ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ
ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ ಮಾಡಿದ್ದೇವೆ. ಆದಿಬಣಜಿಗ ಸಮಾಜ 2ಡಿಯಲ್ಲಿ ಸೇರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ (ಏ.07): ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ ಮಾಡಿದ್ದೇವೆ. ಆದಿಬಣಜಿಗ ಸಮಾಜ 2ಡಿಯಲ್ಲಿ ಸೇರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಉಣಕಲ್‌ನ ಸಿದ್ದೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಆದಿಬಣಜಿಗ ಸಮುದಾಯವನ್ನು ರಾಜ್ಯ ಸರ್ಕಾರ ಪ್ರವರ್ಗ-2ಡಿಗೆ ಸೇರಿಸಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವೀರಶೈವ-ಲಿಂಗಾಯತ ಆದಿಬಣಜಿಗರ ಸಂಘದಿಂದ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡುತ್ತಾ, ಹಲವು ಸಮುದಾಯಗಳನ್ನು ಮುಖ್ಯ ವಾಹಿನಿಯಿಂದ ದೂರ ಇಟ್ಟವರೇ ಹೆಚ್ಚಾಗಿದ್ದರು. ಜನರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದರು.
ಆದರೆ ನಾವು ಯಾವುದೇ ಸಮುದಾಯದವರಿಗೆ ಅನ್ಯಾಯ ಆಗದಂತೆ ಮೀಸಲಾತಿ ಕಲ್ಪಿಸಿದ್ದೇವೆ ಎಂದರು. 2016ರಲ್ಲಿ ಕೇಂದ್ರ ಸರ್ಕಾರ ಹಿಂದುಳಿದ ಆಯೋಗಕ್ಕೆ ಸಂವಿಧಾನಾತ್ಮಕ ಅಧಿಕಾರ ನೀಡಿತ್ತು. ಆದಿಬಣಜಗ ಸಮಾಜಕ್ಕೆ 2ಡಿ ಮೀಸಲಾತಿ ನೀಡುವುದಕ್ಕೆ ಇದೇ ಕಾರಣ. ಹಾಗಾಗಿ ಪ್ರಧಾನಿ ಮೋದಿ ಅವರಿಗೆ ನಾವು ಮೊದಲು ಅಭಿನಂದನೆ ತಿಳಿಸಬೇಕಾಗಿದೆ. ಸಾಕಷ್ಟುಬಾರಿ ಈ ಸಮುದಾಯದವರು ತಮ್ಮ ಸಮಸ್ಯೆ ಕುರಿತು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಕಳೆದ ವರ್ಷದಿಂದ ಹಿಂದುಳಿದ ಆಯೋಗದ ಬೆನ್ನು ಹತ್ತಿ ಸಾಕಷ್ಟುಅಧ್ಯಯನ ಮಾಡಿ ಈ ಸಮಾಜಕ್ಕೆ ನ್ಯಾಯ ಒದಗಿಸಲಾಗಿದೆ. ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ ಎಂದರು.
ಇದೇ ನನ್ನ ಕೊನೆಯ ಚುನಾವಣೆ: ಸಚಿವ ಬಿ.ಸಿ.ಪಾಟೀಲ್ ಘೋಷಣೆ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಆದಿಬಣಜಿಗ ಸಮುದಾಯದ ಮೀಸಲಾತಿ ಕೂಗು ಬಹುವರ್ಷಗಳಿಂದ ಕೇಳಿ ಬರುತ್ತಿತ್ತು. ಯಾವ ಸರ್ಕಾರವೂ ಅದಕ್ಕೆ ಪರಿಹಾರ ಒದಗಿಸಲು ಗಮನಹರಿಸಲಿಲ್ಲ. ಆದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸುದೀರ್ಘ ಅಧ್ಯಯನ ಮಾಡಿ ಸೂಕ್ತ ಪರಿಹಾರ ಒದಗಿಸಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿ ಸೇರಿದಂತೆ ಅನೇಕ ದಿಟ್ಟಕ್ರಮ ಕೈಗೊಳ್ಳಲಾಗಿದೆ ಎಂದರು. ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಕ್ಕಳಿಗೆ ಶಿಕ್ಷಣ, ಉದ್ಯೋಗ ಒದಗಿಸಲು ಒಂದು ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಅಗತ್ಯವಾಗಿದೆ. ಬಿಜೆಪಿ ಸರ್ಕಾರ ಆ ನಿಟ್ಟಿನಲ್ಲಿ ಎಲ್ಲ ವರ್ಗದ ಜನರಿಗೆ ನ್ಯಾಯ ಕಲ್ಪಿಸಿದೆ. ಸುಂದರ ಕರ್ನಾಟಕ ನಿರ್ಮಿಸುವ ಕಾರ್ಯ ಮಾಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಶಶಿಕಲಾ ಜೊಲ್ಲೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಸಂಘದ ರಾಜ್ಯಾಧ್ಯಕ್ಷ ಆರ್.ಬಿ. ಶಂಕರಗೌಡರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ವರುಣದಿಂದ ಸೋಮಣ್ಣ ಕಣಕ್ಕಿಳಿಸಲು ಯತ್ನ: ಸಿದ್ದು ವಿರುದ್ಧ ಸ್ಪರ್ಧಿಸುತ್ತೀರಾ ಎಂದು ಕೇಳಿದ ಬಿಜೆಪಿ
ಉಣಕಲ್ಲಿನ ಮಠಕ್ಕೆ ನಾನು ಬಂದರೆ ಹೆಣ್ಣು ಮಗಳು ತವರು ಮನೆಗೆ ಬಂದಷ್ಟೇ ಸಂತೋಷ ಆಗುತ್ತದೆ. ನಮ್ಮ ತಂದೆ ಇಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಈ ಕ್ಷೇತ್ರದ ವಿಷಯ ಬಂದರೆ ಎಂದಿಗೂ ನಾನು ಭಾವನಾತ್ಮಕವಾಗುತ್ತೇನೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ