Asianet Suvarna News Asianet Suvarna News

ಅನಂತಕುಮಾರ್‌ ಪತ್ನಿ ತೇಜಸ್ವಿನಿ ಬಸವನಗುಡಿ ಬಿಜೆಪಿ ಅಭ್ಯರ್ಥಿ?

ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್‌ ಅವರ ಪತ್ನಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಪಕ್ಷದ ಪಾಳೆಯದಲ್ಲಿ ದಟ್ಟವಾಗಿ ಹಬ್ಬಿದೆ.
 

Ananth Kumars Wife Tejaswini Ananthkumar Basavanagudi BJP Candidate gvd
Author
First Published Mar 18, 2023, 3:40 AM IST

ಬೆಂಗಳೂರು (ಮಾ.18): ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್‌ ಅವರ ಪತ್ನಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಪಕ್ಷದ ಪಾಳೆಯದಲ್ಲಿ ದಟ್ಟವಾಗಿ ಹಬ್ಬಿದೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಅವರು ಸತತ ಮೂರು ಬಾರಿ ಜಯ ಗಳಿಸಿದ್ದರೂ ಈ ಸಲ ಅವರಿಗೆ ಅಷ್ಟುಅನುಕೂಲಕರ ವಾತಾವರಣ ಇಲ್ಲ ಎಂಬ ಅಂಶ ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ, ಹೊಸ ಮುಖಕ್ಕೆ ಅಲ್ಲಿ ಅವಕಾಶ ನೀಡಿದರೆ ಗೆಲ್ಲುವುದು ಸುಲಭವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದೇ ವೇಳೆ ತೇಜಸ್ವಿನಿ ಅನಂತಕುಮಾರ್‌ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದರು. ಆದರೆ, ಹಲವು ಕಾರಣಗಳಿಗಾಗಿ ಅವರಿಗೆ ಟಿಕೆಟ್‌ ನಿರಾಕರಿಸಿ ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಮುಂದೆ ಅವರನ್ನು ಸಮಾಧಾನಪಡಿಸುವ ಸಲುವಾಗಿ ರಾಜ್ಯ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಯಿತು. ಈ ನಡುವೆ ತೇಜಸ್ವಿನಿ ಅವರು ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಒಲವು ತೋರಿದ್ದರೂ ಪಕ್ಷ ಅದಕ್ಕೂ ಅವಕಾಶ ನೀಡಲಿಲ್ಲ. ಆ ವೇಳೆಯೇ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಲಾಗಿತ್ತು. 

ಮಧು ಬಂಗಾರಪ್ಪ ನಾಲಾಯಕ್‌ ಶಾಸಕ: ಕುಮಾರ್ ಬಂಗಾರಪ್ಪ ವಾಗ್ದಾ​ಳಿ

ಇದೀಗ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ವಿರುದ್ಧ ಕಣಕ್ಕಿಳಿಸುವ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ, ಈ ವಿಚಾರ ತಿಳಿದ ತೇಜಸ್ವಿನಿ ಅವರು ತಾವು ಜಯನಗರದಿಂದ ಸ್ಪರ್ಧಿಸುವುದಿಲ್ಲ. ಬಸವನಗುಡಿ ಕ್ಷೇತ್ರದಿಂದಲೇ ಟಿಕೆಟ್‌ ನೀಡಿ ಎಂಬ ಅಭಿಪ್ರಾಯವನ್ನು ಪಕ್ಷದ ವರಿಷ್ಠರ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಸವನಗುಡಿಯ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಆಡಳಿತ ವಿರೋಧಿ ಅಲೆ ಕಂಡು ಬರುತ್ತಿದೆ ಎಂಬ ಮಾತು ಕೇಳಿಬರುತ್ತಿರುವುದರಿಂದ ತೇಜಸ್ವಿನಿ ಅನಂತಕುಮಾರ್‌ ಅವರನ್ನು ಅಭ್ಯರ್ಥಿಯಾಗಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ. ಇದು ಗಾಳಿ ಸುದ್ದಿ. ಮುಂದೆ ಇದು ನಿಜವಾದಲ್ಲಿ ನಾವು ಜವಾಬ್ದಾರರಲ್ಲ.

ಈ ಬಾರಿ ನಗರದ 5 ಬಿಜೆಪಿ ಶಾಸಕರಿಗೆ ಗೆಲುವು ಕಷ್ಟ: ರಾಜಧಾನಿ ಬೆಂಗಳೂರಿನ ಐದು ಹಾಲಿ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಪರಿಸ್ಥಿತಿ ಪ್ರತಿಕೂಲಕರವಾಗಿದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಈ ಐದು ಕ್ಷೇತ್ರಗಳ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು. ಆ ಕ್ಷೇತ್ರಗಳಲ್ಲಿ ಸಾಮರ್ಥ್ಯ ಇರುವ ಪಕ್ಷದ ಹೊಸ ಮುಖಗಳಿಗೆ ಅವಕಾಶ ನೀಡಿದಲ್ಲಿ ಗೆಲುವು ಸುಲಭವಾಗಲಿದೆ ಎಂಬ ಅಭಿಪ್ರಾಯವನ್ನೂ ನೀಡಲಾಗಿದೆ.

ಐದು ಕ್ಷೇತ್ರಗಳ ಪೈಕಿ ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಿಲ್ಲ. ಐದೂ ಕ್ಷೇತ್ರಗಳಲ್ಲಿ ಶಾಸಕರು ಎರಡು ಅಥವಾ ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದಾರೆ. ಆದರೆ, ಕ್ಷೇತ್ರದ ಜನರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಜನರ ದುಃಖ-ದುಮ್ಮಾನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಬಾರಿಯೂ ಇವರನ್ನೇ ಕಣಕ್ಕಿಳಿಸಿದರೆ ಗೆಲ್ಲುವುದಕ್ಕೆ ತುಂಬಾ ಪ್ರಯಾಸಪಡಬೇಕಾಗುತ್ತದೆ. ಮೇಲಾಗಿ ಈ ಐದು ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಬಲಗೊಳಿಸುವುದಕ್ಕೆ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂಬ ಮಾತನ್ನು ಹೇಳಲಾಗಿದೆ.

ನಾರಾಯಣಗೌಡ ನಮ್ಮ ಪಕ್ಷದ ಸೂಪರ್‌ ಸ್ಟಾರ್‌, ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ಒಟ್ಟು 28 ವಿಧಾನಸಭಾ ಕ್ಷೇತ್ರಗಳಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಮಾತ್ರ ಪಕ್ಷ ಮುಂದೆ ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಹಾಯವಾಗುತ್ತದೆ. ಹೆಚ್ಚು ಸ್ಥಾನ ಗಳಿಸ ಬೇಕಾದಲ್ಲಿ ಕೆಲವೆಡೆ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಈಗ ಹೆಚ್ಚು ಸಮಯ ಇಲ್ಲದೇ ಇದ್ದುದರಿಂದ ಹಾಲಿ ಶಾಸಕರನ್ನೇ ಮತ್ತೊಮ್ಮೆ ಕಣಕ್ಕಿಳಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಹಳಬರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಬಹುದು ಎಂಬ ಸಲಹೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios