ಶಾಸಕರಾದ ಸಾರಾ ಮಹೇಶ್, ಮಂಜುನಾಥ್, ರಘು ಆಚಾರ್ ಆಯ್ತು. ಇದೀಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೋರ್ವ ಶಾಸಕ ಅಸಮಾಧಾನಗೊಂಡಿದ್ದಾರೆ.
ಮೈಸೂರು, (ನ.28): ರೋಹಿಣಿ ಸಿಂಧೂರಿ ಹೋದ ಕಡೆಯಲ್ಲಾ ಸರ್ಕಾರದ ವಿರುದ್ಧವೇ ನಡೆಯುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಆರೋಪ ಮಾಡಿದ್ದಾರೆ.
ಇಂದು (ಶನಿವಾರ) ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರವನ್ನೇ ಪ್ರಶ್ನಿಸುವ ಪ್ರವೃತ್ತಿಯನ್ನ ರೋಹಿಣಿ ಸಿಂಧೂರಿ ಬೆಳೆಸಿಕೊಂಡಿದ್ದಾರೆ. ಈ ಹಿಂದೆ ಸರ್ಕಾರದ ವಿರುದ್ಧವೇ ಕೆಎಟಿಗೆ ಹೋಗಿದ್ದರು. ಸರ್ಕಾರಿ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡುವುದು ವೈಯಕ್ತಿಕವಲ್ಲ ಎಂದರು.
'ರೋಹಿಣಿ ಸಿಂಧೂರಿ IAS ಪಾಸ್ ಮಾಡಿರುವ ಬಗ್ಗೆ ಅನುಮಾನ'
ಜನರ ಸಮಸ್ಯೆಯನ್ನ ಪ್ರಸ್ತಾಪ ಮಾಡುತ್ತಾರೆ. ಶಾಸಕರಿಗೆ ಯಾವುದೇ ಸಮಸ್ಯೆಗಳಿಲ್ಲ, ಜನರ ಸಮಸ್ಯೆಗಳನ್ನಷ್ಟೇ ಪ್ರಸ್ತಾಪ ಮಾಡುತ್ತಾರೆ. ಆದ್ರೆ ಅಧಿಕಾರ ಇದೆ ಅಂತ ಪತ್ರ ಬರೆಯೋಕೆ ಆಗುತ್ತಾ? ಅಥವಾ ತಪ್ಪನ್ನ ತಿದ್ದುಕೊಳ್ಳಬೇಕಾ ಎಂದು ತನ್ವೀರ್ ಸೇಠ್ ಪ್ರಶ್ನಿಸಿದರು.
ಈಗಾಗಲೇ ರೋಹಿಣಿ ಸಿಂಧೂರಿ ವಿರುದ್ಧ ಕೆ.ಆರ್ ನಗರದ ಶಾಸಕ ಸಾರಾ ಮಹೇಶ್, ಹುಣಸೂರು ಶಾಸಕ ಮಂಜುನಾಥ್, ನಂಜನಗೂಡು ಶಾಸಕ ಹರ್ಷವರ್ಧನ್ ಹಾಗೂ ಎಚ್‌ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಕೂಡ ಸಿಂಧೂರಿ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಹುಣಸೂರು ಶಾಸಕ ಮಂಜುನಾಥ್ ಮೂರ್ನಾಲ್ಕು ಪತ್ರ ಬರೆದಿದ್ದೆ ಡಿಸಿ ರಿಪ್ಲೈ ಮಾಡಿಲ್ಲ ಎಂದು ಕೆಡಿಪಿ ಸಭೆಯಲ್ಲಿ ಹೇಳಿದ್ರು. ಆದ್ರೆ ಡಿಸಿಯವರು ಆ ರೀತಿ ಪತ್ರ ಬಂದಿಲ್ಲ ಎಂದು ಹೇಳಿದ್ದಾರೆ. ಕೆಲವೊಂದು ಗೊಂದಲ ಇದೆ. ಮೈಸೂರಿನಲ್ಲಿ ಇರ್ತೇನೆ, ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಾ.ರಾ.ಮಹೇಶ್ ಕೂಡ ಡಿಸಿ ಬಗ್ಗೆ ಮಾತಾಡಿರೋದನ್ನ ಗಮನಿಸಿದ್ದೇನೆ. ಶಾಸಕರು, ಡಿಸಿ ಜೊತೆಗೂ ಮಾತನಾಡಿ ಪರಿಸ್ಥಿತಿ ಸರಿಪಡಿಸುತ್ತೇನೆ. ದಸರಾ ವೇಳೆಯಲ್ಲಿ ಜಿಲ್ಲಾಧಿಕಾರಿಗಳಿಂದ ಯಾವುದೇ ವ್ಯತ್ಯಾಸ ಆಗಿಲ್ಲ. ನಾನು, ಸಿಎಂ ಎಲ್ಲರೂ ಕೂಡ ಕಾರ್ಯಕ್ರಮದಲ್ಲಿ ಇದ್ದೆವು ಅಂತಹ ವ್ಯತ್ಯಾಸ ಏನೂ ಆಗಿಲ್ಲ ಎಂದು ರೋಹಿಣಿ ಸಿಂಧೂರಿ ಪರ ಬ್ಯಾಟಿಂಗ್ ಮಾಡಿದರು.
ಸಣ್ಣ ಪುಟ್ಟ ವ್ಯತ್ಯಾಸ ಇರಬಹುದು ಅದನ್ನು ಸರಿಪಡಿಸುತ್ತೇವೆ. ಶಾಸಕರು ಹಾಗೂ ಡಿಸಿ ರೋಹಿಣಿ ಸಿಂಧೂರಿ ಎಲ್ಲರನ್ನು ಕೂರಿಸಿ ಮಾತನಾಡಿ ಗೊಂದಲ ನಿವಾರಿಸುತ್ತೇನೆ. ಒಟ್ಟಿನಲ್ಲಿ ಜಿಲ್ಲಾಡಳಿತದ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ಮಾಡುತ್ತೇನೆ ಎಂದು ಹೇಳಿದರು.
