ಇಂದು ಸಂಜೆ 6 ಗಂಟೆವರೆಗೆ ಮನೆಮನೆ ಪ್ರಚಾರಕ್ಕೆ ಅವಕಾಶ, ಇಂದು, ನಾಳೆ ಮದ್ಯ ನಿಷೇಧ, ನಾಳೆ ಬೆಳಿಗ್ಗೆ 7ರಿಂದ ಮತದಾನ
ಬೆಂಗಳೂರು(ಮೇ.09): ರಾಜ್ಯ ವಿಧಾನಸಭಾ ಚುನಾವಣೆಯ ಜಿದ್ದಾಜಿದ್ದಿನ ಅಖಾಡದಲ್ಲಿ ಕಳೆದ 15 ದಿನಗಳಿಂದ ಸಾಗಿದ ಬಿರುಸಿನ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಕಣದಲ್ಲಿರುವ ಅಭ್ಯರ್ಥಿಗಳಿಂದ ಇಂದು(ಮಂಗಳವಾರ) ಮನೆ ಮನೆ ಪ್ರಚಾರ ನಡೆಯಲಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ಜರುಗಲಿದೆ.
ಸೋಮವಾರ ಸಂಜೆ 6 ಗಂಟೆಗೆ ಅಬ್ಬರದ ಸಾರ್ವಜನಿಕ ಸಭೆ, ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದು, ನಿಶ್ಯಬ್ದ ಅವಧಿ ಪ್ರಾರಂಭವಾಗಿದೆ. ಮಂಗಳವಾರ ಸಂಜೆ 6 ಗಂಟೆಯವರೆಗೆ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಂಡು ಅಂತಿಮ ಕ್ಷಣದವರೆಗೆ ಮತದಾರರ ಮನವೊಲಿಕೆಯ ಕಸರತ್ತು ನಡೆಸಲಿದ್ದಾರೆ. ಮತದಾನ ಮುಕ್ತಾಯದ 48 ಗಂಟೆಗೂ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಘಟಾನುಘಟಿ ಮುಖಂಡರು ಸೇರಿದಂತೆ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕ್ಷೇತ್ರವನ್ನು ತೊರೆದಿದ್ದಾರೆ.
Karnataka dry Days: ಇಂದಿನಿಂದ 4 ದಿನ ಮದ್ಯ ಮಾರಾಟವಿಲ್ಲ, ಬಹಿರಂಗ ಪ್ರಚಾರವೂ ಇರಲ್ಲ!
ಇನ್ನು, ನಿಶ್ಯಬ್ದ ಅವಧಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಗುಂಪು ಗುಂಪಾಗಿ ಓಡಾಡುವಂತಿಲ್ಲ. ಯಾವುದೇ ಸ್ಥಳದಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ ಮತ್ತು ಓಡಾಡುವಂತೆಯೂ ಇಲ್ಲ. ಐದು ಮಂದಿಗಿಂತ ಹೆಚ್ಚು ಜನ ಒಂದೆಡೆ ಕಂಡು ಬಂದರೆ ನೀತಿ ಸಂಹಿತೆ ಉಲ್ಲಂಘನೆಯಡಿ ಸೂಕ್ತ ಕ್ರಮ ಜರುಗಿಸಲಾಗುವುದು. ಆದರೆ, ಮನೆ-ಮನೆ ಪ್ರಚಾರಕ್ಕೆ ಸಂಬಂಧಪಟ್ಟಂತೆ ಮಾತ್ರ ಈ ನಿರ್ಬಂಧ ಇರುವುದಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಹೋಟೆಲ್
ಮದ್ಯ ನಿಷೇಧ:
ಈ ನಡುವೆ, ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಯಾವುದೇ ಮದ್ಯದಂಗಡಿಗಳು, ಮದ್ಯ ಮಾರಾಟ ಮಾಡುವ ಹೋಟೆಲ್‌ಗಳು, ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬುಧವಾರ ಮತದಾನ ಪ್ರಕ್ರಿಯೆ ಮುಕ್ತಾಯವರೆಗೆ ಮದ್ಯದಂಗಡಿಗಳನ್ನು ತೆರೆಯದಂತೆ ಮತ್ತು ಮದ್ಯ ಮಾರಾಟದಂತೆ ನಿರ್ದೇಶನ ನೀಡಲಾಗಿದೆ. ಚುನಾವಣಾ ಆಯೋಗದ ನೀತಿ ಸಂಹಿತೆ ಅನ್ವಯ ರಾಜ್ಯದ ಎಲ್ಲಾ ಕ್ಷೇತ್ರದಲ್ಲಿಯೂ ಸೂಕ್ತ ಕ್ರಮ ಜರುಗಿಸಲಾಗಿದೆ.
ಹೊರಕ್ಕೆ:
ಬಹಿರಂಗ ಪ್ರಚಾರ ಅವಧಿ ಮುಕ್ತಾಯಗೊಂಡ ಬಳಿಕ ಪೊಲೀಸರು, ಚುನಾವಣಾ ಸಿಬ್ಬಂದಿ ಕ್ಷೇತ್ರದ್ಯಾದ್ಯಂತ ಸಂಚರಿಸಿ ಕ್ಷೇತ್ರದ ಹೊರಗಿನ ವ್ಯಕ್ತಿಗಳನ್ನು ಹೊರಗೆ ಕಳುಹಿಸುವ ಕೆಲಸ ಮಾಡಿದರು. ಹೋಟೆಲ್, ಮದುವೆ ಮಂಟಪ ಸೇರಿದಂತೆ ಹಲವೆಡೆ ತಪಾಸಣೆ ಕಾರ್ಯ ಕೈಗೊಂಡರು.
ಮತದಾನ ಪೂರ್ಣಗೊಳ್ಳುವವರೆಗೆ ಕ್ಷೇತ್ರದಲ್ಲಿ ಮದ್ಯ ಮಾರಾಟ ನಿಷೇಧ ದಿನ ಎಂದು ಘೋಷಣೆ ಮಾಡಲಾಗಿರುವುದರಿಂದ ಸೂಕ್ತ ಎಚ್ಚರಿಕೆ ವಹಿಸಲಾಗಿದೆ. ನೆರೆ ರಾಜ್ಯಗಳ ಎಲ್ಲಾ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ನಿಷೇಧ ದಿನ ಘೋಷಣೆ ಎಂದು ಪ್ರಕಟಿಸಿದ್ದಾರೆ. ನಿಶ್ಯಬ್ದದ ಅವಧಿಯಲ್ಲಿ ಯಾವುದೇ ಧ್ವನಿವರ್ಧಕಗಳನ್ನು ಸಹ ಬಳಕೆಗೆ ಅನುಮತಿ ಇಲ್ಲ.
ಜಿದ್ದಾಜಿದ್ದು:
ಕಳೆದ 15 ದಿನಗಳಿಂದ ಚುನಾವಣಾ ಅಖಾಡವು ರಾಜಕೀಯ ಪಕ್ಷಗಳಿಂದ ಪರಸ್ಪರ ಕೆಸರೆರಾಚಾಟ, ಟೀಕೆ, ವಾಕ್ಸಮರ, ಲೇವಡಿ, ಪ್ರತ್ಯುತ್ತರಗಳು ನಡೆದವು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರದ ಸಚಿವ ಸಂಪುಟದ ಸಚಿವರು, ರಾಷ್ಟ್ರೀಯ ನಾಯಕರು, ಇತರೆ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಹಲವು ಮುಖಂಡರು ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪರ ರಾಷ್ಟ್ರೀಯ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರೆ ಮುಖಂಡರು ರೋಡ್‌ಶೋ, ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡು ಪ್ರಚಾರ ಕೈಗೊಂಡರು. ಜೆಡಿಎಸ್ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವಿರತವಾಗಿ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸಿದರು.
ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ : ಸಿ ಎಂ ಬೊಮ್ಮಾಯಿ
ಎಡಗೈ ತೋರುಬೆರಳಿಗೆ ಶಾಯಿ
ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗವು ಎಡಗೈ ತೋರು ಬೆರಳಿಗೆ ಶಾಯಿ ಹಾಕಲು ತೀರ್ಮಾನಿಸಿದೆ. ಅಳಿಸಲಾಗದ ಶಾಯಿಯನ್ನು ಎಡಗೈ ತೋರು ಬೆರಳಿಗೆ ಹಾಕಲಾಗುತ್ತದೆ ಎಂದು ಆಯೋಗವು ತಿಳಿಸಿದೆ.
ನಾಳೆ ಮತದಾನಕ್ಕೆ 1.56 ಲಕ್ಷ ಪೊಲೀಸರ ಭದ್ರತೆ
ಬೆಂಗಳೂರು: ರಾಜ್ಯಾದ್ಯಂತ ಒಂದೇ ಕಂತಿನಲ್ಲಿ ಬುಧವಾರ ನಡೆಯಲಿರುವ ಮತದಾನಕ್ಕೆ 1.56 ಲಕ್ಷ ಪೊಲೀಸರು ಬಿಗಿ ಭದ್ರತೆಗೆ ನಿಯೋಜಿತರಾಗಿದ್ದಾರೆ. ಒಟ್ಟು 304 ಡಿವೈಎಸ್ಪಿಗಳು, 991 ಪಿಐಗಳು, 2610 ಪಿಎಸ್‌ಐಗಳು, 5803 ಎಎಸ್‌ಐಗಳು, 46,421 ಪೊಲೀಸರು, 27,990 ಗೃಹ ರಕ್ಷಕರು ಸೇರಿದಂತೆ 84,119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಹೊರ ರಾಜ್ಯಗಳಿಂದ 8500 ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಪಡೆಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಭದ್ರತಾ ಪಡೆಗಳನ್ನೂ ಬಳಸಿಕೊಳ್ಳಲಾಗುತ್ತಿದ್ದು, ಒಟ್ಟಾರೆ 1.56 ಲಕ್ಷ ಪೊಲೀಸರು ಮತದಾನದ ದಿನ ಬಂದೋಬಸ್ತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.
ಇಡೀ ದಿನ ನಿಶ್ಶಬ್ದ ಅವಧಿ
- ಮಂಗಳವಾರ ಇಡೀ ದಿನ ಚುನಾವಣಾ ಆಯೋಗದ ಆದೇಶದ ಅನುಸಾರ ನಿಶ್ಶಬ್ದ ಅವಧಿ
- ಕೇವಲ 5 ಜನರ ಗುಂಪುಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡಲು ಅವಕಾಶವಿದೆ
- ಮೈಕ್ ಬಳಸುವಂತಿಲ್ಲ, ಗುಂಪಾಗಿ ಓಡಾಡುವಂತಿಲ್ಲ, ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ
- ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು, ಹೊರಗಿನ ರಾಜಕೀಯ ನಾಯಕರು ಕ್ಷೇತ್ರದಿಂದ ಹೊರಕ್ಕೆ
- ರಾಜ್ಯಾದ್ಯಾಂತ ಇಂದು, ನಾಳೆ ಮದ್ಯ ನಿಷೇಧ. ನೆರೆ ರಾಜ್ಯದ ಗಡಿ ಜಿಲ್ಲೆಗಳಲ್ಲೂ ಮದ್ಯ ಬಂದ್
