ಎಐಸಿಸಿ ಅಧ್ಯಕ್ಷನಾಗಿದ್ದಕ್ಕೆ ಅಭಿನಂದಿಸಿ, ಹಾರ-ತುರಾಯಿ ಹಾಕಿದ್ದೀರಿ. ಈ ಗೌರವದಿಂದ ನನಗೆ ಸಂತೋಷವಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನನಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.

ಬೆಂಗಳೂರು (ನ.07): ‘ಎಐಸಿಸಿ ಅಧ್ಯಕ್ಷನಾಗಿದ್ದಕ್ಕೆ ಅಭಿನಂದಿಸಿ, ಹಾರ-ತುರಾಯಿ ಹಾಕಿದ್ದೀರಿ. ಈ ಗೌರವದಿಂದ ನನಗೆ ಸಂತೋಷವಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನನಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಹೀಗಾಗಿ ಸಣ್ಣಪುಟ್ಟವ್ಯತ್ಯಾಸ ಮರೆತು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ’ ಎಂದು ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ ನಾಯಕರನ್ನು ಹುರಿದುಂಬಿಸಿದ್ದಾರೆ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಸಾರಥಿಯಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದರು. 

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಖರ್ಗೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ರಾಜ್ಯ ನಾಯಕರು ಅರಮನೆ ಮೈದಾನದಲ್ಲಿ ‘ಸರ್ವೋದಯ ಸಮಾವೇಶ’ ಹೆಸರಿನಲ್ಲಿ ಬೃಹತ್‌ ಅಭಿನಂದನಾ ಸಮಾರಂಭ ನಡೆಸಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಖರ್ಗೆ ಅವರು, ‘ಇಂದು ನನಗೆ ಗೌರವಿಸಿ ಅಭಿನಂದಿಸಲು ಕಾರ್ಯಕ್ರಮ ಮಾಡುತ್ತಿದ್ದೀರಿ. ಈ ಹಾರ-ತುರಾಯಿ ಸಾಮಾನ್ಯ. ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕು. 

ಎಐಸಿಸಿ ಅಧ್ಯಕ್ಷ ಖರ್ಗೆ ಬೆಂಗ್ಳೂರಿಗೆ ಪಾದಾರ್ಪಣೆ: ಸಿಎಂಗೂ ತಟ್ಟಿದ ಟ್ರಾಫಿಕ್ ಬಿಸಿ..!

ತನ್ಮೂಲಕ ರಾಜ್ಯದಲ್ಲಿರುವ 40 ಪರ್ಸೆಂಟ್‌ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಕರೆ ನೀಡಿದರು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಸರ್ಕಾರ ನೀಡಿದೆ. ಈಗ ಮತ್ತೆ ಅದೇ ಕೆಲಸ ಮಾಡಬೇಕು. ಇದಕ್ಕಾಗಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು. ನಾವು ಒಗ್ಗಟ್ಟಾಗಿ ಸಾಗಿದರೆ ಮಾತ್ರ ಇದನ್ನು ಸಾಧಿಸಬಹುದು. ಮುನಿಸಿಕೊಂಡಿರುವವರು, ನಮ್ಮಿಂದ ದೂರ ಆಗಿರುವವರು, ಹೊಸ ಯುವಕರನ್ನು ಪಕ್ಷಕ್ಕೆ ಕರೆ ತನ್ನಿ. ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.

ಯುವಕರಿಗೆ ಶೇ.50 ಟಿಕೆಟ್‌: ಪಕ್ಷದ ಅಧ್ಯಕ್ಷನಾಗಿ ಮಾಡಬೇಕಾದ ಕೆಲಸಗಳ ಪಟ್ಟಿಯೇ ಇದೆ. ಇತ್ತೀಚೆಗೆ ಉದಯಪುರ ಸಭೆ ನಿರ್ಣಯಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದೇನೆ. ಚುನಾವಣೆಯಲ್ಲಿ ಯುವಕರಿಗೆ 50% ಅವಕಾಶ ನೀಡಲಾಗುವುದು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಖರ್ಗೆ ಪುನರುಚ್ಚಾರ ಮಾಡಿದರು. ಇನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಹುದ್ದೆ ತುಂಬುತ್ತೇವೆ. ನಾನು ಶಿಕ್ಷಣ ಸಚಿವನಾಗಿದ್ದಾಗ 18 ಸಾವಿರ ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡಿದ್ದೆವು. ಇದೀಗ ದೇಶದಲ್ಲಿ 14 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಅವುಗಳನ್ನು ಯಾಕೆ ತುಂಬುತ್ತಿಲ್ಲ? ಬಡವರು ದಲಿತರಿಗೆ ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಅವರು ತುಂಬುತ್ತಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಖಾಲಿ ಹುದ್ದೆ ತುಂಬುತ್ತೇವೆ ಎಂದು ಭರವಸೆ ನೀಡಿದರು.

ನೋವು ಬದಿಗಿಟ್ಟು ಪಕ್ಷದ ಜತೆಗಿದ್ದೇನೆ: ನಾನು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ. ಹಂತ ಹಂತವಾಗಿ ಬೆಳೆದಿದ್ದೇನೆ. ನನಗೂ ಸ್ವಾಭಾವಿಕವಾಗಿಯೇ ಹಲವು ಬಾರಿ ನೋವು ಆಗಿದೆ. ಆದರೆ ಪಕ್ಷದ ಸಿದ್ಧಾಂತಗಳಿಗೆ ಧಕ್ಕೆಯಾದಾಗ ನನ್ನ ನೋವುಗಳನ್ನು ಬದಿಗಿಟ್ಟು ಪಕ್ಷದ ಜತೆಗೆ ನಿಂತಿದ್ದೇನೆ. ಎಂದೂ ನಾನು ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವನೇ ಅಲ್ಲ. ಈಗ ಹಲವು ಜನ ಮಂತ್ರಿ ಸ್ಥಾನ, ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಡುತ್ತಾರೆ. ಕಾರ್ಯಕ್ರಮದಲ್ಲಿ ಕುರ್ಚಿ ಹಾಕಿಲ್ಲ ಎಂದು ಸಿಟ್ಟಾಗುತ್ತಾರೆ. ಯಾವುದು ಏನೇ ಆಗಲಿ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡುವ ಬದ್ಧತೆ ಇರಬೇಕು ಎಂದು ಹೇಳಿದರು.

ನಾವು ಒಂದು ಪಂಚಾಯಿತಿ ಅಧ್ಯಕ್ಷಗಿರಿ ಸಿಕ್ಕಿಲ್ಲ ಎಂದು ಮುನಿಸಿಕೊಳ್ಳುತ್ತೇವೆ. ಆದರೆ ಗಾಂಧಿ ಕುಟುಂಬದ ತ್ಯಾಗ ಬಲಿದಾನ ನೋಡಿ. ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಾಣತ್ಯಾಗ ಮಾಡಿದರು. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದರು. ಹೀಗಿದ್ದರೂ ಮೋದಿ, ಶಾ ಹಗುರವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ ಸೇರಿದಂತೆ ಹಲವರು ಹಾಜರಿದ್ದರು.

ಮೋದಿ ಕೈ ಗುಣದಿಂದಲೇ ಸೇತುವೆ ಬಿತ್ತು: ಗುಜರಾತ್‌ನಲ್ಲಿ 2 ಕೋಟಿ ರು. ವೆಚ್ಚದಲ್ಲಿ ಮೊರ್ಬಿ ಸೇತುವೆ ರಿಪೇರಿ ಆಗಿತ್ತು. ಅದನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡಿದರು. ಅವರ ಕೈ ಗುಣದಿಂದಲೋ ಏನೋ ಉದ್ಘಾಟನೆ ಮಾಡಿದ 5 ದಿನದಲ್ಲೇ ಸೇತುವೆ ಬಿದ್ದು ಹೋಗಿ 138 ಜನ ಸತ್ತಿದ್ದಾರೆ. ಇದರ ಜವಾಬ್ದಾರಿ ಯಾರು ಹೊತ್ತರು? ಯಾರು ರಾಜೀನಾಮೆ ನೀಡಿದರು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ನಾನು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ. ಹಂತ ಹಂತವಾಗಿ ಬೆಳೆದಿದ್ದೇನೆ. ನನಗೂ ಸ್ವಾಭಾವಿಕವಾಗಿಯೇ ಹಲವು ಬಾರಿ ನೋವು ಆಗಿದೆ. ಆದರೆ ಪಕ್ಷದ ಸಿದ್ಧಾಂತಗಳಿಗೆ ಧಕ್ಕೆಯಾದಾಗ ನನ್ನ ನೋವುಗಳನ್ನು ಬದಿಗಿಟ್ಟು ಪಕ್ಷದ ಜತೆಗೆ ನಿಂತಿದ್ದೇನೆ. ಎಂದೂ ನಾನು ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವನೇ ಅಲ್ಲ
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ