ತಮಿಳುನಾಡಿನಲ್ಲಿ 6 ತಿಂಗಳ ಕಾಲ ಅಣ್ಣಾಮಲೈ ಪಾದಯಾತ್ರೆ; ರಾಮೇಶ್ವರಂನಲ್ಲಿ ಅಮಿತ್ ಶಾ ಚಾಲನೆ
ಬಿಜೆಪಿ ಪಾದಯಾತ್ರೆ ರಾಜ್ಯದಲ್ಲಿ ಬದಲಾವಣೆಯನ್ನು ತರಲಿದೆ. ತಮಿಳುನಾಡನ್ನು ವಂಶಪಾರಂಪರ್ಯ ರಾಜಕಾರಣದಿಂದ ಮುಕ್ತಗೊಳಿಸಲಿದೆ. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲಿದೆ ಎಂದು ಅಮಿತ್ ಶಾ ಹೇಳಿದರು.
ರಾಮೇಶ್ವರಂ (ಜುಲೈ 29, 2023): ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಲು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಎನ್ ಮನ್ ಎನ್ ಮಕ್ಕಳ್ (ನನ್ನ ಭೂಮಿ ನನ್ನ ಜನತೆ) 6 ತಿಂಗಳ ಪಾದಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಚಾಲನೆ ನೀಡಿದರು. ಇದೇ ವೇಳೆ ಡಿಎಂಕೆ ಮತ್ತು ವಿಪಕ್ಷಗಳ ‘I.N.D.I.A’ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆ ರಾಜ್ಯದಲ್ಲಿ ಬದಲಾವಣೆಯನ್ನು ತರಲಿದೆ. ತಮಿಳುನಾಡನ್ನು ವಂಶಪಾರಂಪರ್ಯ ರಾಜಕಾರಣದಿಂದ ಮುಕ್ತಗೊಳಿಸಲಿದೆ. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲಿದೆ. ಕಳೆದ 9 ವರ್ಷದಲ್ಲಿ ಮೋದಿ ನೇತೃತ್ವದ ಸರ್ಕಾರ ಜಾತಿ, ಕುಟುಂಬ ಮತ್ತು ತುಷ್ಟೀಕರಣ ರಾಜಕೀಯದಿಂದ ದೂರ ಇದೆ. ಈ ಪಾದಯಾತ್ರೆ ಕೇವಲ ರಾಜಕೀಯಕ್ಕಷ್ಟೇ ಅಲ್ಲದೇ, ತಮಿಳು ಭಾಷೆಯನ್ನು ವಿಶ್ವಾದ್ಯಂತ ಹರಡಲು ನಡೆಸಲಾಗುತ್ತಿದೆ ಎಂದು ಹೇಳಿದರು.
ಇದನ್ನು ಓದಿ: ಅಮಿತ್ ಶಾ ಸಮ್ಮುಖದಲ್ಲಿ 2,400 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 1.44 ಲಕ್ಷ ಕೆಜಿ ಮಾದಕ ವಸ್ತುಗಳು ಭಸ್ಮ
ಇದೇ ವೇಳೆ ಡಿಎಂಕೆ ಮತ್ತು I.N.D.I.A ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಎಂಕೆ ಇಡೀ ರಾಷ್ಟ್ರದಲ್ಲಿ ಅತ್ಯಂತ ಭ್ರಷ್ಟಪಕ್ಷ, ಇವರು ಕಾಂಗ್ರೆಸ್ ಜೊತೆ ಸೇರಿ 370ನೇ ವಿಧಿ ರದ್ದತಿಯನ್ನು ವಿರೋಧಿಸಿದ್ದರು. ಕಾಶ್ಮೀರ ಭಾರತದಲ್ಲಿಲ್ಲವೇ ಎಂದು ಪ್ರಶ್ನಿಸಿದರು. ಹಾಗೆಯೇ ಹೆಸರು ಬದಲಾವಣೆ ಮಾಡಿಕೊಳ್ಳುವುದರಿಂದ ಯಾವುದೂ ಬದಲಾಗುವುದಿಲ್ಲ ಎಂದು I.N.D.I.A ವಿರುದ್ಧ ಕಿಡಿಕಾರಿದರು.
ಹೀಗಿರಲಿದೆ ಪಾದಯಾತ್ರೆ
ನನ್ನ ಭೂಮಿ, ನನ್ನ ಜನತೆ ಪಾದಯಾತ್ರೆ 5 ಹಂತಗಳಲ್ಲಿ1700 ಕಿ.ಮೀ. ದೂರ ಸಾಗಿ 2024 ರ ಜನವರಿ 11ಕ್ಕೆ ಚೆನ್ನೈನಲ್ಲಿ ಅಂತ್ಯವಾಗಲಿದೆ. ಯಾತ್ರೆ ಎಲ್ಲಾ 234 ವಿಧಾನಸಭೆ 39 ಲೋಕಸಭಾ ಕ್ಷೇತ್ರಗಳಲ್ಲಿ ಸಾಗಲಿದೆ.
ಇದನ್ನೂ ಓದಿ: ಅಮಿತ್ ಶಾ ಸಚಿವಾಲಯದ ಅಧಿಕಾರಿ ಎಂದು ಪ್ರಮುಖ ಸರ್ಕಾರಿ ಹುದ್ದೆಗೆ ಸೇರಲು ಯತ್ನಿಸಿದ ನಿರುದ್ಯೋಗಿ!