ಕಾಂಗ್ರೆಸ್ ಈಗಾಗಲೇ 3ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಖಚಿತಗೊಂಡಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಶಿರಸಿ(ಏ.16): ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಬಂಡಾಯದ ಕಾವು ಜೋರಾಗಿದೆ. ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಮೂರನೇ ಪಟ್ಟಿಯಲ್ಲೂ ಟಿಕೆಟ್ ಖಚಿತಗೊಂಡಿಲ್ಲ. ಇತ್ತ ಕಾಂಗ್ರೆಸ್ ನಾಯಕರು ಟಿಕೆಟ್ ಭರವಸೆಯನ್ನೂ ನೀಡಿಲ್ಲ. ಮುಸ್ಲಿಮ್ ಮುಖಂಡರ ತೀವ್ರ ವಿರೋಧದಿಂದ ಕಾಂಗ್ರೆಸ್ ಅಖಂಡಗೆ ಟಿಕೆಟ್ ನೀಡಲು ಹಿಂದೇಟು ಹಾಕಿದೆ. ಇದರಿಂದ ಬೆಸತ್ತಿರುವ ಅಖಂಡ ಶ್ರೀನಿವಾಸಮೂರ್ತಿ, ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರಲು ಮಾತುಕತೆಗಳು ನಡೆದಿದೆ. ಶೀಘ್ರದಲ್ಲೇ ಅಖಂಡ ಶ್ರೀನಿವಾಸಮೂರ್ತಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಶಿರಸಿಗೆ ತೆರಳಿದ ಅಖಂಡ ಶ್ರೀನಿವಾಸಮೂರ್ತಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ ಶ್ರೀನಿವಾಸಮೂರ್ತಿ, ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಚಿಂತಿಸಿದ್ದೇನೆ. ಆದರೆ ಹಿರಿಯರು, ಕೆಲ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನನಗೆ ನೋವಾಗಿದೆ. ಮೂರನೇ ಲಿಸ್ಟ್‌ನಲ್ಲೂ ನನಗೆ ಟಿಕೆಟ್ ಸಿಕ್ಕಿಲ್ಲ. ಇದರ ಹಿಂದೆ ಹಿರಿಯ ನಾಯಕರೊಬ್ಬರಿದ್ದಾರೆ. ಆ ನಾಯಕರು ಯಾರು ಅನ್ನೋದು ನೀವೆ ಅರ್ಥಮಾಡಿಕೊಳ್ಳಿ ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ನನ್ನ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮದವರು ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನನ್ನ ಕುರಿತು ಕ್ಷೇತ್ರದ ಯಾರಲ್ಲೂ ಬೇಕಾದರೂ ಕೇಳಿ ಮಾಹಿತಿ ಪಡೆದುಕೊಳ್ಳಲಿ. ಕಳೆದ ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದಿಂದ ಗೆದ್ದ ನಾಯಕ ನಾನು. ಆದರೆ ನನಗೆ ಟಿಕೆಟ್ ನೀಡುತ್ತಿಲ್ಲ ಎಂದು ಅಖಂಡ ಶ್ರೀನಿವಾಸಮೂರ್ತಿ ಅಳಲು ತೋಡಿಕೊಂಡಿದ್ದಾರೆ.
