Asianet Suvarna News Asianet Suvarna News

ಕಾಂಗ್ರೆಸ್‌ಗೆ ಮತ್ತೊಂದು ಶಾಕ್: ದೆಹಲಿ ಕೈ ಮುಖ್ಯಸ್ಥ ಅರವಿಂದ್ ಸಿಂಗ್ ಲವ್ಲಿ ರಾಜೀನಾಮೆ

ದೆಹಲಿ ಕಾಂಗ್ರೆಸ್ ನಾಯಕ ಅರವಿಂದ್ ಸಿಂಗ್ ಲವ್ಲಿ ಅವರು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಚುನಾವಣಾ ಕಾವಿನ ಒತ್ತಡದಲ್ಲಿರುವ ಕಾಂಗ್ರೆಸ್‌ಗೆ ಮತ್ತಷ್ಟು ಶಾಕ್ ನೀಡಿದ್ದಾರೆ.

Another shock for Congress during Lok sabha Election Delhi congress chief Arvind Singh Lovely resigns akb
Author
First Published Apr 28, 2024, 11:45 AM IST

ನವದೆಹಲಿ: ದೆಹಲಿ ಕಾಂಗ್ರೆಸ್ ನಾಯಕ ಅರವಿಂದ್ ಸಿಂಗ್ ಲವ್ಲಿ ಅವರು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಚುನಾವಣಾ ಕಾವಿನ ಒತ್ತಡದಲ್ಲಿರುವ ಕಾಂಗ್ರೆಸ್‌ಗೆ ಮತ್ತಷ್ಟು ಶಾಕ್ ನೀಡಿದ್ದಾರೆ. ಪಕ್ಷದ ದೆಹಲಿ ಘಟಕದ ಅಧ್ಯಕ್ಷರಾಗಿ ಮುಂದುವರೆಯುವುದಕ್ಕೆ ಇನ್ನು ಮುಂದೆ ತಮಗೆ ಇಷ್ಟವಿಲ್ಲ ಎಂದು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 

2024 ರ ಲೋಕಸಭಾ ಚುನಾವಣೆ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದೊಂದಿಗಿನ ಕಾಂಗ್ರೆಸ್ ಮೈತ್ರಿ ತಮಗೆ ಇಷ್ಟವಿಲ್ಲದೇ ಇರುವುದೇ ತಮ್ಮ ರಾಜೀನಾಮೆಗೆ ಕಾರಣ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್‌ ಹಾಗೂ ಎಎಪಿ ಪಕ್ಷಗಳ ನಾಯಕರು ಪರಸ್ಪರ ಹಾವು ಮುಂಗುಸಿಗಳಂತಿದ್ದು, ದೆಹಲಿಯಲ್ಲಿ ಎಎಪಿ  ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಯಾವ ಕಾಂಗ್ರೆಸ್ ನಾಯಕರಿಗೂ ಸ್ವಲ್ಪವೂ ಇಷ್ಟವಿಲ್ಲ. ಆದರೂ ಉನ್ನತ ಮಟ್ಟದಲ್ಲಿ ಎಎಪಿ ಕಾಂಗ್ರೆಸ್ ಮಧ್ಯೆ ಮೈತ್ರಿ ನಡೆದಿದ್ದು, ತಳಮಟ್ಟದ ನಾಯಕರಿಗೆ ಇದನ್ನು ಉಗುಳಲು ಆಗದೇ ನುಂಗಲು ಅಗದಂತಹ ಸ್ಥಿತಿ ಇದೆ.

ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುತ್ತಲೇ ಅಧಿಕಾರಕ್ಕೆ ಬಂದ ಪಕ್ಷದೊಂದಿಗೆ  ಮೈತ್ರಿ ಮಾಡುವುದಕ್ಕೆ ದೆಹಲಿ ಕಾಂಗ್ರೆಸ್ ಘಟಕದ ವಿರೋಧವಿತ್ತು.  ಅದರ ಹೊರತಾಗಿಯೂ, ಕಾಂಗ್ರೆಸ್ ಪಕ್ಷವು ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿತು ಎಂದು ಅರವಿಂದರ್ ಸಿಂಗ್ ಲವ್ಲಿ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಅರವಿಂದ್ ಸಿಂಗ್ ಲವ್ಲಿ ಅವರು ಕಾಂಗ್ರೆಸ್ ದೆಹಲಿ ಘಟಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ದೆಹಲಿಯ ಹಿರಿಯ ಕಾಂಗ್ರೆಸ್ ನಾಯಕರು ತೆಗೆದುಕೊಂಡ ಎಲ್ಲಾ ಸರ್ವಾನುಮತದ ನಿರ್ಧಾರಗಳನ್ನು ದೆಹಲಿ ಘಟಕದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಏಕಪಕ್ಷೀಯವಾಗಿ ಒಪ್ಪಿದ್ದಾರೆ. ನಾನು ಡಿಪಿಸಿಸಿ ಅಧ್ಯಕ್ಷನಾಗಿ ನೇಮಕಗೊಂಡ ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ದೆಹಲಿ ಉಸ್ತುವಾರಿ) ನನಗೆ ಡಿಪಿಸಿಸಿಯಲ್ಲಿ ಯಾವುದೇ ಹಿರಿಯ ನೇಮಕಾತಿಗಳನ್ನು ಮಾಡಲು ಅವಕಾಶ ನೀಡಿಲ್ಲ. ಹಿರಿಯ ನಾಯಕರನ್ನು ಡಿಪಿಸಿಸಿಯ ಮಾಧ್ಯಮ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂಬ ನನ್ನ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಇಲ್ಲಿಯವರೆಗೆ, ದೆಹಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಗರದ ಎಲ್ಲಾ ಬ್ಲಾಕ್ ಅಧ್ಯಕ್ಷರನ್ನು ನೇಮಿಸಲು ಡಿಪಿಸಿಸಿಗೆ ಅನುಮತಿ ನೀಡಿಲ್ಲ. ಪರಿಣಾಮವಾಗಿ ದೆಹಲಿಯ 150 ಕ್ಕೂ ಹೆಚ್ಚು ಬ್ಲಾಕ್‌ಗಳು ಪ್ರಸ್ತುತ ಬ್ಲಾಕ್ ಅಧ್ಯಕ್ಷರನ್ನು ಹೊಂದಿಲ್ಲ ಎಂದು ಅವರು ಲವ್ಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಎಪಿ ಜೊತೆಗಿನ ಮೈತ್ರಿ ಬಗ್ಗೆ ನಾವು ಪಕ್ಷದ ಅಂತಿಮ ನಿರ್ಧಾರವನ್ನು ಗೌರವಿಸಿದ್ದೇವೆ. ನಾನು ಸಾರ್ವಜನಿಕವಾಗಿ ಈ ನಿರ್ಧಾರವನ್ನು ಬೆಂಬಲಿಸಿದೆ ಮಾತ್ರವಲ್ಲದೆ, ಸಂಪೂರ್ಣ ರಾಜ್ಯ ಘಟಕವು ಹೈಕಮಾಂಡ್‌ನ ಅಂತಿಮ ಆದೇಶಕ್ಕೆ ಅನುಗುಣವಾಗಿರುತ್ತದೆ ಎಂದು ಖಚಿತಪಡಿಸಿಕೊಂಡಿದ್ದೆವು. ಇದಲ್ಲದೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ನಾನು ನನ್ನ ನಿಲುವಿಗೆ ವಿರುದ್ಧವಾಗಿದ್ದರೂ ಸಹ ಕೇಜ್ರಿವಾಲ್ ಅವರ ಬಂಧನವಾದ ರಾತ್ರಿ ಸುಭಾಷ್ ಚೋಪ್ರಾ ಮತ್ತು ಸಂದೀಪ್ ದೀಕ್ಷಿತ್ ಅವರೊಂದಿಗೆ ಅವರ ನಿವಾಸಕ್ಕೆ ಭೇಟಿ ನೀಡುವ ಮಟ್ಟಕ್ಕೆ ಹೋಗಿದ್ದೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿ ಎಎಪಿ ಮೈತ್ರಿಯ ನಂತರ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಹಾಗೂ ಎಎಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ನವದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ಪೂರ್ವ ದೆಹಲಿಯಲ್ಲಿ ಎಎಪಿ ತನ್ನ ಅಭ್ಯರ್ಥಿಗಳ ಕಣಕ್ಕಿಳಿಸಿದೆ. ಆದರೆ ಚಾಂದಿನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯುವ್ಯ ದೆಹಲಿಯಲ್ಲಿ ಕಾಂಗ್ರೆಸ್‌ಗೆ  ಸ್ಪರ್ಧಿಸುತ್ತಿದೆ.

Latest Videos
Follow Us:
Download App:
  • android
  • ios