ಬೆಂಗಳೂರು[ಫೆ.03]: ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡಿರುವ ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ಮಾನಸಿಕ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸಂಸದ ಡಿ.ಕೆ. ಸುರೇಶ್‌ ಕಟುವಾಗಿ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪವಾಸ ಸತ್ಯಾಗ್ರಹ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ವಿರುದ್ಧ ಕೀಳಾಗಿ ಮಾತನಾಡಿದ ಅನಂತಕುಮಾರ್‌ ಹೆಗಡೆ ಪ್ರಸ್ತುತ ಯಾರಿಗೂ ಬೇಡವಾದ ವಸ್ತು. ಸ್ವತಃ ಬಿಜೆಪಿಯವರೂ ದೂರ ಮಾಡಿದ್ದಾರೆ. ಹೀಗಾಗಿ ಮಾನಸಿಕ ಅಸ್ವಸ್ಥತೆಯಿಂದ ಈ ರೀತಿ ಮಾತನಾಡಿದ್ದು, ಕೂಡಲೇ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಬೇಕು ಎಂದರು.

‘ರಾಷ್ಟ್ರ ವಿರೋಧಿಗಳನ್ನು ಹೊಸಕಿ ಹಾಕುವ ಸಾಮರ್ಥ್ಯ ಕೇಂದ್ರಕ್ಕಿದೆ’

ಒಂದು ವೇಳೆ ಸ್ವಾತಂತ್ರ್ಯ ಹೋರಾಟಗಾರರು ಹೋರಾಡಿ ಸ್ವಾತಂತ್ರ್ಯ ತರದಿದ್ದರೆ ಅನಂತಕುಮಾರ್‌ ಹೆಗಡೆ ಅವರಿಗೆ ಮಾತನಾಡಲೂ ಅವಕಾಶವಿರುತ್ತಿರಲಿಲ್ಲ. ಬ್ರಿಟಿಷ್‌, ಹಿಟ್ಲರ್‌ ಆಡಳಿತದಲ್ಲಿ ಅವುಗಳಿಗೂ ಅವಕಾಶವಿರಲಿಲ್ಲ. ಅವರು ಇಷ್ಟುಬಹಿರಂಗವಾಗಿ ಮಾತನಾಡುತ್ತಿದ್ದಾರೆಂದರೆ ಅವರು ಟೀಕೆ ಮಾಡುತ್ತಿರುವವರು ತಂದುಕೊಟ್ಟಸ್ವಾತಂತ್ರ್ಯವೇ ಕಾರಣ ಎಂದು ತಿರುಗೇಟು ನೀಡಿದರು.

ಅನಂತಕುಮಾರ್‌ ಹೆಗಡೆ ಅಧಿಕಾರದ ಆಸೆಗೆ ಬಾಯಿಗೆ ಬಂದ ರೀತಿ ಮಾತನಾಡಿದ್ದಾರೆ. ಅವರನ್ನು ಅವರೇ ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಬಿಜೆಪಿಯವರು ಮತ್ತೆ ತಮ್ಮನ್ನು ಗುರುತಿಸಲಿ, ಅಧಿಕಾರ ನೀಡಲಿ ಎಂದು ಮಾತನಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ನೈತಿಕತೆ ಇದ್ದರೆ ಅನಂತಕುಮಾರ್‌ ಹೆಗಡೆಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಹೆಗಡೆ ಕಾಡಿದ ಹಳೆ ಹೇಳಿಕೆ, ಕೋರ್ಟ್‌ಗೆ ಹಾಜರಾದ ಅನಂತ ಕುಮಾರ