Asianet Suvarna News Asianet Suvarna News

ಡಿಸಿಎಂ ಕುರಿತು ಚರ್ಚೆ ಇಲ್ಲಿಗೆ ನಿಲ್ಲಿಸಿದ್ರೆ ಸರಿ; ಸಚಿವರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ವಾರ್ನಿಂಗ್!

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಯಾವೊಬ್ಬ ಸಚಿವರೂ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಿದ್ಧತೆ ಸಂಬಂಧ ಹೊಸದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್‌ ಸರ್ಕಾರ ಸಚಿವರ ಸಭೆಯಲ್ಲಿ ಖರ್ಗೆ ಅವರು ಈ ಎಚ್ಚರಿಕೆ ನೀಡಿದ್ದಾರೆ.

AICC President Mallikarjun kharge instruction that no one should discuss about Karnataka DCM at Bengaluru rav
Author
First Published Jan 12, 2024, 12:07 PM IST

ಬೆಂಗಳೂರು (ಜ.12) : ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಯಾವೊಬ್ಬ ಸಚಿವರೂ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಸಿದ್ಧತೆ ಸಂಬಂಧ ಹೊಸದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್‌ ಸರ್ಕಾರ ಸಚಿವರ ಸಭೆಯಲ್ಲಿ ಖರ್ಗೆ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ 4-5 ತಿಂಗಳುಗಳಿಂದ ಉಪ ಮುಖ್ಯ ಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಕೆಲವು ಸಚಿವರು ಅನಗತ್ಯವಾಗಿ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಎಲ್ಲಿ ಚರ್ಚಿಸಬೇಕು, ಯಾರೊಂದಿಗೆ ಚರ್ಚಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ. ಈ ವಿಷಯದಲ್ಲಿ ಹೈಕಮಾಂಡ್‌ ಈಗಾಗಲೇ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದ ಬಳಿಕವೂ ಒಂದಿಬ್ಬರು ಮತ್ತೆ ಅದೇ ವಿಷಯಗಳನ್ನು ಕೆಣಕುವ ಮೂಲಕ ಗೊಂದಲದ ವಾತಾವರಣ ಮುಂದುವರಿಸಲು ಪ್ರಯತ್ನಿಸಿದ್ದಾರೆ.

ಕಲಬುರಗಿ ಲೋಕ ಕದನ: ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸ್ತಾರಾ?, ಅಳಿಯ/ಪುತ್ರಗೆ ಬಿಟ್ಟುಕೊಡ್ತಾರಾ?

ಈ ರೀತಿಯ ವರ್ತನೆಯನ್ನು ಪಕ್ಷ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಖರ್ಗೆ ಸೂಚ್ಯವಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.

ಪ್ರತಿಯೊಬ್ಬ ಸಚಿವರಿಗೂ ಅತ್ಯಂತ ಮಹತ್ವದ ಜವಾಬ್ದಾರಿಗಳಿವೆ, ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಬದಲಿಗೆ ಅನಗತ್ಯ ವಾಗಿ ಅದರಲ್ಲೂ ಡಿಸಿಎಂ ಹುದ್ದೆ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿ ಪಕ್ಷದೊಳಗೆ ಗೊಂದಲದ ವಾತಾ ವರಣ ನಿರ್ಮಿಸುವುದು ಸರಿಯಲ್ಲ, ಈ ರೀತಿಯ ಹೇಳಿಕೆಗಳಿಂದ ಲಾಭ ಏನು ಎಂಬುದನ್ನು ಅರಿತುಕೊಂಡು ಹೋಗುವುದು ಒಳಿತು ಎಂದು ಕಿವಿ ಮಾತು ಹೇಳಿದರೆಂದು ಮೂಲಗಳು ಖಚಿತಪಡಿಸಿವೆ.

ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಸಚಿವರು ಪಕ್ಷದ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಬೇಕು ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಪಕ್ಷದ ಕಾರ್ಯಕರ್ತರನ್ನು ನಿಗಮ-ಮಂಡಗಳಿಗೆ ನೇಮಕ ಮಾಡುವ ಕುರಿತತಂತೆಯೂ ಸಭೆಯಲ್ಲಿ ಚರ್ಚೆಗಳು ನಡೆದವು.

ವಿಧಾನಸಭೆ ಚುನಾವಣೆಗೆ ಕೆಲಸ ಮಾಡಿದ ತಂತ್ರಜ್ಞರು ಲೋಕಸಭೆ ಚುನಾವಣೆಗಾಗಿ ವಾರ್ ರೂಂನಲ್ಲಿ ಯೋಜನೆ ರೂಪಿಸಲಿದ್ದಾರೆಯ ತಂತ್ರಜ್ಞ ಶಶಿಕಾಂತ್ ಸೆಂಥಿಲ್ ರಾಜ್ಯದ ಪ್ರಮುಖ ನಾಯಕರಿಗೆ ಕಾರ್ಯಾಗಾರವನ್ನು ನಡೆಸಲಿದ್ದಾರೆಂದು ನಾಯಕರು ತಿಳಿಸಿದರು.

ಬಳಿಕ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು, ಗ್ಯಾರಂಟಿ ಯೋಜನೆಗಳ ಲಾಭವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚೆಗಳು ನಡೆದವು. ಇದಲ್ಲದೆ, ಬಿಜೆಪಿಯಿಂದ ಕೆಲ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಕುರಿತಂತೆಯೂ ಚರ್ಚೆಗಳು ನಡೆದವು.

ಈ ನಡುವೆ ಜನವರಿ ಅಂತ್ಯದೊಳಗೆ ಸಾಧ್ಯವಾದಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಂತೆ ಪಕ್ಷದ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಲೋಕಸಭಾ ಚನಾವಣೆಗೆ ಸಚಿವರನ್ನು ಕಣಕ್ಕಿಳಿಸಬೇಕೋ ಬೇಡವೋ ಎಂಬುದರ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಾ.ಜಿ.ಪರಮೇಶ್ವರ, ಎಂ.ಬಿ.ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ ಮತ್ತಿತರರು ಅಭ್ಯರ್ಥಿಗಳ ಆಯ್ಕೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೇವಾಲಾ ಮತ್ತು ಕೆ ಸಿ ವೇಣುಗೋಪಾಲ್ ಉಪಸ್ಥಿತರಿದ್ದರು.

ಜ.21ಕ್ಕೆ ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ
ಕರಾವಳಿ ಭಾಗದಲ್ಲಿ ತನ್ನ ನೆಲೆ ಮತ್ತು ಸಂಘಟನೆಯನ್ನು ಬಲಪಡಿಸಲು ಉತ್ಸುಕವಾಗಿರುವ ಕಾಂಗ್ರೆಸ್, ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ಜನವರಿ 21 ರಂದು ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶವನ್ನು ನಡೆಯುತ್ತಿದೆ. ಈ ಭಾಗವನ್ನು ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದು, ಆ ಭಾಗದಲ್ಲಿ ತನ್ನ ನೆಲೆಯನ್ನು ಭದ್ರ ಪಡಿಸಲು ಕೆಪಿಸಿಸಿಮುಂದಾಗಿದೆ.

ಖರ್ಗೆ ಹೆಸರೇ ಕೇಳಿಲ್ಲ, ಮುಂದಿನ ಪ್ರಧಾನಿ ನಿತೀಶ್; ಇಂಡಿಯಾ ಮೈತ್ರಿಗೆ ಬೆಂಕಿ ಹೆಚ್ಚಿದ JDU ಶಾಸಕ!

ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಸಚಿವರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

Follow Us:
Download App:
  • android
  • ios