ವರುಣದಿಂದ ಸೋಮಣ್ಣ ಕಣಕ್ಕಿಳಿಸಲು ಯತ್ನ: ಸಿದ್ದು ವಿರುದ್ಧ ಸ್ಪರ್ಧಿಸುತ್ತೀರಾ ಎಂದು ಕೇಳಿದ ಬಿಜೆಪಿ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ವರುಣ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವ ಆಡಳಿತಾರೂಢ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ವಸತಿ ಸಚಿವ ವಿ.ಸೋಮಣ್ಣ ಅವರ ಅಭಿಪ್ರಾಯವನ್ನು ಕೇಳಿದ್ದಾರೆ.
ಬೆಂಗಳೂರು (ಏ.07): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ವರುಣ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವ ಆಡಳಿತಾರೂಢ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ವಸತಿ ಸಚಿವ ವಿ.ಸೋಮಣ್ಣ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಗುರುವಾರ ರಾತ್ರಿ ನಗರದ ಚಾಮರಾಜಪೇಟೆಯಲ್ಲಿನ ಸಂಘ ಪರಿವಾರದ ಕೇಂದ್ರ ಕಚೇರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರೊಂದಿಗೆ ಸೋಮಣ್ಣ ಅವರೂ ಭೇಟಿ ನೀಡಿದ್ದರು. ಈ ವೇಳೆ ವರುಣ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಚರ್ಚೆಯಾಗಿದೆ. ತಾವು ಕಣಕ್ಕಿಳಿಯಬಹುದೇ ಎಂಬ ಅಭಿಪ್ರಾಯವನ್ನು ಸಂಘ ಪರಿವಾರದ ಮುಖಂಡರು ಕೇಳಿದ್ದು, ಇದಕ್ಕೆ ಸೋಮಣ್ಣ ಅವರು ಸ್ಪಷ್ಟಉತ್ತರ ನೀಡದೆ ಯೋಚಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ವಾಸ್ತವವಾಗಿ ಸೋಮಣ್ಣ ಅವರು ಹಾಲಿ ಪ್ರತಿನಿಧಿಸುವ ಗೋವಿಂದರಾಜನಗರ ಕ್ಷೇತ್ರದ ಬದಲು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಜತೆಗೆ ಗೋವಿಂದರಾಜನಗರ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆಯೂ ಮನವಿ ಮಾಡಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ಇನ್ನೂ ಯಾವುದೇ ನಿರ್ಧಾರ ತಿಳಿಸಿಲ್ಲ. ಅದರ ಮಧ್ಯೆ ವರುಣ ಕ್ಷೇತ್ರದಿಂದ ಸೋಮಣ್ಣ ಅವರು ಕಣಕ್ಕಿಳಿಯಲು ಒಪ್ಪಿಕೊಂಡಲ್ಲಿ ತಾವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಷರತ್ತು ವಿಧಿಸಬಹುದು ಅಥವಾ ಪುತ್ರನಿಗೆ ಗೋವಿಂದರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬೇಡಿಕೆ ಮುಂದಿಡಬಹುದು ಎನ್ನಲಾಗುತ್ತಿದೆ.
ನಟ ಸುದೀಪ್ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ: ಸತೀಶ್ ಜಾರಕಿಹೊಳಿ
ಈ ಹಿಂದೆ ವರುಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರೂ ಆಗಿರುವ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಬಲವಾಗಿ ಕೇಳಿಬರತೊಡಗಿತ್ತು. ಆದರೆ, ಇದಕ್ಕೆ ಬಲವಾಗಿ ಬ್ರೇಕ್ ಹಾಕಿದ ಯಡಿಯೂರಪ್ಪ ಅವರು ವಿಜಯೇಂದ್ರ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದರು. ಹೀಗಾಗಿ, ಇದೀಗ ಸೋಮಣ್ಣ ಅವರ ಹೆಸರು ಕೇಳಿಬರುತ್ತಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಜನರನ್ನು ಸೂರ್ಯನಂತೆ ಒಂದೇ ರೀತಿ ನೋಡಿದ್ದೇನೆ: ನಾನು ಪಾರದರ್ಶಕವಾಗಿ ಕೆಲಸ ಮಾಡಿದ್ದು, ನನಗೆ ಜಾತಿ, ಅಂತಸ್ತು ಇಲ್ಲ. ಕ್ಷೇತ್ರದ ಜನರನ್ನು ಸೂರ್ಯನಂತೆ ಒಂದೇ ರೀತಿಯಲ್ಲಿ ನೋಡಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಚಂದ್ರಾ ಲೇಔಟ್‌ನಲ್ಲಿ ಗೊವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ನಂಬಿದವರನ್ನು ಯಾರು ಕೈಬಿಟ್ಟಿಲ್ಲ. ಪಕ್ಷ ಎಂದರೆ ತಾಯಿ ಎಂದು ಭಾವಿಸಿದ್ದೇನೆ. ಕೋವಿಡ್ ವೇಳೆಯಲ್ಲಿ ಆಹಾರ ಸಾಮಗ್ರಿಗಳನ್ನು, ಔಷಧಿಗಳನ್ನು, ಊಟ ಪ್ರತಿದಿನ ನೀಡಿರುವ ಕೀರ್ತಿ ಬಿಜೆಪಿಯದ್ದು. ಸಾಯುವವರೆಗೆ ಕ್ಷೇತ್ರದ ಜನರ ಋುಣ ತೀರಿಸುತ್ತೇನೆ. ನಿಮ್ಮ ಒಂದು ಮತ ಎಷ್ಟುಕೆಲಸ ಮಾಡಿದೆ ಎನ್ನುವುದನ್ನು ಕ್ಷೇತ್ರದಲ್ಲಿ ಓಡಾಡಿಕೊಂಡು ಬಂದರೆ ಗೊತ್ತಾಗುತ್ತದೆ. ಇಡೀ ಕ್ಷೇತ್ರದಲ್ಲಿ 800 ಬೋರ್‌ವೇಲ್‌ಗಳು, 22 ಇಂಗ್ಲೀಷ್ ಶಾಲೆಗಳನ್ನು ಮಾಡಿದ್ದೇವೆ. ಬಡಮಕ್ಕಳು ಓದಲು ಅನುಕೂಲ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಗೆ ಮತ್ತೆ ಅಧಿಕಾರ ಖಚಿತ: ಬಿ.ಎಲ್.ಸಂತೋಷ್ ಭವಿಷ್ಯ
ಚುನಾವಣೆ ಬಂತು ಎಂದು ಯಾಮಾರಿಸಲು ಆಗಲ್ಲ. ಕ್ಷೇತ್ರದ ಜನ ಸ್ವಾಭಿಮಾನಿಗಳಾಗಿದ್ದು, ಕೆಲಸ ಮಾಡುವವರಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಪಕ್ಷ ಎರಡು ದಿನದಲ್ಲಿ ಪಟ್ಟಿಬಿಡುಗಡೆ ಮಾಡಲಿದೆ. ಸರ್ಕಾರದ ಸವಲತ್ತನ್ನು ಜನರ ಮನೆಗೆ ತಂದಿದ್ದೇನೆ. ಒಂದೂವರೆ, ಎರಡು ಸಾವಿರ ರು.ಗೆ ಮತ ಮಾರಿಕೊಳ್ಳಬೇಡಿ. ಗೋವಿಂದರಾಜ ನಗರದಲ್ಲಿ 2,800 ಕೋಟಿ ರು. ಮೌಲ್ಯದ ಆಸ್ತಿಯನ್ನು ಉಳಿಸಿದ್ದೇನೆ. ಗೋವಿಂದರಾಜ ನಗರದಲ್ಲಿ ಬಿಜೆಪಿಗೆ ಮತ ಹಾಕಬೇಕು. ಒಂದು ಮತಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಕ್ಷೇತ್ರದ ಜನರ ದುಃಖ, ದುಮ್ಮಾನದಲ್ಲಿ ಭಾಗಿದ್ದೇನೆ. ಬಿಜೆಪಿಯನ್ನು ಗೆಲ್ಲಿಸಿ ಮುಂದಿನ ಸರ್ಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದೇ ಬರುತ್ತದೆ ಎಂದರು.