ಅರ್ಧ ದಿನದಲ್ಲೇ ಆನಂದ್ ಸಿಂಗ್ ಉಸ್ತುವಾರಿ ಬದಲು..!
ಆನಂದ್ ಸಿಂಗ್‌ಗೆ ಮತ್ತೆ ಕೊಪ್ಪಳ ಉಸ್ತುವಾರಿಯನ್ನೇ ನೀಡಿರುವುದರಿಂದ, ಒಂದೇ ದಿನದಲ್ಲಿ ಹೊಸ ಜಿಲ್ಲೆಯಲ್ಲಿ ಮಾಯವಾದ ಸಂಭ್ರಮ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಜು.31): ವಿಜಯನಗರ ಜಿಲ್ಲೆ ರೂವಾರಿ ಆನಂದ್ ಸಿಂಗ್ ಅವರಿಗೆ ಮತ್ತೆ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನವನ್ನು ಸರ್ಕಾರ ನೀಡಿತ್ತು. ಆದರೆ, ಅರ್ಧ ದಿನದ ಅಂತರದಲ್ಲಿ ಆದೇಶ ಬದಲಿಸಿದ್ದು, ಮತ್ತೆ ಕೊಪ್ಪಳ ಉಸ್ತುವಾರಿ ಸ್ಥಾನದಲ್ಲೇ ಮುಂದುವರಿಸಿದ್ದು, ಉಳಿದ ಜಿಲ್ಲಾ ಉಸ್ತುವಾರಿ ಸಚಿವರು ತವರು ಜಿಲ್ಲೆಗಳಲ್ಲೇ ಉಸ್ತುವಾರಿ ಹೊಣೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಿದ್ದರಿಂದ; ಸಂಭಾವ್ಯ ರಾಜಕೀಯ ಬಿಕ್ಕಟ್ಟು ತಪ್ಪಿಸಿಕೊಳ್ಳಲು ಸರ್ಕಾರ ಆದೇಶ ಹಿಂಪಡೆದಿದೆ! 2021ರ ಫೆಬ್ರವರಿ 8ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದರು. ಆ ಬಳಿಕ 2021ರ ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯನಗರ ಜಿಲ್ಲೆಗೆ ಚಾಲನೆ ನೀಡಿದರು.
ಇದೇ ಹೊತ್ತಿನಲ್ಲೇ 2022ರ ಜನವರಿ 24ರಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆನಂದ ಸಿಂಗ್ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸಲಾಗಿತ್ತು. ಅವರ ಅಭಿಮಾನಿಗಳು ಬೀದಿಗೆ ಇಳಿದು ಪ್ರತಿಭಟಿಸಿದ್ದರು. ಹೊಸ ಜಿಲ್ಲೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬ ಕೂಗು ಎದ್ದಿತ್ತು. ಆ ಕೂಗು ನಿರಂತರವಾಗಿದ್ದರಿಂದ ಈ ಭಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕೊಪ್ಪಳದಿಂದ ವಿಜಯನಗರ ಜಿಲ್ಲೆ ಹೊಣೆ ವಹಿಸಿದ್ದರು. ಈಗ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೊರತುಪಡಿಸಿ ಉಳಿದ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳು ತಮಗೂ ತವರು ಜಿಲ್ಲೆಗಳ ಉಸ್ತುವಾರಿ ನೀಡಬೇಕು ಎಂದು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಆನಂದ ಸಿಂಗ್‌ಗೆ ದೊರೆತ ತವರಿನ ಉಸ್ತುವಾರಿ ಒಂದೇ ದಿನದಲ್ಲಿ ಕೈತಪ್ಪಿದೆ.
ವಿಜಯನಗರ ಉಸ್ತುವಾರಿ ಅದಲು ಬದಲು ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಜಿಲ್ಲಾ ಉಸ್ತುವಾರಿಯಾಗಿ ಆದೇಶ ಹೊರಬಿದ್ದಿದ್ದರಿಂದ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಲ್ಲೆ ಕಟ್ಟುವ ಕಾರ್ಯಕ್ಕೆ ಮತ್ತಷ್ಟು ಚಾಲನೆ ದೊರೆಯಲಿದೆ ಎಂಬ ಆಶಾಭಾವ ಮೊಳೆದಿತ್ತು. ಆದರೆ, ಈಗ ಕೊಪ್ಪಳ ಉಸ್ತುವಾರಿಯನ್ನೇ ನೀಡಿರುವುದರಿಂದ, ಒಂದೇ ದಿನದಲ್ಲಿ ಹೊಸ ಜಿಲ್ಲೆಯಲ್ಲಿ ಸಂಭ್ರಮ ಮಾಯವಾಗಿದೆ.
ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ನನಹಳ್ಳಿ ಮತ್ತು ಹೂವಿನಹಡಗಲಿ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯ ರೂಪಿಸಲು, ಜಿಲ್ಲೆಯ ಉತ್ತರ ತಾಲೂಕೊಂದರಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವ ವಿದ್ಯಾಲಯ ನಿರ್ಮಾಣದ ಆಶಯವನ್ನು ಆನಂದ ಸಿಂಗ್ ಹೊಂದಿದ್ದಾರೆ. ಈಗ ಮತ್ತೆ ಹೊಸ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬ ಭಾವ ಜಿಲ್ಲೆಯ ಜನರಲ್ಲಿ ಮೂಡಿದೆ.
ಆನಂದ ಸಿಂಗ್‌ಗೆ ತವರು ಜಿಲ್ಲೆಯನ್ನು ಸರ್ಕಾರ ನೀಡಿತ್ತು. ಆದರೆ, ಉಳಿದ ಬಹುತೇಕ ಸಚಿವರೂ ತಮಗೂ ತವರು ಜಿಲ್ಲೆ ಉಸ್ತುವಾರಿ ನೀಡಬೇಕು ಎಂದು ಒತ್ತಡ ಹೇರಿದ್ದರಿಂದ ಅನಿವಾರ್ಯವಾಗಿ ಸಿಎಂ ಆದೇಶ ಬದಲಿಸಿದ್ದಾರೆ ಎಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಮನೆ ಮಗಳಿಗೆ ಮತ್ತೆ ವಿಜಯನಗರ!
ವಿಜಯನಗರದ ಮನೆ ಮಗಳು ಎಂದೇ ಗುರುತಿಸಿಕೊಂಡಿರುವ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಜಿಲ್ಲಾ ಉಸ್ತುವಾರಿ ಪಟ್ಟದೊರೆತಿದೆ. ಆನಂದ ಸಿಂಗ್ ಅವರೇ ಸ್ವತಃ ಕಾರ್ಯಕ್ರಮಯೊಂದರಲ್ಲಿ ತವರು ಮನೆ ಉಡುಗೊರೆಯಂತೆ ಅಣ್ಣನ ಸ್ಥಾನದಲ್ಲಿ ನಿಂತು ಉಡಿ ತುಂಬಿದ್ದರು.
ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಬೊಮ್ಮಾಯಿ ಸರಕಾರ ಆದೇಶ
ಧ್ವಜಾರೋಹಣಕ್ಕೆ ಆನಂದ್ ಸಿಂಗ್?
ಆನಂದ ಸಿಂಗ್ ಅವರು ಗಣರಾಜ್ಯೋತ್ಸವದ ದಿನ ಹೊಸಪೇಟೆಯಲ್ಲಿ ಧ್ವಜಾರೋಹಣ ನೆರವೇರಿಸಬೇಕಿತ್ತು. ಆದರೆ, ಅವರನ್ನು ಕೊಪ್ಪಳ ಉಸ್ತುವಾರಿಯಾಗಿ ನಿಯೋಜನೆ ಮಾಡಲಾಯಿತು. ಈಗ ಅವರು 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸುತ್ತಿದ್ದು, ಈ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚರಿತ್ರೆ ನಿರ್ಮಾಣ ಮಾಡುವ ಇರಾದೆ ಹೊಂದಿದ್ದಾರೆ. ಹಾಗಾಗಿ ಆ.14ರೊಳಗೆ ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸುವ ಹೊಣೆ ಆನಂದ ಸಿಂಗ್ ಅವರಿಗೆ ದೊರೆಯಲಿದೆ ಎಂದು ಅವರ ಬೆಂಬಲಿಗರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಅಲ್ಲದೇ ಶನಿವಾರದ ಆದೇಶದಲ್ಲಿ ಉಸ್ತುವಾರಿ ಬದಲು ಧ್ವಜಾರೋಹಣ ಎಂದಾಗಬೇಕಿತ್ತು. ಆದೇಶ ಹೊರಡಿಸುವಾಗ ತಪ್ಪಾಗಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಸಚಿವ ಆನಂದ್ ಸಿಂಗ್ ಆಪ್ತರು ಸಮಜಾಯಿಷಿ ನೀಡಿದರು.
ಸಿಂಗ್‌ಗೂ ಖಾತೆ ಬದಲಾವಣೆಗೂ ನಂಟು!
ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಆನಂದ ಸಿಂಗ್ ಖಾತೆ ನಿರಂತರ ಬದಲಾವಣೆ ಆಗಿವೆ. ಅವರಿಗೆ ಅರಣ್ಯ ಖಾತೆಯಿಂದ ವಕ್ಫ್ ಖಾತೆ ನೀಡಲಾಗಿತ್ತು. ಜತೆಗೆ ಸಣ್ಣ ನೀರಾವರಿ ಖಾತೆಯನ್ನೂ ವಹಿಸಲಾಗಿತ್ತು. ನಿರಂತರ ಖಾತೆ ಬದಲಾವಣೆಯಿಂದ ಬೇಸತ್ತು ಅವರು ಮುನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮತ್ತೆ ವಿಜಯನಗರ ಉಸ್ತುವಾರಿ ನೀಡಿ, ಬದಲು ಮಾಡಲಾಗಿದೆ. ಆನಂದ್ ಸಿಂಗ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಯ್ದು ನೋಡಬೇಕು. ಮೂಲಗಳ ಪ್ರಕಾರ ಸ್ವತಃ ಸಿಎಂ ಅವರೇ ಆನಂದ ಸಿಂಗ್ ಅವರ ಜತೆಗೆ ಈ ವಿಷಯವಾಗಿ ಚರ್ಚಿಸಿದ್ದಾರೆ ಎನ್ನಲಾಗಿದು, ಅವರ ನಡುವೆ ನಡೆದ ಮಾತುಕತೆ ಬಹಿರಂಗವಾಗಿಲ್ಲ.