ಕಾರವಾರದಲ್ಲಿ ರಾಜಕೀಯ ಬದಲಾವಣೆ, ಕಾಂಗ್ರೆಸ್ ಸೇರಲು ಆನಂದ್ ಆಸ್ನೋಟಿಕರ್ ಸಿದ್ಧತೆ
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಕಾಣಿಸತೊಡಗಿವೆ. ಕರಾವಳಿ ಜಿಲ್ಲೆ ಕಾರವಾರದಲ್ಲೂ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಪಕ್ಷಾಂತರದ ಮೂಲಕವೇ ಹೆಸರು ಮಾಡಿದ್ದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮತ್ತೆ ಬೇರೆ ಪಕ್ಷಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಫೆ.21): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಕಾಣಿಸತೊಡಗಿವೆ. ಕರಾವಳಿ ಜಿಲ್ಲೆ ಕಾರವಾರದಲ್ಲೂ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಪಕ್ಷಾಂತರದ ಮೂಲಕವೇ ಹೆಸರು ಮಾಡಿದ್ದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮತ್ತೆ ಬೇರೆ ಪಕ್ಷಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಆನಂದ್ ಸದ್ಯ ರಾಷ್ಟ್ರೀಯ ಪಕ್ಷವೊಂದನ್ನ ಸೇರುತ್ತೇನೆ ಎನ್ನುವ ಮೂಲಕ ಪಕ್ಷಾಂತರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಈ ಮೂಲಕ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಇದರೊಂದಿಗೆ ಟಿಕೆಟ್ ಘೋಷಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವವೂ ಹೆಚ್ಚಾಗತೊಡಗಿದೆ. ಇದಕ್ಕೆ ಪೂರಕವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮತ್ತೆ ಪಕ್ಷಾಂತರವಾಗಲು ಸಿದ್ಧತೆ ನಡೆಸುತ್ತಿದ್ದಾರೆ.
ದಿ. ವಸಂತ ಆಸ್ನೋಟಿಕರ್ ಪುತ್ರನಾಗಿರುವ ಆನಂದ್ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರೂ, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರಿ ಮಂತ್ರಿಯಾಗಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ನಿಂತು ಸೋಲನ್ನು ಕಂಡ ನಂತರ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋಲನ್ನು ಕಂಡಿದ್ದರು. ಇದಾದ ನಂತರ ಕ್ಷೇತ್ರದಲ್ಲಿ ಪಕ್ಷೇತರವಾಗಿ ಕಣಕ್ಕೆ ಇಳಿಯುವುದಾಗಿ ಹೇಳುತ್ತಾ ವಿರೋಧಿಗಳನ್ನು ಕನ್‌ಫ್ಯೂಸ್ ಮಾಡ್ತಿದ್ದ ಆನಂದ್ ಸದ್ಯ ಮತ್ತೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಾರೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಿದಾಡತೊಡಗಿದೆ.
ಆನಂದ್ ಅಸ್ನೋಟಿಕರ್ ಅವರ ತಂದೆ ದಿವಂಗತ ವಸಂತ್ ಅಸ್ನೋಟಿಕರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಸ್ವತಃ ಆನಂದ್ ಅಸ್ನೋಟಿಕರ್ ತಮ್ಮ ಬೆಂಬಲಿಗರ ಮುಂದೆ ತಾನು ರಾಷ್ಟ್ರೀಯ ಪಕ್ಷವನ್ನ ಸೇರಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಅಂದಹಾಗೆ, ಆನಂದ್ ಆಸ್ನೋಟಿಕರ್ ತಂದೆ ವಂಸತ್ ಆಸ್ನೋಟಿಕರ್ ಕಾರವಾರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಇನ್ನು ತಾಯಿ ಶುಭಲತಾ ಆಸ್ನೋಟಿಕರ್ ಸಹ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾರವಾರ ಕ್ಷೇತ್ರದಲ್ಲಿ ಆಸ್ನೋಟಿಕರ್ ಕುಟುಂಬಕ್ಕೆ ತನ್ನದೇ ಆದ ಹಿಡಿತವಿದ್ದರೂ ಆನಂದ್ ಅಸ್ನೋಟಿಕರ್ ಅವರ ಕೆಲವು ತಪ್ಪು ನಿರ್ಣಯದಿಂದ ರಾಜಕೀಯ ಹಿನ್ನೆಡೆಯಾಗಲು ಕಾರಣವಾಗಿದೆ ಎನ್ನುವುದು ಬೆಂಬಲಿಗರ ಅಭಿಪ್ರಾಯ. ಇದನ್ನು ಖುದ್ದಾಗಿ ಆನಂದ್ ಕೂಡಾ ಒಪ್ಪಿಕೊಂಡಿದ್ದಾರೆ.
ಇನ್ನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸದೇ ತಟಸ್ಥವಾಗಿರಲು ಅಸ್ನೋಟಿಕರ್ ನಿರ್ಧರಿಸಿದ್ದು, ತನ್ನ ರಾಜಕೀಯ ಸ್ಥಿರತೆ ಹಾಗೂ ಸ್ಥಾನಕ್ಕಾಗಿ ಈ ಬಾರಿ ವಿಧಾನಸಭಾ ಚುನಾವಣೆಯನ್ನು ತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಇನ್ನು ಕಾಂಗ್ರೆಸ್ ಸೇರುವ ಮುನ್ನವೇ ಬಿಜೆಪಿಯನ್ನು ಟಾರ್ಗೆಟ್ ಮಾಡಲಾರಂಭಿಸಿರುವ ಆನಂದ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಲ್ಲಿ ಹಾಗೂ ಕ್ಷೇತ್ರದ ಅಭಿವೃದ್ಧಿ ಕೊರತೆ ವಿಚಾರದಲ್ಲಿ ಸರಕಾರ, ಜನಪ್ರತಿನಿಧಿಗಳು ನಿರ್ಲಕ್ಷ್ಯತೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ.
ಸದ್ಯ ಕ್ಷೇತ್ರದಲ್ಲಿ ಸತೀಶ್ ಸೈಲ್ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಿದ್ದರೂ ಒಂದೊಮ್ಮೆ ಸೈಲ್ ಪಕ್ಷೇತರವಾಗಿ ಕಣಕ್ಕೆ ಇಳಿದರೆ ಆನಂದ್ ಅಸ್ನೋಟಿಕರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡುವ ಚಿಂತನೆ ಪಕ್ಷಕ್ಕಿದೆ. ಇನ್ನು ಸತೀಶ್ ಸೈಲ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಆನಂದ್ ಆಸ್ನೋಟಿಕರ್ ಅವರನ್ನು ಲೋಕಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡ್ತಾರೆ ಅನ್ನೋ ಮಾತುಗಳೂ ಕೇಳಿಬರುತ್ತಿವೆ. ಇದೇ ಹಿನ್ನಲೆಯಲ್ಲಿ ಪದೇ ಪದೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಕರೆಗಳು ಬಂದರೂ ಅವರ ಪರವಾಗಿ ನಿಲ್ಲುವುದು ಬಿಟ್ಟು ಕಾಂಗ್ರೆಸ್ ಸೇರಲು ಆನಂದ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
Chikkamagaluru: ಹಳೇ ದೋಸ್ತಿಗಳ ಹೊಸ ಜಗಳ, 18 ವರ್ಷದ ಆಪ್ತಮಿತ್ರ ತಮ್ಮಯ್ಯ
ಒಂದು ವೇಳೆ ಸತೀಶ್ ಸೈಲ್ ಹಾಗೂ ಆನಂದ್ ಆಸ್ನೋಟಿಕರ್ ಒಂದಾದಲ್ಲಿ ಅತ್ತ ಸೈಲ್ ಬೆಂಬಲಿಗರು ಹಾಗೂ ಇತ್ತ ಆನಂದ್ ಬೆಂಬಲಿಗರು ಒಟ್ಟಾಗುವುದರಿಂದ ಕಾರವಾರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಲಿದೆ. ಇದು ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಭಾರೀ ಹೊಡೆತ ನೀಡುವ ಸಾಧ್ಯತೆಗಳಿವೆ. ಸತೀಶ್ ಸೈಲ್ ಹಾಗೂ ಆನಂದ್ ಬೇರೆ ಬೇರೆಯಾದಲ್ಲಿ ಮಾತ್ರ ಮತಗಳು ವಿಭಜನೆಯಾಗಿ ಶಾಸಕಿ ರೂಪಾಲಿಗೆ ಪಾಸಿಟಿವ್ ಆಗಲಿದೆ.
ಕಾರವಾರ: ಆನಂದ್ ಆಸ್ನೋಟಿಕರ್ ಕನ್‌ಫ್ಯೂಶನ್ ತಂತ್ರ, ಗೊಂದಲದಲ್ಲಿ ಪ್ರತಿಸ್ಪರ್ಧಿಗಳು..!
ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಚುರುಕುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಎದುರಾಳಿಗಳು ಊಹಿಸಲು ಆಗದಂತೆ ಗೇಮ್ ಪ್ಲ್ಯಾನ್ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಯಾವ ಪಕ್ಷಗಳು ಯಾವ ನಿರ್ಧಾರ ಕೈಗೊಳ್ಳಲಿವೆ, ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ, ಯಾವ ತಂತ್ರಗಳನ್ನು ಪಕ್ಷಗಳು ಕೈಗೊಳ್ಳುತ್ತವೆ ಅನ್ನೋದನ್ನು ಕಾದು ನೋಡಬೇಕಷ್ಟೇ.