ಸಮಾಜದಲ್ಲಿ ಅಸಮಾನತೆಗೆ ನಾವು ಕಾರಣರಲ್ಲ. ಬಹುತ್ವ ಸಮಾಜವನ್ನು ದೂರ ಇಟ್ಟಿರುವುದು, ಚಾತುವರ್ಣ ವ್ಯವಸ್ಥೆಯೂ ಸಹ ಅಸಮಾನತೆಗೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ತುಮಕೂರು (ಜೂ.22): ಸಮಾಜದಲ್ಲಿ ಅಸಮಾನತೆಗೆ ನಾವು ಕಾರಣರಲ್ಲ. ಬಹುತ್ವ ಸಮಾಜವನ್ನು ದೂರ ಇಟ್ಟಿರುವುದು, ಚಾತುವರ್ಣ ವ್ಯವಸ್ಥೆಯೂ ಸಹ ಅಸಮಾನತೆಗೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಹಕಾರ ಸಚಿವ ಕೆ.ಎನ್.ರಾಜಣ್ಣನವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟನೆ ಹಾಗೂ ‘ಸಹಕಾರ ಸಾರ್ವಭೌಮ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ದ್ವೇಷ, ಸೇಡಿನಿಂದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಎಲ್ಲರಲ್ಲೂ ಮನುಷ್ಯತ್ವ ಇರಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ, ಸಾಮಾಜಿಕ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯ ಪಿಡುಗನ್ನು ತೊಲಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ರಾಜಕಾರಣಿಗಳು ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮನುಷ್ಯನಿಗೆ ಜಾತಿ ಮುಖ್ಯವಲ್ಲ, ಸ್ನೇಹ ಮುಖ್ಯ. ಮನುಷ್ಯ ಸಂಬಂಧ ಮುಖ್ಯ. ಇದನ್ನು ನಾವೆಲ್ಲಾ ಅರಿತು ಬದುಕು ನಡೆಸಬೇಕು. ಹೀಗಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ರಾಜಕಾರಣದಲ್ಲಿ ಇರುವವರು ಬದ್ಧತೆ, ನಂಬಿಕೆಯಿಂದ ನಡೆದುಕೊಳ್ಳಬೇಕು. ಇದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಹುಟ್ಟು ಸಾವಿನ ನಡುವೆ ಸಾರ್ಥಕ ಬದುಕು ನಡೆಸಬೇಕು. ಈ ನಿಟ್ಟಿನಲ್ಲಿ ಸಹಕಾರ ಸಚಿವ ರಾಜಣ್ಣ ಅವರು ಬದುಕನ್ನು ಸಾರ್ಥಕತೆ ಮಾಡಿಕೊಂಡಿದ್ದಾರೆ ಎಂದರು.
ರಾಜಣ್ಣ ನೇರ ನಡೆ-ನುಡಿ, ನಿಷ್ಠೂರವಾದಿ. ನೇರ ನಡೆ, ನಿಷ್ಠೂರವಾದಿತನ ಸ್ವಾಭಿಮಾನದ ಸಂಕೇತ. ಸ್ವಾಭಿಮಾನ ಇಲ್ಲದೇ ಹೋದರೆ ದಾಸ್ಯ ಮನೆ ಮಾಡುತ್ತದೆ. ಈ ದಾಸ್ಯವನ್ನು ಮನೆ ಮಾಡಲು ಅವಕಾಶ ನೀಡದೆ ಕಿತ್ತೊಗೆಯಬೇಕು ಎಂದು ಅವರು ಕರೆಯಿತ್ತರು. ರಾಜಕಾರಣದಲ್ಲಿ ಹಲವು ಜನ ಬರುತ್ತಾರೆ, ಹೋಗುತ್ತಾರೆ. ಅವರ ಕಷ್ಟದಲ್ಲಿ ಭಾಗಿಯಾಗಬೇಕು ಎಂಬ ಕಾಳಜಿ ರಾಜಣ್ಣನವರಿಗಿದೆ. ಇದು ಅವರ ದೊಡ್ಡ ಗುಣ. ಈ ಗುಣ ಎಲ್ಲ ರಾಜಕಾರಣಿಗಳಲ್ಲೂ ಇರಬೇಕು ಎಂದು ಹೇಳಿದರು.
ಸಹಕಾರಿ ಕ್ಷೇತ್ರ ಎಂದರೆ ಜನ ಸೇವೆ ಎಂದು ತಿಳಿದುಕೊಂಡಿರುವ ರಾಜಕಾರಣಿ ರಾಜಣ್ಣ. ಇವರಿಗೆ ಬಡವರ ಬಗ್ಗೆ ಅಪಾರ ಕಾಳಜಿ, ಅನುಕಂಪ ಇದೆ. ಇವರ ಈ ಗುಣ ನನಗೆ ಬಹಳ ಇಷ್ಟವಾಗುತ್ತದೆ. ಹಾಗಾಗಿಯೇ ನಾನು ಅವರ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸ ಹೊಂದಿದ್ದೇನೆ ಎಂದರು. ರಾಜಣ್ಣ ಅವರು ಮೀಸಲು ಕ್ಷೇತ್ರವನ್ನು ಬಿಟ್ಟು ಮಧುಗಿರಿ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸುತ್ತಿದ್ದಾರೆ. ಇದು ಅವರಿಗೆ ಎಲ್ಲ ವರ್ಗದ ಜನರ ಮೇಲೆ ಇರುವ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆವು.
ಈ ಅನ್ನಭಾಗ್ಯ ಎಂದು ಹೆಸರು ಇಟ್ಟವರು ಸಾಹಿತಿ ಬರಗೂರು ರಾಮಚಂದ್ರನವರು ಎಂದು ಹೇಳಿದ ಅವರು, ಸಚಿವ ರಾಜಣ್ಣನವರು ನೂರು ವರ್ಷಗಳಿಗೂ ಹೆಚ್ಚು ಕಾಲ ಬಾಳಲಿ, ಬಡವರು, ದೀನ ದಲಿತರ ಸೇವೆ ಮಾಡಲು ಇನ್ನಷ್ಟು ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಹಕಾರಿ ರಂಗದಲ್ಲಿ ಕೆ.ಎನ್.ರಾಜಣ್ಣನವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಳೆದ 40 ವರ್ಷದಲ್ಲಿ ಸಹಕಾರಿ ರಂಗ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಮತ್ತು ಜಿಲ್ಲೆಗೆ ಇನ್ನು ದೀರ್ಘಾವಧಿ ಸೇವೆ ಸಲ್ಲಿಸಲು ಇವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ಹೇಳಿದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೆ.ಎನ್. ರಾಜಣ್ಣ ಅವರು ಒಬ್ಬ ಅತ್ಯುತ್ತಮ ರಾಜಕಾರಣಿ. ರೈತರು, ಬಡವರ ಪರ ಹೋರಾಟಗಾರ. ಸದಾ ಬಡವರ ಸಂಕಷ್ಟಕ್ಕೆ ಮಿಡಿಯುವ ನಾಯಕ ಎಂದು ಬಣ್ಣಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜಕಾರಣದಲ್ಲಿ ಸಹಜವಾಗಿ ವಯಸ್ಸಾಗುತ್ತಿದ್ದಂತೆ ಜನಪ್ರಿಯತೆ ಕಡಿಮೆಯಾಗುತ್ತದೆ. ಆದರೆ ರಾಜಣ್ಣನವರ ವಿಚಾರದಲ್ಲಿ ಇದು ಸುಳ್ಳಾಗಿದ್ದು, ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಎಂದರು. ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ನಂಬಿಕೆ, ವಿಶ್ವಾಸಕ್ಕೆ ಮತ್ತೊಂದು ಹೆಸರು ರಾಜಣ್ಣ. ನೇರ, ನಿಷ್ಠೂರತೆ ಅವರ ಸ್ವಭಾವ. ಸಹಕಾರ ಕ್ಷೇತ್ರ ಹಾಗೂ ರಾಜಕಾರಣದಲ್ಲಿ ಅವರು ಅಪಾರ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆ.ಎನ್. ರಾಜಣ್ಣನವರ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.
