13 ವರ್ಷಗಳ ನಂತರ ಬಿಜೆಪಿ ಬಸವಕಲ್ಯಾಣ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಕ್ಷೇತ್ರ ರಚನೆಯಾದ ಬಳಿಕ ಬಿಜೆಪಿಗೆ ಸಿಕ್ಕ 2ನೇ ಗೆಲುವು ಇದಾಗಿದೆ. 

ಬೀದರ್‌ (ಮೇ.03): ಬರೋಬ್ಬರಿ 13 ವರ್ಷಗಳ ನಂತರ ಬಿಜೆಪಿ ಬಸವಕಲ್ಯಾಣ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಬಸವಕಲ್ಯಾಣ ಕ್ಷೇತ್ರ ರಚನೆಯಾದ ಬಳಿಕ ಬಿಜೆಪಿಗೆ ಸಿಕ್ಕ 2ನೇ ಗೆಲುವು.

2008ರಲ್ಲಿ ಬಸವರಾಜ ಪಾಟೀಲ್‌ ಅಟ್ಟೂರ್‌ ಅವರು ಆಯ್ಕೆಯಾಗಿದ್ದರು. ಆ ನಂತರ ಬಿಜೆಪಿ ಇಲ್ಲಿ ಗೆದ್ದೇ ಇರಲಿಲ್ಲ. ಬಸವಕಲ್ಯಾಣ ಕ್ಷೇತ್ರ ರಚನೆಯಾದಂದಿನಿಂದ ಅಂದರೆ 1957ರಿಂದ 2018ರವರೆಗೆ ನಡೆದ ಚುನಾವಣೆಗಳಲ್ಲಿ ಜೆಡಿಎಸ್‌ ಅತೀ ಹೆಚ್ಚು ಬಾರಿ ಅಂದರೆ 5 ಬಾರಿ ಗೆಲುವು ಸಾಧಿಸಿತ್ತಲ್ಲದೆ, ಜನತಾ ಪಕ್ಷ 2 ಬಾರಿ ಮತ್ತು ಬಿಜೆಪಿ, ಸ್ವತಂತ್ರ ಹಾಗೂ ಇಂದಿರಾ ಕಾಂಗ್ರೆಸ್‌ ತಲಾ ಒಂದು ಬಾರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ನಾಲ್ಕು ಬಾರಿ ಜಯ ಸಾಧಿಸಿದೆ.

ಇದೀಗ ಶರಣು ಸಲಗರ ಅವರು 13 ವರ್ಷಗಳ ಬಳಿಕ ಈ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ, ಸಚಿವ ಪ್ರಭು ಚವ್ಹಾಣ ಜೊತೆ ಇದೀಗ ಬಸವಕಲ್ಯಾಣದಿಂದ ಶರಣು ಸಲಗರ ಆಯ್ಕೆಯಾಗಿರುವುದು ಪಕ್ಷಕ್ಕೆ ಜಿಲ್ಲೆಯಲ್ಲಿ ಮತ್ತಷ್ಟುಭದ್ರ ಬುನಾದಿ ಹಾಕಲು ಅವಕಾಶ ಸಿಕ್ಕಂತಾಗಿದೆ.

ಬಸವಕಲ್ಯಾಣ ಬೈಎಲೆಕ್ಷನ್‌: ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಪ್ರಚಂಡ ಗೆಲುವು ...

ನಡೆಯದ ಖೂಬಾ ಮ್ಯಾಜಿಕ್‌: ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೊರಗಿನವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಬಂಡೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ್‌ ಖೂಬಾ ಅವರ ಮ್ಯಾಜಿಕ್‌ ಈ ಉಪಚುನಾವಣೆಯಲ್ಲಿ ನಡೆಯಲೇ ಇಲ್ಲ. ಕೇವಲ 9457 ಮತ ಪಡೆದಖೂಬಾ ಠೇವಣಿ ಕಳೆದುಕೊಂಡಿದ್ದಾರೆ.

1989ರಿಂದ ಪ್ರಥಮ ಬಾರಿಗೆ ಜೇಡಿಎಸ್‌ ಠೇವಣಿ ನಷ್ಟ

ಬಸವಕಲ್ಯಾಣದಲ್ಲಿ 1989ರಿಂದ ಇದೇ ಮೊದಲ ಬಾರಿಗೆ ಜೆಡಿಎಸ್‌ ಅಭ್ಯರ್ಥಿಯೊಬ್ಬರು ಠೇವಣಿ ಕಳೆದುಕೊಂಡಿದ್ದಾರೆ. ಐದು ಬಾರಿ ದಳದ ಶಾಸಕರನ್ನು ನೀಡಿದ ಕ್ಷೇತ್ರದಲ್ಲಿ ಈ ಬಾರಿ ಪಕ್ಷದಿಂದ ಕಣಕ್ಕಿಳಿದಿದ್ದ ಸೈಯದ್‌ ಖಾದ್ರಿ ಅವರು 11,402 ಮತಗಳನ್ನಷ್ಟೇ ಪಡೆದಿದ್ದು, ಠೇವಣಿಯನ್ನೂ ನಷ್ಟಮಾಡಿಕೊಂಡಿದ್ದಾರೆ. ಜೆಡಿಎಸ್‌ ವರಿಷ್ಠ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಭರ್ಜರಿ ಪ್ರಚಾರ ನಡೆಸಿದರೂ ಪ್ರಯೋಜನವಾಗಲಿಲ್ಲ.