ನವದೆಹಲಿ(ಜೂ.07): ಅಕ್ಟೋಬರ್‌- ನವೆಂಬರ್‌ಗೆ ನಡೆಯಬೇಕಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ರಣಕಹಳೆ ಮೊಳಗಿಸಲಿದ್ದಾರೆ. ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಬಿಹಾರಕ್ಕೇ ತೆರಳಿ ಸಾಂಪ್ರದಾಯಿಕ ರಾರ‍ಯಲಿ ನಡೆಸುವ ಬದಲಿಗೆ ಅವರು ದೆಹಲಿಯಲ್ಲೇ ಕುಳಿತು ವರ್ಚುವಲ್‌ ರಾರ‍ಯಲಿಯಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಬಿಜೆಪಿಯ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಹಾಗೂ ಫೇಸ್‌ಬುಕ್‌ ಲೈವ್‌ ಮೂಲಕ ಅವರ ಭಾಷಣ ಬಿಹಾರ ಮತದಾರರನ್ನು ತಲುಪಲಿದೆ.

ಮುಂದಿನ ಸಿಎಂ ನಾನೇ, ಲಂಡನ್ ಮೂಲದ ಮಹಿಳೆ ಘೋಷಣೆ!

ಅಮಿತ್‌ ಶಾ ಭಾಷಣವನ್ನು ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳ 72 ಸಾವಿರ ಬೂತ್‌ಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಅಮಿತ್‌ ಶಾ ಭಾಷಣ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೂತ್‌ಗಳನ್ನು ನೆರೆದು ಭಾಷಣ ಕೇಳಲಿದ್ದಾರೆ. 1 ಲಕ್ಷಕ್ಕೂ ಅಧಿಕ ಜನ ಅಮಿತ್‌ ಶಾ ಭಾಷಣ ಆಲಿಸುವ ನಿರೀಕ್ಷೆ ಇದೆ.

2015ರಲ್ಲಿ ಜೆಡಿಯು- ಆರ್‌ಜೆಡಿ- ಕಾಂಗ್ರೆಸ್‌ ಮಹಾಗಠಬಂಧನ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. 2017ರಲ್ಲಿ ಗಠಬಂಧನ ತೊರೆದ ನಿತೀಶ್‌ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ. ಹಾಲಿ ವಿಧಾನಸಭೆಯ ಅವಧಿ ನ.29ಕ್ಕೆ ಮುಕ್ತಾಯವಾಗಲಿದೆ.