ಎಲ್ಲರೂ ಸೇರಿ ಶೆಟ್ಟರ್ ಗೆಲ್ಲಿಸಿ, ಆದ ಅವಮಾನಕ್ಕೆ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಶಾಮನೂರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಲಿಂಗಾಯತರ ಸಭೆ ನಡೆಸಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿ ಹೋದ ಬೆನ್ನಲ್ಲೇ ಇದೀಗ, ಕಾಂಗ್ರೆಸ್‌ನ ಲಿಂಗಾಯತ ಮುಖಂಡರೆಲ್ಲರೂ ಒಟ್ಟಾಗಿ ಶೆಟ್ಟರ್‌ಗೆ ಬೆಂಬಲ ಸೂಚಿಸಿದ್ದಾರೆ.
ಹುಬ್ಬಳ್ಳಿ (ಮೇ.6) : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಲಿಂಗಾಯತರ ಸಭೆ ನಡೆಸಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿ ಹೋದ ಬೆನ್ನಲ್ಲೇ ಇದೀಗ, ಕಾಂಗ್ರೆಸ್‌ನ ಲಿಂಗಾಯತ ಮುಖಂಡರೆಲ್ಲರೂ ಒಟ್ಟಾಗಿ ಶೆಟ್ಟರ್‌ಗೆ ಬೆಂಬಲ ಸೂಚಿಸಿದ್ದಾರೆ. ಶೆಟ್ಟರ್ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಪಣ ತೊಟ್ಟಿದ್ದಾರೆ. ಈ ಮೂಲಕ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಠಕ್ಕರ್ ಕೊಡಲು ನಿರ್ಧರಿಸಿದ್ದಾರೆ. ಈ ಮೂಲಕ ಶೆಟ್ಟರ್ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ.
ಈ ನಡುವೆ ಇದು ಸ್ವಾಭಿಮಾನದ ಪ್ರಶ್ನೆ, ಬಿಜೆಪಿ ಕಟ್ಟಿಬೆಳೆಸಿದ ಶೆಟ್ಟರ್‌ಗೆ (Jagadish shetttar) ಆದ ಅವಮಾನ ಅವರಿಗಷ್ಟೇ ಅಲ್ಲ. ಇಡೀ ಸಮುದಾಯಕ್ಕೆ ಆಗಿರುವ ಅವಮಾನ ಎಂಬುದನ್ನು ಮರೆಯಬಾರದು ಎಂದು ಸಭೆಯಲ್ಲಿ ಪಾಲ್ಗೊಂಡವರು ಒಕ್ಕೊರಲಿನಿಂದ ಅಭಿಪ್ರಾಯಿಸಿದರು.
ಶೆಟ್ಟರ್ ಬಿಟ್ಟು ಚುನಾವಣೆ ಎದುರಿಸುತ್ತಿರುವ ಬಿಜೆಪಿ: ಜಗದೀಶ್ ಸಾಥ್ ನೀಡಿರುವುದು ಕಾಂಗ್ರೆಸ್‌ಗೆ ದೊಡ್ಡ ಶಕ್ತಿ
ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ಮುಖಂಡರಾದ ಶಾಮನೂರು ಶಿವಶಂಕರಪ್ಪ(Shamanuru shivashankarappa), ಕೆ.ಸಿ. ಕೊಂಡಯ್ಯ, ಅಲ್ಲಂವೀರಭದ್ರಪ್ಪ ಸೇರಿದಂತೆ ಹಲವರು ಇಲ್ಲಿನ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಕೆಲಕಾಲ ಸ್ವಾಮೀಜಿ ಅವರೊಂದಿಗೆ ಮಾತನಾಡಿದರು. ಬಳಿಕ ಅಲ್ಲಿಂದ ಲಿಂಗರಾಜನಗರದ ಸಮುದಾಯ ಭವನದಲ್ಲಿ ಹಾಗೂ ಬಳಿಕ ಗೋಕುಲ ರಸ್ತೆಯ ಚವ್ಹಾಣ ಗಾರ್ಡನ್‌ನಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಸಭೆ ನಡೆಸಿದರು.
ಎರಡು ಕಡೆ ನಡೆದ ಸಭೆಯಲ್ಲಿ ಒಂದೇ ಅಜೆಂಡಾ ಆಗಿತ್ತು. ಶೆಟ್ಟರ್ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂಬುದು. ಅಧ್ಯಕ್ಷತೆ ವಹಿಸಿದ್ದ ಶಾಮನೂರು ಶಿವಶಂಕರಪ್ಪ, ಶೆಟ್ಟರ್ ಬಿಜೆಪಿ ಕಟ್ಟಿಬೆಳೆಸಿದವರಲ್ಲಿ ಒಬ್ಬರು. ಆದರೆ, ಅಂಥವರಿಗೆ ಟಿಕೆಟ್ ನಿರಾಕರಿಸಿ ಅವರಿಗೆ ಅವಮಾನ ಮಾಡಲಾಗಿದೆ. ಜತೆಗೆ ಅವರನ್ನು ಸೋಲಿಸಬೇಕೆಂಬ ಇರಾದೆಯಿಂದ ಇಡೀ ಬಿಜೆಪಿಯೇ ಸೆಂಟ್ರಲ್ ಕ್ಷೇತ್ರವನ್ನು ಕೇಂದ್ರೀಕೃತ ಮಾಡಿಕೊಂಡಿದೆ. ರಾಷ್ಟ್ರ, ರಾಜ್ಯದ ಪ್ರಮುಖರೆಲ್ಲರೂ ಒಟ್ಟಾಗಿ ಅವರನ್ನು ಸೋಲಿಸುವ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಇಡೀ ಕೇಂದ್ರ ಸರ್ಕಾರವೇ ಶೆಟ್ಟರ್ ಸೋಲಿಸಲು ಬಂದು ನಿಂತಿದೆ. ನಾವೆಲ್ಲರೂ ಇಂಥ ವೇಳೆಯಲ್ಲಿ ಒಗ್ಗಟ್ಟಾಗಬೇಕಿದೆ. ಒಗ್ಗಟ್ಟಿಲ್ಲದೇ ಹೋದರೆ ಉಳಿಗಾಲವಿಲ್ಲ ಎಂದರು.
ಇದು ಲಿಂಗಾಯತ ಸಮುದಾಯ(Lingayat community)ದ ಸ್ವಾಭಿಮಾನದ ಪ್ರಶ್ನೆ. ಆದಕಾರಣ ಎಲ್ಲರೂ ಒಟ್ಟಾಗಿ ಶೆಟ್ಟರ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ವಿಧಾನಸಭೆಗೆ ಕಳುಹಿಸಬೇಕಿದೆ ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ತಾವು ಪಕ್ಷವನ್ನು ಯಾವ ರೀತಿ ಕಟ್ಟಿದ್ದೇವು, ಕೊನೆ ಘಳಿಗೆಯಲ್ಲಿ ಪಕ್ಷದ ಮುಖಂಡರು ಯಾವ ರೀತಿ ಕೈಕೊಟ್ಟರು. ಎಷ್ಟೆಲ್ಲ ಅವಮಾನ ಮಾಡಿದರು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದು ಸ್ವಾಭಿಮಾನದ ಪ್ರಶ್ನೆ. ಇಲ್ಲಿ ಎಲ್ಲರೂ ಒಟ್ಟಾಗಿ ಬಿಜೆಪಿಗೆ ಪಾಠ ಕಲಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ಬಂದಿದ್ದೇನೆ. ನನ್ನನ್ನು ಗೆಲ್ಲಿಸುವುದು ಬಿಡುವುದು ನಿಮ್ಮ ಜವಾಬ್ದಾರಿ. ನೀವೆಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ನುಡಿದರು.
ಬಜರಂಗದಳವನ್ನು ಟಚ್ ಮಾಡಿದರೆ ಭಸ್ಮವಾಗಿ ಬಿಡ್ತೀರಾ: ಬಿ.ಎಸ್.ಯಡಿಯೂರಪ್ಪ
ಸಭೆಯಲ್ಲಿ ಅಲ್ಲಂವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಪಿ.ಸಿ.ಸಿದ್ದನಗೌಡರ, ಮೋಹನ ಲಿಂಬಿಕಾಯಿ, ಪಿ.ಎಚ್.ನೀರಲಕೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.