ಅಥಣಿ[ನ.30]: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವಿನ ತಿಕ್ಕಾಟದ ಹಿಂದಿನ ಕಾರಣ ಕೊನೆಗೂ ಬಹಿರಂಗವಾಗಿದೆ. ಆಪರೇಷನ್‌ ಕಮಲದ ಮಾಹಿತಿಯನ್ನು ವರಿಷ್ಠರ ಕಿವಿಗೆ ಹಾಕಿದ್ದೇ ತಮ್ಮ ಮತ್ತು ರಮೇಶ್‌ ಜಾರಕಿಹೊಳಿ ನಡುವಿನ ತಿಕ್ಕಾಟಕ್ಕೆ ಮೂಲ ಕಾರಣ ಎಂದು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್‌ ಅವರೇ ಹೇಳಿಕೊಂಡಿದ್ದಾರೆ.

ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಶುಕ್ರವಾರ ಹೆಬ್ಬಾಳ್ಕರ್‌ ಈ ಸತ್ಯ ಬಹಿರಂಗಪಡಿಸಿದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಐದಾರು ದಿನ ಆಗಿತ್ತು. ಹೈದರಾಬಾದ್‌ನಲ್ಲಿ ಬೆಳಗಾವಿ ಶಾಸಕರ ಸಭೆ ಆಯೋಜಿಸಲಾಗಿತ್ತು. ಅಲ್ಲಿ ನಮಗೆ ಬಿಜೆಪಿ ಸೇರುವ ಆಹ್ವಾನ ಬಂತು. ಆದರೆ, ನಾನು ಮತ್ತು ರಮೇಶ್‌ ಕೌಜಲಗಿ ಈ ಆಹ್ವಾನ ತಿರಸ್ಕರಿಸಿದೆವು. ನಂತರ ನಾನು ಈ ವಿಚಾರವನ್ನು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಮತ್ತು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಗಮನಕ್ಕೆ ತಂದೆ. ಆ ಬಳಿಕ ನನ್ನ ಮತ್ತು ರಮೇಶ್‌ ಜಾರಕಿಹೊಳಿ ನಡುವೆ ಮನಸ್ತಾಪ ಶುರುವಾಯಿತು ಎಂದು ಹೆಬ್ಬಾಳ್ಕರ್‌ ಹೇಳಿಕೊಂಡರು.

ಕೆಲದಿನಗಳ ಹಿಂದಷ್ಟೇ ಲಕ್ಷ್ಮಿಹೆಬ್ಬಾಳ್ಕರ್‌ ಬಿಜೆಪಿ ಆಫರ್‌ ವಿಚಾರ ಹೇಳಿಕೊಂಡಿದ್ದರು. ಸಮ್ಮಿಶ್ರ ಸರ್ಕಾರ ರಚನೆ ಆಗುವ ಮೊದಲೇ ಗೋಕಾಕ್‌ನ ದೊಡ್ಡವರೊಬ್ಬರಿಂದ ತನಗೆ ಬಿಜೆಪಿ ಸೇರುವಂತೆ ಆಹ್ವಾನ ಬಂದಿತ್ತು. ಇದನ್ನು ಕೇಳಿ ನನ್ನ ಎದೆ ಝಲ್ಲೆಂದಿತ್ತು ಎಂದಿದ್ದರು. ರಮೇಶ್‌ ಜಾರಕಿಹೊಳಿ ಹೆಸರೆತ್ತದೆ ಅವರೇ ಈ ಆಫರ್‌ ನೀಡಿದ್ದರು ಎಂದು ಕಾರ್ಯಕರ್ತರ ಎದುರೇ ಆರೋಪಿಸಿದ್ದರು.