ಎಸ್ಐಆರ್‌ ಅಕ್ರಮ ಆರೋಪಿಸಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟ ನ.5 ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿವೆ. ಜ್ಞಾನೇಶ್‌ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಬಿ.ಕೆ.ಹರಿಪ್ರಸಾದ್‌ ಎಚ್ಚರಿಸಿದ್ದಾರೆ.

ಬೆಂಗಳೂರು (ನ.4): ಎಸ್ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ)ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು (ಇಂಡಿಯಾ ಒಕ್ಕೂಟ), ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ನ.5 ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನಾ ಸಭೆ ಹಮ್ಮಿಕೊಂಡಿವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ತಾಲೂಕು, ಬ್ಲಾಕ್ ಮಟ್ಟದಲ್ಲೂ ಪ್ರತಿಭಟನೆ

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಇಂಡಿಯಾ ಕೂಟದ ಮಿತ್ರ ಪಕ್ಷಗಳ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಜ್ಞಾನೇಶ್‌ ರಾಜೀನಾಮೆವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಮುಂದೆ ತಾಲೂಕು ಮತ್ತು ಬ್ಲಾಕ್‌ ಮಟ್ಟದಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದರು.

ದೆಹಲಿ ಆಯ್ತು ಈಗ ಬೆಂಗಳೂರಿನಲ್ಲೂ ಎಸ್‌ಐಆರ್ ಪ್ರತಿಭಟನೆ

ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಮುಂದುವರಿದ ಭಾಗವಾಗಿ ಈ ಬೃಹತ್‌ ಪ್ರತಿಭನಾ ಸಭೆ ಹಮ್ಮಿಕೊಳ್ಳಲಾಗಿದೆ. ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಪ್ರಯತ್ನ ನಡೆಸುತ್ತಿವೆ. ಇದರ ವಿರುದ್ಧ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದರು.

ದೇಶದಾದ್ಯಂತ ತಾಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಈ ಪ್ರತಿಭಟನೆ ನಡೆಸಬೇಕು ಎಂದು ಇಂಡಿ ಒಕ್ಕೂಟದ ನಾಯಕರು ದೆಹಲಿಯಲ್ಲಿ ತೀರ್ಮಾನಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆಗೆ ಮೈತ್ರಿಕೂಟದ ನಾಯಕರು ತೀರ್ಮಾನಿಸಿದ್ದೇವೆ ಎಂದರು.