ಅಮಿತ್ ಶಾ ಸಮ್ಮುಖದಲ್ಲಿ 2,400 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 1.44 ಲಕ್ಷ ಕೆಜಿ ಮಾದಕ ವಸ್ತುಗಳು ಭಸ್ಮ
2416 ಕೋಟಿ ರೂ.ಬೆಲೆ ಬಾಳುವ 1.44 ಲಕ್ಷ ಕೆಜಿ ಮಾದಕ ವಸ್ತುಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಉಪಸ್ಥಿತಿಯಲ್ಲಿ ಸೋಮವಾರ ನಾಶ ಮಾಡಲಾಗಿದೆ.
ನವದೆಹಲಿ (ಜುಲೈ 17, 2023): ದೇಶದ ವಿವಿಧ ನಗರಗಳಲ್ಲಿ ವಶಪಡಿಸಿಕೊಂಡಿರುವ 2416 ಕೋಟಿ ರೂ.ಬೆಲೆ ಬಾಳುವ 1.44 ಲಕ್ಷ ಕೆಜಿ ಮಾದಕ ವಸ್ತುಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಉಪಸ್ಥಿತಿಯಲ್ಲಿ ಸೋಮವಾರ ನಾಶ ಮಾಡಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB), ಎಲ್ಲಾ ರಾಜ್ಯಗಳ ಮಾದಕವಸ್ತು ವಿರೋಧಿ ಕಾರ್ಯಪಡೆಗಳ (ANTFs) ಸಮನ್ವಯದಲ್ಲಿ ಸುಡಲಾಗಿದೆ.
ಈ ಪೈಕಿ ಮಧ್ಯಪ್ರದೇಶದಲ್ಲಿ 1.3 ಲಕ್ಷ ಕೆಜಿ, ಹೈದರಾಬಾದ್‌ನಲ್ಲಿ 6.5 ಸಾವಿರ ಕೆಜಿ, ಗುಜರಾತ್‌ನಲ್ಲಿ 4.2 ಸಾವಿರ ಕೆಜಿ, ಜಮ್ಮು ಕಾಶ್ಮೀರ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 4 ಸಾವಿರ ಕೆಜಿ, ಹರ್ಯಾಣದಲ್ಲಿ 2.4 ಸಾವಿರ ಕೆಜಿ, ತ್ರಿಪುರದಲ್ಲಿ 1.8 ಸಾವಿರ ಕೆಜಿ, ಅಸ್ಸಾಂನಲ್ಲಿ 1.4 ಸಾವಿರ ಕೆಜಿ, ಚಂಡೀಗಢದಲ್ಲಿ 229 ಕೆಜಿ, ಮಹಾರಾಷ್ಟ್ರದಲ್ಲಿ 159 ಕೆಜಿ ಹಾಗೂ ಗೋವಾದಲ್ಲಿ 25 ಕೆಜಿ ಮಾದಕ ವಸ್ತುಗಳನ್ನು ಅಮಿತ್ ಶಾ ಸಮ್ಮುಖದಲ್ಲಿ ನಾಶ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಕಾಶ್ಮೀರ ಯುವಕರಲ್ಲಿ ಹೆಚ್ಚಾಗ್ತಿದೆ ಚುಚ್ಚುಮದ್ದಿನ ಹೆರಾಯಿನ್ ಬಳಕೆ: ವೈದ್ಯರ ಎಚ್ಚರಿಕೆ; ಪೋಷಕರ ಕಳವಳ
ಇನ್ನು, “ಈ ಕ್ರಮವನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಲು ನಾನು ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಗೆ ವಿನಂತಿಸುತ್ತೇನೆ. ಈ ಹೋರಾಟವನ್ನು ಗೆಲ್ಲಲು ದೊಡ್ಡ ಹೆಜ್ಜೆಯೆಂದರೆ ಗರಿಷ್ಠ ಜಾಗೃತಿ ಮೂಡಿಸುವುದು. ಡ್ರಗ್ಸ್ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸುವವರೆಗೂ ನಾವು ಈ ಹೋರಾಟವನ್ನು ಗೆಲ್ಲಲು ಸಾಧ್ಯವಿಲ್ಲ...’’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಡ್ರಗ್ಸ್ ಟ್ರಾಫಿಕಿಂಗ್ ಮತ್ತು ರಾಷ್ಟ್ರೀಯ ಭದ್ರತೆ’ ಕುರಿತ ಪ್ರಾದೇಶಿಕ ಸಮ್ಮೇಳನವನ್ನು ಉದ್ದೇಶಿಸಿ ಹೇಳಿದರು.
ಡ್ರಗ್ಸ್ ಹಾವಳಿ ವಿರುದ್ಧದ ಕಾರ್ಯಾಚರಣೆಯಲ್ಲಿ 160% ಹೆಚ್ಚಳ: ಅಮಿತ್ ಶಾ
ಡ್ರಗ್ಸ್ ಹಾವಳಿ ವಿರುದ್ಧದ ಕಠಿಣ ಕ್ರಮದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ. 2006ರಿಂದ 2013ರವರೆಗೆ ಒಟ್ಟು 1,250 ಪ್ರಕರಣಗಳು ದಾಖಲಾಗಿದ್ದು, 1.52 ಲಕ್ಷ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ 2023ರವರೆಗೆ 3,700 ಪ್ರಕರಣಗಳು ದಾಖಲಾಗಿದ್ದು, 3.94 ಲಕ್ಷ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಗಳ ದಾಖಲಾತಿ ಹಾಗೂ ಡ್ರಗ್ಸ್ ವಸೂಲಿಯಲ್ಲಿ ಶೇ.160 ರಷ್ಟು ಹೆಚ್ಚಳವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ, ಮಾದಕ ವ್ಯಸನಿ: ಅವರನ್ನು ಮ್ಯೂಸಿಯಂನಲ್ಲಿಡಬೇಕು ಎಂದ ಪಾಕ್ ಆರೋಗ್ಯ ಸಚಿವ
ಜೂನ್ 1, 2022 ರಿಂದ ಜುಲೈ 15, 2023 ರವರೆಗೆ, NCB ಯ ಎಲ್ಲಾ ಪ್ರಾದೇಶಿಕ ಘಟಕಗಳು ಮತ್ತು ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳು ಅಂದಾಜು ₹ 9,580 ಕೋಟಿ ಮೌಲ್ಯದ ಅಂದಾಜು 8,76,554 ಕೆಜಿ ವಶಪಡಿಸಿಕೊಂಡ ಡ್ರಗ್‌ಗಳನ್ನು ನಾಶಪಡಿಸಿವೆ. ಇದು ಗುರಿಗಿಂತ 11 ಪಟ್ಟು ಹೆಚ್ಚು ಎಂದೂ ತಿಳಿದುಬಂದಿದೆ.
ಇಂದಿನ ಕಾರ್ಯಾಚರಣೆಯು ಒಂದೇ ವರ್ಷದಲ್ಲಿ ನಾಶವಾದ ಒಟ್ಟು ಔಷಧಗಳ ಪ್ರಮಾಣವನ್ನು ಸುಮಾರು 10 ಲಕ್ಷ ಕೆಜಿಗೆ ತರುತ್ತದೆ. ಈ ಡ್ರಗ್ಸ್‌ಗಳ ಒಟ್ಟು ಮೌಲ್ಯ ₹ 12,000 ಕೋಟಿ. ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸಾಗಿಸುವ ಸಲುವಾಗಿ ಮಾದಕ ದ್ರವ್ಯ ನಾಶದ ಈ ಅಭಿಯಾನವು ಸಕ್ರಿಯವಾಗಿ ಮತ್ತು ಅದೇ ಉತ್ಸಾಹದಿಂದ ಮುಂದುವರಿಯುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!