* ಶಿವಮೊಗ್ಗದ 4 ಸಿಎಂಗಳೂ 5 ವರ್ಷ ಪೂರೈಸಲಿಲ್ಲ* 73 ದಿನಗಳ ಮಾತ್ರ ಸಿಎಂ ಆಗಿದ್ದ ಕಡಿದಾಳು ಮಂಜಪ್ಪ* 2 ವರ್ಷ, 35 ದಿನ ಸಿಎಂ ಆಗಿದ್ದ ಬಂಗಾರಪ್ಪ* 3.129 ವರ್ಷ ಸಿಎಂ ಆಗಿದ್ದ ಜೆ.ಎಚ್.ಪಟೇಲ್* 4 ಬಾರಿ ಸಿಎಂ ಆದರೂ 5 ವರ್ಷ ಪೂರ್ಣಗೊಳಿಸದ ಬಿಎಸ್‌ವೈ
ಗೋಪಾಲ್ ಯಡಗೆರೆ
ಶಿವಮೊಗ್ಗ(ಜು.27): ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ಕು ಮಂದಿ ಶಿವಮೊಗ್ಗದ ನಾಯಕರು ಮುಖ್ಯಮಂತ್ರಿಯಾದರೂ ಯಾರಿಗೂ ಐದು ವರ್ಷ ಅಧಿಕಾರ ನಡೆಸುವ ಅವಕಾಶ ಸಿಗದೇ ಹೋಗಿದ್ದು ಮಾತ್ರ ವಿಪರಾರಯಸ.
ಈ ಹಿಂದೆ ಕಡಿದಾಳ್ ಮಂಜಪ್ಪ, ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದರೂ ಅವರು ಐದು ವರ್ಷ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ಪದತ್ಯಾಗ ಮಾಡಿದ್ದರು. ಇದೀಗ ಯಡಿಯೂರಪ್ಪ ಕೂಡ ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಪೂರ್ಣಾವಧಿ ಅಧಿಕಾರ ನಡೆಸಲು ವಿಫಲರಾಗಿದ್ದಾರೆ.
ರಾಜ್ಯ ರಾಜಕಾರಣದ ಶಕ್ತಿಕೇಂದ್ರ ಎಂದು ಗುರುತಿಸಿಕೊಂಡೇ ಬಂದ ಶಿವಮೊಗ್ಗದಲ್ಲಿ ರಾಜ್ಯದ ಉನ್ನತ ಹುದ್ದೆಗೇರಿದ ನಾಲ್ವರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚುನಾವಣೆಯನ್ನು ಗೆದ್ದು ಅಧಿಕಾರ ಹಿಡಿದವರು ಯಡಿಯೂರಪ್ಪ ಅವರು ಮಾತ್ರ. ಉಳಿದ ಮೂವರು ಆಯಾ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರ ಹಿಡಿದವರು. ಹಾಗೆಯೇ ಇದೇ ರಾಜಕೀಯ ವಿಪ್ಲವಕ್ಕೆ ಒಳಗಾಗಿ ಅಧಿಕಾರ ಕಳೆದುಕೊಂಡರು. ಯಾರಿಗೂ ಐದು ವರ್ಷ ಅಧಿಕಾರ ಪೂರೈಸುವ ಅವಕಾಶ ಕೂಡ ಇರಲಿಲ್ಲ. ಆದರೆ ಯಡಿಯೂರಪ್ಪನವರಿಗೆ ಐದು ವರ್ಷ ಪೂರ್ಣಾವಧಿ ಅಧಿಕಾರ ನಡೆಸುವ ಅವಕಾಶ ಸಿಕ್ಕಿತ್ತಾದರೂ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರದಿಂದ ಕೆಳಗಿಳಿಸಬೇಕಾಯಿತು.
1956ರ ಆ.19ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕಡಿದಾಳ್ ಮಂಜಪ್ಪ ಕೇವಲ 73 ದಿನ, 1990ರಲ್ಲಿ ಬಂಗಾರಪ್ಪ ಅವರು 2 ವರ್ಷ 35 ದಿನ, 1996ರಲ್ಲಿ ಜೆ.ಎಚ್.ಪಟೇಲ್ ಅವರು 3 ವರ್ಷ 129 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಯಡಿಯೂರಪ್ಪ ಅವರು 2007ರಲ್ಲಿ 7 ದಿನ, 2008ರಲ್ಲಿ ಮತ್ತೆ ಅಧಿಕಾರಕ್ಕೇರಿ ಸುಮಾರು 3 ವರ್ಷ, 2018ರಲ್ಲಿ 2 ದಿನ, ಆ ಬಳಿಕ 2019ರಲ್ಲಿ ಅಧಿಕಾರಕ್ಕೇರಿ 2 ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.
