Asianet Suvarna News Asianet Suvarna News

ಕರ್ನಾಟಕ ವಿಧಾನಸಭೆ ಚುನಾವಣೆ 2023: ಅಫಜಲ್ಪುರ ಅಸೆಂಬ್ಲಿಯಲ್ಲಿ ಕದನ ಕುತೂಹಲ

ಅಫಜಲ್ಪುರ ಅಸೆಂಬ್ಲಿ ಕಣದಲ್ಲಿ ಚುನಾವಣೆ ರಂಗೇರಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಸಹೋದರರ ನಡುವೆಯೇ ಟಿಕೆಟ್‌ ಪೈಪೋಟಿ ಕಂಡರೆ ಉಳಿದ ಪಕ್ಷಗಳಲ್ಲಿಯೂ ಆಕಾಂಕ್ಷಿಗಳು ಕಂಡು ಕಣದಲ್ಲಿ ಕಾವೇರುತ್ತಿದೆ. 

Afzalpura Assembly Battle Curious in Karnataka Assembly Elections 2023 grg
Author
First Published Feb 7, 2023, 12:11 PM IST

ರಾಹುಲ್‌ ದೊಡ್ಮನಿ

ಚವಡಾಪುರ(ಫೆ.07):  ಅಫಜಲ್ಪುರ ಅಸೆಂಬ್ಲಿ ಕಣದಲ್ಲಿ ಚುನಾವಣೆ ರಂಗೇರಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಸಹೋದರರ ನಡುವೆಯೇ ಟಿಕೆಟ್‌ ಪೈಪೋಟಿ ಕಂಡರೆ ಉಳಿದ ಪಕ್ಷಗಳಲ್ಲಿಯೂ ಆಕಾಂಕ್ಷಿಗಳು ಕಂಡು ಕಣದಲ್ಲಿ ಕಾವೇರುತ್ತಿದೆ. ಅಫಜಲ್ಪುರ ರಾಜಕೀಯ ಇತಿಹಾಸ ಅವಲೋಕಿಸಿದಾಗ ಹಾಲಿ ಶಾಸಕ ಎಂ.ವೈ. ಪಾಟೀಲ್‌ ಹಾಗೂ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಕುಟುಂಬಗಳ ಹಿಡಿತ ಬಹಳ ಬಿಗಿಯಾಗಿದೆ. ಹೀಗಾಗಿ ಎರಡು ಕುಟುಂಬಗಳಿಗೆ ಅಫಜಲ್ಪುರ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಹಾಲಿ ಶಾಸಕ ಎಂ.ವೈ ಪಾಟೀಲ್‌ ಅವರ ಇಬ್ಬರು ಪುತ್ರರ ಪೈಕಿ ಹಿರಿಯ ಪುತ್ರ ಅರುಣಕುಮಾರ ಪಾಟೀಲ್‌ ಮಾಜಿ ಜಿಪಂ ಸದಸ್ಯರಾಗಿ ಕ್ಷೇತ್ರದಲ್ಲಿ ಓಡಾಡಿ ಮುಂಬರುವ ಚುನಾವಣೆಯ ಭಾವಿ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಕಿರಿಯ ಪುತ್ರ ಡಾ. ಸಂಜಯಕುಮಾರ ಪಾಟೀಲ್‌ ಕೂಡ ಅವರದ್ದೇ ಆದ ಅಭಿಮಾನಿ ವರ್ಗ ಹೊಂದಿ ಕ್ಷೇತ್ರದಾದ್ಯಂತ ಸದ್ದಿಲ್ಲದೆ ಸುದ್ದಿಯಲ್ಲಿದ್ದಾರೆ. ಪಾಟೀಲ್‌ ಸಹೋದರನ್ನು ಹೊರತುಪಡಿಸಿ ರಾಜೇಂದ್ರ ಪಾಟೀಲ್‌ ರೇವೂರ, ಜೆ.ಎಂ ಕೊರಬು ಕಾಂಗ್ರೆಸ್‌ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮುಖಂಡ ಅಫ್ತಾಬ್‌ ಪಟೇಲ್‌ ಕೂಡ ಟಿಕೇಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ: ಸಿದ್ದರಾಮಯ್ಯ

ಬಿಜೆಪಿಯಲ್ಲೂ ಪೈಪೋಟಿ:

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅಫಜಲ್ಪುರ ಮತಕ್ಷೇತ್ರದಿಂದ 6 ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ರಾಜ್ಯ ಉಪಾಧ್ಯಕ್ಷರಾಗಿದ್ದು, ಈ ಬಾರಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಅವರ ಕಿರಿಯ ಸಹೋದರ ನಿತೀನ್‌ ಗುತ್ತೇದಾರ ಈ ಬಾರಿಯ ವಿಧಾನ ಸಭೆ ಕಣಕ್ಕೆ ಇಳಿದೇ ತೀರುತ್ತೇನೆ ಎನ್ನುವ ಹಠಕ್ಕೆ ಬಿದ್ದು ಮತಕ್ಷೇತ್ರದಾದ್ಯಂತ ಹೆಚ್ಚು ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿಯ ಹಿಂದುಳಿದ ವರ್ಗದ ಮುಖಂಡ ಅವ್ವಣ್ಣ ಮ್ಯಾಕೇರಿ ಒಂದು ಅವಕಾಶ ನೀಡುವಂತೆ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಮನವಿ ಸಲ್ಲಿಸುತ್ತಾ ಸಂಚಲನ ಸೃಷ್ಟಿಸುತ್ತಿದ್ದಾರೆ. 2013ರ ಚುನಾವಣೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸಮಾಜವಾದಿ ಪಕ್ಷದಿಂದ 14,643 ಮತಗಳನ್ನು ಪಡೆದಿದ್ದ ಗೋವಿಂದ್‌ ಭಟ್‌ ಸದ್ಯ ಬಿಜೆಪಿಯಲ್ಲಿದ್ದು, ತಾವು ಇನ್ನೊಂದು ಕೈ ನೋಡಬೇಕೆನ್ನುವ ಉತ್ಸಾಹದಲ್ಲಿದ್ದಾರೆ. ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆನ್ನುವುದು ಇನ್ನೂ ಗುಟ್ಟಾಗಿದೆ.

Assembly election: ಕೋಲಾರದಿಂದ 200% ಗೆಲ್ತೀನಿ ಅನುಮಾನವೇ ಬೇಡ: ಸಿದ್ದರಾಮಯ್ಯ

ಹಳಬರರಿಗೆ ಪ್ರತಿಷ್ಠೆ, ಹೊಸಬರಿಗೆ ಅದೃಷ್ಟ ಪರೀಕ್ಷೆ:

ಕಳೆದ ಚುನಾವಣೆಯಲ್ಲಿ ಎಂ.ವೈ. ಪಾಟೀಲ, ಮಾಲೀಕಯ್ಯ ಗುತ್ತೇದಾರ ನಡುವೆ ನೇರ ಹಣಾಹಣಿ ಇತ್ತು. ಎಂ.ವೈ ಪಾಟೀಲ್‌ 71735 ಮತ ಪಡೆದು ಜಯಗಳಿಸಿದರೆ, ಮಾಲೀಕಯ್ಯ ಗುತ್ತೇದಾರ 61141 ಮತ ಪಡೆದು 10,594 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಅಲ್ಲದೆ ಜೆಡಿಎಸ್‌ ಅಭ್ಯರ್ಥಿ ರಾಜೇಂದ್ರ ಪಾಟೀಲ್‌ 13,340 ಮತ ಪಡೆಯುವ ಮೂಲಕ ಸಂಚಲನ ಸೃಷ್ಟಿಸಿ ತಾವು ಕೂಡ ಪ್ರಬಲ ಅಭ್ಯರ್ಥಿ ಎಂದು ಸಾಬೀತು ಪಡಿಸಿದ್ದರು. ಹೀಗಾಗಿ ಈ ಮೂರು ಜನರಿಗೆ ಈ ಬಾರಿ ಚುನಾವಣೆ ಪ್ರತಿಷ್ಠೆಯಾಗಿದೆ. ಹಾಲಿ ಶಾಸಕ ಎಂ.ವೈಪಾಟೀಲ್‌ ವಯಸ್ಸಿನ ಕಾರಣ ಹೇಳಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಹೀಗಾಗಿ ರಾಜೇಂದ್ರ ಪಾಟೀಲ, ಮಾಲೀಕಯ್ಯ ಗುತ್ತೇದಾರ ಕಣಕ್ಕಿಳಿಯುವ ಅಭ್ಯರ್ಥಿಗಳಾಗಿದ್ದಾರೆ.

ಜೆಡಿಎಸ್‌ನಿಂದ ಶಿವಕುಮಾರ ನಾಟೀಕಾರ ಕಣಕ್ಕಿಳಿಯುತ್ತಿದ್ದಾರೆ. ಸಮಾಜ ಸೇವಕ ಜೆ.ಎಂ ಕೊರಬು ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿ. ಪಿಎಸ್‌ಐ ಹಗರಣದಲ್ಲಿ ಜೈಲು ಪಾಲಾಗಿದ್ದರೂ ಕೂಡ ಆರ್‌.ಡಿ. ಪಾಟೀಲ್‌ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಉಳಿದಂತೆ ಆಮ್‌ ಆದ್ಮಿ ಪಕ್ಷ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿದಂತೆ ಇನ್ನಿತರ ಪಕ್ಷಗಳಿಂದಲೂ ಆಕಾಂಕ್ಷಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ.

Follow Us:
Download App:
  • android
  • ios