ಶಾಸಕರಾಗಿ ಆಯ್ಕೆಯಾದವರಲ್ಲಿ ಸಮಾಜ ಸೇವೆಯಲ್ಲಿರುವವರು, ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು, 224 ಶಾಸಕರ ಪೈಕಿ 12 ಎಂಜಿನಿಯರ್‌ಗಳು, 71 ಉದ್ಯಮಿಗಳು, 51 ಕೃಷಿಕರು, 32 ಬಿಸಿನೆಸ್‌ಮನ್‌ಗಳು, 139 ಮಂದಿ ಶಾಸಕರು ಡಿಗ್ರಿ/ಪಿಜಿ ಓದಿದವರು. 

ಬೆಂಗಳೂರು(ಮೇ.20): ವೈದ್ಯಕೀಯ ವ್ಯಾಸಂಗ ಮಾಡಿದ 15 ಜನರ ಪೈಕಿ 7 ವೃತ್ತಿಪರ ವೈದ್ಯರು, 21 ಕಾನೂನು ಪದವೀಧರರ ಪೈಕಿ 9 ವಕೀಲರು, 12 ಮಂದಿ ಎಂಜಿನಿಯರ್‌ಗಳು, 71 ಉದ್ಯಮಿಗಳು, 51 ಕೃಷಿಕರು, 32 ವ್ಯಾಪಾರ-ವಹಿವಾಟುದಾರರು, ಸಮಾಜಸೇವೆಯಲ್ಲಿ ತೊಡಗಿಕೊಂಡ 20 ಮಂದಿ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ 10ಕ್ಕೂ ಹೆಚ್ಚು ಜನ...

ಇದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾದವರ ಪೈಕಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡ ಪ್ರಮುಖರ ಅಂಕಿ-ಅಂಶ. ಒಟ್ಟು 224 ಶಾಸಕರಲ್ಲಿ 139 ಮಂದಿ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರು ಎಂಬುದು ಇನ್ನೊಂದು ವಿಶೇಷ.

ಬೆಂಗಳೂರು: ಸಿದ್ದು ಪದಗ್ರಹಣಕ್ಕೆ ಪೊಲೀಸ್‌ ಸರ್ಪಗಾವಲು..!

7 ಮಂದಿ ವೈದ್ಯರು ಆಯ್ಕೆ: 

ವೈದ್ಯಕೀಯ ಶಿಕ್ಷಣ ಪಡೆದವರು ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದವರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಕಣಕ್ಕಿಳಿದು ಗೆದ್ದಿದ್ದಾರೆ. ಒಟ್ಟು 224 ಶಾಸಕರಲ್ಲಿ 15 ಮಂದಿ ವೈದ್ಯಕೀಯ ಶಿಕ್ಷಣ ಪಡೆದವರು ಎಂಬುದು ಮತ್ತೊಂದು ಹೆಗ್ಗಳಿಕೆ. ಆದರೆ, ಇವರಲ್ಲಿ ವೈದ್ಯ ಶಿಕ್ಷಣ ಪಡೆದರೂ ವೈದ್ಯಕೀಯ ವೃತ್ತಿಯಲ್ಲಿರುವವರು ಕೇವಲ ಏಳು ಮಂದಿ ಮಾತ್ರ. ಉಳಿದವರು ಸಮಾಜ ಸೇವೆ ಸೇರಿ ಬೇರೆ ಬೇರೆ ವ್ಯವಹಾರಗಳನ್ನು ತಮ್ಮ ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ.

ಉದ್ಯಮಿಗಳೇ ಹೆಚ್ಚು:

ವಿಧಾನಸಭೆಗೆ ಜನ ಆರಿಸಿ ಕಳುಹಿಸಿಕೊಟ್ಟಿರುವ 71 ಉದ್ಯಮಿಗಳಲ್ಲಿ 42 ಮಂದಿ ಕಾಂಗ್ರೆಸ್ಸಿಗರಾದರೆ, 21 ಮಂದಿ ಬಿಜೆಪಿಗರು. ಜೆಡಿಎಸ್‌ನಿಂದ 4 ಮತ್ತು ಇಬ್ಬರು ಪಕ್ಷೇತರರೂ ಗೆದ್ದುಬಂದಿದ್ದಾರೆ. ಆಯ್ಕೆಯಾದ ಈ ಉದ್ಯಮಿ ಶಾಸಕರು ಸಕ್ಕರೆ ಕಾರ್ಖಾನೆ, ಗಣಿಗಾರಿಕೆ ಸೇರಿ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್‌ 5 ಗ್ಯಾರಂಟಿ ಸ್ಕೀಂ ಜಾರಿ ಹೇಗೆ?: ರಾಜ್ಯ ಸರ್ಕಾರದ ಬೊಕ್ಕಸಕ್ಕೆ 65,000 ಕೋಟಿ ಹೆಚ್ಚುವರಿ ಹೊರೆ

ಇನ್ನು ಕೃಷಿ ಕ್ಷೇತ್ರದಲ್ಲಿದ್ದುಕೊಂಡು ಶಾಸಕರಾಗಿ ಆಯ್ಕೆಯಾದ 51 ಮಂದಿಯಲ್ಲಿ 34 ಮಂದಿ ಕಾಂಗ್ರೆಸ್ಸಿಗರಾದರೆ, 12ಕ್ಕೂ ಹೆಚ್ಚು ಮಂದಿ ಬಿಜೆಪಿಯವರು. 5 ಮಂದಿ ಜೆಡಿಎಸ್‌ನಿಂದಲೂ ಶಾಸಕರಾಗಿ ಗೆದ್ದು ಬಂದಿದ್ದಾರೆ. ಇವರ ಜತೆಗೆ ರಿಯಲ್‌ ಎಸ್ಟೇಟ್‌ ಸೇರಿ ವಿವಿಧ ಬ್ಯುಸಿನೆಸ್‌ಗಳಲ್ಲಿ ತೊಡಗಿಕೊಂಡಿರುವ 32ಕ್ಕೂ ಹೆಚ್ಚು ಮಂದಿಯೂ ವಿಧಾನಸಭೆ ಪ್ರವೇಶಿಸಿದ್ದು, ಇವರಲ್ಲಿ 17 ಮಂದಿ ಕಾಂಗ್ರೆಸ್‌, 12 ಮಂದಿ ಬಿಜೆಪಿಯಿಂದ ಆರಿಸಿ ಬಂದಿದ್ದಾರೆ. ಜೆಡಿಎಸ್‌ನಿಂದಲೂ ಮೂವರು ಈ ರೀತಿಯ ವ್ಯವಹಾರಗಳಲ್ಲಿರುವವರು ವಿಧಾನಸಭೆಗೆ ಎಂಟ್ರಿ ಪಡೆದಿದ್ದಾರೆ.

9 ಮಂದಿ ವಕೀಲರು: 

ಕಾನೂನು ಪದವಿ ಓದಿರುವ 21 ಮಂದಿ ಈ ಬಾರಿ ಗೆದ್ದಿದ್ದರೂ ಇವರಲ್ಲಿ ಸಿದ್ದರಾಮಯ್ಯ ಸೇರಿ ಅನೇಕರು ವಕೀಲಿಕೆಯಿಂದ ದೂರವೇ ಉಳಿದಿದ್ದಾರೆ ಎಂಬುದು ಗಮನಾರ್ಹ. ಬದಲಾಗಿ ರಾಜಕಾರಣ ಅಥವಾ ಬೇರೆ ಉದ್ಯಮ, ವ್ಯವಹಾರಗಳು ಅಥವಾ ರಾಜಕಾರಣದಲ್ಲಿ ಅವರು ತಮ್ಮನ್ನು ತಾವು ಬ್ಯುಸಿಯಾಗಿಟ್ಟುಕೊಂಡಿದ್ದಾರೆ. ಸುಮಾರು 9 ಮಂದಿಯಷ್ಟೇ ವಕೀಲರಾಗಿ ಪ್ರ್ಯಾಕ್ಟೀಸ್‌ ಮಾಡುತ್ತಿದ್ದಾರೆ. ಇವರಲ್ಲಿ ಆರು ಮಂದಿ ಕಾಂಗ್ರೆಸ್ಸಿಗರಾದರೆ, ಮೂವರು ಬಿಜೆಪಿಯವರು.
ಸಮಾಜ ಸೇವಕರಿಗೂ ಮಣೆ: ಇಷ್ಟೇ ಅಲ್ಲದೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಒಟ್ಟು 20 ಮಂದಿ (12 ಕಾಂಗ್ರೆಸ್‌, 7 ಬಿಜೆಪಿ), 10ಕ್ಕೂ ಹೆಚ್ಚು ಮಂದಿ ಶಿಕ್ಷಣ ಸಂಸ್ಥೆ ನಡೆಸುವವರು, ಶಿಕ್ಷಣ ಸಂಸ್ಥೆಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರೂ ಶಾಸಕರಾಗುವ ಭಾಗ್ಯ ಪಡೆದಿದ್ದಾರೆ.