ಇದು ಅಭಿವೃದ್ಧಿ, ಒಡೆದಾಳುವ ನೀತಿಯ ನಡುವಿನ ಚುನಾವಣೆ, ಬಹಿರಂಗ ಪ್ರಚಾರದ ಕೊನೆ ದಿನ ತವರು ಕ್ಷೇತ್ರದಲ್ಲಿ ಸಿಎಂ ಭರ್ಜರಿ ಪ್ರಚಾರ, ಶಿಗ್ಗಾಂವಿ- ಸವಣೂರು ಕ್ಷೇತ್ರದಲ್ಲಿ ರೋಡ್ ಶೋ, ಬಹಿರಂಗ ಪ್ರಚಾರ. ನಾನು ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್‌ಡಿಕೆ, ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡಿ: ಡಿಕೆಶಿ.
ಶಿಗ್ಗಾಂವಿ/ಸವಣೂರು(ಮೇ.09): ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ನಡುವೆ ನಡೆದಿದೆ. ಈ ಬಾರಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಬಹಿರಂಗ ಪ್ರಚಾರದ ಕೊನೆದ ದಿನವಾದ ಸೋಮವಾರ ಸ್ವಕ್ಷೇತ್ರ ಶಿಗ್ಗಾಂವಿಯ ವನಹಳ್ಳಿ, ಹನುಮನಹಳ್ಳಿ, ಹಿರೇಮಲ್ಲೂರು, ಸವಣೂರು ತಾಲೂಕಿನ ಮಂತ್ರೋಡಿ, ಸವಣೂರು ಪಟ್ಟಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮಾತನಾಡಿದರು.
ಡಬಲ್ ಎಂಜಿನ್ ಸರ್ಕಾರದ ಸಾಧನೆ ಇಟ್ಟುಕೊಂಡು ನಾವು ಮತ ಕೇಳುತ್ತಿದ್ದೇವೆ. ಹಿಂದಿನ ಸಮ್ಮಿಶ್ರದಿಂದ ಬೇಸತ್ತು ಅನೇಕ ಶಾಸಕರು ನಮ್ಮ ಜತೆ ಬಂದರು. ಇದರಿಂದ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷದ ಆಡಳಿತದಲ್ಲಿ ಕ್ಷೇತ್ರ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೋವಿಡ್ ವೇಳೆ ಪ್ರಧಾನಿ ನರೇಂದ್ರ ಮೋದಿ ಉಚಿತ ಲಸಿಕೆ ನೀಡಿದ್ದರಿಂದ ಎಲ್ಲರೂ ಆರೋಗ್ಯ ಸುರಕ್ಷಾ ಚಕ್ರದಲ್ಲಿ ಇರುವಂತಾಯಿತು. ಬೆಳೆ ಹಾನಿಗೆ ಡಬಲ್ ಪರಿಹಾರ ಕೊಟ್ಟಿದ್ದೇವೆ. ರೈತರ ಸಂಕಷ್ಟನನಗೆ ಗೊತ್ತಿದೆ. ಅದಕ್ಕಾಗಿ ಸಿಎಂ ಆಗಿ ನಾಲ್ಕು ಗಂಟೆಯೊಳಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇನೆ. ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಬಹಿರಂಗ ಪ್ರಚಾರಕ್ಕೆ ತೆರೆ, ಇಂದು ಮನೆ ಮನೆ ಭೇಟಿ
ಮತದ ಶಕ್ತಿ ದೊಡ್ಡದು:
2018ರಲ್ಲಿ ನೀವು ಕೊಟ್ಟಿರುವ ಮತದ ಶಕ್ತಿ ಬಹಳ ದೊಡ್ಡದಿದೆ. ನಾನು ಶಾಸಕ, ಮಂತ್ರಿ, ಸಿಎಂ ಕೂಡ ಆಗಿದ್ದೇನೆ. ಯಶಸ್ವಿಯಾಗಿ ಕೋವಿಡ್ ನಿರ್ವಹಣೆ ಮಾಡಿದ್ದೇವೆ. ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ . 5 ಲಕ್ಷ ಪರಿಹಾರ ನೀಡಿದ್ದೇವೆ. ಈ ಬಾರಿ ಎಲ್ಲ ತರಹದ ಮನೆ ನಿರ್ಮಾಣಕ್ಕೂ . 5 ಲಕ್ಷ ಅನುದಾನ ನೀಡಲಾಗುವುದು. ಆದರೆ, ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರವಾಹದಲ್ಲಿ ಮನೆ ಬಿದ್ದಾಗ . 25 ಸಾವಿರ ಕೊಡುತ್ತಿದ್ದರು ಎಂದು ಟೀಕಿಸಿದರು.
ಈ ಕ್ಷೇತ್ರದಲ್ಲಿ ಸುಮಾರು 300 ಶಾಲಾ ಕೊಠಡಿ, ಐಟಿಐ ನಿರ್ಮಾಣ ಮಾಡಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ. ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ಸಿನ ಸುಳ್ಳು ಸುದ್ದಿ
ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹೇಳುವುದರಲ್ಲಿ ನಿಸ್ಸೀಮರು. ನಾನು 2018ರಲ್ಲಿ ಬೆಳೆವಿಮೆಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಕಣ್ಣಿಗೆ ಏಟು ತಗುಲಿತ್ತು. ಅದನ್ನು ಈಗ ನಡೆದಿರುವುದು ಎಂಬಂತೆ ಬಿಂಬಿಸಲು ಕಾಂಗ್ರೆಸ್ ಹೊರಟಿದೆ. ಅದೇ ರೀತಿ ಬಿ.ಎಲ್. ಸಂತೋಷ ಅವರು ಲಿಂಗಾಯತರ ಬಗ್ಗೆ ಹೇಳಿದ್ದಾರೆಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಮೇಲಿರುವಷ್ಟುಭ್ರಷ್ಟಾಚಾರದ ಆರೋಪ ಯಾರ ಮೇಲೆಯೂ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ನಾನು ಸಿಎಂ ಆಗುವ ಅವಕಾಶವಿದೆ: ಸಿದ್ದು
ಮೈಸೂರು: ‘ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನು ಮುಖ್ಯಮಂತ್ರಿಯಾಗುವ ಅವಕಾಶವಿದೆ. ರಾಜ್ಯದಲ್ಲಿ ನಿಷ್ಕಿ್ರಯವಾಗಿರುವ ಬಿಜೆಪಿ ಸರ್ಕಾರವನ್ನು ತೆಗೆಯಲು ಎಂ.ಕೆ.ಸೋಮಶೇಖರ್ ಅವರನ್ನು ಗೆಲ್ಲಿಸಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನರಿಗೆ ಮನವಿ ಮಾಡಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರಂನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿದ್ದು, ಈ ಕ್ಷೇತ್ರದಲ್ಲಿ ಎಂ.ಕೆ.ಸೋಮಶೇಖರ್ ಗೆದ್ದರೆ ನಾನು ಗೆದ್ದಂತೆ. ಸೋಮಶೇಖರ್ ಸೋತಾಗ ಕೊರೋನಾ ಸಮಯದಲ್ಲಿಯೂ ಮನೆಯಲ್ಲಿ ಕೂರದೇ ಜನರ ಕಷ್ಟಸುಖದಲ್ಲಿ ಭಾಗಿಯಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿಗೆ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡಿಗೆ ಎಣ್ಣೆ, ದಿನಬಳಕೆ ವಸ್ತಗಳ ಬೆಲೆಗಳನ್ನು ಏರಿಸಿದೆ. ಮಜ್ಜಿಗೆ, ಮೊಸರು ಹಾಲಿನ ಮೇಲೂ ಜಿಎಸ್‌ಟಿ ಹಾಕಿದ್ದು, ಬಡವರು ಬದುಕುವುದೇ ಕಷ್ಟಕರವಾಗಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್‌ನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡಿ: ಡಿಕೆಶಿ
ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ನಾಯಕ ಅಲ್ಲ, ಜನರ ಸೇವಕ. ಆತನಲ್ಲಿರುವ ಸಮಾಜ ಸೇವೆಯ ತುಡಿತ ಹಾಗೂ ಕ್ಷೇತ್ರದ ಅಭಿವೃದ್ಧಿಯ ಪರಿಕಲ್ಪನೆ ನೋಡಿ ಗೆಲ್ಲಿಸಿ ನನಗೆ ಶಕ್ತಿ ತುಂಬುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದರು.
ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಕೋವಿಡ್, ನೆರೆ ಹಾವಳಿಯಂತಹ ಸಂಕಷ್ಟಕಾಲದಲ್ಲಿ ಜನರ ಕಷ್ಟಸುಖ ಕೇಳಲಿಲ್ಲ. ಆ ಕೆಲಸವನ್ನು ಇಕ್ಬಾಲ್ ಹುಸೇನ್ ಮಾಡಿದರು. ಇಲ್ಲಿ ಡಿ.ಕೆ.ಶಿವಕುಮಾರ್ ಅಭ್ಯರ್ಥಿಯೆಂದು ಭಾವಿಸಿ ಬೆಂಬಲ ನೀಡಬೇಕು. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಮೃತರ ಅಂತ್ಯ ಸಂಸ್ಕಾರ ಮಾಡಿಸಲಿಲ್ಲ. ಜೆಡಿಎಸ್ ನಾಯಕ ಕುಮಾರಸ್ವಾಮಿ ನೆರವಿಗೆ ಬರಲಿಲ್ಲ. ಆದರೆ, ಸಂಸದ ಡಿ.ಕೆ.ಸುರೇಶ್ ಹಾಗೂ ಇಕ್ಬಾಲ… ಹುಸೇನ್ ನಿಮ್ಮ ಮನೆ ಬಾಗಿಲಿಗೆ ಆಹಾರ ಕಿಚ್, ಔಷಧಿ, ದಿನಸಿ, ತರಕಾರಿ ಕೊಟ್ಟು ಸೇವೆ ಮಾಡಿದರು. ಅವರಿಬ್ಬರು ಪಿಪಿಇ ಕಿಟ್ ಧರಿಸಿ ಸೋಂಕಿತರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಲ್ಲದೆ, ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ವಿಚಾರವಾಗಿ ಕುಮಾರಸ್ವಾಮಿ ಉತ್ತರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ರಾಮನಗರ ಟೌನ್‌ನಲ್ಲಿ ಪ್ರವಾಹ ಬಂದಾಗ ಶಾಸಕರು ಮುಖ್ಯಮಂತ್ರಿಗಳ ಜೊತೆ ಫೋಟೋ ತೆಗೆಸಿಕೊಂಡು ಹೋದರು. ನಿಮಗೆ ಪರಿಹಾರ ಒದಗಿಸಲು ಯಾರೂ ಪ್ರಯತ್ನ ಮಾಡಲಿಲ್ಲ. ಇಕ್ಬಾಲ್ ಹುಸೇನ್ ನಿಮ್ಮ ಮನೆಯಲ್ಲಿದ್ದ ಕಸ ತೆಗೆದರು. ನಾನು ನಿಮಗೆ ಪರಿಹಾರ ಕೊಡಿಸಲು ಹೋರಾಟ ನಡೆಸಿದೆ. ಈ ಕೆಲಸವನ್ನು ನಿಮ್ಮಿಂದ ಆಯ್ಕೆಯಾದವರು ಏಕೆ ಮಾಡಲಿಲ್ಲ. ಕ್ಷೇತ್ರದ ಎಲ್ಲಾ ಕಾರ್ಯಕರ್ತರು ಇಲ್ಲಿ ನನಗೆ ಸ್ಪರ್ಧಿಸುವಂತೆ ಒತ್ತಡ ಹೇರಿದರು. ನಂತರ ಹೈಕಮಾಂಡ್ ಕೂಡ ನಿಖಿಲ… ವಿರುದ್ಧ ಸುರೇಶ್ ಅವರನ್ನು ಸ್ಪರ್ಧಿಸುವಂತೆ ಸೂಚನೆ ನೀಡಿದರು. ಆದರೆ ನಾವು ಕೋವಿಡ್ ಸಮಯವನ್ನು ಲೆಕ್ಕಿಸದೇ ನಿಮಗಾಗಿ ಹಗಲುರಾತ್ರಿ ಸೇವಕನಾಗಿ ಕೆಲಸ ಮಾಡಿರುವ ಇಕ್ಬಾಲ… ಹುಸೇನ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ದಿನಬೆಳಗಾದರೆ ಇಕ್ಬಾಲ್ ನಿಮಗೆ ಸಿಗುತ್ತಾರೆ, ನಿಮ್ಮ ಸೇವೆ ಮಾಡುತ್ತಾರೆ. ಅವರು ನೆಪಕ್ಕೆ ಮಾತ್ರ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಜಾತಿ ಧರ್ಮಕ್ಕಿಂತ ಕಾರ್ಯಕರ್ತ ಹಾಗೂ ಆತನ ಸೇವೆ ಮುಖ್ಯವೆಂದು ಭಾವಿಸಿ ಅವರಿಗೆ ಬೆಂಬಲ ನೀಡುವಂತೆ ಶಿವಕುಮಾರ್ ಕೋರಿದರು.
ಕಾಂಗ್ರೆಸ್ ಕ್ಷೇತ್ರದ ಜನರ ಬದುಕಿನ ಬಗ್ಗೆ ಆಲೋಚನೆ ಮಾಡುತ್ತಿದೆ. ಇಲ್ಲಿರುವ ಕೆರೆಗಳನ್ನು ತುಂಬಿಸುವುದರ ಜೊತೆಗೆ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸ ಮಾಡುತ್ತೇವೆ. ನೀವೆಲ್ಲರು ಸೇರಿ ಬದಲಾವಣೆ ತರಬೇಕು. ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದವರನ್ನು ತಿರಸ್ಕರಿಸಬೇಕು. ಭಗವಂತ ನಿಮಗೆ ವರ ಅಥವಾ ಶಾಪ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಮೇ 10 ನಿಮ್ಮ ಭವಿಷ್ಯ ಬದಲಾಯಿಸಿಕೊಳ್ಳುವ, ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡುವ, ಭ್ರಷ್ಟಾ
ಚಾರ ತೊಲಗಿಸುವ ಹಾಗೂ ಜನರ ಬದುಕಿಗೆ ಜ್ಯೋತಿ ಬೆಳಗುವ ದಿನವಾಗಿದೆ. ಅಂದು ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಕಾಂಗ್ರೆಸ್ ನ ಚುನಾವಣಾ ಉಸ್ತುವಾರಿ ಡಿ.ಎಂ.ವಿಶ್ವನಾಥ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕುಮಾರ್ ಮತ್ತಿತರರು ಹಾಜರಿದ್ದರು.
ಕುಮಾರಸ್ವಾಮಿ, ನಿಖಿಲ್ ರೆಸ್ಟ್ ಮಾಡಲಿ
ರಾಮನಗರ: ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಇನ್ನೂ ಯುವಕ. ಅವರಿಬ್ಬರು ರೆಸ್ಟ್ ಮಾಡಲು ಅವಕಾಶ ಕೊಡಿ. ಈ ಜಿಲ್ಲೆಯ ರೈತನ ಮಗನಾದ ನನಗೆ ನಾಡಿನ ಜನರ ಸೇವೆ ಅವಕಾಶ ಮಾಡಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಳಿದರು.
ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರ ನಾಯಕರನ್ನು ತಯಾರು ಮಾಡಿರುವ ಜಿಲ್ಲೆ. ನಿಮ್ಮ ಮೇಲೆ ನನಗೆ ನಂಬಿಕೆ ಇದೆ. ನೀವು ಸಂಕಲ್ಪ ಮಾಡಿ ಬದಲಾವಣೆ ತರಬೇಕು. ನಮ್ಮ ಜಿಲ್ಲೆಯಿಂದ ಹನುಮಂತಯ್ಯರವರ ನಂತರ ರಾಮಕೃಷ್ಣ ಹೆಗಡೆ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದಿರಿ. ನಂತರ ಕಾಂಗ್ರೆಸ್ ಬೆಂಬಲ ನೀಡಿ ಅವರನ್ನು ಪ್ರಧಾನಮಂತ್ರಿ ಮಾಡಿತು. ಕುಮಾರಸ್ವಾಮಿ ಅವರು ಒಮ್ಮೆ ಬಿಜೆಪಿ ಜತೆ ಸೇರಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ.
ಈ ಜಿಲ್ಲೆಯಲ್ಲಿ ದೇವೇಗೌಡ, ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದೀರಿ. ನಾನು ನಿಮ್ಮ ಮನೆ ಮಗ. ನನ್ನನ್ನು ಈ ಜಿಲ್ಲೆಯ ಉದ್ದಗಲದಲ್ಲಿ ಬೆಳೆಸಿದ್ದೀರಿ. ನನ್ನ ತಮ್ಮನನ್ನು ಲೋಕಸಭೆಗೆ ಕಳಿಸಿಕೊಟ್ಟಿದ್ದೀರಿ. ಈಗ ರಾಜ್ಯದ ಜನರ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಆ ಪಕ್ಷದಲ್ಲಿದ್ದ ಶಿವಲಿಂಗೇಗೌಡ, ವಾಸು, ಶ್ರೀನಿವಾಸ ಗೌಡ, ಮಧು ಬಂಗಾರಪ್ಪ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಕೂಡ ಅಧಿಕಾರಕ್ಕೆ ಬರುವುದಿಲ್ಲ. ಜಗದೀಶ್ ಶೆಟ್ಟರ್, ಸವದಿ, ಪುಟ್ಟಣ್ಣ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನನ್ನ ವಿರುದ್ಧ ಸ್ಪರ್ಧಿಸಿದ್ದ ಪಿಜಿಆರ್ ಸಿಂಧ್ಯಾ, ಮಂಜುನಾಥ್, ನಾರಾಯಣಗೌಡರು ಜೆಡಿಎಸ್ ತೊರೆದು ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಕೂರಿಸಲು ಕಾಂಗ್ರೆಸ್ ಸೇರಿದ್ದಾರೆ. ಆದ್ದರಿಂದ ಎಲ್ಲರು ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಶಿವಕುಮಾರ್ ಕರೆ ನೀಡಿದರು.
ಬೈಕ್ ರಾರಯಲಿಯಲ್ಲಿ ಬಂದ ಡಿಕೆಶಿ
ರಾಮನಗರ: ರಾಮನಗರ ಕ್ಷೇತ್ರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಬೈಕ್ ರಾರಯಲಿ ನಡೆಸಿದರು. ತಾಲೂಕಿನ ಮಾಯಗಾನಹಳ್ಳಿ ಬಳಿ ಬೃಹತ್ ಗಾತ್ರದ ಸೇಬಿನ ಹಾರ ಹಾಕಿದ್ದಲ್ಲದೆ ಹೂವಿನ ಮಳೆ ಸುರಿಸಿ ಶಿವಕುಮಾರ್ ಅವರಿಗೆ ಸ್ವಾಗತ ಕೋರಲಾಯಿತು. ಅಲ್ಲಿಂದ ಆರಂಭಗೊಂಡ ಬೈಕ್ ರಾರಯಲಿ ಬಸವನಪುರ ಬಳಿ ಆಗಮಿಸುತ್ತಿದ್ದಂತೆ ಅಲ್ಲಿಯು ಸಹಸ್ರಾರು ಬೈಕ್‌ಗಳು ರಾರಯಲಿಯಲ್ಲಿ ಸೇರಿಕೊಂಡವು. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ರಾರಯಲಿಯೊಂದಿಗೆ ಸಾಗಿ ಬಂದ ಶಿವಕುಮಾರ್ ಅವರಿಗೆ ಆಂಜನೇಯ ಆಚ್‌ರ್ ಹಾಗೂ ಐಜೂರು ವೃತ್ತದಲ್ಲಿ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು.
ರಾಹುಲ್, ಪ್ರಿಯಾಂಕಾ 41 ರ‍್ಯಾಲಿ, 12 ರೋಡ್ ಶೋ
ಗುಜರಾತ್ ರಾಜ್ಯಸಭಾ ಚಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕೆ ಬಿಜೆಪಿ ನನ್ನ ಮೇಲೆ ಸುಳ್ಳು ಕೇಸು ಹಾಕಿ ದಾಳಿ ಮಾಡಿಸಿದರು. ಈ ಸಮಯದಲ್ಲಿ ನೀವೆಲ್ಲರೂ ದೇವಾಲಯ, ಚಚ್‌ರ್ ಮಸೀದಿಯಲ್ಲಿ ಪ್ರಾರ್ಥಿಸಿ ನನ್ನನ್ನು ಹೊರಗೆ ಕರೆದುಕೊಂಡು ಬಂದಿದ್ದೀರಾ. ಹೀಗಾಗಿ ನಿಮಗೆ ಕೋಟಿ ಕೋಟಿ ನಮನಗಳು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಾನು ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್‌ಡಿಕೆ
ಚನ್ನಪಟ್ಟಣ: ‘ನಾನು ಮತ್ತೆ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ನಾನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲಿದ್ದು, 5 ವರ್ಷ ಆಡಳಿತ ನಡೆಸಲಿದ್ದೇನೆ. ನಾನು ಸಿಎಂ ಆದರೂ ಕೇತಗಾನಹಳ್ಳಿಯ ಮನೆಯಲ್ಲೇ ವಾಸವಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು.
ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿ, ಇಂದು ಚನ್ನಪಟ್ಟಣದಲ್ಲಿ ನನ್ನ ಮೇಲೆ ಪ್ರೀತಿ ಇಟ್ಟು ಸೇರಿರುವ ಜನರನ್ನು ನೋಡಿದರೆ ಆನಂದಬಾಷ್ಪ ಬರುತ್ತಿದೆ. ಆದರೆ, ನಾನು ಕಣ್ಣೀರು ಹಾಕಿದರೆ ನನ್ನ ವಿರೋಧಿಗಳು ಅದಕ್ಕೆ ಬೇರೆ ಬಣ್ಣ ಕಟ್ಟಿಅಪಪ್ರಚಾರ ಮಾಡುತ್ತಾರೆ. ಆದ್ದರಿಂದ ನನ್ನ ಭಾವನೆಗಳನ್ನು ಬಲವಂತವಾಗಿ ತಡೆದಿಟ್ಟಕೊಂಡಿದ್ದೇನೆ. ನಿಮ್ಮ ಮೇಲೆ ವಿಶ್ವಾಸವಿರುವುದರಿಂದಲೇ ಇಡೀ ರಾಜ್ಯ ಸುತ್ತಿ ಕಡೆಯದಾಗಿ ಇಲ್ಲಿಗೆ ಬಂದಿದ್ದೇನೆ. ಹಾಸನ ಜಿಲ್ಲೆಯಲ್ಲಿ ಜನ್ಮ ತಾಳಿದ್ದರೂ ಈ ಜಿಲ್ಲೆಯಲ್ಲೇ ನನ್ನ ಬದುಕು ಕಟ್ಟಿಕೊಂಡಿದ್ದೇನೆ. ನನಗೆ ರಾಜಕೀಯ ಜನ್ಮ ನೀಡಿದ ಭೂಮಿ ಇದು. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣುಗಳಿದ್ದಂತೆ. ನಿಮ್ಮ ಮನೆಯ ಮಗನನ್ನು ಈ ಬಾರಿಯ ಚುನಾವಣೆಯಲ್ಲಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಉತ್ತಮ ಆಡಳಿತ ನೀಡುತ್ತಿದ್ದ ದೇವೇಗೌಡರನ್ನು ಕಾಂಗ್ರೆಸ್‌ನವರು ಪ್ರಧಾನಿ ಹುದ್ದೆಯಿಂದ ಇಳಿಸಿದರು. ಅದೇ ರೀತಿ ಬಿಜೆಪಿಯವರು ಕುತಂತ್ರ ನಡೆಸಿ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಈ ಹಿಂದೆ 14 ತಿಂಗಳು ಮುಖ್ಯಮಂತ್ರಿಯಾಗಿದ್ದೆ. ಇಲ್ಲಿನ ನನ್ನ ಎದುರಾಳಿ ಅಭ್ಯರ್ಥಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯವರೊಂದಿಗೆ ಸೇರಿಕೊಂಡು ನನ್ನ ಸರ್ಕಾರ ತೆಗೆಯಲು ಸಾಕಷ್ಟುಶ್ರಮಿಸಿದರು. ಹಲವಾರು ಕುಟುಂಬಗಳನ್ನು, ಯುವಕರ ಬದುಕನ್ನು ಹಾಳು ಮಾಡಿದ ಪಾಪದ ಹಣದಿಂದ ರೈತಪರ ಆಡಳಿತ ನೀಡುತ್ತಿದ್ದ ಸರ್ಕಾರವನ್ನು ತೆಗೆದರು. ಅಂತವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನೆಂದು ಪಾಪದ ಹಣ ಸಂಪಾದಿಸಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
