸಂಪುಟ ರಚನೆ ಬಗ್ಗೆ ದಿಲ್ಲಿ ಬಿಜೆಪಿ ಆಸಕ್ತಿ ತೋರಿಸುತ್ತಿಲ್ಲ.
ತರಾತುರಿಯಲ್ಲಿ ಸಂಪುಟ ರಚನೆಗೆ ಹೋಗಿ ಎಲ್ಲಿ ಏಕನಾಥ್ ಶಿಂಧೆ ಬಣದ ಶಾಸಕರು ಬೇಸರಗೊಂಡರೆ ಎಂಬ ಆತಂಕ ಕೂಡ ಬಿಜೆಪಿ ದಿಲ್ಲಿ ನಾಯಕರಿಗಿದೆ. ಇನ್ನೊಂದು ಕಡೆ ಅಧಿಕಾರಿಗಳ ಜೊತೆಗಿನ ಸಭೆಗಳಲ್ಲಿ ಮುಖ್ಯಮಂತ್ರಿ ಶಿಂಧೆಗಿಂತ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜಾಸ್ತಿ ಮಾತನಾಡುತ್ತಾರೆ, ಅಧಿಕಾರಿಗಳು ಶಿಂಧೆಗಿಂತ ಫಡ್ನವೀಸ್ ಮಾತು ಜಾಸ್ತಿ ಕೇಳುತ್ತಾರೆ ಎಂಬ ಗುಸುಗುಸು ಈಗಾಗಲೇ ಮುಂಬೈನಲ್ಲಿ ಶುರುವಾಗಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ದೆಹಲಿಯಿಂದ ಕಂಡ ರಾಜಕರಾಣ